ಭಾರತದ ವಿಜಯ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳು ತಮ್ಮ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “

ವಸುಧೈವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಸದ್ದಿಲ್ಲದೇ ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು ಸರಕಾರದ ಕಟ್ಟುನಿಟ್ಟಾದ ನಿರ್ದೇಶನದ ನಡುವೆಯೂ “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಈ ತೆರನಾದ, ಉದ್ರೇಕಿಸುವ ಪತ್ರಿಕೆಗಳ ತಲೆಬರಹಗಳನ್ನು ನಿರ್ಲಕ್ಷಿಸಿ ನ್ಯಾಯಾಲಯದ  ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ.  ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕುತೂಹಲದಿಂದ ನೋಡುತ್ತಾ ಕೂತ ನಮಗೆ ಕಿಟಕಿಯ ಮೂಲಕ ಕಾಣಲು ಸಿಕ್ಕಿದ್ದು, ನನ್ನ ಎರದುಉವರೆ ವರ್ಷದ ಪುಟ್ಟ ಪೋರಿ ಕಾಲುದ್ದ ಮಾಡಿಕೊಂಡು ನನ್ನ ಮೇಜಿನ ಮೇಲಿನಿಂದ ಎಗರಿಸಿದ ಪುಟ್ಟ ಭಾರತದ ಧ್ವಜದಿಂದ ತನ್ನ ಮುಖಕ್ಕೆ ತಂಗಾಳಿಯನ್ನು ಬೀಸಿಕೊಳ್ಳುತ್ತಾ ಮಂದಿರ ಮಸೀದಿ ವಿವಾದ ನನಗೆ ನಗಣ್ಯ ಎನ್ನುವ ಥರ ಕೂತಿದ್ದಳು.

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಮುಸ್ಲಿಮರಲ್ಲಿ ಕಾಣಲು ಸಿಕ್ಕಿದ ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..

ಮರೆತು ಹೋದ ಮಾತೃ ಭಾಷೆ

ಸೋನಿಯಾ ಅಮೇರಿಕೆಯಿಂದ ವಾಪಸಾಗಿ ಲೋಕಸಭೆಯ ಕಲಾಪಗಳಲ್ಲಿ ಮತ್ತು ತಮ್ಮ ಪಕ್ಷದ ಬೈಠಕ್ ವೊಂದರಲ್ಲಿ ಭಾಗಿಯಾದರು ಎಂದು ವರದಿ. ತಮ್ಮ ತಾಯಿಯವರ ಅನಾರೋಗ್ಯದ ಕಾರಣ ಅವರ ಶುಶ್ರೂಷೆಗೆಂದು ಅಮೆರಿಕೆಗೆ ಹೋಗಿದ್ದರು ಸೋನಿಯಾ ಗಾಂಧೀ.   

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ನ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು. ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ, ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು. ಯಾರೇ ಆದರೂ, ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ. ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು. ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ, ವ್ಯವಹರಿಸುವ ದೇಶ ಒಂದೇ ಒಂದು ಎಂಬುದು?      

ಒಬ್ಬ ಮಹಿಳೆ ಭಾರತೀಯ ಸಂಜಾತನನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ಭಾರತೀಯ ಪೌರತ್ವ ಪಡೆದು ಇಲ್ಲಿನ ಸಂಸ್ಕೃತಿಗೆ ತಲೆಬಾಗಿ ಬದುಕನ್ನು ಸಾಗಿಸುತಾಳೆ. ಜನರ ಅಭೂತ ಪೂರ್ವ ಬೆಂಬಲದಿಂದ ಲಕ್ಷಾಂತರ ಮತಗಳಿಂದ ತನ್ನ ಪ್ರತಿಸ್ಪರ್ದಿಯನ್ನು  ಪರಾಭವ ಗೊಳಿಸಿದ್ದು ಮಾತ್ರವಲ್ಲದೆ ತನ್ನ ನಾಯಕತ್ವದಲ್ಲಿ ಪಕ್ಷವೊಂದನ್ನು ಅಧಿಕಾರದ ಗದ್ದುಗೆಗೂ ಏರಿಸುತ್ತಾಳೆ. ಈ ರೀತಿಯ ಜನಮನ್ನಣೆ ಇದ್ದರೂ ಆಕೆ ದೇಶದ ಅತ್ಯುನ್ನತ ಹುದ್ದೆಗೆ ಅನರ್ಹಳಾಗುತ್ತಾಳೆ. ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಕೂರಲು ಬಿಡದ ಜನರಿಗೆ ಬೆದರಿ ತನ್ನ ಮಾತೃ ಭಾಷೆಯಲ್ಲಿ ತನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿಕೆಯನ್ನು ಕೊಡುತ್ತಾಳೆ. ಒಬ್ಬ ವ್ಯಕ್ತಿಗೆ ತನ್ನ ಮಾತೃ ಭಾಷೆಯಲ್ಲಿ ಮಾತನಾಡಲು ಹೆದರುವಂಥ ಪರಿಸ್ಥಿತಿ ಸೃಷ್ಟಿಸುವ ವ್ಯವಸ್ಥೆ ಮತ್ತು ಅಸಹನೆಯಿಂದ ನಾವು ವಿಶ್ವಕ್ಕೆ ನೀಡುತ್ತಿರುವ ಸಂದೇಶವಾದರೂ ಏನು?

ಹಸಿರು, ಬಿಳಿ, ಕೇಸರಿ

ನಮ್ಮ ಹೆಮ್ಮೆಯ ಧ್ವಜದ ವರ್ಣಗಳು ಕೇಸರಿ ಬಿಳಿ ಹಸಿರು. ಈ ವರ್ಣಗಳು ತನ್ನೊಡಲಲ್ಲಿ ಕಾಣುವಂತೆ ಇಟ್ಟುಕೊಂಡ ನೀಲಿ ಚಕ್ರ ನಮ್ಮ ಪ್ರಗತಿಗೆ ಸಾಕ್ಷಿ. ಹೀಗೆ ಕೇಸರಿ ಬಿಳಿ ಹಸಿರು ತಲೆಕೆಳಗಾಗಿ ಹಸಿರು ಬಿಳಿ ಕೇಸರಿಯಾದಾಗ ವರ್ಣಗಳು ಕಂಗೆಡದಿದ್ದರೂ ನಾವಂತೂ ಖಂಡಿತಾ ಒಂದು ಕ್ಷಣ ಗರ ಬಡಿ ದವರಂತೆ ನಿಂತು ಬಿಡುತ್ತೇವೆ ಲೆಕ್ಕಾಚಾರ ಹಾಕುತ್ತಾ ಇದು ಶತ್ರುವಿನ ಹುನ್ನಾರವೋ, ಕುಹಕವೋ ಅಥವಾ ಎಂದಿಗೂ ಆಗಬಾರದ ಪ್ರಮಾದವೋ ಎಂದು. ಮೊನ್ನೆ ನಮ್ಮ ಗೃಹ ಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿ ಬಂದರು. ನಮ್ಮ ಆಂತರಿಕ ವಿಷಯಗಳಲ್ಲಿ ತಲೆ ಹಾಕಬೇಡಿ, ನಮ್ಮ ಬೀದಿ, ಹೋಟೆಲ್, ರೈಲು ನಿಲ್ದಾಣಗಳಲ್ಲಿ ನೆತ್ತರ ಹರಿಸಬೇಡಿ ಎಂದು ಎಷ್ಟೇ ಕೂಗಿಕೊಂಡರೂ ಕೇಳಿಸದಂತೆ ನಟಿಸುವ ಪಾಕಿಗೆ ಅವರಿರುವ ಅಡ್ಡಾ ಕ್ಕೆ ಹೋಗಿ ಬುದ್ಧಿವಾದ ಹೇಳಲು ಚಿದಂಬರಮ್ ಸಾಹೇಬರು ಇಸ್ಲಾಮಾಬಾದ್ ತಲುಪಿದರು ಅಲ್ಲಿನ ಗೃಹ ಮಂತ್ರಿ ರೆಹಮಾನ್ ಮಲಿಕ್ ರೊಂದಿಗೆ ಮಾತುಕತೆಗೆಂದು. ಮಾತುಕತೆಗೆ ಕೂತ ಕೂಡಲೇ ಪತಾಕೆ ಉಲ್ಟಾ ಆದದ್ದನ್ನು ಗಮನಿಸಿದ ಚಿದಂಬರಮ್ ಅದನ್ನು ಸರಿಪಡಿಸಿದರು. ಆದರೆ ಮಾಧ್ಯಮಗಳ ಕಣ್ಣಿಗೆ ಅದಾಗಲೇ ಬಿದ್ದಾಗಿತ್ತು. ಮಾಧ್ಯಮಗಳಿಗೂ ಬೇಕಿದ್ದು ಇಂಥ ಎಡವಟ್ಟು ಗಳೇ. ಪಾಕ್ ಏನು ಮಾಡಿದರೂ ಸುದ್ದಿಯೇ. ಅದರಲ್ಲೂ ಭಾರತೀಯರು ಒಳಗೊಂಡ ಯಾವುದೇ ವಿಷಯಾದರೂ, ಭೇಟಿಯಾದರೂ ಹೆಚ್ಚು ಹೇಳುವುದು ಬೇಕಿಲ್ಲ. ಅಷ್ಟು ಚೆಂದ ನಮ್ಮೀರ್ವರ ಸಂಬಂಧ. ಮೂರು ದಶಕಗಳ ನಂತರ ಭಾರತದ ಗೃಹ ಮಂತ್ರಿ ಪಾಕ್ ನೆಲದ ಮೇಲೆ ಎಂದಾಗಲೇ ತಿಳಿಯುತ್ತದೆ ಸಂಬಂಧ ಎಷ್ಟು ತಿಳಿಯಾಗಿದೆ ಎಂದು. ಪಾಕ್ ಅದೇನು ಮಾಡಿದರೂ ತಪ್ಪೇ ಏಕಾಗುತ್ತದೆ ಎನ್ನುವುದೇ ಕಾಡುವ ಪ್ರಶ್ನೆ.

ಸರಿ ರಾಜಕೀಯ ಬದಿಗಿಟ್ಟು ಬಾವುಟಕ್ಕೆ ಬರೋಣ. ಬಾವುಟ ಲಾಗ ಹಾಕಿ ಉಲ್ಟಾ ಆಗುವ ಪರಿಸ್ಥಿತಿ ಇದೇ ಮೊದಲಲ್ಲ. ಶಿಕಾಗೋ ನಗರದ ಡೇಲಿ ಪ್ಲಾಜ ದಲ್ಲೂ ಒಮ್ಮೆ ಇದು ಸಂಭವಿಸಿತು.

೨೦೦೮ ರಲ್ಲಿ ಭಾರತ ಆಸ್ಟ್ರೇಲಿಯಾ ನಡುವಿನ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆಯೂ ಇದೇ ತೆರನಾದ ಪ್ರಮಾದ.

ಭಯೋತ್ಪಾದನೆಯ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ತಾರೆ ಕಿಂ ಶರ್ಮಾ ಉಲ್ಟಾ ಆದ ಬಾವುಟದ ಚಿತ್ರ ತನ್ನ ಅಂಗಿ ಮೇಲೆ ಪ್ರದರ್ಶಿಸಿದ್ದರು.

ದಿಲ್ಲಿ ಪಬ್ಲಿಕ್ ಶಾಲೆಯಲ್ಲೂ ಇಂಥದ್ದೇ ಒಂದು ಘಟನೆ ನಡೆದು ಗಮನಕ್ಕೆ ತಂದವನ ಮೇಲೆಯೇ ಹರಿಹಾಯ್ದರು  ಅಲ್ಲಿನ ಪ್ರಾಂಶುಪಾಲೆ. ನಿನ್ನಂಥ ದೇಶಭಕ್ತರನ್ನು ಬಹಳ ಕಂಡಿದ್ದೇನೆ ಎಂದು ತಮ್ಮ ಕಛೇರಿಯಿಂದ ಅಟ್ಟಿದರು ಬಡಪಾಯಿಯನ್ನು. ಆತ ಕೋರ್ಟು ಕಛೇರಿ ಎಂದು ಒಂದೆರಡು ದಿನ ಅಲೆದಾಡಿ ಸುಮ್ಮನಾದ.    

ನನ್ನ ನೆನಪು ಸರಿಯಿದ್ದರೆ ೧೯೮೮ ರಲ್ಲಿ ಇಂಥದ್ದೇ ಒಂದು ಘಟನೆ ನಮ್ಮ ದೇಶದಲ್ಲೂ, ಅದರಲ್ಲೂ ಕರ್ನಾಟಕದಲ್ಲಿ. ನಮ್ಮ ಖಾದಿ ಪ್ರಭುಗಳು ಕೂರುವ, ರಾಜ್ಯದ ಹಿತಾಸಕ್ತಿಗೆಂದು ಪರಸ್ಪರ ಕಚ್ಚಾಡುವ ವಿಧಾನ ಸೌಧದ ಮೇಲೆ  ಸ್ವಾತಂತ್ರ್ಯ ದಿನಾಚರಣೆ ದಿನ ಏರಿತು ಹಾರಿತು ನೋಡು ನಮ್ಮ ಬಾವುಟ, ಅದೂ ತಲೆಕೆಳಗಾಗಿ. ತಮಾಷೆಯಲ್ಲ, ಸತ್ಯ ಘಟನೆ ಇದು. ಇದನ್ನು ಗಮನಿಸಿದ ಯಾರೋ ಒಬ್ಬರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಫೋನಾಯಿಸಿ ನಿಮಗೊಂದು ಬಿಸಿ ಬಿಸಿ ಮಸಾಲೆ ದೋಸೆಯಂಥ ಸುದ್ದಿ ಇದೆ ಬನ್ನಿ ಕ್ಯಾಮರಾದೊಂದಿಗೆ ಎಂದು ಆಹ್ವಾನ ಕಳಿಸಿದರು. ದೌಡಾಯಿಸಿ ಬಂದ ಪತ್ರಕರ್ತನಿಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಪ್ರಭುಗಳು ಕೂರುವ ಸ್ಥಳದಲ್ಲಿ ಪ್ರಮಾದವೇ, ಹ ಹಾ ಎನ್ನುತ್ತ ಮನ ಬಂದಂತೆ ಕ್ಲಿಕ್ಕಿಸಿ ಹಾಕಿ ಬಿಟ್ಟ ಮಾರನೆ ದಿನದ ಪತ್ರಿಕೆಯ ಮುಖ ಪುಟದಲ್ಲಿ. ಅದರ ಕೆಳಗೆ ಒಂದು ಶೀರ್ಷಿಕೆ. ಇದು ನಮ್ಮ ಬಾವುಟವೇ, ಸಂಶಯ ಬೇಡ, ಸ್ವಲ್ಪ ಉಲ್ಟಾ ಆಗಿದೆ ಅಷ್ಟೇ ಎಂದು. ಸರಕಾರೀ ನೌಕರನ ಕಛೇರಿಯಲ್ಲಿ ಇಂಥದ್ದು ನಡೆದಿದ್ದರೆ ಸಂಬಂಧಿಸಿ ದವನನ್ನು ಎತ್ತಂಗಡಿ ಮಾಡಬಹುದಿತ್ತು, ಎತ್ತಂಗಡಿ ಮಾಡುವವನ ಕಛೇರಿಯಲ್ಲೇ ಇಂಥ ಘಟನೆ ನಡೆದರೆ ಏನು ಶಿಕ್ಷೆ? ಭಾರತ ಖಂಡದ ಚಕ್ರವರ್ತಿ ಅಕ್ಬರನ ಗಡ್ಡ ಎಳೆದವನಿಗೆ ಸಿಕ್ಕ ಶಿಕ್ಷೆಯೇ?

  ಬಾವುಟ ಹಾರಿಸುವ ಬಗ್ಗೆ ಹೀಗೆಂದು ನಮ್ಮ ನಿಯಮ.  “the flag shall not be intentionally displayed with the ‘saffron’ down.”

ನಾವೇಕೆ ಸೋಲಬೇಕು?

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

ಈಗ ನನ್ನೀ ಬರಹವನ್ನ ಕಂಡು ಆಕ್ರೋಶ ತೋರುವ ಜನರಿಗೆ ನಾವು ಇತರೆ ಕ್ರೀಡೆಗಳ ಜನರನ್ನು ನಡೆಸಿಕೊಂಡ ಪರಿಯನ್ನು ಕೊಂಚ ಪರಿಚಯ ಮಾಡಿಸೋಣ. 

ನಮ್ಮ ಕ್ರಿಕೆಟ್ ಪಟುಗಳು ಹೋಗುವೆಡೆಯೆಲ್ಲಾ ಬಿಗಿಯಾದ ಬಂದೋಬಸ್ತ್ ಏನು, ಸ್ವಯಂಚಾಲಿತ ಬಂದೂಕುಧಾರಿಗಳೇನು, ಅವರ ಹಸ್ತಾಕ್ಷರಕ್ಕಾಗಿ ಮುಗಿ ಬೀಳುವ ಯುವಕ ಯುವತಿಯರೆನು, ಯಾವ ಜನ್ಮದಲ್ಲಿ ಇಷ್ಟೊಂದು ಪುಣ್ಯ ಮಾಡಿದ್ದರೋ ನಮ್ಮ ಕ್ರಿಕೆಟ್ ಪಟುಗಳು. ಹೋಲಿಸಿ ನೋಡಿ ಈ ಸಿಕ್ಸರ್ ಬಾರಿಸುವ, ದೇಶ ಸೋತರೂ ಸೆಂಚುರಿ ಖಾತ್ರಿಯಾಗಿಸುವ ತಾರೆಯರನ್ನು ಮತ್ತು ಬೆವರು ಸುರಿಸಿ ಇತರೆ ಕ್ರೀಡೆಗಳನ್ನಾಡುವ ತಿರುಕರನ್ನು. ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ. what? hunger strike? ಹೌದು, ಉಪವಾಸ ಬಿದ್ದು ಪ್ರತಿಭಟನೆ. ರಾಷ್ಟ್ರೀಯ ಕ್ರೀಡೆ ಹಾಕಿ ಆಟಗಾರರ ದುಃಸ್ಥಿತಿ. ಹಾಕಿ ಕೋಚ್ ಜೋಕಿಂ ಕರ್ವಾಲೋ ಹಾಕಿ ಆಟಗಾರರನ್ನು ನಡೆಸಿ ಕೊಳ್ಳುವ ರೀತಿ ಕಂಡು ಉರಿದು ಬಿದ್ದು ಏಕೆ ಹಾಕಿ ಆಟಗಾರರನ್ನು ಅನಾಥರಂತೆ ನೋಡುತ್ತೀರಾ ಮತ್ತು ರಾಜಕಾರಣಿಗಳೇಕೆ ಹಾಕಿ ಬಗ್ಗೆ ಅಸಡ್ಡೆ ತೋರುತ್ತಾರೆ ಎಂದು ಗುಡುಗಿದ್ದರು. ಆದರೆ ಅವರ ಹತಾಶ ಗುಡುಗನ್ನು ನಮ್ಮ ತೆಂಡುಲ್ಕರ ನ ಅಮೋಘ ಸಿಕ್ಸರ್ ಮೈದಾನದ ಹೊರಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತೇ ವಿನಃ ಬೇರೇನೂ ಪ್ರಯೋಜನವಾಗಲಿಲ್ಲ.  

ಕ್ರಿಕೆಟಿಗರನ್ನು ಸನ್ಮಾನಿಸಲು ರಾಜ್ಯ ಸರಕಾರಗಳ ಮಧ್ಯೆ ಪೈಪೋಟಿ ನೋಡಿದರೆ ಹೊಟ್ಟೆ ತೊಳೆಸುತದೆ. ಎಲ್ಲಾ ಕ್ರೀಡಾಪಟುಗಳೂ ನಮ್ಮ ಮಕ್ಕಳೇ ಅಲ್ಲವೇ? ಇದ್ಯಾವ ತಾರತಮ್ಯವೋ ನಾ ಕಾಣೆ. ಕ್ರಿಕೆಟಿಗರಲ್ಲದ ಕ್ರೀಡಾಪಟುಗಳಿಗೆ ಈ ರೀತಿಯ ಯಾತನಾಮಯ ಉಪಚಾರವನ್ನು ಕಂಡ ಯಾವ ತಾಯಿ ತನ್ನ ಮಗ ಧ್ಯಾನ್ ಚಂದ್ ಅಥವಾ ಮೊಹಮ್ಮದ್ ಶಾಹಿದ್ ರಂತೆ ಹಾಕಿ ಸ್ಟಿಕ್ ಹಿಡಿದು ಡ್ರಿಬ್ಲ್ ಮಾಡಿ ಎದುರಾಳಿ ಗೆ ಚಳ್ಳೆ ಹಣ್ಣು ತಿನ್ನಿಸಲು ಉತ್ತೇಜಿಸುವಳು? ಅಥವಾ ಹಾರುವ ಸಿಖ್ ಎಂದೇ ಪ್ರಖ್ಯಾತನಾದ ಜೀವ್ ಮಿಲ್ಖಾ ಸಿಂಗರಂತೆ ಚಿಗರೆಯಂತೆ ಓಡಿ ಪದಕ ತರುವ ಕಾತುರತೆಯನ್ನು ಯಾವ ಪಿತಾಮಹ ತೋರಿಸಿಯಾನು? ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆ ಆರಿಸಿಕೊಂಡು ಹೊಟ್ಟೆಗೂ ಇಲ್ಲದೆ ಬವಣೆ ಪಡುವ ಮಕ್ಕಳ ಕಂಡು ಯಾವ ಪೋಷಕರಿಗೆ ತಾನೇ ಸಹಿಸಲು ಸಾಧ್ಯ? ಕ್ರಿಕೆಟ್ ನಮ್ಮ ಸಮಾಜವನ್ನೇ ಕೆಡಿಸುತ್ತದೆ ಎಂದರೂ ತಪ್ಪಿಲ್ಲ. ಜನರ ಹುಚ್ಚು ಪ್ರೋತ್ಸಾಹ, ಸರಕಾರಗಳ ಅತೀವ ಬೆಂಬಲ ಕ್ರಿಕೆಟಿಗರು ಕ್ರೀಡಾ ಮನೋಭಾವವನ್ನೇ ಮರೆತು ಹೇಗಾದರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಬೌಲರ್ ನ ಅಪ್ಪೀಲ್ ಗೆ ಅಂಪೈರ್ ಸೊಪ್ಪು ಹಾಕದೆ ಇದ್ದಾಗ ಅವನು ಉದುರಿಸುವ ಬೈಗಳನ್ನು ಅವನ ತುಟಿಗಳ ಚಲನದಿಂದಲೇ ಅರಿಯಬಹುದು. ಇದನ್ನು ನೋಡಿದ ನಮ್ಮ ಕಿಣ್ಣರು ಅದೇನಪ್ಪಾ XYZ ಹೇಳುತ್ತಿರುವುದು ಎಂದು ಕೇಳಿದರೆ ಆಂಗ್ಲ ಭಾಷೆಯ f**k ಪದ ಕಣಪ್ಪಾ ನಿನ್ನ ಆರಾಧ್ಯ ದೈವ ಉಲಿದಿದ್ದು  ಎಂದು ಹೇಳಲು ನಮಗೆ ಸಾಧ್ಯವೇ?

ಕಾಳಧಂಧೆ ಮಾಡುವವರ ಸ್ವರ್ಗವಾಗಿ ಹೋಗಿದೆ ಕ್ರಿಕೆಟ್ ಮೈದಾನ. ಮೋದಿ ಹಗರಣ ಏನೇನೆಲ್ಲಾ ಬಯಲು ಮಾಡಿತು ನೋಡಿ. ಇದೇಕೆ ಸಂಭವಿಸಿತು? ದುರುಳರಿಗೆ ತೋರಿತು ಕ್ರಿಕೆಟ್ ತಮ್ಮ ಕಾಳ ಧನವನ್ನು ಶ್ವೇತ ವಾಗಿಸಲು ಸಿಕ್ಕ ಮಾಂತ್ರಿಕ ಕ್ರೀಡೆ ಎಂದು. ಚೆನ್ನಾಗಿಯೇ ಪೋಷಿಸಿದರು ನಮ್ಮ ಮಾಜೀ ಒಡೆಯರ ಕ್ರೀಡೆಯನ್ನು. ಈಗ ಒಡೆಯಿತು ಮಡಿಕೆ ನೋಡಿ.  ಕ್ರಿಕೆಟ್ ಎಂದರೆ ಜಾಹೀರಾತುಗಳು ಮುಂಗಾರು ಮಳೆಯಂತೆ. ಬೇರೆ ಕ್ರೀಡೆಗಳಿಗೆ endorsement ಇಲ್ಲ. ಅಪ್ಪಿ ತಪ್ಪಿ ಸಹಾಯ ಕೇಳಿದಿರೋ,  ಕ್ಷಮಿಸಿ ನಮ್ಮ ಈ ಬಾರಿಯ ಬಜೆಟ್ ನಲ್ಲಿ ಇಲ್ಲ, ಭಿಕ್ಷೆ ಬೇಡುವವನಿಗೆ ಮುಂದೆ ಹೋಗಪ್ಪಾ ಎಂದು ತಾತ್ಸಾರದಿಂದ ಹೇಳುವಂತೆ ಸಾಗ ಹಾಕುತ್ತಾರೆ.

ಆಧುನಿಕ ಬದುಕಿನ ಹಲವು ವೈಫಲ್ಯಗಳನ್ನು ಮರೆಸಲು ನಾವು ಕ್ರಿಕೆಟ್ಟಿನ ಮೊರೆ ಹೋದದ್ದು ಸಾಕು. ಕ್ರಿಕೆಟ್ ನಮಗೆ ಒಂದು ರೀತಿಯ “ಮಾರಿಹ್ವಾನಾ” (marijuana). ಇದುವರೆಗೆ ಈ ಕ್ರೀಡೆ ನಮ್ಮ ego ಕಾಪಾಡಿಕೊಂಡು ಬರಲು, ಮತ್ತು ಒಂದು ರೀತಿಯ ದುರಹಂಕಾರ ಮನೆ ಮಾಡುವಂತೆ ಮಾಡಿತಲ್ಲ. ಅದಕ್ಕೆ ಒಂದು ದೊಡ್ಡ ಧನ್ಯವಾದ. ಈಗ ಅದಕ್ಕೊಂದು epitaph ಬರೆಯೋಣ. ಕ್ರಿಕೆಟ್ಟಿಗೊಂದು ಚೆಂದದ ಗೋರಿ ಬರಹ; “ಇಗೋ ಇಲ್ಲಿ ಮಲಗಿದ್ದಾನೆ, ಆವೇಶದ ಆಟದ ಮಧ್ಯೆಯೂ ಪಾನೀಯ, ಊಟ, ಚಹಾ ಸೇವಿಸುತ್ತಾ, ನಮ್ಮ ಮಹನೀಯರ ಕಳ್ಳ ಧಂಧೆಗೆ ಮಾನ್ಯತೆ ತಂದು, ನಮ್ಮ ಇತರೆ ಕ್ರೀಡೆಗಳನ್ನು ಕೊಂದು ಹಾಕಿದ ಕ್ರಿಕೆಟ್ ಎಂಬ ಬಿಳಿ ಭೂತ”    

ಕ್ರಿಕೆಟ್ ನಮ್ಮನ್ನು ಇದುವರೆಗೂ ಕುಣಿಸಿದ್ದು ಸಾಕು. ಇನ್ನಾದರೂ ಕಬಡ್ಡಿ, ಖೋ ಖೋ ರಾರಾಜಿಸಲಿ, ಬುಗುರಿ, ಗಾಳಿ ಪಟ ಮತ್ತೊಮ್ಮೆ ನಮ್ಮೆಡೆ ಬಾಳಲು ಬರಲಿ. ಇನ್ನೂ ಇಂಥ ನೂರಾರು ಕ್ರೀಡೆಗಳಿವೆ ಎಂದು ನಮ್ಮ ಮಕ್ಕಳಿಗೆ ತಿಳಿಯಲಿ. ಕ್ರೀಡೆಯೊಂದಿಗೆ ಸಂಸ್ಕಾರವನ್ನೂ ನಮ್ಮ ಮಕ್ಕಳು ಮರಳಿ ಕಂಡುಕೊಳ್ಳಲಿ.

ಸೂರಿನ ಕೂಗು

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ “ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು” ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ. pent up anger ಒಳ್ಳೆಯದಲ್ಲ.  ವೈಯಕ್ತಿಕ ಜೀವನದಲ್ಲಿ ಹೀಗಾದರೆ ಪ್ರಜಾಪ್ರಭುತ್ವದಲ್ಲಿ ಈ ಕೋಪ, ನಿರಾಶೆ, ಹತಾಶೆಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳು. ನಾಯಕನ ಅಥವಾ ವಿರೋಧಿಯ ಪ್ರತಿಕೃತಿ ಸುಟ್ಟೋ, ಘೋಷಣೆ ಕೂಗಿಯೋ (ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ೧೯೭೭ ರಲ್ಲಿ ಜನತಾ ಪಕ್ಷದವರು ಹೇಳುತ್ತಿದ್ದುದು, ಈಗ ಇದು ಹಳೆ ಫ್ಯಾಶನ್), ಕಪ್ಪು ಬಾವುಟ ಮೂತಿಗೆ ಹಿಡಿದೋ, ರಸ್ತೆ ತಡೆ ನಡೆಸಿಯೋ ಪ್ರಕಟ. ಮೇಲೆ ಹೇಳಿದವು run of the mill ಅಂತಾರಲ್ಲ ಹಾಗೆ. ಕೇಳಿ, ನೋಡಿ ಸಾಕಾಗಿ ಹೋದ ನಮೂನೆಗಳು. ಎಲ್ಲಿ ಹೋದರೂ, ಯಾವ ಸಂದರ್ಭಗಳಲ್ಲೂ ಎಲ್ಲಾ ಹೆಣ್ಣು ಮಕ್ಕಳ ಮೈ ಮೇಲೂ ನಡೆದಾಡುವ “ಮಾಕ್ಸಿ” ಗಳ  ಹಾಗೆ. ಸರ್ವಾಂತರ್ಯಾಮಿ. ಇತ್ತೀಚೆಗೆ ಈ ಏಕತಾನತೆಗೆ, monotonous ಗೆ, ಬಿಡುವು ಸಿಕ್ಕಿತು. ನಮ್ಮಲ್ಲೂ ಇದೆ ಕ್ರಿಯಾಶೀಲತೆ ಎಂದು ತೋರಿಸಿದೆವು. ಪ್ರೇಮಿಗಳ ದಿನದಂದು ಈ ಆಚರಣೆ ಸಲ್ಲದು ಎಂದು ಪ್ರೇಮಿಗಳಿಗೆ ಎಚ್ಚರಿಸಿದವರ ಅಂಡುಗಳಿಗೆ ಕೆಂಪು ಕೆಂಪಾದ ಚಡ್ಡಿಗಳ ವಿತರಣೆ. ಜಯಲಲಿತಾಳ ಸೀರೆ ವಿತರಣೆ ಥರ, ಐಶ್ವರ್ಯಾ ರೈ ವಿವಾಹದ ಲಡ್ಡುಗಳ ಥರ ಅತ್ಯುತ್ಸಾಹದ ಚಡ್ಡಿ ವಿತರಣೆ. ಪ್ರತಿಭಟಿಸಲು ನಾವು ಕಂಡುಕೊಂಡ ಈ ವಿನೂತನ ವಿಧಾನ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಜನಪ್ರಿಯವಾಗಿ ಅಮೆರಿಕೆಯ ಪ್ರಸಿದ್ಧ NPR ರೇಡಿಯೋ ಸಹ ಬಿತ್ತರಿಸಿತು. ಈಗಾಗಲೇ ಚಡ್ಡಿಗಳು ಸವೆದೋ, ಹರಿದೋ ಹೋದರೂ ಈ ಪ್ರತಿಭಟನೆಯ “ರೂವಾರಿಣಿ” ಮಾತ್ರ ಅಜರಾಮರಳಾದಳು. ಕ್ರಿಯಾಶೀಲತೆಗೆ “ಚಡ್ಡಿ ಸಾಕ್ಷಿ” ಯಾದಳು.   

ಬಹಳ ಸಂಭಾವಿತರಾದ, ಸುಸಂಸ್ಕೃತರಾದ ನಾವು ಜನ ಚಡ್ಡಿ ಹಾಕಿಕೊಳ್ಳಲಿ ಎಂದು ಸರಬರಾಜು ಮಾಡಿದರೆ ಮತ್ತೊಂದೆಡೆ ಪ್ಯಾಂಟ್ ಬಿಚ್ಚಿ ಪ್ರತಿಭಟನೆ. ಆಂ, ಏನ್ರೀ ಇದು ಉದ್ಧಟತನ ಎಂದಿರಾ? ಯಾರಿಗ್ರೀ ಉದ್ಧಟತನ?  ಉದ್ಧತನ ನಮಗೆ. ನಗ್ನತೆಯೇ ನೈಜತೆ ಎಂದು ನಂಬುವ, ನಂಬಿದಂತೆ ನಡೆಯುವ ಪಾಶ್ಚಾತ್ಯರಿಗೆ ಏನ್ರೀ ಉದ್ಧಟತನ? ಮೇಲೆ ಹೇಳಿದ ಪ್ಯಾಂಟ್ ಅವರೋಹಣ ಮಾಡಿ ಪ್ರತಿಭಟನೆ ನಡೆದಿದ್ದು ಇಟಲಿಯ ರೋಮ್ ನಗರದಲ್ಲಿ. ಇಟಲಿ ಎಂದ ಕೂಡಲೇ ಕಿವಿ ನಿಮಿರುತ್ತವೆ ನಮ್ಮದು, ಎಷ್ಟಿದ್ದರೂ ನಮ್ಮ ಬೀಗರಲ್ಲವೇ ಅವರು?  ರೋಮ್ ನಗರದ ಮೇಯರ್ ಹೊಸ ತೆರಿಗೆ ಒಳಗೊಂಡಿದ್ದ ಆಯ-ವ್ಯಯ ಪತ್ರ ಮಂಡಿಸಲು ತಯಾರಿಲ್ಲ. ಚುನಾವಣೆ ಹತ್ರ ಬಂತು ಎಂದು ಆಯ-ವ್ಯಯ ಪತ್ರ ಅಡಿಗಿಟ್ಟು ಕೂತು ಬಿಟ್ಟ ಪರಮ ಪೂಜ್ಯ ಮೇಯರ್. ಇದನ್ನು ತೆಗೆಸಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾದ ಮೇಲೆ ಈ ಅವರೋಹಣ ಕಾರ್ಯಕ್ರಮ. ಇದರ ಉದ್ಘಾಟನೆ ಯಾರು ಮಾಡಿದರೋ ಗೊತ್ತಿಲ್ಲ, ಅವರೋಹಣ ಸಾಂಗವಾಗಿ ಜರುಗಿತು. ಜನರ ಅವಸ್ಥೆ ಕಂಡು ಬಂಡೆ ಕರಗಿದರೂ ಮೇಯರ್ ನ ಹೃದಯ ಕರಗದೆ ಆಯ ವ್ಯಯ ಪತ್ರ ಬಚ್ಚಲು ಸೇರಿಕೊಂಡಿತು.

ಅಮೆರಿಕೆಯ ಆಪ್ತ ಮಿತ್ರ, ತಾನು ಪಶ್ಚಿಮ ಎಂದರೆ ಪೂರ್ವ ಎನ್ನುವ ಇರಾನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ. ಹಾಲಿ ಅಧ್ಯಕ್ಷ “ಅಹ್ಮದಿ ನಿಜಾದ್” ಸೋತರೂ ಸೋಲೊಪ್ಪದೆ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಶ್ ಸಾಹೇಬರು ಪ್ರತಿಸ್ಪರ್ದಿ “ಅಲ್ ಗೋರ್” ಗೆ ಹಾಕಿದ ಟೋಪಿಯನ್ನೇ ತಮ್ಮ ಎದುರಾಳಿಗೆ ತೊಡಿಸಿ recycling ನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಗಕ್ಕೆ, ವಿಶೇಷವಾಗಿ ಪಾಶ್ಚಾತ್ಯರಿಗೆ (recycling ಪಾಶ್ಚಾತ್ಯರ ಕೂಸು) ಪಾಠ ಹೇಳಿಕೊಟ್ಟರು. ಈ ವಿಷಯದಲ್ಲಿ ಅಹ್ಮದಿ ನಿಜಾದ್ ಬುಶ್ ಅಭಿಮಾನಿ. ಪ್ರಪಂಚದ ಯಾವುದೇ ದಿಕ್ಕುಗಳಲ್ಲಿ ಹರಡಿ ಹೋದರೂ ತಮ್ಮ ಗುಣ ವೈಶಿಷ್ಟ್ಯಗಳ ಜನರನ್ನು ಕಂಡುಕೊಳ್ಳುತ್ತಾರೆ ಖದೀಮರು. ವಿರೋಧ ಪಕ್ಷದ ಅಭ್ಯರ್ಥಿ ಬಿಡುತ್ತಾನೆಯೇ, ಅದೂ  ಉರಿಯುವ ಬೆಂಕಿಗೆ ಅಮೇರಿಕಾ ಗಾಳಿ ಹಾಕಲು ತಯಾರಾಗಿರುವಾಗ? ವಿದ್ಯಾರ್ಥಿಗಳು ಬೀದಿಗೆ ಬಂದರು. ನಮ್ಮ ನೆರೆಯ ಮಿತ್ರ ೧೯೮೯ ರಲ್ಲಿ “ತಿಯಾನನ್ಮೆನ್ ಚೌಕ” ದ ಬಳಿ ಸೇನೆಯ ಟ್ಯಾಂಕರು ಗಳನ್ನು ಕಳಿಸಿ ರಸ್ತೆಯನ್ನು ಕೆಂಬಣ್ಣಕ್ಕೆ (ಪ್ರದರ್ಶನಕಾರರ ರಕ್ತದಿಂದ) ತಿರುಗಿಸಿದ ಹಾಗೆ ಮಾಡಲಿಲ್ಲ ಪ್ರೊಫೆಸರ್ ಅಹ್ಮದಿ ನಿಜಾದ್. ಡ್ರಿಲ್ ಮಾಸ್ತರ್ ನಂತೆ ಒಂದಿಷ್ಟು ಲಾಠಿ, ಮತ್ತೊಂದಿಷ್ಟು ಬೆದರಿಕೆ ಹಾಕಿ ಒಳಕ್ಕೆ ಕಳಿಸಿದರು ಪ್ರದರ್ಶನಕಾರರನ್ನು. ಈಗ “ಪೆಂಟ್ ಅಪ್” ಕೋಪವನ್ನೇನು ಮಾಡೋದು? ನೆಲೆ ಕಾಣದ ಕೋಪ ಸೂರು ಹತ್ತಿತು. ಜನ ತಮ್ಮ ಮನೆಗಳ ಸೂರಿನ ಮೇಲೆ ನಿಂತು ಅರಚಿದರು ಘೋಷಣೆಗಳನ್ನು. ದಿನವೂ ನಿರ್ದಿಷ್ಟ ಸಮಯಕ್ಕೆ ಕಿರುಚುವುದು. ಪಾಪ ಇವರಿಗೆ ಗೊತ್ತಿಲ್ಲ ರಾಜಕಾರಣಿಗಳು ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆಯದಾಗಿ ಕಳೆದುಕೊಳ್ಳುವುದು ಕಿವಿಗಳನ್ನು ಎಂದು. ಎರಡನೆಯದಾಗಿ ಕಳಕೊಳ್ಳೋದು ಮಾನವನ್ನು. ಟೆಹರಾನಿನಲ್ಲೂ, ಇರಾನಿನ ಇತರೆ ನಗರಗಳಲ್ಲೂ ನಡೆದ ಗದ್ದಲ ಬೇರೆಲ್ಲ ದೇಶಗಳ ನಿದ್ದೆಗೆಡಿಸಿ ಗಡದ್ದಾಗಿ ಮಲಗಿದ್ದ ಶ್ವೇತ ಭವನವನ್ನು ಎಚ್ಚರಿಸಿತು. ಎಂದಿನಂತೆ ಕಟುವಾದ ಶಬ್ದಗಳು ಉರುಳಲಿಲ್ಲ ತಡಬಡಿಸಿ ಎದ್ದ ಶ್ವೇತ ಭವನದ ಹಸಿರು ಹುಲ್ಲು ಹಾಸಿನಿಂದ. ಏಕೆಂದರೆ ಇದು ಬುಶ್ ಶ್ವೇತ ಭವನವಲ್ಲ, ಒಬಾಮ ಭವನ. ಸ್ವಲ್ಪ ನಯವಾಗಿಯೇ ಗದರಿಸಿತು ಅಮೇರಿಕಾ. ನೋಡಪ್ಪಾ ಹೀಗೆಲ್ಲ ಮಾಡಬಾರದು, ಸರಿಯಾಗಿ ಮತಗಳನ್ನೂ ಎಣಿಸು, ಎಣಿಸಲು ಬರದಿದ್ದರೆ ಬೇಕಾದರೆ ನಮ್ಮ ಜನಗಳನ್ನು ಕಳಿಸುತ್ತೇವೆ ಎಂದು. ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರೂ ಆದ ಇರಾನಿನ ಅಧ್ಯಕ್ಷರು ಅಮೆರಿಕೆಗೆ ತಮ್ಮದೇ ಭಾಷೆಯಲ್ಲಿ mind your business ಎಂದು ಹೇಳಿ ಅಮೆರಿಕೆಯ ಪ್ರತಿಭಟನೆಗೂ, ವಿದೇಶೀ ಸರಕಾರಗಳ ಮೂದಲಿಕೆಗೂ, ಮಾಧ್ಯಮಗಳ ತಿವಿತಗಳಿಗೂ ಅಸಾಧಾರಣವಾದ ಕಿವುಡುತನ ಪ್ರದರ್ಶಿಸಿದರು. ತಾವು ತಮಗರಿವಿಲ್ಲದೆಯೇ ಮಹಾತ್ಮ ಬುಶ್ ರ ಅಭಿಮಾನಿ ಎಂದು ತೋರಿಸಿಕೊಟ್ಟರು ಪ್ರಪಂಚಕ್ಕೆ.

ಥಾಯ್ಲೆಂಡಿನಲ್ಲಿ ಪದಚ್ಯುತ ಪ್ರಧಾನಿ “ಥಕ್ಸಿನ್ ಶಿನಾವತ್ರ” ರನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಪಟ್ಟು ಹಿಡಿದು  ಜನ ಬೀದಿಗಿಳಿದರು ಕೆಂಪು ಅಂಗಿ ಧರಿಸಿ. ನಗರವೆಲ್ಲಾ ಕೆಂಪೋ ಕೆಂಪು. ಪ್ರತಿಭಟನೆಯ ವ್ಯಾಲೆಂಟೈನ್. ಜಪ್ಪಯ್ಯ ಎನ್ನಲಿಲ್ಲ ಸೇನಾ ಬೆಂಬಲಿತ “ಅಭಿಸಿತ್ ವೆಜ್ಜಜೀವ”. ೪೫ ರ, ಆಕ್ಸ್ಫೋರ್ಡ್ ನಲ್ಲಿ ಕಲಿತ ಸ್ಫುರದ್ರೂಪಿ ರಾಜಕಾರಣಿ ಥಾಯಿಲೆಂಡ್ ಅನ್ನು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಆಕರ್ಷಕವನ್ನಾಗಿ ಮಾಡಿದ್ದರು. ಆದರೆ ಶಿನಾವತ್ರ ಬೆಂಬಲಿಗರಿಗೆ ಈ ಬದಲಾವಣೆಯಾಗಲಿ, ಪ್ರಗತಿಯಾಗಲಿ ಬೇಕಿಲ್ಲ. ತರಬೇಕು ಮರಳಿ ತಮ್ಮ ನಾಯಕನನ್ನು ಗದ್ದುಗೆಗೆ. ಕೊನೆಗೆ ಎಲ್ಲರೂ ತಮ್ಮ ತಮ್ಮ ರಕ್ತ ಶೇಖರಿಸಿಕೊಂಡು ಬಕೇಟು ಗಳಲ್ಲಿ ತುಂಬಿ ಅಭಿಸಿತ್ ನಿವಾಸದ ಮುಂದೆ ಸುರಿದರು. ಅಭಿಸಿತ್ ಅವರ ಜಗುಲಿ ನೆತ್ತರುಮಯವಾಯಿತು, ಕ್ಷಣಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅದರೊಂದಿಗೆ ಅಭಿಸಿತ್ ನ ಅಧಿಕಾರದ ಮೋಹವೂ ಇನ್ನಷ್ಟು ಹೆಪ್ಪುಗಟ್ಟಿತು.         

ಹೀಗೆ ಪ್ರತಿಭಟನೆಗಳು ಒಂದಲ್ಲ ಒಂದು ತಮ್ಮದೇ ಆದ ರೀತಿಯಲ್ಲಿ ಪ್ರತ್ಯಕ್ಷಗೊಂಡು, ಸೋತ, ನೀರಸ ವಿಶ್ವಕ್ಕೆ ಗೆಲುವನ್ನೂ, ಲವಲವಿಕೆಯನ್ನು ತಂದು ಕೊಡುತ್ತವೆ. ನಿಮ್ಮದೂ ಏನಾದರೂ ವಿಶಿಷ್ಟ ವಿಧಾನಗಳಿದ್ದರೆ ಹೇಳಿ. ನಿಮಗಾಗದ ಸಹೋದ್ಯೋಗಿ ಸಮೀಪ ಇಲ್ಲದಾಗ ಅವನ ಹೆಸರಿನಲ್ಲಿ (ಆತ ತೆರೆದಿಟ್ಟು ಹೋದ office outlook ಮೂಲಕ) ಬೇಡದ ಮೇಲ್ ಕಳಿಸಿ ಆತನ ಬಾಳನ್ನು ಬಂಗಾರ ಮಾಡಿದ ನಿದರ್ಶನಗಳಿದ್ದರೆ ಹಂಚಿಕೊಳ್ಳಿ.

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ “ಇಕಾಮ” ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ “ಬುತಾಕ” ಅಥವಾ “ಹವ್ವಿಯ್ಯ” ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ ನಮಗಿರಬೇಕು. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.

* ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ

ನಾಗಪುರದ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರದರ್ಶನ ವೀಕ್ಷಿಸಿದವರಿಗೆ ಬಾಕಿ ಎರಡು ಪಂದ್ಯಗಳ ಹಾದಿ ಯಾವುದು ಎಂದು ತಿಳಿಯಲು ಯಾವ ಜ್ಯೋತಿಷಿಯ ಭವಿಷ್ಯದ ಅವಶ್ಯಕತೆ ಬರದು. ಆಟದ ಎಲ್ಲಾ ರಂಗಗಳಲ್ಲೂ – ಫೀಲ್ಡಿಂಗ್, ಬೌಲಿಂಗ್, ಬ್ಯಾಟ್ಟಿಂಗ್ ಮತ್ತು ನಾಯಕತ್ವ – ದಕ್ಷಿಣ ಆಫ್ರಿಕಾ ತಾನು ಉಚ್ಚ ಮಟ್ಟದ ತಂದ ಎಂದು ಜಗಜ್ಜಾಹೀರು ಮಾಡಿತು. ಸೋತ ಕಾರಣ ಸಾಮಾನ್ಯವಾಗಿ ನಮ್ಮ ಮಾಧ್ಯಮದವರು ಅನುಸರಿಸುವ ದಾರಿ ನಾನು ಹಿಡಿಯುವುದಿಲ್ಲ.   ಸೋತ ಕೂಡಲೇ ಭಾರತ ಮಣ್ಣು ಮುಕ್ಕಿತು, ಹೀನಾಯ ಸೋಲು…. ಹಾಗೆ ಹೀಗೆ ಎಂದು ಪುಂಖಾನು ಪುಂಖವಾಗಿ ಬರೆದು ತಂಡದ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಮಾಡುವುದಿಲ್ಲ. ಸೋಲು ಗೆಲುವು ಪಂದ್ಯದಲ್ಲಿ ಇದ್ದದ್ದೇ. ಕ್ರಿಕೆಟ್ನ ವಿಶೇಷತೆ ಏನಂದರೆ ಅದು ಮೂರನೆಯ ಸಂಭವನೀಯತೆಯನ್ನು ನೀಡುತ್ತದೆ; ಅದೇ ಡ್ರಾ. ಎಷ್ಟಿದ್ದರೂ cricket is a gentlemen’s game ಅಲ್ಲವೇ? ಡ್ರಾ ಬಿಡಿ ಹತ್ತು ನಿಮಿಷ ಹೆಚ್ಚಾಗಿ ಬ್ಯಾಟ್ ಮಾಡಿದ್ದರೆ ಪ್ರೋಟೀಯಾಗಳು ಮತ್ತೊಂದು ಇನ್ನಿಂಗ್ಸ್ ಆಡಿ ಇನ್ನಿಂಗ್ಸ್ ಸೋಲಿನ ಪ್ರತಿಷ್ಠೆಯಿಂದ ನಾವು ಪಾರಾಗಬಹುದಿತ್ತು. 
 
ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದ ಕೂಡಲೇ ಸಂತಸದಿಂದ ಬೀಗಿದ ನಾನು ಏನಾದರೂ ಸಾಹಸ ಮಾಡಿ ಏನಿಲ್ಲವೆಂದರೂ ಟೆಸ್ಟ್ ಅನ್ನು ಉಳಿಸಬಹುದೇನೋ ಎನ್ನುವ ಆಸೆ ಈಡೇರಲಿಲ್ಲ. ಸಹೋದ್ಯೋಗಿಯೊಬ್ಬ ಹೇಳಿದ ಮಾತು ಇಷ್ಟವಾಗದಿದ್ದರೂ ಸರಿ ಎನ್ನಿಸಿತು. ಆತ ಹೇಳಿದ್ದು ಸಚಿನ್ ನ ಸೆಂಚುರಿ “ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ” ಎಂದು. ಮಾತು ಖಾರವಾದರೂ ಆ ಸೆಂಚುರಿ ಯಾವ ಫಲವನ್ನೂ ನೀಡಲಿಲ್ಲ. ಗಾವಸ್ಕರನ ಸೆಂಚುರಿಗಳೂ ಹಾಗೇ ಅಲ್ಲವೇ? ಏನಾದರೂ ಪ್ರಯೋಜನ ಕಂಡಿದ್ದೀವಾ? 
 
ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ. ನಮ್ಮ ತಂಡದವರು ಅಲ್ಲಿ ನಮಗೆ ನರಕದ ರುಚಿ ತೋರಿಸದಿದ್ದರೆ ಸಾಕು.      

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ…

ಭಾರತ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲೊಂದು. ಹೇಗಿದೆ, ನಮ್ಮ ಕೀರ್ತಿಯ ಪತಾಕೆ. ಬಹು ಎತ್ತರಕ್ಕೆ ಹಾರುತ್ತಿದೆ ಅಲ್ಲವೇ? ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ… ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ ಈ ಬಹುಮಾನವನ್ನು ಭಾರತಕ್ಕೂ ಮತ್ತು ಇತರ ರಾಷ್ಟ್ರಗಳಿಗೂ ದಯಪಾಲಿಸಿತು. ಸಮಾಧಾನ ಏನೆಂದರೆ ನಮ್ಮೊಂದಿಗೆ ಒಂದಿಷ್ಟು ಸಂಗಾತಿಗಳೂ ಇರುವುದು; ಸೋಮಾಲಿಯ, ಆಫ್ಘಾನಿಸ್ತಾನ, ಮಯನ್ಮಾರ್, ಸುಡಾನ್ ಮತ್ತು ಇರಾಕ್. ವಾಹ್! ಸ್ನೇಹಿತರ ಪ್ರೊಫೈಲ್ ಒಮ್ಮೆ ಸ್ವಲ್ಪ ನೋಡಿ. ೧೮೦ ರಾಷ್ಟ್ರಗಳ ಪೈಕಿ ನಮ್ಮ ರಾಂಕಿಂಗ್ ೮೪. ಲಂಚ ಎಂದ ಕೂಡಲೇ ಹೆಣವೂ ಬಾಯಿ ಬಿಡುತ್ತಂತೆ. ಬಿಟ್ಟಿ ದುಡ್ಡು ನೋಡಿ.. ದುಡಿಮೆ ಬೇಡ, ಬೆವರಿನ ಅಗತ್ಯವಿಲ್ಲ… ಮಾಡಲೇಬೇಕಾದ ಕೆಲಸವನ್ನು ಮಾಡಿ ಕೊಡಲಾರೆ ಎಂದು ೧೦೧ ಕಾರಣಗಳನ್ನು ನೀಡಿ ನಂತರ ಸ್ವಲ್ಪ ಕೊಳಕಾದ ಹಲ್ಲುಗಳನ್ನು ಪ್ರದರ್ಶಿಸಿದರೆ ಬಂದು ಬೀಳುತ್ತದೆ ಕಾಂಚಾಣ. ಕಾಂಚಾಣಂ ಕಾರ್ಯ ಸಿದ್ಧಿ. ಮತ್ತೆ ಧಾರ್ಮಿಕತೆಯನ್ನು ಪ್ರದರ್ಶಿಸಿ ಮುಖವಾದ ಹಾಕಿಕೊಂಡು ಓಡಾಡೋದು? ಅದಕ್ಕೇನು ದಾರಿಯಲ್ಲಿ ಸಿಗುವ ದೇವರ ಹುಂಡಿಗಳಿಗೋ ನಮ್ಮ ಇಷ್ಟದೇವರುಗಳ ಮಠಗಳಿಗೋ ಒಂದಿಷ್ಟು ಸುರಿದು ಬಂದರಾತು. ಲಂಚ ತೆಗೆದುಕೊಳ್ಳಬೇಡಿ ಎಂದು ಯಾವ ಧರ್ಮಭೀರುವಿನ ಬಾಯಿಂದಲೂ ಬರುವುದಿಲ್ಲ ನೋಡಿ, ಏಕೆಂದರೆ ಆ ಮೂಲದ ಮೂಲಕವೇ ಅಲ್ಲವೇ ಅವರ ಹೊಟ್ಟೆಪಾಡು ಸಾಗುವುದು? ಯಾರಾದರೂ ಕೊಡಲಿಯನ್ನು ತಮ್ಮ ಕಾಲ ಮೇಲೆಯೇ ಹಾಕಿಕೊಳ್ಳುತ್ತಾರ? ಇಂಥ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವತ್ತ ಗಮನ ಹರಿಸುವುದನ್ನು ಬಿಟ್ಟು ರಾಷ್ಟ್ರ ಭಾಷೆ ಯಾವುದಾಗಬೇಕು, ರಾಷ್ಟ್ರ ಗೀತೆ ಇದಾದರೇನು ಅಥವಾ ಇನ್ನಾವುದಾದರೂ ಹೊಸ ಸಮಸ್ಯೆಯನ್ನು ingenuity ಉಪಯೋಗಿಸಿ ಹುಟ್ಟುಹಾಕಿ ಜನರ ಪೀಡಿಸುವುದು, ಈ ತೆರನಾದ ವ್ಯರ್ಥ ಕಾರ್ಯಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡು ವಿಶ್ವದ ಎದುರಿಗೆ ನಮ್ಮ ಮಾನ ನಾವೇ ಹರಾಜಿಗೆ ಹಾಕಿಕೊಳ್ಳುತ್ತೇವೆ.

ವರುಣನ (ಅವ) ಕೃಪೆ

ಚುನಾವಣೆ ನಡೆದು ತಿಂಗಳುರುಳಿದರೂ ಆಘಾತಕಾರಿ ಸೋಲನ್ನು ಕಂಡ ರಾಜಕೀಯ ಪಕ್ಷವೊಂದರ post mortem ಇನ್ನೂ ನಡೆಯುತ್ತಲೇ ಇದೆ. ಹಿಂದುತ್ವ ಬಿಟ್ಟಿದ್ದರಿಂದ ಬಂತು ಹೊಡೆತ ಎಂದು ಒಬ್ಬ ಹೇಳಿದರೆ ವರುಣನ “ನಿಂದಾ ವರ್ಷ” ಕಾರಣ ಎಂದ ಮಗುದೊಬ್ಬ. ಅಲ್ಪಸಂಖ್ಯಾತರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ನಂತರ ನಾನು ಆ ರೀತಿ ಹೇಳಿಯೇ ಇಲ್ಲ ಯಾವುದೋ ಭೂತ ಪಿಶಾಚಿ CD ಒಳಗೆ ನುಗ್ಗಿ ರಂಪ ಮಾಡುತ್ತಿದೆ ಎಂದು ತಾಯಿ ಮಗ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ ಇದನ್ನು ಮಾಧ್ಯಮಗಳಾಗಲಿ, ಸಾಮಾನ್ಯ ಜನರಾಗಲಿ ನಂಬುವುದಿಲ್ಲ. ಹೌದು ನನ್ನಿಂದ ತಪ್ಪು ನಡೆದು ಹೋಯಿತು, ಉನ್ಮಾದದಲ್ಲಿ ಆಡಿದ ಮಾತುಗಳಿಗೆ ಕ್ಷಮೆಯಿರಲಿ ಎಂದು ಹೇಳಿಕೆ ಕೊಟ್ಟು ಜನರನ್ನು ಗೆಲ್ಲಬಹುದಿತ್ತು. ಆದರೆ ಅಂತ ಮಾತುಗಳನ್ನು ಆಡಲು ವ್ಯಕ್ತಿಯ ನೈತಿಕತೆ ಉನ್ನತ ಮಟ್ಟದ್ದಾಗಿರಬೇಕು.  

ಪ್ರಾಣಿ ದಯೆ ಬೋಧಿಸುವ ತಾಯಿ (ಮೇನಕ ಗಾಂಧಿ) ಮನುಷ್ಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತನ್ನ ಸುಪುತ್ರನಿಗೆ ಹೇಳಿಕೊಡಲು ಸಮಯ ಸಿಗದಿದ್ದದು ಖೇದಕರ.  

ಒಂದು ಸಮುದಾಯವನ್ನು ನಿಂದಿಸಿ, ಓರ್ವ ಸಮರ್ಥ ಪ್ರಧಾನಿಯನ್ನು ಅಸಮರ್ಥ ಎಂದು ಬಣ್ಣಿಸಿ ಚುನಾವಣೆ ಗೆಲ್ಲಬಹುದು ಎಂದು ಎಣಿಸಿದ್ದ ಪಕ್ಷವೊಂದು ಭಾರತೀಯ ಮತದಾರ ವಿಶ್ವದಲ್ಲೇ ಅತ್ಯಂತ ಪ್ರಬುಧ್ಧ ಎಂದು ಮನಗಾಣಲು ಸೋತಿದ್ದು ತನ್ನ ಹಿನ್ನಡೆಗೆ ಕಾರಣ ಎಂದು ಅರಿತುಕೊಳ್ಳಬೇಕು. ಸಮಸ್ತ ಭಾರತೀಯರನ್ನು ಭರತವರ್ಷ ಎಂಬ ಹಡಗಿನಲ್ಲಿ ಕೂರಿಸಿ ಭವ್ಯ ಭವಿಷ್ಯದ ಕಡೆಗೆ ಹಡಗನ್ನು ಮುನ್ನಡೆಸುವ ಹೃದಯ ವೈಶಾಲ್ಯತೆಯನ್ನು ಮತ್ತು ಅಗತ್ಯವನ್ನು ಮನಗಾಣಬೇಕು.  

ಮತದಾರನಿಗೆ ಏನು ಬೇಕು ಎಂದು ಮನಗಂಡು ಅದಕ್ಕೆ ತಕ್ಕ ಕಾರ್ಯಕ್ರಮ ಪ್ರಸ್ತುತಪಡಿಸದೆ ತಾನು ಏನು ಹೇಳಿದರೂ ಜನ ನಂಬಿ ಗದ್ದುಗೆಗೆ ಕೂರಿಸಬಹುದು ಎಂಬ ನಂಬಿಕೆ ತನಗೆ ಮುಳುವಾಯಿತು ಎಂದು ಪಕ್ಷ ಶೀಘ್ರ ಅರಿತು ಕೊಂಡರೆ ಭಾರತದ ರಾಜಕಾರಣದಿಂದ ಸಂಪೂರ್ಣವಾಗಿ ಅಳಿಸಿ ಹೋಗುವ ಭೀತಿ ಇಲ್ಲವಾಗಬಹುದು.

ನಾವೇಕೆ ಹೀಗೆ?

ಭಾರತ twenty20 ಯಲ್ಲಿ ಸೋಲುಂಡ ನಂತರ ನಮ್ಮ ಪತ್ರಿಕೆಗಳು ಧೋನಿ ಮತ್ತು ತಂಡದವರನ್ನು ಹಿಗ್ಗಾ ಮುಗ್ಗಾ ಹೀಗಳೆದು ಬರೆದವು. ವಿದ್ಯುನ್ಮಾನ ಮಾಧ್ಯಮಗಳು ತಾವು ಯಾರಿಗೂ ದ್ವಿತೀಯರಲ್ಲ ಎಂದು ತೋರಿಸುವ ಹುಮ್ಮಸ್ಸಿನಲ್ಲಿ ಭಾರತ ತಂಡವನ್ನು ಟೀಕಿಸಿ ಅವರ ಅಳಿದುಳಿದ ಮನೋಸ್ಥೈರ್ಯವನ್ನು ಉಡುಗಿಸುವ ಕೆಲಸ ಸೊಗಸಾಗಿ ಮಾಡಿದವು. ಯಾವುದೇ ಆಟದಲ್ಲೂ ಒಬ್ಬರು ಗೆದ್ದರೆ ಮತ್ತೊಬ್ಬ ಸೋಲಲೇ ಬೇಕು. ಇದು ನಿಯಮ. ಇದನ್ನು ಅರಿಯಲಾರದ ಮಾಧ್ಯಮಗಳಿಗೆ ಬೇಕಿರುವುದು ವಿಷಯಗಳನ್ನು ಸಂಕೀರ್ಣಗೊಳಿಸಿ ತಮಗೆ ತೋಚಿದಂತೆ ಬರೆದು ಪತ್ರಿಕಾ ದ್ಧರ್ಮವನ್ನು ಮೆರೆದ ಪುಣ್ಯಭಾವದ ಸೋಗು ಹಾಕುವುದು. ವಿಶ್ವದ ಬೇರಾವುದೇ ರಾಷ್ಟ್ರಗಳಲ್ಲೂ ಕಾಣದ ಈ ವರ್ತನೆ ನಮ್ಮ ದೇಶಕ್ಕೆ ಬಂದದ್ದಾದರೂ ಹೇಗೆ? ಬಹುಶಃ ಕ್ರೀಡೆಯಲ್ಲಿ ಕ್ರಿಕೆಟ್ ಮಾತ್ರ ಇರಬೇಕು ನಮಗೆ ಒಂದಿಷ್ಟು ಸಾಧಿಸಿದ್ದೇವೆ ಎನ್ನೋ ಭಾವ ತಂದ ಆಟ. ಇದನ್ನೂ ಸೋಲುತ್ತಾ ಕೂತರೆ ಮತ್ಯಾವುದರಲ್ಲಿ ನಾವು ಶ್ರೇಷ್ಠರು? ಕ್ರಿಕೆಟ್ ಗೆ ಕೊಟ್ಟ ಮರ್ಯಾದೆ ಮಾನ್ಯತೆಯಲ್ಲಿ ಕಾಲು ಭಾಗವಾದರೂ ಇತರೆ ಕ್ರೀಡೆಗಳಿಗೆ ಕೊಟ್ಟಿದ್ದರೆ ನಮಗೆ ಹೀಗೆ ನಮ್ಮನ್ನು ನಾವೇ ಹಳಿದುಕೊಳ್ಳುವ ಗತಿ ಬರುತ್ತಿರಲಿಲ್ಲವೋ ಏನೋ?