ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

ಬ್ರಿಟಿಷ್ ಏಕಲವ್ಯ

brian31ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ  ಏಕಲವ್ಯನಂತೆ ಈತ ಒಂಟಿಯಾಗಿ ಬ್ರಿಟಿಷ್ ಸರಕಾರದ ವಿದೇಶಾಂಗ ನೀತಿಯ ವಿರುದ್ಧ ಸಮರ ಸಾರಿದ್ದಾನೆ. ಸುಮಾರು ಎಂಟು ವರ್ಷಗಳಿಂದ ಬ್ರಿಟಿಷ್ ಸಂಸತ್ತಿನ ಎದುರು ಡೇರೆ ಹಾಕಿ ಕುಳಿತಿರುವ ಈತ ಮಾಜಿ ಪ್ರಧಾನಿ ಬ್ಲೇರ್ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ. ಈ ಆದುನಿಕ ಏಕಲವ್ಯನ ಹೆಸರು ಬ್ರಯನ್ ಹಾವ್,ಬಡಗಿ ಮತ್ತು ೭ ಮಕ್ಕಳ ತಂದೆ. ಅಮೇರಿಕೆಯಲ್ಲಿ ನಡೆದ ಸೆಪ್ಟೆಂಬರ್ ೧೧,೨೦೦೧ ಧಾಳಿಯ ೩ ತಿಂಗಳ ಮೊದಲೇ ಈತ ಇರಾಕಿನ ವಿರುದ್ಧದ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಟಕ್ಕಿಳಿದ. “Stop Killing Kids”, “Make Peace Not War”,“Let Iraqi Infants Live”,ಮುಂತಾದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜನರ ಗಮನ ತನ್ನೆಡೆ ಸೆಳೆದ. ವಿಶೇಷವಾಗಿ “Baby killers” and “Tony B Liar”ಎನ್ನೋ ಭಿತ್ತಿಚಿತ್ರ ಪ್ರದರ್ಶಿಸಿದ ಈತ ಇಷ್ಟು ವರ್ಷಗಳ ಕಾಲ ಈ ರೀತಿ ಪ್ರತಿಭಟನೆಗೆ ಇಳಿಯುತ್ತಾನೆಂದು ಯಾರೂ ಭಾವಿಸಿರಲಿಲ್ಲ. brian-hawe3

ಬ್ರಿಟಿಷ್ ಸಂಸತ್ತಿನ ಚೌಕದ ಮುಂದೆ ಮತ್ತು ಪ್ರಧಾನಿ ಅಧಿಕೃತ ನಿವಾಸ 10,Downing streetನ ಬಹು ಸಮೀಪ ಡೇರೆ ಹಾಕಿರುವ ಈತನನ್ನು ಒಮ್ಮೆ ಡಜನ್ಗಟ್ಟಲೆ ಪೊಲೀಸರು ಬಂದು ಓಡಿಸಲು ಪ್ರಯತ್ನ ಪಟ್ಟರೂ ಜುಮ್ಮೆನ್ನದೆ ಅಲ್ಲೇ ಬೀಡು ಬಿಟ್ಟಿದ್ದಾನೆ. ಈ ಪೋಲಿಸ್ ಕ್ರಮದ ಬಗ್ಗೆ ಅಲ್ಲಿನ ಪ್ರಸಿದ್ದ ಪತ್ರಿಕೆಗಳು ( The DailyTelegraph ran the story with a headline: “Police sent 78 to quell loneprotester.” )ವರದಿ ಮತ್ತು ಲೇವಡಿ ಮಾಡಿ ಬರೆದಾಗ ಸರಕಾರಕ್ಕೆ ಕಸಿವಿಸಿ ಆಗಿ ಆತನನ್ನು ಅವನ ಪಾಡಿಗೆ ಬಿಡಲು ನಿರ್ಧರಿಸಿತು.ಇಂಗ್ಲೆಂಡಿನ ಕ್ರೂರ ಚಳಿಗೂ ಸೊಪ್ಪು ಹಾಕದೆ ತನ್ನ ಡೇರೆಯಲ್ಲೇ  ಕಳೆಯುವ ಈತ ಚಳಿ ಬಗ್ಗೆ ಕೇಳಿದರೆ ಆಫ್ಘಾನಿಸ್ತಾನದಲ್ಲಿ ಭೂಕಂಪದ ನಂತರ ಬೆಟ್ಟ ಗುಡ್ಡ ಮೇಲಿರುವ ಎಲ್ಲವನ್ನೂ ಕಳೆದುಕೊಂಡ ಪುಟ್ಟ ಬಾಲಕಿಯರ ಬಗ್ಗೆ ಮಾತನಾಡಿ ಈ ಚಳಿ ಅದಕ್ಕೆ ಹೋಲಿಸಿದರೆ ದೊಡ್ಡದೇನೂ ಅಲ್ಲ ಎನ್ನುತ್ತಾನೆ. ಹೀಗೆ ನಿಷ್ಠುರವಾಗಿ ತನ್ನ ಮತ್ತು ಅಮೆರಿಕೆಯ ಸರಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವ ಬ್ರಯನ್ ಹಾವ್ ಎಷ್ಟು ದಯಾಮಯಿ ಎಂದು ಅನ್ನಿಸದಿರದೆ?

ಲಂಡನ್ನಿನ ಆಕರ್ಷಣೆಗಳಲ್ಲಿ ಬ್ರಯನ್ ಹಾವ್ ಒಬ್ಬ ಎಂದರೂ ಸರಿಯೇ.