ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ…

…”ವಿಶ್ವ ತಂಬಾಕು ರಹಿತ” ದಿನ.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ ಸಿಗರೇಟ್, ಬೀಡಿ ಸಹವಾಸ ಬೇಡ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಧೂಮಪಾನ ಮಾಡಬಾರದು ಎಂದು ಬಾಲ್ಯದಲ್ಲಿ ಪಾಲಕರೂ, ಯೌವನದಲ್ಲಿ ಅರ್ಧಾಂಗಿನಿಯರೂ ಹೇಳುವುದನ್ನು ಕವಡೆ ಕಾಸಿಗೆ ಬೆಲೆ ಕಲ್ಪಿಸದೆ ಸೇದುವವರ ಸಂಖ್ಯೆಯೇ ಅಧಿಕ. ಇನ್ನು ಈ ನಡವಳಿಕೆಯಲ್ಲಿ ಏನಾದರೂ ಪರಿವರ್ತನೆ ಬರಬೇಕೆಂದರೆ ಡಿಸೆಂಬರ್ ೩೧ ಅಥವಾ ಜನವರಿ ೧, ಹೊಸವರ್ಷದ ನಿರ್ಣಯವಾಗಿ ಆಶ್ವಾಸನೆ, ನಾನಿನ್ನು ಸಿಗರೇಟ್ ಸೇದೊದಿಲ್ಲ ಎಂದು. ಈ ನಿರ್ಣಯದ ಆಯುಷ್ಯ ಹೆಚ್ಚು ಎಂದರೆ ೭೨ ಘಂಟೆಗಳು. ಮೂರು ದಿನ.     

Smokers are beggars ಅಂತಾರೆ. ಒಂದು ‘ಕಡ್ಡಿ’ ಇದ್ಯೇನಣ್ಣ? lighter please.. ಪರಿಚಯದ ಅವಶ್ಯಕತೆಯಿಲ್ಲ, instant beggars. ಅವರುಗಳ ನಡುವಿನ camaraderi ಅಂಥದ್ದು. ಸ್ಮೋಕರ್ ಗಳು humble ಅಂತೆ, ಏಕೆಂದರೆ ಅವರು ಸ್ಮೋಕಿಸಲೆಂದು ಬೀಡಿ ಸಿಗರೇಟಿಗೆ ಕಿಡಿ ಹೊತ್ತಿಸುವಾಗ ಸ್ವಲ್ಪ ನಾಜೂಕಾಗಿ ಬಗ್ಗಿ ತಾನೇ ಹಚ್ಚೋದು? ಹಾಗೆಯೇ ಒಂದು “ಕಡ್ಡಿ” ಕೊಡಣ್ಣ ಎಂದು ಗಿಂಜುತ್ತಾ ಕೇಳುವುದರಲ್ಲೂ ತುಂಬಿದೆ “ಹಂಬಲ್” ನೆಸ್, ಅಲ್ವೇ?

 ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡರು. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಗಳಿಗೆ ಕಾರಣ ಧೂಮಪಾನ. ಧೂಮಪಾನ ಯಾವಾಗ ಬಿಡ್ತೀಯ ಎಂದು ಅವಿವಾಹಿತನನ್ನು ಕೇಳಿದರೆ ತನ್ನ ತುಟಿಗಳಿಗೆ ಪರ್ಯಾಯವಾದದ್ದು ಸಿಕ್ಕ ನಂತರ ಎನ್ನುತ್ತಾನೆ. ಅಂದ್ರೆ ಅವನಿಗೊಂದು ಚೆಂದುಳ್ಳಿ ಹೆಣ್ಣನ್ನು ಹೊಂದಿಸಿ ಕೊಟ್ಟ ಕೂಡಲೇ ತನ್ನ ಚಟವನ್ನು ಬಿಡುತ್ತಾನೆ ಎನ್ನುವ ಖಾತರಿಯಿಲ್ಲ. “ಪರ್ಯಾಯ” ವಾಗಿ ಸಿಕ್ಕಿದ್ದು boredom ಆಗಿ ಕಾಣುತ್ತಿದ್ದಂತೆಯೇ ವಾಪಸ್ ಹಳೇ ಧಂಧೆಗೆ.  

ಸಿಗರೇಟ್ ಸೇದುವವರ ಮಧ್ಯೆ ಸಿಕ್ಕಿ ಕೊಂಡ ನಮ್ಮ ಪಾಡು ಸ್ವಲ್ಪ ನೋಡಿ. ಸೇದುವವನೇನೋ ಸುಖವಾಗಿ, ತನ್ನ ಚಟದ ಮಜಾ ತೆಗೆದು ಕೊಳ್ಳುತ್ತಾ, ಸುರುಳಿಯಾಗಿಯೂ, ಕೊಳವೆಯಾಗಿಯೂ, ತರಾವರಿ ರೀತಿಯ ಹೊಗೆಯನ್ನು ಬಿಡುತ್ತಾ, ಹೊಗೆ ಬಿಡುವ ತನ್ನ creativity ಗೆ ತನಗೆ ತಾನೇ ತಲೆದೂಗುತ್ತಾ ಮತ್ತಿನಲ್ಲಿರುತ್ತಾನೆ. ಆದರೆ ನಾವು? ನಮಗೇನು ಸಿಗುತ್ತದೆ ಅದರಿಂದ ಆನಂದ? ಅವನ ಸಿಗರೇಟ್ ನ ತುದಿಯಿಂದ ಹೊರ ಬರುವ ಹೊಗೆ, ಅವನ ಬಾಯಿಂದ ಬರುವ ಹೊಗೆ, ಅವನ ಮೂಗಿನಿಂದ ಬರುವ ಹೊಗೆ, ಅವನ ಕವಿ ಕಣ್ಣುಗಳಿಂದ ಬರುವ ಹೊಗೆ, ಹೀಗೆ ನಾನಾ ರೀತಿಯಲ್ಲಿ, ಅವನ ಶರೀರದ ಎಲ್ಲಾ ರಂಧ್ರಗಳಿಂದಲೂ ‘ಫಿಲ್ಟರ್’ ಆಗಿ ಬರುವ ಹೊಗೆಯನ್ನು ನಾವು ಸೇವಿಸಬೇಕು. ಪ್ರತಿಭಟಿಸಿದಿರೋ, ಮೇಲೆ ಹೇಳಿದ ಹಂಬಲ್ ನೆಸ್ ಎಲ್ಲಾ ಮಾಯಾ. ನಿಮ್ಮ ಕಡೆ ಕೆಕ್ಕರಿಸಿ ಒಂದು ನೋಟ, ದಮ್ಮು ಸೇರಿಸಿ ಜೋರಾಗಿ ಮತ್ತೊಂದು ದಮ್ಮು. ಹೀಗೆ ಸಿಗರೆಟ್ ಸೇದದೆಯೂ ಅದರ ಎಲ್ಲಾ ಬ್ಯಾನೆಗಳನ್ನು ಅಂಟಿಸಿ ಕೊಳ್ಳುವ ಸೆಕೆಂಡರಿ ಸ್ಮೋಕರ್ ಗಳಾದ ನಮಗೆ ಯಾವ ರಕ್ಷಣೆಯೂ ಇಲ್ಲ. secondary smoking, ವೈದ್ಯಕೀಯ ಅಧ್ಯಯನದ ಪ್ರಕಾರ, active smoking ಗಿಂತ ಅಪಾಯಕಾರಿ ಅಂತೆ. ಕೆಲವು ವರ್ಷಗಳ ಹಿಂದೆ ಹೀಗೆ ಸೆಕೆಂಡರಿ ಸ್ಮೋಕಿಂಗ್ ಕಾರಣ ಕ್ಯಾನ್ಸರ್ ತಗುಲಿಸಿಕೊಂಡ ಕೊಂಡ ಓರ್ವ ಪಾಶ್ಚಾತ್ಯ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು ಪರಿಹಾರ ಕೇಳಿ ಎಂದು ಓದಿದ ನೆನಪು. ಪರಿಹಾರ ಸಿಕ್ಕಿತೋ ಇಲ್ವೋ ಗೊತ್ತಿಲ್ಲ. ‘ಫಿಲಿಪ್ ಮೋರಿಸ್’ ನಂಥ ಕಂಪೆನಿಗಳಿಂದ ಹಣ ಕೇಳೋದು ಒಂದೇ, ಹೋದ ಪ್ರಾಣ ವಾಪಸ್ಸು ಕೊಡು ಎಂದು ಯಮನ ಹಿಂದೆ ಬೀಳೋದು ಒಂದೇ.

ಮುಂದುವರಿದ ದೇಶಗಳಲ್ಲಿ ಧೂಮಪಾನಿಗಳಿಗೆ ಎಲ್ಲೂ ಧೂಮಪಾನ ಮಾಡಲು ಸ್ಥಳವಿಲ್ಲದಂತೆ ಮಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದರ ಮೇಲೆ ಜನ ಜಾಗೃತಿ, ಅಭಿಯಾನ ಬೇರೆ. ಹಾಗಾದರೆ ಮುಂದುವರಿದ ದೇಶಗಳಲ್ಲೇ ಹುಟ್ಟಿದ, ಅವರೇ ನಡೆಸುವ ಸಿಗರೆಟ್ ಕಂಪೆನಿಗಳ ಕಥೆ ? ಅಲ್ಲಿನ ಜನರು ಧೂಮಪಾನ ಕಂಪೆನಿಗಳನ್ನು “ಮುಂದಕ್ಕೆ ಹೋಗಪ್ಪಾ” ಎಂದು ಅಟ್ಟಿದರೆ, ಇವರುಗಳು ಮುಂದು ಮುಂದಕ್ಕೆ ಬಂದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ, ಹೊಂದದ ದೇಶಗಳಿಗೆ ತಮ್ಮ ಸರಕುಗಳನ್ನು ಇಳಿಸಿದರು. ಸುಲಭ ಬೆಲೆಗೆ ಮಾರಲು ಶುರು ಮಾಡಿದರು. ಇಲ್ಲಿ ಸೌದಿ ಅರೇಬಿಯಾದಲ್ಲಿ ಯುವಜನರ ಫೇವರಿಟ್ ಆದ marlboro ಸಿಗರೇಟ್  ಒಂದು ಪ್ಯಾಕ್ ಗೆ ೫.೫೦ ರಿಯಾಲ್  ( ೭೦.೦೦ ರೂ) ಆದರೆ marlboro ಕಂಪೆನಿಯ ತವರೂರು ಅಮೆರಿಕೆಯಲ್ಲಿ ಈ ಸಿಗರೆಟ್ ಗೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸೇದಬಾರದು ಎಂದು ಎಟುಕದ ಬೆಲೆ. ನೋಡಿ, ಸ್ವದೇಶೀಯರನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಳ್ಳುತ್ತಾರೆ ಅಮೆರಿಕನ್ನರು.

ಧೂಮಪಾನವನ್ನು ದೊಡ್ಡ ಹವ್ಯಾಸವಾಗಿ ತೆಗೆದು ಕೊಳ್ಳುತ್ತಿರುವ ಮತ್ತೊಂದು ದೇಶ ಎಂದರೆ ಇಂಡೋನೇಶಿಯ. ಈ ದೇಶದಲ್ಲಿ ಎರಡು ಕೋಟಿ ಗೂ ಹೆಚ್ಚು “ಬಾಲ ಧೂಮಪಾನಿ” ಗಳಿದ್ದಾರಂತೆ. ನಮ್ಮಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಥರ. ನೈಜೀರಿಯ, ಯುಕ್ರೇನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸಿಗರೆಟ್ ಕಂಪೆನಿಗಳು ಬರೀ ಕ್ರೀಡೆಗಳನ್ನು ಮಾತ್ರವಲ್ಲ ರಾತ್ರಿ ಕ್ಲಬ್ಬುಗಳನ್ನೂ ಪ್ರಾಯೋಜಿಸುತ್ತಿದ್ದಾರಂತೆ. ಕುಡಿದು, ಸೇದಿ, ಮಸ್ತ್ ಮಜಾ ಮಾಡಿ ಎಂದು. Life is short, you see?  ರಷ್ಯಾದಲ್ಲಿ ಮಹಿಳೆಯರನ್ನು ಸ್ಮೋಕಿಂಗ್ ಚಟಕ್ಕೆ ಎಳೆಯಲು ಸಿಗರೆಟ್ ಪ್ಯಾಕೆಟ್ ಗಳನ್ನು ವಜ್ರ ಲೇಪನದ ಸುಗಂಧ್ಯ ದ್ರವ್ಯದ ಬಾಟಲಿನಂತೆ ರೂಪಿಸಿದ್ದಾರಂತೆ. ನೋಡಿದಿರಾ, ಜನರನ್ನು ಕೊಲ್ಲಲು ಅನುಸರಿಸುವ ವಿಧಿ ವಿಧಾನಗಳನ್ನು? ಆದರೂ ಇವರು ಪಾಶ್ಚಾತ್ಯರು, ಸುಸಂಸ್ಕೃತರು. ಇವರು ಮಾಡುವಕ್ಕೆದೆಲ್ಲಾ free trade ಎನ್ನುವ ಹಣೆಪಟ್ಟಿ.      

ಕ್ಯಾನ್ಸರ್ ತಜ್ಞ ನೂ (oncologist) ಆದ ಉರುಗ್ವೆ ದೇಶದ ಅಧ್ಯಕ್ಷ ಧೂಮಪಾನದ ಮೇಲೆ ನಿಗ್ರಹ ಹೇರಿದ್ದಕ್ಕೆ ವಿಶ್ವ ವಿಖ್ಯಾತ ಸಿಗರೆಟ್ ಕಂಪೆನಿ ‘ಫಿಲಿಪ್ ಮೋರಿಸ್’ ಅಲ್ಲಿನ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ವ್ಯಾಜ್ಯದಲ್ಲಿ ಒಂದು ವೇಳೆ ಗ್ರಹಚಾರಕ್ಕೇನಾದರೂ ಉರುಗ್ವೆ ಸೋತರೆ ಸುಮಾರು ೯,೦೦೦ ಸಾವಿರ ಕೋಟಿ ರೂಪಾಯಿ ಈ ಕಂಪೆನಿಗೆ ಪಾವತಿಸಬೇಕಂತೆ. ಪಾಪ ಟೋಬಾಕೋ ಕಂಪೆನಿಗಳ ಈ ನಿಲುವಿಗೆ ಹೆದರಿ ಮಧ್ಯ ಅಮೆರಿಕೆಯ ಇತರ ಬಡ ರಾಷ್ಟ್ರಗಳು ಸೊಕ್ಕಿದ ಫಿಲಿಪ್ ಮೋರಿಸ್ ನಂಥ ಕಂಪೆನಿಗಳ ಸಹವಾಸಕ್ಕೆ ಹೋಗುತ್ತಿಲ್ಲವಂತೆ. ಉರುಗ್ವೆ ವಿರುದ್ಧದ ಈ ವ್ಯಾಜ್ಯದಲ್ಲಿ ಫಿಲಿಪ್ ಮೋರಿಸ್ ಗೆದ್ದರೆ ಗೊತ್ತೇ ಇದೆಯಲ್ಲಾ, ಇನ್ನಷ್ಟು ರಂಗು ರಂಜಿತ ಪ್ಯಾಕೆಟ್ ಗಳು ಮಾರಾಟಕ್ಕೆ ಬರುತ್ತವೆ. ಧೂಮ ಪಾನ ಪ್ರೊಮೋಟ್ ಮಾಡಲು ಮತ್ತಷ್ಟು ಬೆಡಗಿಯರನ್ನು hire ಮಾಡುತ್ತಾರೆ. ಒಂದು ಕಡೆ ಇವರುಗಳು ಉತ್ಪಾದಿಸುವ ಸಿಗರೆಟ್ ಸೇದೀ ಸೇದೀ ಯುವಜನರು ರೋಗಗಳನ್ನು ಅಂಟಿಸಿ ಕೊಂಡು ಸಾಯುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಅಂಗಡಿ ತೆರೆದು ಕೂತಿರುವ ಸಿಗರೆಟ್ ಕಂಪೆನಿಗಳ CEO ಗಳು, ಉನ್ನತ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಬೋನಸ್ ಆಗಿ ಪಡೆದು “SMOKE FREE” ವಲಯಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಶ್ ಶ್ ಶ್, the world is still a fair place.

ಎಲ್ಲ ದಿನಗಳ ರೀತಿ ಸೂರ್ಯ ಮುಳುಗುವುದರೊಂದಿಗೆ ತಂಬಾಕು ರಹಿತ ದಿನವೂ ಮಾಯಾವಾಗುತ್ತದೆ. ಅದರೊಂದಿಗೆ ಸಾವಿರಾರು ಬಡ ಜೀವಗಳೂ ಸಹ.

 

‘ವಿಕಿಲೀಕ್’ ಅವಾಂತರ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್. ‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ. ಕೆನಡಾದ ಪ್ರಧಾನಿಯ ಮಾಜಿ ಸಲಹೆಗಾರ stephen ‘Harper’ ನ ಪ್ರಕಾರ ವಿಕಿ ಲೀಕ ನ ಅಸಾಂಜ್ ನನ್ನು ಕೊಲ್ಲಬೇಕು. ನೋಡಿ ಎಂಥ ಅಸಂಬದ್ಧ, harping ಈತನದು. ಹೆಸರಿಗೆ ತಕ್ಕಂತೆ ನಡತೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಂದು ಕೊಡುವ ಕಚಗುಳಿ ಎಂಥದ್ದು ಎಂದು ತಡವಾಗಿ ತಿಳಿಯಿತು ಅಮೆರಿಕೆಗೆ ಮತ್ತು ಅದರ ಹಿಂಬಾಲಕರಿಗೆ.

ರಾಜನಿಂದ ಹಿಡಿದು ರಾಜತಾಂತ್ರಿಕನವರೆಗೆ ಯಾರು ಏನು ಹೇಳಿದರು ಎಂದು ಸವಿಸ್ತಾರವಾಗಿ ಪ್ರಕಟಿಸಿದ ವಿಕಿಲೀಕ್ ಅಂತಾರಾಷ್ಟ್ರೀಯ ರಾಜಕಾರಣ ಯಾವ ರೀತಿಯ ‘ಡಬಲ್ ಗೇಂ’ ಎಂದು ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಮ್ಮ ದೇಶಕ್ಕೆ ಬಂದು ನಮ್ಮೆಲ್ಲರನ್ನೂ ಮರುಳು ಮಾಡಿ, ನಮಗೆ ಬಾಲಿವುಡ್ ಮೇಲೆ ಇರುವ ವ್ಯಾಮೋಹಕ್ಕೆ ತಕ್ಕಂತೆ ಒಂದಿಷ್ಟು ಡ್ಯಾನ್ಸ್ ಮಾಡಿ ಕೊನೆಗೆ ತಮ್ಮ ಊರು ತಲುಪಿದ ನಂತರ ಬೇರೆಯದೇ ಆದ ಸನ್ನೆ ಕಳಿಸುವುದು. ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕಾಗಿರುವ ನಮ್ಮ ಆಸೆಯನ್ನೂ, ಅದಕ್ಕಾಗಿ ನಾವು ಹೆಣಗುತ್ತಿರುವುದನ್ನು ಅರಿತ ಅಮೇರಿಕಾದ ಅಧ್ಯಕ್ಷ ನಮ್ಮಲ್ಲಿಗೆ ಬಂದು ಭಾರತ ಈ ಸ್ಥಾನಕ್ಕೆ ಅತ್ಯಂತ ಅರ್ಹ ರಾಷ್ಟ್ರ, ನಮ್ಮ ಬೆಂಬಲ ಅದಕ್ಕಿದೆ ಎಂದು ನಮ್ಮನ್ನು ಪುಳಕಿತರಾಗಿಸಿ ಹೋದರು. ಈ ಮಾತು ಕೇಳಿ ನಮಗೆ ಆನಂದದ ಮಂಪರು. ಅತ್ತ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಅಭಿಪ್ರಾಯ ಬೇರೆಯೇ. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ “ಸ್ವಯಂ ನೇಮಿತ” ಆಕಾಂಕ್ಷಿ ಎಂದು ಬಿರುದು ನೀಡಿದರು. “self appointed frontrunners” ಅಂತೆ. ಬೇಸರಿಸಬೇಡಿ, ಈ ಸ್ವಯಂ ನೇಮಿತ ಕ್ಲಬ್ಬಿನಲ್ಲಿ ಜಪಾನ್, ಬ್ರೆಜಿಲ್ ಮತ್ತು ಜರ್ಮನಿ ಸಹ ಸೇರಿವೆ. ಆಹ್, ಈಗ ಸ್ವಲ್ಪ ಸಮಾಧಾನ ನೋಡಿ. ನಮ್ಮೊಂದಿಗೆ ಇತರರನ್ನೂ ಸೇರಿಸಿ ಅಪಹಾಸ್ಯ ಮಾಡಿದರೆ ಭಾರ ಸಹಜವಾಗಿಯೇ ಸ್ವಲ್ಪ ಕಡಿಮೆ ಆಗುತ್ತದೆ. ಈ ಭಾವನೆಯೇ ಇರಬೇಕು ನಮ್ಮ ಮಾಧ್ಯಮಗಳು ಇದನ್ನು ಒಂದು ‘slight’ ಎಂದು ಪರಿಗಣಿಸಲು ಸೋತಿದ್ದು. ನೀವು ಅನುಮತಿಸಿದರೆ ನನ್ನದೊಂದು ಸಂಶಯ. ಅಮೇರಿಕಾ ನಮ್ಮನ್ನು ಇನ್ಯಾವ ರೀತಿಯಲ್ಲಿ ನಡೆಸಿ ಕೊಂಡಾಗ ನಾವು ಎಚ್ಚೆತ್ತು ಕೊಂಡು ‘ thanks for everything, yank. bye bye’ ಎಂದು ವಿನಯದಿಂದ ಹೇಳೋದು? ಅಮೆರಿಕೆಯ ಸಹವಾಸ ಮಾಡಿದವರು ಉದ್ಧಾರವಾದ ಕುರಿತು ಕೈಲಾಸದಲ್ಲಿ ಮನೆ ಮಾಡಿರುವವನಿಗೆ ಬಹುಶಃ ಗೊತ್ತಿರಬಹುದು. ಬೇರಾರಿಗೂ ಗೊತ್ತಿರುವ ಬಗ್ಗೆ ವರದಿಯಿಲ್ಲ. ಸದ್ದಾಮ್ ಕಾಲಾವಧಿ ನಂತರದ ಇರಾಕಿನ ತೈಲ ಸಚಿವನಾಗಿದ್ದ ‘ಅಹಮದ್ ಶಲಾಬಿ’ ಹೇಳಿದ್ದು america betrays its friends. it sets them up and betrays them. I’d rather be america’s enemy. ನಿನ್ನ ಮೈತ್ರಿಗಿಂತ ನಿನ್ನ ಶತ್ರುತ್ವವೇ ಬಲು ಚೆಂದ ಎಂದು. ವಿಷಕನ್ಯೆಗೆ ಹೇಳಬಹುದಾದ ಸವಿ ಮಾತುಗಳು ಇವು, ಅಲ್ಲವೇ? ಅಮೆರಿಕೆಯ ಸಹಾಯದಿಂದ ಅಧಿಕಾರದ ಗದ್ದುಗೆಗೆ ಏರಿದ ವ್ಯಕ್ತಿಯೊಬ್ಬ ಈ ಮಾತನ್ನು ಹೇಳಬೇಕೆಂದರೆ ಅವನಿಗೆ ಎಂಥ ರಾಜೋಪಚಾರ ಸಿಕ್ಕಿರಬೇಕು?

ಈಗ ಈ ಬರಹದಲ್ಲಿ anti americanism ಧೋರಣೆಯನ್ನು ದಯಮಾಡಿ ಕಾಣಬೇಡಿ. ಅಮೆರಿಕೆಯವೇ ಆದ “Levis” ಜೀನ್ಸ್, ‘papa johns’ pizza, ಮತ್ತು ಕಡಿಮೆ ಸ್ಪೆಲ್ಲಿಂಗ್ ಇರುವ ‘ಅಮೇರಿಕನ್ ಇಂಗ್ಲಿಶ್’ ನನಗೆ ತುಂಬಾ ಇಷ್ಟ. ನನ್ನ ನಿಲುವು ಇಷ್ಟೇ. ನಮ್ಮ ರಾಜಕಾರಣ ಮತ್ತು ಅವರ ರಾಜಕಾರಣ ಸ್ವಲ್ಪ ‘ಡಿಫ್ಫ್ರೆಂಟು’. ಆದರೆ ನಮಗೆ ಈ ‘ಡಿಫ್ಫ್ರೆನ್ಸು’ ಅರಗಿಸಿಕೊಳ್ಳಲಾಗದಂಥ ‘depression’ ತಂದೊಡ್ಡುತ್ತದೆ. ಹಾಗಾಗಿ ಸಂಚಾರಿ ನಿಯಮದ ಥರ ‘ನಡುವೆ ಅಂತರವಿರಲಿ’ ರೀತಿಯ ಅಂತರ ಕಾಯ್ದು ಕೊಳ್ಳಲು ನನ್ನ ಹಂಬಲ. ಗುಮಾನಿ ಪಡಬೇಕಾದ ulterior motive ಇಲ್ಲ.

ಬನ್ನಿ ನಾನಿರುವ ಕೊಲ್ಲಿ ಪ್ರದೇಶಕ್ಕೆ. ಇಲ್ಲೊಂದು ಸ್ವಾರಸ್ಯ. ನೋಡಿ, ನಾನು ಕೊಲ್ಲಿ ಎಂದು ಟೈಪ್ ಮಾಡಿದಾಗ “ಕೊಳ್ಳಿ” ಅಂತ ತೋರಿಸಿತು ಗೂಗಲ್. ಒಂದು ರೀತಿಯ “ಕೊಳ್ಳಿ” ಎಂದೇ ಕರೆಯಬಹುದು ಈ ಪ್ರಾಂತ್ಯವನ್ನು. ಸೌದಿ ಅರೇಬಿಯಾದ ದೊರೆ ‘ಅಬ್ದುಲ್ಲಾ ಇಬ್ನ್ ಅಬ್ದುಲ್ ಅಜೀಜ್ ಅಲ್-ಸೌದ್’ ವಿಶ್ವದ ಮುಸ್ಲಿಮರು ಗೌರವಿಸುವ ವ್ಯಕ್ತಿತ್ವ. ಏಕೆಂದರೆ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಇರುವುದು ಸೌದಿ ಅರೇಬಿಯಾದಲ್ಲಿ. ಇಲ್ಲಿನ ದೊರೆ ಹೆಮ್ಮೆಯಿಂದ ತನ್ನನ್ನು ತಾನು ಕರೆದುಕೊಳ್ಳುವುದು ಎರಡು ಪವಿತ್ರ ಕ್ಷೇತ್ರಗಳ ಸಂರಕ್ಷಕ ಎಂದು. ಸಾವಿರಾರು ಕೋಟಿ ಖರ್ಚು ಮಾಡಿ ಎರಡು ಪವಿತ್ರ ಕ್ಷೆತ್ರಗಳನ್ನು ಇನ್ನಷ್ಟು ವಿಸ್ತರಿಸಿದ ಖ್ಯಾತಿ ಈ ದೊರೆಗೆ. ಹಾಗಾಗಿ ವಿಶ್ವದ ಮುಸ್ಲಿಮರಿಗೆ ಇವರ ಮೇಲೆ ಆದರ, ಗೌರವ. ಹಾವಿನ ತಲೆ ಕಡಿಯುವಂತೆ ಕಡಿಯಬೇಕು ಎಂದು ಇರಾನಿನ ಕುರಿತು ಅಮೆರಿಕೆಗೆ ಶಿಫಾರಸು ಮಾಡಿದರು ದೊರೆ ಅಬ್ದುಲ್ಲಾ ಎಂದು ವಿಕಿಲೀಕ್ ಎಲ್ಲರನ್ನೂ ತಲ್ಲಣಗೊಳಿಸಿತು. ಒಬ್ಬ ಮುಸ್ಲಿಮ್ ರಾಷ್ಟ್ರದ ದೊರೆ ಮತ್ತೊಂದು ಸೋದರ ದೇಶದ ವಿರುದ್ಧ ಈ ರೀತಿ ಮಾತನಾಡಿದ್ದು ಅಚ್ಚರಿ ತರಿಸಿತು ಪಾಶ್ಚಾತ್ಯ ದೇಶಗಳಿಗೆ. ಇವರಿಬ್ಬರ ನಡುವಿನ ಸ್ನೇಹದ “ಆಳ” ಎಲ್ಲರಿಗೂ ಗೊತ್ತಿದ್ದರೂ ತಲೆ ಕಡಿಯಲು ಶಿಫಾರಸ್ಸು ಮಾಡುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಇರಾನ್ ಶಿಯಾ ಬಾಹುಳ್ಯದ ರಾಷ್ಟ್ರ ಮತ್ತು ಸೌದಿ, ಸುನ್ನಿ ರಾಷ್ಟ್ರ. ಚಾರಿತ್ರಿಕವಾಗಿ ಶಿಯಾ – ಸುನ್ನಿ ಪಂಗಡಗಳ ನಡುವಿನ ಜಟಾಪಟಿ ತುಂಬಾ ಹಳತು. ideological difference ಅಲ್ಲದಿದ್ದರೂ ವ್ಯಕ್ತಿ (ಪ್ರವಾದಿ ಮುಹಮ್ಮದ್ ಮತ್ತು ‘ಹಜರತ್ ಅಲಿ’ ವಿಷಯದಲ್ಲಿ) ನಿಷ್ಠೆಯಲ್ಲಿ ಸುನ್ನಿ ಮತ್ತು ಶಿಯಾ ಜನರಲ್ಲಿ ಒಡಕಿದೆ. ಸೌದಿ ದೊರೆಯ ಈ ಬೆಚ್ಚಿ ಬೀಳಿಸುವಂಥ ಮಾತನ್ನು ಕೇಳಿದ ಇರಾನ್ ಸೌದಿಯನ್ನು ಇನ್ನು ಯಾವ ರೀತಿ ನಡೆಸಿಕೊಳ್ಳಬಹುದು ಎಂದು ಕಾದು ನೋಡಬೇಕು.

ಈ ತೆರನಾದ ಸುದ್ದಿಗಳನ್ನು ಚಿಕ್ಕಾಸಿನ ಅಪೇಕ್ಷೆಯೂ ಇಲ್ಲದೆ ಬಟಾಬಯಲು ಮಾಡುತ್ತಿರುವ ವಿಕಿಲೀಕ್ ಮೇಲೆ ಅಮೇರಿಕ ಮುಂತಾದ ರಾಷ್ಟ್ರಗಳ ಕೆಂಗಣ್ಣು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯೋದು ಲೋಕ ರೂಢಿಯೇ ತಾನೇ? ಅಮೇರಿಕಾ ಏಕೆ ಅದಕ್ಕೆ ಹೊರತಾಗಬೇಕು? ವಿಕಿಲೀಕ್ ವೆಬ್ ತಾಣ ಬೇರಾವುದಾದರೂ ಒಂದು ದೇಶ ಅಮೆರಿಕೆಯ ವಿರುದ್ಧ ಹೇಳಿದ್ದನ್ನು ಲೀಕ್ ಮಾಡಿದ್ದಿದ್ದರೆ ಅಮೇರಿಕ ಕುಣಿದು ಕುಪ್ಪಳಿಸುತ್ತಿತ್ತು. ಆದರೆ ‘ವಿಕಿಲೀಕ್’ ನ ಕೊಡಲಿ ತನ್ನ ಬುಡದ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತ್ರ ಅಮೇರಿಕಾ ಹೌಹಾರಿತು. ಹೌಹಾರದೆ ಏನು? ಬೇಲಿಯೂ ತಾನೇ, ಮೇಯುವವನೂ ತಾನೇ. ಇದು ಅಮೆರಿಕೆಯ ವಿದೇಶಾಂಗ ನೀತಿ. ಹಾಗಾಗಿ ವಿಕಿಲೀಕ್ ಸ್ಥಾಪಕ ‘ಅಸಾಂಜ್’ ನನ್ನು ದೇಶದ್ರೋಹಿ ಎಂದು ಹಣೆ ಪಟ್ಟಿ ಲಗತ್ತಿಸಿದ್ದಲ್ಲದೆ ಅವನನ್ನು ವಧಿಸುವ ತನಕ ಅಮೆರಿಕೆಯ ಆಕ್ರೋಶ ಆವರಿಸಿತು. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೆ ಅಸಾಂಜ್ ತನ್ನ ಕೆಲಸ ಇನ್ನೂ ಮುಂದುವರಿಸುವುದಾಗಿ ಅವನ ಬೆಂಬಲಿಗರಿಗೆ ಭರವಸೆ ನೀಡಿದ. ಈಗ ಆತನ ಕಣ್ಣು ಅಮೆರಿಕೆಯ ಅತಿ ದೊಡ್ಡ ಬ್ಯಾಂಕುಗಳ ಅವ್ಯವಹಾರ ಮತ್ತು ಕಾರ್ಯವೈಖರಿಯ ಕಡೆ. ಅಸಾಂಜ್ ನ ಮಾತು ಸಿಡಿಲಿನಂತೆ ಎರಗಿತು ಬ್ಯಾಂಕಿಂಗ್ ವಲಯಗಳ ಮೇಲೆ. ಇವನ್ನೆಲ್ಲಾ ಕೇಳುತ್ತಿರುವ, ನೋಡುತ್ತಿರುವ ನಮಗೆ ಅಮೇರಿಕಾ ಪ್ರಪಂಚದ ಎಲ್ಲಾ ಪಾಪಗಳ, ಕೃತ್ರಿಮಗಳ ಉಗಮಸ್ಥಾನವೋ ಎಂದು ತೋರುವುದು ಅಸಹಜವೇನಲ್ಲ. ಹಾಲಿವುಡ್ ಅಂದ್ರೆ ಒಂದಿಷ್ಟು ಸೆಕ್ಸ್ ಇರಲೇಬೇಕು, ಏನಂತೀರಾ? ಹಾಗೆಯೇ ಅಂತಾರಾಷ್ಟ್ರೀಯ ರಾಜಕಾರಣದಲ್ಲೂ ಒಂದಿಷ್ಟು ಶೃಂಗಾರ ನುಸುಳುವುದಿದೆ ಎಂದು ವಿಕಿಲೀಕ್ ಬಯಲು ಮಾಡಿತು. ಲಿಬ್ಯಾ ದೇಶದ charismatic ಅಧ್ಯಕ್ಷ ‘ಮುಅಮ್ಮರ್ ಗದ್ದಾಫಿ’ ಜೊತೆ ಯಾವಾಗಲೂ ಮೋಹಕ ಅಂಗಸೌಷ್ಟವ ಹೊಂದಿದ ಯುಕ್ರೇನ್ ದೇಶದ ನರ್ಸ್ ಇರುತ್ತಾಳೆ ಎಂದು ಒಬ್ಬ ರಾಜತಾಂತ್ರಿಕ ಅಸೂಯೆಯಿಂದ ಜೊಳ್ಳು ಸುರಿಸಿದ. ಅಂದ್ರೆ ಬರೀ ಬೋರ್ ಹೊಡೆಸುವ global warming ರಾಜಕಾರಣ ಮಾತ್ರ ಅಲ್ಲ ಮಹೋದಯರ ಆಸಕ್ತಿ ಎಂದು ಇದರಿಂದ ಸ್ಪಷ್ಟವಾಯಿತು. ಕಂಪ್ಯೂಟರ್ ಬದಿಗೆ ಸರಿಸಿ ಹೀಗೇ ಮೋಜಿಗಾಗಿ ಸ್ವಲ್ಪ ಊಹಿಸಿ. ವಿಕಿಲೀಕ್ ತೆರನಾದ ಒಂದು ವ್ಯವಸ್ಥೆ ನಮ್ಮ ದೇಶದಲ್ಲಿಯೂ ಇದ್ದಿದ್ದರೆ 2G, 3G ಕಾಂಡಗಳು, ಆದರ್ಶ್ ಸೊಸೈಟಿ, ಸೈನಿಕರ ಶವ ಪೆಟ್ಟಿಗೆ ಗಳಂಥ ಹಗರಣ ಗಳು, ನಾವು ಕಂಡ ಬಗೆ ಬಗೆಯ ವರ್ಣರಂಜಿತ ಧಂಧೆಗಳು, ಇವೆಲ್ಲಾ ಪಿಕ್ನಿಕ್ ಥರ ಕಾಣುತ್ತಿದ್ದವು. ಈ ಮೇಲೆ ಹೇಳಿದ ಹಗರಣಗಳನ್ನೂ ಮೀರಿಸುವ ದೈತ್ಯಾಕಾರದ ತಿಮಿಂಗಿಲಗಳು ವಿಕಿಲೀಕ್ ಬಲೆಗೆ ಸಿಕ್ಕು ವಿಲವಿಲ ಎನ್ನುತ್ತಿದ್ದವೋ ಏನೋ.

ಜೂಲಿಯನ್ ಅಸಾಂಜ್ ನ ವಿಕಿಲೀಕ್ ಜ್ವಾಲಾಮುಖಿಯಂತೆ ಸ್ಫೋಟಿಸಿದೆ. ಅದರ ಸುಡುವ ಲಾವಾರಸ ಜಗತ್ತಿನ ನಾಲ್ಕೂ ಕಡೆ ಹರಿಯುತ್ತಿದೆ. ಹರಿಯುವ ನಾಲಗೆಗಳಿಗೆ ಇನ್ನಷ್ಟು ಫಲವತ್ತನ್ನು ಒದಗಿಸುತ್ತಿದೆ. ಇದಕ್ಕೆಲ್ಲಾ ಕಾರಣೀಭೂತನಾದ ಜೂಲಿಯಾನ್ ಅಸಾಂಜ್ ನನ್ನು ಹೇಗೆ ಗತಿ ಕಾಣಿಸಬೇಕೆಂದು ಬಲಿಷ್ಠ ರಾಷ್ಟ್ರಗಳು ಲೆಕ್ಕ ಹಾಕುತ್ತಿವೆ. ಅಮೇರಿಕಾ ವಿರೋಧಿಯಾದ ಅಸಾಂಜ್ ಒಬ್ಬ ಸಾಮಾನ್ಯ ಆಸ್ಟ್ರೇಲಿಯನ್ ಪ್ರಜೆ. ಆತನದು ಠಿಕಾಣಿ ಯಿಲ್ಲದ ವಾಸ. ಒಂದೇ ಸ್ಥಳದಲ್ಲಿ ಎರಡು ರಾತ್ರಿಗಳನ್ನು ಕಳೆಯದ ಅಲೆಮಾರಿ. ವಿಶ್ವದ ಮೇಲಿನ ಅಮೆರಿಕೆಯ ಕಪಿ ಮುಷ್ಠಿ ಅವನಿಗೆ ಇಷ್ಟವಿಲ್ಲ. ಪ್ರಪಂಚದಲ್ಲಿ ನಡೆಯುವ ಅನ್ಯಾಯಗಳು ಜನರಿಗೆ ತಲುಪಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಂಬಿರುವ ಈತ, ಮಾಡುತ್ತಿರುವುದು ಒಳ್ಳೆಯ ಕೆಲಸವೋ ಅಥವಾ ಕೆಲಸವಿಲ್ಲದ ಬಡಗಿಯ ಬೇಡದ ಉಸಾಬರಿಯೋ ಎಂದು ವಿಶ್ವವೇ ಹೇಳಬೇಕು. ಆದರೆ ಆತನ ತಾಯಿ ಮಾತ್ರ ಹೇಳುತ್ತಿರುವುದು “ನನಗೆ ನನ್ನ ಮಗನ ಪರಿಸ್ಥಿತಿಯ ಬಗ್ಗೆ ಆತಂಕವಾಗುತ್ತಿದೆ, ನಾನು ಅವನನ್ನು ಪ್ರೀತಿಸುತ್ತೇನೆ, ಅವನು ಎಷ್ಟಿದ್ದರೂ ನನ್ನ ಮಗನೇ. ನನ್ನ ಮತ್ತು ನನ್ನ ಮಗನ ಬಗ್ಗೆ ಅವರು ಹೇಳುತ್ತಿರುವುದೆಲ್ಲಾ ನಿಜವಲ್ಲ’ ಎಂದು ಆಕೆ ತನ್ನ ಮಗನ ಸುರಕ್ಷೆಗಾಗಿ ಹಂಬಲಿಸುತ್ತಾಳೆ, ಎಲ್ಲಾ ಹೆತ್ತಬ್ಬೆಯರು ಚಡಪಡಿಸುವ ರೀತಿಯಲ್ಲಿ.

ಗೊತ್ತಿಲ್ಲದವರಿಗೆ: ‘ವಿಕಿ’ ಎಂದರೆ, ‘ಹವಾಯಿ’ ಭಾಷೆಯಲ್ಲಿ ವೇಗ, ಕ್ಷಿಪ್ರ ‘fast’ ಅಂತ. ಮತ್ತು ಲೀಕ್ ಎಂದರೆ ಅದೇ ಆರ್ಡಿನರಿ ಲೀಕು, ನಮ್ಮಗಳ ಅಡುಗೆ ಮನೆಯಲ್ಲಿನ ‘ನಲ್ಲಿ’ ತೊಟ ತೊಟ ಎಂದು ಹನಿಯುದುರಿಸುತ್ತಾ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸೋರಿಕೆ. ಈ ಕ್ಷಿಪ್ರ ಮತ್ತು ಸೋರಿಕೆ ಇವೆರಡೂ ಸೇರಿಕೊಂಡಾಗ ಆಗುವುದು ants in the pant ಪರಿಸ್ಥಿತಿ. ಮೇಲೆ ವಿವರಿಸಿದ ಪರಿಸ್ಥಿತಿ.

pic courtesy: independent, UK