ಪುಟಾಣಿ ಪಾಠ

ಪುಟ್ಟ ಮಕ್ಕಳು ನಮ್ಮ ಶಿಕ್ಷಕರೂ ಆಗುತ್ತಾರೆ. ಮಕ್ಕಳಿಂದ ಕಲಿಯುವುದು ಬೇಕಷ್ಟು ಇದೆ ಎಂದು ನಮಗೆ ತಿಳಿದಿದ್ದರೂ ಅದರ ಕಡೆ ಗಮನ ಕೊಡದೆ, ಅವರನ್ನು ನಿಗ್ರಹಿಸುವುದರಲ್ಲಿ, ಯಜಮಾನಿಕೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತೇವೆ. ಪುಟಾಣಿಗಳು ನಮಗೆ ಈ ಮೂರು ಗುಣಗಳನ್ನು ಹೇಳಿಕೊಡುತ್ತವಂತೆ;

೧. ಯಾವುದೇ ವಿಶೇಷ ಕಾರಣವಿಲ್ಲದೆ ಸಂತೋಷದಿಂದಿರುವುದು.

೨. ಯಾವಾಗಲೂ ಏನನ್ನಾದರೂ ಮಾಡುತ್ತಾ ಬ್ಯುಸಿ ಆಗಿರುವುದು, ಮತ್ತು

೩. ತಮಗೆ ಬೇಕಾದ್ದನ್ನು, ಇಷ್ಟವಾದ್ದನ್ನು ಹೇಗೆ ಪಡೆಯಬೇಕು ಎನ್ನುವುದರ ಸ್ಪಷ್ಟ ಕಲ್ಪನೆ ಇಟ್ಟು ಕೊಂಡಿರುವುದು.

ಮೇಲಿನ ಮಾತುಗಳು ವಿಶ್ವ ಪ್ರಸಿದ್ಧ, ಬ್ರೆಜಿಲ್ ಮೂಲದ ಬರಹಗಾರ “ಪವ್ಲು ಕುವೆಲ್ಯು” (paulo coelho) ಅವರದು.

ಈ ಬರಹಗಾರನ ಹೆಸರನ್ನು ಹೇಗೆ ಉಚ್ಛರಿಸುವುದು ಎಂದು ಹಲವು ವೆಬ್ ತಾಣಗಳನ್ನು ನೋಡಿದ ನಂತರ ಬರೆದಿದ್ದೇನೆ.

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ ಒಂದು ಏಟು ಹಾಕುತ್ತಾ ಹೇಳಿದ್ದು ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು” ಅಂತ. ಇಷ್ಟಕ್ಕೇ ಸೀಮಿತ ಕತ್ತೆಯ ಬಗೆಗಿನ ನಮ್ಮ ಜ್ಞಾನ. ಕೆಳಗಿದೆ ನೋಡಿ ಕತ್ತೆ ನಮಗೆ ಕಲಿಸುವ ಬದುಕಿನ ಪಾಠ. ಯಶಸ್ವೀ ಬದುಕಿಗೆ ಬೇಕಾದ ಸೂತ್ರ ಕಲಿಸಲು ಸ್ಟೀಫನ್ ಕವೇ, ದೀಪಕ್ ಚೋಪ್ರ ಅಥವಾ “ಎಕ್ಹಾರ್ಟ್ ತೂಲೇ” ಯಂಥ ಮಾಡರ್ನ್ “ಗುರು” ಗಳೇ ಆಗಬೇಕೆಂದಿಲ್ಲ. ಕತ್ತೆಯೂ ಸಹ ಆಗಬಹುದು ಗುರುವರ್ಯ.

ಒಂದು ದಿನ ಓರ್ವ ರೈತನ ಕತ್ತೆ ಹಾಳು ಬಾವಿಯೊಳಕ್ಕೆ ಬಿದ್ದು ಬಿಡುತ್ತದೆ. ಕತ್ತೆಯ ಆಕ್ರಂದನ ಕೇಳಿ ರೈತ ಅಲ್ಲಿಗೆ ಧಾವಿಸಿ ಬಂದು ನೋಡುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿ, ಏನು ಮಾಡಬೇಕೆಂದು ಹೊಳೆಯದೆ ಹೇಗೂ ಈ ಕತ್ತೆಗೆ ವಯಸ್ಸಾಗಿ ಬಿಟ್ಟಿದೆ, ಅಲ್ಲಿಗೇ ಮಣ್ಣು ಹಾಕಿ ಸಮಾಧಿ ಮಾಡಿದರಾಯಿತು ಎಂದು ತನ್ನ ಪರಿಚಿತರನ್ನು ಕರೆಯುತ್ತಾನೆ ಸಹಾಯಕ್ಕೆಂದು. ಎಲ್ಲರೂ ಸೇರಿ ಕತ್ತೆಯ ಮೇಲೆ ಮಣ್ಣನ್ನು ಅಗೆದು ಹಾಕಲು ಆರಂಭಿಸುತ್ತಾರೆ. ಮೊದಮೊದಲಿಗೆ ಸುಮ್ಮನಿದ್ದ ಕತ್ತೆಗೆ ಕೊನೆಗೆ ಹೊಳೆಯುತ್ತದೆ ಇವರು ನನ್ನನ್ನು ಉಳಿಸಲು ಅಲ್ಲ ಬಂದಿದ್ದು, ಬದಲಿಗೆ ಜೀವಂತ ಸಮಾಧಿ ಮಾಡಲು ಎಂದು ದೈನ್ಯತೆಯಿಂದ ಅಳಲು ಆರಂಭಿಸುತ್ತದೆ. ಕತ್ತೆಯ ಅಳು ಯಾರಿಗೂ ಕೇಳಿಸುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಕತ್ತೆ ತನ್ನ ಆಕ್ರಂದನ ನಿಲ್ಲಿಸಿ ತನ್ನ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೊಡವಿ ಒಂದು ಹೆಜ್ಜೆ ಮೇಲೆ ಇಡುತ್ತದೆ. ಹೀಗೆ ಒಂದೇ ಸಮನೆ ತನ್ನ ಮೇಲೆ ಮಣ್ಣು ಬೀಳುತ್ತಿದ್ದರೂ ಕತ್ತೆ ಮಾತ್ರ ಸಾವಧಾನದಿಂದ ಮೈ ಕೊಡವುತ್ತಾ ಒಂದೊಂದೇ ಹೆಜ್ಜೆ ಗಳನ್ನು ಮೇಲಕ್ಕೆ ಇಡುತ್ತಾ ಹೋಗುತ್ತದೆ. ಇದನ್ನು ಗಮನಿಸಿದ ಜನರಿಗೆ ಆಶ್ಚರ್ಯ ಮತ್ತು ಸ್ವಲ್ಪ ಹೊತ್ತಿನಲ್ಲಿ ಕತ್ತೆ ಬಾವಿಯಿಂದ ಹೊರಕ್ಕೆ ಬಂದಿರುತ್ತದೆ. ಈ ವಿಸ್ಮಯದ ಬಗ್ಗೆ, ಕತ್ತೆಯ ಜಾಣ್ಮೆಯ ಬಗ್ಗ್ಗೆ ಜನ ತಮ್ಮ ತಮ್ಮಲ್ಲೇ ಮಾತನಾಡುತ್ತಿದ್ದರೆ ಕತ್ತೆ ಮಾತ್ರ ಅಳಿದುಳಿದ ಧೂಳನ್ನು ತನ್ನ ಮೈ ಮೇಲಿಂದ ಕೊಡವಿ ಗಾಂಭೀರ್ಯದಿಂದ ತನ್ನ ದಾರಿ ಹಿಡಿಯುತ್ತದೆ.

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ರಾಶಿ, ಹೆಜ್ಜೆ ಮೇಲೆ ಹೆಜ್ಜೆ ಇಟ್ಟಾಗ ಗುರಿಯ ಸಾಫಲ್ಯ.

ಈ ಕತೆ ಕಲಿಸುವ ನೀತಿ ಏನೆಂದರೆ, ಬದುಕು ನಿಮ್ಮ ಮೇಲೆ ಮಣ್ಣನ್ನು ಎರಚುತ್ತಿರುತ್ತದೆ. ಎಲ್ಲಾ ರೀತಿಯ ಮಣ್ಣನ್ನು.

ಉಪಾಯವೇನೆಂದರೆ ಮೇಲೆ ಬಿದ್ದ ಮಣ್ಣನ್ನು ಕೊಡವಿ ಮೆಲಕ್ಕೆಳಲು ಶ್ರಮಿಸುವುದು.

ನಮ್ಮ ಪ್ರತೀ ಹೆಜ್ಜೆಯೂ ಉನ್ನತಿ ಕಡೆಗಿನ ಯಾತ್ರೆ. ಎಷ್ಟೇ ಆಳವಾದ ಬಾವಿಯಿಂದಲಾದರೂ ಸರಿ ನಾವು ಹೊರಕ್ಕೆ ಬರಬಹುದು ತಾಳ್ಮೆ, ಛಲವೊಂದಿದ್ದರೆ.

ಕೊಡವಿ ಮತ್ತು ಎದ್ದೇಳಿ.

ಮೇಲಿನ ನೀತಿ ಪಾಠಕ್ಕೆ ಮತ್ತೈದು ಸೂತ್ರಗಳನ್ನು ಸೇರಿಸಿಕೊಳ್ಳಿ.

ಹಗೆಯಿಂದ ದೂರವಿರಿ. ಕ್ಷಮಾಶೀಲರಾಗಿ. ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ.

ಚಿಂತೆಯಿಂದ ದೂರವಿರಿ. ನಾವು ಊಹಿಸಿಕೊಳ್ಳುವ ಬಹುತೇಕ ಚಿಂತೆಗಳು ಬಹುಮಟ್ಟಿಗೆ ಎದುರಾಗಲಾರವು.

ಸರಳವಾಗಿ ಬದುಕಿ. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ.

ನಿಮ್ಮಲ್ಲಿ ಇರುವುದರಲ್ಲಿ ಸ್ವಲ್ಪ ಇಲ್ಲದವರಿಗೂ ಕೊಡಿ. ನಿಮ್ಮಿಂದ ಪಡೆದುಕೊಂಡವನ ಮುಖದ ಮೇಲೆ ನೀವು ಕಾಣುವ ಧನ್ಯತಾ ಭಾವ ಯಾವ ಸ್ವರ್ಗಕ್ಕೂ ಕಡಿಮೆಯಲ್ಲ. ಕೊನೆಯದಾಗಿ, ಜನರಿಂದ ಅತಿ ಕಡಿಮೆಯನ್ನೇ ಬಯಸಿರಿ. ಆದರೆ ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನಿಂದ ಮಾತ್ರ ಅತಿ ಹೆಚ್ಚಿನದನ್ನು ನಿರೀಕ್ಷಿಸಿ. ಏಕೆಂದರೆ ಎಂದಿಗೂ ಬರಿದಾಗದ ಖಜಾನೆ ಅವನಲ್ಲಿದೆ.

ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು…

ಚಾಟ್ ಫ್ರೆಂಡ್ ಶೀಲಾ ಇಂದು ಸಿಕ್ಕು ಒಂದಿಷ್ಟು ಹರಟಿಸಿದೆವು. ಏನ್ ಸಮಾಚಾರ ಎಂದಾಗ ಎಂದಿನ ಲವಲವಿಕೆ ಇಲ್ಲದೆ ” ಬದುಕಿನಲ್ಲಿ ಮಜಾ ಇಲ್ಲ” ಎಂದಳು. no spice in life. ಕಾರಣ ಕೇಳಿದಾಗ ನಿಖರವಾದ ಉತ್ತರ ಕೊಡದೆ ಹೀಗೇ ಸುಮ್ಮನೆ ಎಂದು matter of fact ಶೈಲಿಯಲ್ಲಿ ಕೈ ಚೆಲ್ಲಿದಳು. ಆಕೆಗೆ ಅದೇ ಉದ್ಯೋಗ, ಸಂಸಾರ, ತಾಪತ್ರಯ ಇವು ಏಕತಾನತೆಯಿಂದ ಕೂಡಿದ್ದು ಯಾವ ಗಮನಾರ್ಹ ಬದಲಾವಣೆಗಳೂ ಜೀವನದಲ್ಲಿ ಕಾಣುತ್ತಿರಲಿಲ್ಲ. ನಾನಂದೆ ಅಲ್ಲಾ ಶೀಲಾ, ನಿನಗಿನ್ನೂ ವಯಸ್ಸು ನಲವತ್ತು, you are still young ಬದುಕಿನಲ್ಲಿ ಸಾಧಿಸಲಿಕ್ಕೆ ಬೇಕಷ್ಟು ಇದೆ ಎಂದು ಅವಳಲ್ಲಿ ಹುರುಪು ತುಂಬಲು ಪ್ರಯತ್ನಿಸಿದೆ.

ಆಕೆಗೆ ಇರುವುದು ಒಬ್ಬಳೇ ಮಗಳು. ಗಂಡ ಗಂಡ ಹೆಂಡಿರಿಬ್ಬರೂ ದುಡಿಯುತ್ತಾರೆ. ಮನೆಯಿದೆ. ಕಾರಿದೆ. ಇಷ್ಟೆಲ್ಲಾ ಇದ್ದೂ ಏನೂ ಇಲ್ಲ, ಖಾಲಿ ಖಾಲಿ ಭಾವನೆ ಆಕೆಗೆ. ಚಾಟ್ ಮಾಡುತ್ತಾ ನಾನು ಕೆಲವೂಂದು ಬ್ಲಾಗ್ ಗಳನ್ನೂ ನೋಡುತ್ತಿದ್ದಾಗ ಮಧ್ಯ ವಯಸ್ಸಿನ ಪಾಶ್ಚಾತ್ಯ ಪತಿ ಪತ್ನಿಯರ ಬ್ಲಾಗ್ ಕಣ್ಣಿಗೆ ಬಿತ್ತು. ಅವರಿಬ್ಬರೂ ಪ್ರವಾಸ ಮತ್ತು ವಿಶ್ವ ನೋಡುವ ಹವ್ಯಾಸದವರು ಎಂದು ಕಾಣುತ್ತಿತ್ತು. ಸೈಟ್  ನಲ್ಲಿ ಬಹಳಷ್ಟು ಚಿತ್ರಗಳನ್ನೂ ಹಾಕಿದ್ದರು. ಇಬ್ಬರೂ ಚೆನ್ನಾಗಿ ಸುಂದರವಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಎಂದು ನನಗನ್ನಿಸಿತು. ಚಾಟ್ ಮಾಡುತ್ತಲೇ ಶೀಲಳಿಗೆ ಅವರ ಸೈಟ್ ನ URL ಕೊಟ್ಟು ಹೇಗನ್ನಿಸಿತು ಹೇಳು ಎಂದೆ. ಸ್ವಲ್ಪ ಸಮಯ ದ ನಂತರ ಆಕೆ ಹೇಳಿದಳು, ತುಂಬಾ ಚೆನ್ನಾಗಿದೆ ಅಬ್ದುಲ್.   ತಸ್ವೀರ್ ದೇಖ್ ಕರ್ ದಿಲ್ ಗಾರ್ಡನ್, ಗಾರ್ಡನ್ ಬನ್ ಗಯಿ (ಚಿತ್ರಗಳನ್ನು ನೋಡಿ ಮನಸ್ಸು ಉದ್ಯಾವನವಾಯಿತು) ಎಂದು ವರ್ಣಿಸಿದಳು. ಹಾಗಾದರೆ ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು ಎಂದು ಉಪದೇಶಿಸಿದಾಗ ನಕ್ಕಳು.  

ಬದುಕಿನಲ್ಲಿ boredom ಬರುವುದು ಸಹಜವೇ. ನಾವು ಬದುಕುವ ರೀತಿಯೇ ಹಾಗಲ್ಲವೇ? ನಾವು ನಮಗಾಗಿ ಬದುಕುವುದಿಲ್ಲ, ಬದಲಿಗೆ ನೆರೆಯವರನ್ನು ನೋಡಿ ಆ ರೀತಿ ಬದುಕಲು ನೋಡುತ್ತೇವೆ. ಅವರಲ್ಲಿ, ಇದಿದೆ, ಅದಿದೆ ಎಂದು ಇಲ್ಲದವರ ಕಡೆ ಕಣ್ಣು ಹೊರಳಿಸಿ ನೋಡಿ ಸಂತಸ ಪಡದೆ ಹಾಸಿಗೆಗಿಂತ ಉದ್ದ ಕಾಲು ಚಾಚಲು ನೋಡುತ್ತೇವೆ. ಈ ಪ್ರವೃತ್ತಿಯನ್ನು ಹೊರಗೆಸೆದು ನಮ್ಮಲ್ಲಿರುವುದನ್ನು ನೋಡಿ ತೃಪ್ತಿ ಪಟ್ಟುಕೊಂಡು, ಸಾಧ್ಯವಾದರೆ ಇತರರಿಗೂ ಸಹಾಯ ಮಾಡಿ ಅವರ ಮುಖದಲ್ಲಿ ಮೂಡುವ ಮಂದಹಾಸವನ್ನು ಕಂಡು ಆನಂದ ಪಡಬಾರದೆ?            

http://touristblobs.wordpress.com/2009/12/09/way-out-west-in-oz/