ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com

ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ ವಾದ್ದರಿಂದ) ಕೋರ್ 2 DUO, ೨ GB RAM ೧೬೦ GB ಹಾರ್ಡ್ ಡಿಸ್ಕ್, ಅದೂ – ಇದೂ, ಹಾಳೂ – ಮೂಳೂ, ಇರೋ ಚೆಂದದ ಯಂತ್ರ. ಹಾಂ, ಇದಕ್ಕೆ ನೀಲಿ ಹಲ್ಲೂ (BLUE TOOTH) ಸಹ ಇತ್ತು. ಒಟ್ಟಿನಲ್ಲಿ OWNER’S PRIDE ಎಂದು ಸಲೀಸಾಗಿ ಹೇಳಬಹುದು. ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ ಎನ್ನುವ ರೀತಿಯಲ್ಲಿ ತಂದ ಹೊಸತರಲ್ಲಿ ಜೋಪಾನವಾಗಿ ಇಟ್ಟುಕೊಂಡೆ. ಈ ಪಾಪಿ ಮೆಶೀನ್ ತರುವ ಬದಲಾವಣೆಯ ಅರಿವಿಲ್ಲದೆ ನನ್ನ ಮಡದಿಯೂ ಹುರುಪಿನಿಂದ ಸ್ವಾಗತಿಸಿದಳು. ಮೊಬೈಲ್ ನ ಹುಚ್ಚು ಅಂಟಿಸಿಕೊಂಡು ನನ್ನ ಬೆಲೆಬಾಳುವ N8 ಮೊಬೈಲ್ ನಲ್ಲಿ ಸಂಗೀತ ಕೇಳುತ್ತಾ ಫೋನನ್ನು TOILET ಗುಂಡಿಯಲ್ಲಿ ಸಮಾಧಿ ಮಾಡಿದ್ದ ನನ್ನ (ಆಗ ೪ ವರ್ಷ ಪ್ರಾಯದ) ಮಗನ ಕಣ್ಣಿನಿಂದ ದೂರ ಇಟ್ಟುಕೊಂಡು ಸಾಕುತ್ತಿದ್ದೆ. ಅವನ ಕಣ್ಣು ತಪ್ಪಿಸಿದರೂ ನನ್ನ ಪುಟ್ಟ ೯ ತಿಂಗಳ ಪೋ(ಕ)ರಿಯ ಕಿತಾಪತಿಯಿಂದ ನನ್ನ ಲ್ಯಾಪ್ ಟಾಪ್ ಅನ್ನು ಉಳಿಸಲು ಆಗಲಿಲ್ಲ ನನಗೆ. ಸೋಫಾದ ಮೇಲೆ ಇಟ್ಟು ಊಟಕ್ಕೆಂದು ಕೂತಾಗ ಯಾವಾಗ ಪ್ರತ್ಯಕ್ಷ ಳಾದಳೋ ಸೋಫಾದ ಹತ್ತಿರ, ಎಳೆದು ನೆಲದ ಮೇಲೆ ಕೆಡವಿದಳು. ಅಯ್ಯೋ ನನ್ನ ನಲವತ್ತೆರಡು ಸಾವಿರ ಭಸ್ಮ ಮಾಡಿದಳಲ್ಲಾ ಎಂದು ಹೋಗಿ ನೋಡಿದರೆ ಮೇಲಿನ ಎರಡು, ಕೆಳಗಿನ ಎರಡು ಹಲ್ಲುಗಳನ್ನು ಬಿಟ್ಟು ಸವಾಲೆಸೆಯುವಂತೆ ನನ್ನತ್ತ ನೋಡಿದಳು. ಲ್ಯಾಪ್ ಟಾಪ್ ನ ಸ್ಕ್ರೀನ್ ಸುತ್ತ ಇರುವ ಪ್ಲಾಸ್ಟಿಕ್ ಫ್ರೇಂ ಕ್ರ್ಯಾಕ್. ಇಷ್ಟು ಚಿಕ್ಕ ಪ್ರಾಣಿಯನ್ನು ಬಡಿಯುವುದಾದರೂ ಹೇಗೆ ಎಂದು ಬರೀ ಕೆಂಗಣ್ಣಿನಿಂದ ಅವಳತ್ತ ನೋಡಿ ಲ್ಯಾಪ್ಟಾಪ್ ಅವಳ ಕೈಗೆ ಸಿಗದ ರೀತಿಯಲ್ಲಿ ಇಟ್ಟು ಮರಳಿ ಡಿನ್ನರ್ ಟೇಬಲ್ ಗೆ ಬಂದಾಗ ಅರ್ಧಾಂಗಿನಿ ಗೆ ಸಂತೋಷವಾದ ಸುಳಿವು ಸಿಕ್ಕಿತು. ನಾನು ಲ್ಯಾಪ್ ಟಾಪ್ ಮೇಲೆ ಕುಳಿತು ಆನ್ ಮಾಡುವುದರ ಒಳಗೆ ಅವಳಲ್ಲಿ ಭೂತ ಆವರಿಸಿ ಬಿಡುತ್ತೆ. ಹಗಲಿಡೀ ಆಫೀಸು, ಸಂಜೆಯಾದರೆ ಲ್ಯಾಪ್ ಟಾಪ್ ಎಂದು ಗೊಣಗುತ್ತಿದ್ದಳು. ಈಗ ಲ್ಯಾಪ್ ಟಾಪ್ ಬಿದ್ದ ಸದ್ದು ಕೇಳಿದಾಗ ಅವಳಿಗೆ ಸಂತಸ, ಹಾಳಾಗಿ ಹೋಯಿತು ಎಂದು. ನನ್ನ ಲ್ಯಾಪ್ ಟಾಪ್ ಅವಳಿಗೆ ಸವತಿಯಂತೆ ಕಾಣಲು ಶುರು ಮಾಡಿತು.

 ಲ್ಯಾಪ್ ಟಾಪ್ ಕೊಂಡ ಈ ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಗ ಅದರ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿದ, ಮಗಳು ಅದರ ನಾಲ್ಕಾರು ಕೀಲಿಗಳನ್ನು ಕಿತ್ತು ಕೈಗೆ ಕೊಟ್ಟಳು,  ನಾನು ಸಾಕಷ್ಟು ಹುರುಪಿನಿಂದ ನನ್ನ  ಹಳೇ ಸೇತುವೆ ಬ್ಲಾಗಿನಲ್ಲಿ ಬ್ಲಾಗಿಸಿದೆ, ನನ್ನ literary sojourn ಗೆ ಸಂಗಾತಿಯಾಗಿ, ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಆನ್ ಲೈನ್ ಸಾಹಿತಿಗಳ ತಾಣ ಸಂಪದ ದೊಂದಿಗಿನ ನಂಟು ಇನ್ನಷ್ಟು ಗಾಢವಾಯಿತು, ನನ್ನ ನಿರಂತರ ಟ್ವೀಟ್ಗಳಿಂದ twitter ಶ್ರೀಮಂತ ವಾಯಿತು, ನನ್ನ ಮಡದಿಯ ಕೆಂಗಣ್ಣಿಗೆ ತುತ್ತಾಗಿ ಮಿರ ಮಿರ ಮಿಂಚುತ್ತಿದ್ದ ಅದರ ಕಪ್ಪು ಬಣ್ಣದ ಹೊಳಪು ಕಾಂತಿ ಹೀನವಾಯಿತು…… ಇಷ್ಟೆಲ್ಲಾ ಆದ ನಂತರ ಸಿಸ್ಟಮ್ ಸಹ ೬೦ ರ ದಶಕದ ಅಂಬಾಸಿಡರ್ ಕಾರಿನ ರೀತಿ ವರ್ತಿಸಲು ಶುರು ಮಾಡಿತು. laptop ನ ಆಯುಷ್ಯ ಬರೀ ಮೂರು ಅಥವಾ ನಾಲ್ಕು ವರ್ಷ ಗಳೋ? ನಿಮಗೂ ಇದರ ಅನುಭವ ಆಗಿದೆಯೇ? ಪ್ರತೀ ಮೂರು ನಾಲ್ಕು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಹತ್ತಾರು ಸಾವಿರ ರೂಪಾಯಿ ಹಾಕಿ ಲ್ಯಾಪ್ ಟಾಪ್ ಕೊಳ್ಳಲು ಸಾಧ್ಯವೋ?

ಮೂರು ವರ್ಷಗಳಲ್ಲೇ ಮುಪ್ಪಾದ ಯಂತ್ರವನ್ನು ನನ್ನ ಏಳು ವರ್ಷದ ಮಗನಿಗೆ ಕೊಟ್ಟು ಮ್ಯಾಕ್ ಅಥವಾ vaio ಕೊಳ್ಳುವ ಆಸೆ ಈಗ. ಮಡದಿ ಸಹ ಈಗ ಮತ್ತಷ್ಟು matured ಆಗಿರೋದ್ರಿಂದ ಹಳೇ ಲ್ಯಾಪ್ ಟಾಪ್ ಗೆ ಬಂದ ದುಃಸ್ಥಿತಿ ಹೊಸ ಮೆಶೀನಿಗೆ ಬರಲಾರದು ಎನ್ನೋ ಭರವಸೆ ಇದೆ. ರಾಜಕಾರಣಿಯ ಆಶ್ವಾಸನೆಯ ರೀತಿ ಹುಸಿಯಾಗದಿದ್ದರೆ ಸಾಕು ನನ್ನ ಭರವಸೆ.