ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ಯಾರು ಕದ್ದರು ನನ್ನ ಮತವ?

ಯಾರು ಕದ್ದರು ನನ್ನ ಮತವ? where is my vote, dude? ಇದು ತೆಹೆರಾನಿನ ಮತ್ತು ಇರಾನಿನ ಬೀದಿಗಳಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಈ ಪ್ರಶ್ನೆಗಳಿಗೆ ಉತ್ತರ ಇರಾನಿನ ಧರ್ಮ ಗುರುಗಳ ಮುಂಡಾಸಿನಲ್ಲಿ ಬೆಚ್ಚಗೆ ಅಡಗಿ ಕೂತಿದೆ. ಈಗಿನ ಅಧ್ಯಕ್ಷ ಅಹ್ಮದಿ ನಿಜಾದ್ ಚುನಾವಣೆ ಗೆದ್ದೆ ಎಂದರೆ ಪ್ರತಿಪಕ್ಷದ ಮೂಸಾವಿ ಇಲ್ಲ, ಮೋಸ ನಡೆದಿದೆ ಮರು ಎಣಿಕೆ ಆಗಲಿ ಎಂದು ಗರ್ಜಿಸಿದರು. ಅವರ ಗರ್ಜನೆ ಇರಾನಿನ ಆಡಳಿತಗಾರನ್ನು ಹೊರತು ಪಡಿಸಿ ವಿಶ್ವವೆಲ್ಲ ಕೇಳಿತು. ಊಹೂಂ, ನೋ ಚೇಂಜ್ ಇನ್ ಸ್ಟೇಟಸ್. ಯಾವಗಲೂ ತನ್ನ ಮೂಗನ್ನು ತನ್ನ ದೇಶದ ಗಡಿ ಹೊರಗೆ ತೂರಿಸಿ ಕೂರುವ ಅಮೇರಿಕ ಸಹ ಅಂಥ ದೊಡ್ಡ ಹೇಳಿಕೆಯನ್ನೇನೂ ಕೊಡಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮರು ಎಣಿಕೆ ಆಗಲಿ ಎಂದವು. ಗಲಾಟೆ ಜಾಸ್ತಿ ಆಯಿತು. ಕೆಲವರು ಪ್ರಾಣವನ್ನೂ ಕಳೆದುಕೊಂಡರು. ತೆರೆಮರೆಯಲ್ಲಿ ಒಂದಿಷ್ಟು ಮಠಗಳನ್ನು ಎಣಿಸಿದಂತೆ ಮಾಡಿದ ಆಡಳಿತಗಾರರು ಎಲ್ಲ ಫೈನ್, ಇದೆಲ್ಲ ನಮ್ಮ ಶತ್ರುಗಳ ಕೆಲಸ, ಹೆಚ್ಚು ಕಿತಾಪತಿಗಿಳಿಯದೆ ತೆಪ್ಪಗೆ ಇರಿ ಎಂದು ತನ್ನ ಜನರಿಗೆ ಬೋಧಿಸಿದರು.

ಇರಾನ್ ನಮ್ಮ ದೇಶದಂತೆ ಪ್ರಾಚೀನ ರಾಷ್ಟ್ರ. ಜನ ಬಹಳ ಬುಧ್ಧಿವಂತರು. ಸರ್ವಾಧಿಕಾರಿ, ಐಶಾರಾಮಿ ರಾಜ ಷಾ  ಪಹಲವಿಯನ್ನು ಇಸ್ಲಾಮೀ ಕ್ರಾಂತಿ ಮೂಲಕ ಕಿತ್ತೊಗೆದು ಧರ್ಮ ಗುರುಗಳ ಸರಕಾರ ಕೂರಿಸಿದವರು. ಏನೋ ಒಳ್ಳೆ ಕೆಲಸ ಮಾಡಬಹುದು ಎಂದು. ಆದರೆ ಅಮೇರಿಕೆಗೆ ಸದ್ದು ಹೊಡೆಯುವುದೇ ತಮ್ಮ ನೀತಿ ಎಂದು ಭಾವಿಸಿ ಹಲವು ಬಾರಿ ಜಗಳಕ್ಕೆ ನಿಂತರು. ಈಗಿನ ಪ್ರದರ್ಶನ, ಪ್ರತಿಭಟನೆಗಳಲ್ಲಿ ಅಮೆರಿಕೆಯ ಕೈವಾಡ ಅಲ್ಲಗಳೆಯುವಂತಿಲ್ಲ. ಏಕೆಂದರೆ ಅಮೆರಿಕೆಯ ಆಟಗಳನ್ನು ನೋಡಿಲ್ಲವೇ ನಾವು, ಸಾಕಷ್ಟು?