ಭಾರತೀಯನಾದರೆ ಹಿಂದಿ ಗೊತ್ತಿರಲೇಬೇಕೆ?

ಕಳೆದ ವಾರ ಒಬ್ಬ ಚಾಟ್ ಫ್ರೆಂಡ್ ಪರಿಚಯವಾದ. ಚಿಕ್ಕ ಹುಡುಗ. ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಗುಜರಾತ್ ಮೂಲದವ. ಚಾಟ್ ಮಾಡಿದ ಮಾರನೆ ದಿನವೇ ನನ್ನನ್ನು ಇಷ್ಟ ಪಟ್ಟ ಎಂದು ಕಾಣುತ್ತದೆ, ಮೊಬೈಲ್ ನಂಬರ್ ಕೊಡು ಎಂದ. ನಾನು ಇಲ್ಲ, ನಾನು ಭಾರತದಲ್ಲಿ ಅಲ್ಲ ಇರೋದು, ನೀನು ನಾನಿರುವಲ್ಲಿಗೆ ಫೋನ್ ಮಾಡಿದರೆ ನಿನಗೆ ದುಬಾರಿ ಆಗುತ್ತೆ ಎಂದು ಹೇಳಿದೆ. ಯುವಜನರಲ್ಲಿ ಇದೊಂದು ರೀತಿಯ ದೌರ್ಬಲ್ಯ. ತಮಗೆ ಯಾರದೂ ಇಷ್ಟ ಎಂದು ತೋರಿ ಬಿಟ್ಟರೆ ತಮ್ಮ ಮನೆ ಅಡ್ರೆಸ್, ಫೋನ್ ನಂಬರ್, ತನ್ನ ಅಪ್ಪ ಮಾಡೋ ಧಂಧೆ ಕುರಿತು ಎಲ್ಲಾ ಮಾಹಿತಿಯನ್ನೂ ಒಪ್ಪಿಸಿ ಬಿಡುತ್ತಾರೆ. ಎಲ್ಲವನ್ನೂ ನಂಬುವ ಮುಗ್ಧ ಗುಣ. ಈ ಗುಣವೇ ಅವರಿಗೆ ವೈರಿಯಾಗಿ ತಿರುಗೇಟು ನೀಡುತ್ತದೆ ಎಂದು ಅವರಿಗೆ ಅರಿವಾಗೋದು ತಿರುಗೇಟು ಬಿದ್ದಾಗಲೇ. ಲಾರ್ಡ್ ಚೆಸ್ಟರ್ ಫೀಲ್ಡ್ ತನ್ನ ಮಗ ಫಿಲಿಪ್ ಸ್ಟಾನ್ ಹೋಪ್ ಗೆ  ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ, People of your age have, commonly, an unguarded frankness about them; which makes them the easy prey and bubbles of the artful  and the inexperienced: they look upon  every knave, or fool, who tells them that he is their friend, to be really so; and pay that profession of simulated friendship, with an indiscreet and unbounded confidence, always to their loss, often to their ruin.

ಇರಲಿ, ಇಲ್ಲಿನ ವಿಷಯ ಸ್ವಲ್ಪ ಬೇರೆ. ಸ್ವಲ್ಪ ದಿನಗಳಿಂದ ಚಾಟ್ ಮಾಡುತ್ತಿದ್ದ ಈತ ಆಗಾಗ are you original Indian, are you basically Indian ಎಂದು ತಲೆ ತಿನ್ನುತ್ತಿದ್ದ. ಹೌದಪ್ಪ, ನಾನು ಭಾರತೀಯನೇ, ಕಾಸಿನ ಆಸೆಗೆ ಬಿದ್ದು ಮರಳು ಗಾಡಿನಲ್ಲಿ ಬಂದು ಬಿದ್ದಿದ್ದೇನೆ ಎಂದು ಎಷ್ಟು ಸಲ ಹೇಳಿದರೂ ಈ ಪ್ರಶ್ನೆಯನ್ನು ಪುನರಾವರ್ತಿಸುತ್ತಿರುತ್ತಾನೆ. ಮರೆವಿನ ಸ್ವಭಾವ ಇರಬೇಕು ಎಂದು ಅವನು ಕೇಳಿದಾಗಲೆಲ್ಲಾ ನಾನು ಉತ್ತರಿಸುತ್ತಿದ್ದೆ. ಅವನ ಪ್ರಶ್ನೆಯಲ್ಲಿ ಯಾವುದೇ ರಾಜಕೀಯ ವಾಸನೆ ಕಾಣದ ಕಾರಣ ನಾನು ಭಾರತೀಯ ಎಂದು comfirm ಮಾಡುತ್ತಿದ್ದೆ. ಈಗ ಸ್ವಲ್ಪ ಮೊದಲು ಚಾಟ್ ನಲ್ಲಿ ಕಾಣಿಸಿಕೊಂಡು ನಾನು ನಿನಗೆ ಗುಡ್ ಬೈ ಹೇಳುತ್ತೇನೆ, ನಾಲಇಂದ ಕಾಲೇಜಿದೆ,  ನಾನು ಕಲಿಯುವ ಕಾಲೇಜಿನ ಲ್ಲಿ ಚಾಟ್ ಸೌಕರ್ಯ ಇಲ್ಲ, ಎಂದಾದರೂ ಭೇಟಿ ಯಾಗೋಣ, ನಿನ್ನ ಪರಿವಾರಕ್ಕೆ ನನ್ನ ಶುಭಾಶಯಗಳು ಎಂದ. ಚೆನ್ನಾಗಿ  ಓದಿ, ಡಿಗ್ರೀ ಪಡೆದುಕೋ, ನಿನ್ನ ಅಪ್ಪ ಅಮ್ಮನಿಗೆ ನಿರಾಶೆ ಮಾಡೋ ಯಾವ ಕೆಲಸವನ್ನೂ ಮಾಡಬೇಡ ಎಂದು ಉಪದೇಶಿಸಿದಾಗ ಆತ ಧನ್ಯವಾದ ಅರ್ಪಿಸಿ ಕೊನೆಗೆ ಅದೇ ಹಳೇ ಬಾಂಬ್ ಸಿಡಿಸಿದ….

are you basically Indian? ಒಹ್, ಮತ್ತೊಮ್ಮೆ ಕೇಳಿದನಲ್ಲಾ, ಇವನಿಗೆನಾದರೂ alzheimer’s ಅಥವಾ dementia ದಂಥ ಕಾಯಿಲೆ ತಾಗಿರಬಹುದೇ ಎಂದು ಆ ಕ್ಷಣದಲ್ಲಿ ಅನ್ನಿಸಿದರೂ, ಛೆ, ಇನ್ನೂ ಚಿಕ್ಕ ವಯಸ್ಸು, ಬಿಡ್ತು ಅನ್ನು ಎಂದು ಕೋಪ ನೆತ್ತಿಗೇರುತ್ತಿದ್ದರೂ, ಸಾವರಿಸಿಕೊಂಡು ಹೌದಪ್ಪಾ ನಾನು ಇಂಡಿಯನ್, ಎಷ್ಟು ಸಲ ಹೇಳಬೇಕು ನಿನಗೆ ಅಮಿತ್ ಎಂದಾಗ ಅವನು ಹೇಳಿದ ಕ್ಷಮಿಸಿ, ನೀವು ಭಾರತೀಯರಾದರೆ ಹಿಂದಿ ಗೊತ್ತಿರಲೇಬೇಕು ಅಲ್ಲವೇ ಎಂದ. ಹಿಂದಿ ಬರುತ್ತೆ ನನಗೆ ಎಂದಾಗ ಅವನಿಗೆ ಸಮಾಧಾನ ಆದ ಹಾಗೆ ತೋರಿತು.

 

ಆತ ಗುಜರಾತಿ. ಅವರ ಹಿಂದಿಯ ಚೆಂದ ಎಲ್ಲರಿಗೂ ತಿಳಿದದ್ದೇ. ಆದರೂ ಅವನ ಭಾವನೆ ಭಾರತೀಯನಾದರೆ ಹಿಂದಿ ಗೊತ್ತಿರಲೇಬೇಕು ಎಂಬುದು. ಇದನ್ನು ಬರೆದಿದ್ದು ಭಾರತೀಯನಾಗಲು ಹಿಂದಿ ಬೇಕೋ, ಕನ್ನಡ ಸಾಕೋ ಎನ್ನುವ ಚರ್ಚೆ ಹುಟ್ಟುಹಾಕಲು ಅಲ್ಲ. ಹೀಗೇ ಸುಮ್ಮನೆ ಅಂತಾರಲ್ಲ, ಹಾಗೆ…

ಭಾರತೀಯನಾಗಲು ಹಿಂದಿ ಗೊತ್ತಿರುವುದು prerequisite ನಿಬಂಧನೆಯೋ?

ಮಾವಿನ ಮರದಲ್ಲಿ ತೆಂಗು

ಈಗಿನ ಕಾಲದ ಹುಡುಗ ರಿಗೆ concentration ಕಡಿಮೆ ಎಂದು ಹೇಳ್ತಾರೆ. ಏನೇ ಹೇಳಿದರೂ ಒಂದೋ, ತಲೆಗೆ ಹೋಗೋದಿಲ್ಲ, ಇಲ್ಲಾ, ಎಲ್ಲಾ ಕೇಳಿ ನನಗೆ ಅರ್ಥವಾಯಿತು ಅಂತ ಗೋಣಾಡಿಸಿ ಮರೆತು ಬಿಡೋದು, ಇದು ಈಗಿನ ಪೀಳಿಗೆಯ ವೈಶಿಷ್ಟ್ಯ. ಕಳೆದ ವಾರ ಹಾನಗಲ್ಲಕ್ಕೆ ಹೋಗುತ್ತಾ ನನ್ನ ಸೋದರ ಮಾವನ ಮಗನಿಗೆ ದಾರಿಯಿಂದ ಫೋನ್ ಮಾಡಿ ಹೊಳೆ (ಭದ್ರಾವತಿ) ಸಾಲಿನಿಂದ (ಮರದಿಂದ ಬಿದ್ದಿದ್ದರೆ) ಒಂದು ಹಕ್ಕಿ ಗೂಡನ್ನು ತೆಗೆದು ಕೊಂಡು ಬರಲು ನಿನ್ನ ಅಣ್ಣನಿಗೆ ಹೇಳು ಎನ್ನುವ ಸಂದೇಶ ನೀಡಿ ಅರ್ಥ ಆಯಿತು ಎಂದು ಖಾತ್ರಿ ಪಡಿಸಿ ಕೊಂಡ ನಂತರ  ಫೋನ್ ಇಟ್ಟೆ. ರಾತ್ರಿ ಮನೆಗೆ ವಾಪಸಾದ ನಂತರ ಹೋಂ ವರ್ಕ್ ಮಾಡುತ್ತಾ ಕೂತವನಿಗೆ ಕೇಳಿದೆ ನನ್ನ ಬೆಳಗ್ಗಿನ ಸಂಭಾಷಣೆಯ ಬಗ್ಗೆ. ಏನೂ ಗೊತ್ತಿಲ್ಲದವನಂತೆ ನಾಟಕ ವಾಡಿದ. ಹತಾಶನಾಗಿ, ಅಲ್ಲಾ ಕಣೋ ನಿನಿಗ್ ನಾನ್ ಫೋನ್ ಮಾಡಿ ಏನ್ ಹೇಳ್ದೆ ಎಂದಾಗ, ಫೋನಾ? ಯಾವಾಗ? ಎಂದು ಇಷ್ಟಗಲ ಬಾಯ್ತೆರೆದ. ನಿನ್ನ ಅಣ್ಣನಿಗೆ ಏನ್ ಮೆಸೇಜ್ ಕೊಡಲು ನಾನ್ ಹೇಳ್ದೆ, ಎಂದು ಸಿಡುಕಿ ಕೇಳಿದಾಗ  ಮೆಸೇಜಾ, ಊಂ, ಹಾಂ… ತಲೆ ಕೆರೆದುಕೊಳ್ಳುತ್ತಾ, ಹಾಂ…. ಈಗ ಜ್ಞಾಪಕ ಬಂತು ಎಂದ. ಸರಿ ಜ್ಞಾಪಕ ಬಂದಿದ್ದು ಏನಂತ ಹೇಳು ನೋಡೋಣ ಅಂದಾಗ, ಅದೇ…. ಅಟ್ಟದ ಮೇಲಿನಿಂದ ಕೊಬ್ಬರಿ ತೆಗೆಯೋದಕ್ಕೆ ಆಲ್ವಾ ನೀವು ಹೇಳಿದ್ದು ಎಂದಾಗ ನನ್ನ ಸಹನೆಯ ಕಟ್ಟೆ ಒಡೆಯದಿದ್ದರೂ ಸಂಭಾಳಿಸಿಕೊಂಡು ಹೇಳಿದೆ, ಅಲ್ಲಾ ಕಣೋ ಪೆದ್ದೆ, ನಾನು ಹೇಳಿದ್ದು ಅಟ್ಟದ ಮೇಲಿಂದ ಕೊಬ್ಬರಿ ಇಳಿಸೋದಕ್ಕಲ್ಲ, ಹೊರಗಿರುವ ಮಾವಿನ ಮರದಲ್ಲಿ ತೆಂಗು ಬಿಟ್ಟಿದೆ ಅದನ್ನು ಕೀಳು ಎಂದು ಹೇಳಿದ್ದು ಎಂದು  ಹಲ್ಲು ಮಸೆಯುತ್ತಾ ಜಾಗ ಬಿಟ್ಟೆ. ಈ ಬೆಳವಣಿಗೆ growing years ನ ಮತ್ತೊಂದು ಪ್ರಾರಬ್ದ ಅಂತ ಬಿಟ್ಹಾಕೋದೋ, ಇಲ್ಲ, ಇದೂ (lack of concentration) ಒಂದು ರೀತಿಯ ರೋಗ ಎಂದು ಚಿಕಿತ್ಸೆ ಕಡೆ ಗಮನ ಹರಿಸೋದೋ ತಿಳಿಯುತ್ತಿಲ್ಲ.

ನೀವೆಷ್ಟು ಓದುವಿರಿ?

ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ  ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ದಿನಪತ್ರಿಕೆ ಸಾಕು ಇಡೀ ಬಸ್ಸಿಗೆ ಅಥವಾ ರೈಲು ಬೋಗಿಗೆ. ನಮಗೆ recycling ನಲ್ಲಿ ದೊಡ್ಡ ವಿಶ್ವಾಸ. ಈ ವಿದ್ಯಮಾನ ದಿನಪತ್ರಿಕೆಗಳಂಥ ಓದಿಗಾದರೆ ಪುಸ್ತಕಗಳನ್ನು, ಗ್ರಂಥಗಳನ್ನು  ನಾವೆಷ್ಟು ಓದುತ್ತೇವೆ?

ಅಮೆರಿಕನ್ನರು ವರ್ಷದಲ್ಲಿ ೧೫ ಪುಸ್ತಕಗಳನ್ನಾದರೂ ಓದುತ್ತಾರಂತೆ. ಆಸ್ಟ್ರೇಲಿಯನ್ನರು ಅಮೆರಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಓದುವಿಕೆಗೆ ಪಾಶ್ಚಾತ್ಯರು ಕೊಡುವ ಪ್ರಾಧಾನ್ಯ ಪುಸ್ತಕ ಓದುವವರ ಕುರಿತ ನಡೆಸಿದ ಅಧ್ಯಯನ ಮತ್ತು ಸಮೀಕ್ಷೆ ಗಳಲ್ಲಿ ಕಾಣಬಹುದು. ಡೆಮೊಕ್ರಾಟ ಪಕ್ಷದ ಜನ ರಿಪಬ್ಲಿಕನ್ನರಿಗಿಂತ ಹೆಚ್ಚು ಓದುತ್ತಾರಂತೆ. ಆದರೆ ಧಾರ್ಮಿಕ ಪುಸ್ತಕಗಳನ್ನು ಡೆಮೊಕ್ರಾಟ್ ರಿಗಿಂತ ಹೆಚ್ಚಾಗಿ ರಿಪಬ್ಲಿಕನ್ನರು ಓದುತ್ತಾರಂತೆ. ಜಾರ್ಜ್ ಬುಶ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರು. ಹೆಚ್ಚು ಓದು, ಹೆಚ್ಚು ಅವಾಂತರ? ಅಷ್ಟು ಮಾತ್ರವಲ್ಲ ಧಾರ್ಮಿಕ ಪುಸ್ತಕಗಳನ್ನು ಕಪ್ಪು ಜನರು (blacks), ವಯಸ್ಸಾದವರು, ಗೃಹಿಣಿಯರು, ಕಡಿಮೆ ವಿದ್ಯಾಭ್ಯಾಸ ಇರುವವರು, ಕಡಿಮೆ ಸಂಪಾದನೆ ಮಾಡುವವರು, ಗ್ರಾಮ ವಾಸಿಗಳು ಹೆಚ್ಚಾಗಿ ಓದುತ್ತಾರಂತೆ.   

ಕಾಲೇಜು ವಿದ್ಯಾಥಿಗಳು ಹೆಚ್ಚು ಓದುತ್ತಾರೆ, ಯುವಜನರಿಗಿಂತ ಹೆಚ್ಚಾಗಿ ೫೦ ವಯಸ್ಸಿಗೆ ಮೇಲ್ಪಟ್ಟ ಜನ ಓದುತ್ತಾರೆ ಅಮೆರಿಕೆಯಲ್ಲಿ. 

ಈ ತೆರನಾದ ಸಮೀಕ್ಷೆ ನಮ್ಮಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಮಾತಂತೂ ಸತ್ಯ. ನಾವು ಭೇಟಿ ಕೊಡುವ ಬಂಧು ಮಿತ್ರರ ಮನೆಗಳಲ್ಲಿ ಪುಸ್ತಕಗಳ ದರ್ಶನ ಆಗುವುದು ಅಪರೂಪ. ಕೆಲಸಕ್ಕೆ ಬಾರದ ವಸ್ತುಗಳನ್ನು ಕೊಂಡು ಎಲ್ಲರಿಗೂ ಕಾಣುವಂತೆ drawing room ಗಳಲ್ಲಿ ಪ್ರದರ್ಶಿಸುವುದನ್ನು ಕಾಣಬಹುದು. ಮನೆ ಒಂದು ರೀತಿಯ ಮ್ಯೂಸಿಯಂ. ಕಣ್ಣಿಗೆ ವಿಶ್ರಾಂತಿ ಇರುವುದಿಲ್ಲ. ದೃಷ್ಟಿ ಎತ್ತ ಹಾಯಿಸಿದರೂ ಒಂದೊಂದು collection ಗಳ ದರ್ಶನ.    

ಒಳ್ಳೆಯ ಅಭಿರುಚಿ ಬೆಳೆಸಿಕೊಂಡು ಒಳ್ಳೆಯ ಪುಸ್ತಕ ಓದುವುದರಿಂದ ನಮ್ಮ ವ್ಯಕ್ತಿತ್ವವೂ ಬೆಳೆಯುತ್ತದಂತೆ. ಪುಸ್ತಕ ನಿರ್ಜೀವ ಅಲ್ಲ, ಉಸಿರಾಡದಿದ್ದರೂ ಅದು ಜೀವಂತ ಎಂದು ಒಬ್ಬ voracious reader ತನ್ನ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ.  ಹೌದು ಪುಸ್ತಕ ಬರೆದ ವ್ಯಕ್ತಿಯ ಜೊತೆ ನಮ್ಮ ನಂಟು ಬೆಳೆಯುತ್ತದೆ, ಲೇಖನೊಂದಿಗೆ ಸಮಯ ಕಳೆದಂತೆ ಭಾಸವಾಗುತ್ತದೆ,ಓದುತ್ತಾ ಇದ್ದಂತೆ ನಾವು ನಮ್ಮದೇ ಆದ parallel ಪುಸ್ತಕದ ಬರಹವನ್ನೂ ಮನಸ್ಸಿನಲ್ಲೇ ಮಾಡಿಕೊಳ್ಳುತ್ತೇವೆ. ಹೊಸ ಲೋಕ ಸುತ್ತುತ್ತೇವೆ, ನಮಗಿಂತ ವಿಭಿನ್ನವಾದ ರೀತಿ ರಿವಾಜುಗಳ ಪರಿಚಯವಾಗುತ್ತದೆ. ಹೆಚ್ಚು ಓದುವುದರಿಂದ ಒಳ್ಳೆಯ ಬರಹಗಾರರಾಗಬಹುದು (ಅಂಥ ಇಚ್ಛೆ ಇದ್ದರೆ) ಮಾತ್ರವಲ್ಲ ನಮಗೆ ಗೊತ್ತಿಲ್ಲದ ಹೊಸ ಹೊಸ ಪದಗಳ ಪರಿಚಯವಾಗುತ್ತದೆ, ನಮ್ಮ ಶಬ್ದ ಭಂಡಾರ ಇನ್ನಷ್ಟು ಶ್ರೀಮಂತವಾಗುತ್ತದೆ, ನಮ್ಮ ಮಾತುಗಳು, ಚರ್ಚೆಗಳು ಹೆಚ್ಚು ಆಕರ್ಷಕವಾಗುತ್ತವೆ.   

ಪುಸ್ತಕ ಗಳನ್ನು ಓದುವ ಹವ್ಯಾಸ ನಿಜಕ್ಕೂ ಆಕರ್ಷಕ. ಓದುವಿಕೆಯ ಈ ಹವ್ಯಾಸವನ್ನು ಮನೆಯಲ್ಲಿರುವವರಿಗೂ ಹಂಚಬಹುದು. ನಾನು ಪುಸ್ತಕ ಕೈಯ್ಯಲ್ಲಿ ಹಿಡಿದ ಕೂಡಲೇ ನನ್ನ ಎರಡೂವರೆ ವರ್ಷದ ಮಗಳೂ ತನ್ನ ಪುಟ್ಟ ಪುಸ್ತಕ ಹಿಡಿದು ಕೊಂಡು ನನ್ನ ಪಕ್ಕ ಸೋಫಾದಲ್ಲಿ ಬಂದು ಕೂರುತ್ತಾಳೆ. ಏನೂ ಅರ್ಥವಾಗದಿದ್ದರೂ ಪುಟಗಳನ್ನುತಿರುವಿ ಹಾಕೋದು, ಚಿತ್ರಗಳನ್ನೂ ನೋಡಿ ಊ, ಆ , ಎಂದು ಉದ್ಗರಿಸೋದು ಮಾಡುತ್ತಾಳೆ. ಪುಸ್ತಕ ಅಂಗಡಿಗೆ ಹೋದರೆ ತನಗಾಗಿ ಒಂದು ಪುಸ್ತಕವನ್ನೂ ತೆಗೆದು ಕೊಳ್ಳುತ್ತಾಳೆ. ನೋಡಿ ನಮ್ಮ ಓದು ಯಾವ ರೀತಿ epidemic ಆಗಿ ಕೆಲಸ ಮಾಡುತ್ತದೆ.   

Prolific reader ಒಬ್ಬರ ಬ್ಲಾಗ್ ನೋಡಿದೆ. ಅಮೆರಿಕೆಯವನಾದ ಈತ ವಾರಕ್ಕೊಂದು ಪುಸ್ತಕ ಓದಲು ತೀರ್ಮಾನಿಸಿ ಅದರಂತೆಯೇ ಕಳೆದ ವರ್ಷ ೫೨ ಪುಸ್ತಗಗಳನ್ನು ಓದಿದನಂತೆ. ಆದರೆ ಇದು ಪ್ರಾಯೋಗಿಕವೇ ಎಂದು ಒಬ್ಬರು ಸಂಶಯ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ರೀತಿ ಹಠ ಹಿಡಿದು ಓದಿದರೆ ಮಾತ್ರ ಪ್ರಯೋಜನವಿಲ್ಲ, ತಲೆಯಲ್ಲಿ ಎಷ್ಟು ವಿಷಯಗಳು ಉಳಿಯಬಹುದು ಎನ್ನುವುದನ್ನೂ ನೋಡಬೇಕಾಗುತ್ತದೆ ಎಂದರು. ವಾರಕ್ಕೊಂದು ಪುಸ್ತಕ ಓದಬೇಕೆಂದೇ ಆದರೆ ಪುಸ್ತಕ ಗಾತ್ರವನ್ನೂ ನೋಡಬೇಕಾಗುತ್ತದೆ. ಸುಮಾರು ೩೦೦ ಪುಟಗಳ ಗಾತ್ರದ ಪುಸ್ತಕ ವಾದರೆ ವಾರಕ್ಕೊಂದು ನಿಯಮಕ್ಕೆ ಒಗ್ಗುತ್ತದೆ, ಆದರೆ ಪುಸ್ತಕ ಇತ್ತೀಚೆಗೆ ಜಸ್ವಂತ್ ಸಿಂಗರು ಬರೆದ ಪುಸ್ತಕದ ಗಾತ್ರಕ್ಕಿದ್ದರೆ? ಇಲ್ಲಿ ನಾವು ನೋಡಬೇಕಾದ್ದು ಕೇವಲ ೫೨ ಔಸ್ತಕಗಳನ್ನು ಓದುವ ಗುರಿಯಲ್ಲ, ಬದಲಿಗೆ ಈ ರೀತಿಯ ತಡೆರಹಿತ ಓದಿನಿಂದ ಆಗುವ ಪ್ರಯೋಜನ. ೫೨ ಅಲ್ಲದಿದ್ದರೂ ಅದರ ಅರ್ಧವಾದರೂ ಒಂದು ದೊಡ್ಡ ಸಾಧನೆಯೇ ಅಲ್ಲವೇ?   

ಕೆಲವರು ಒಂದಕ್ಕಿಂತ ಹೆಚ್ಚು ಪುಸ್ತಕ ಓದುತ್ತಾರೆ. ಒಂದಕ್ಕಿಂತ ಹೆಚ್ಚು ಪುಸ್ತಕ ಓದಲು ಸಾಧ್ಯವೇ? ಖಂಡಿತ ಸಾಧ್ಯ. ಕನ್ನಡ ಸೀರಿಯಲ್ಲು, ಹಿಂಡಿ ಸೀರಿಯಲ್ಲು, ಅವುಗಳ ಮಧ್ಯೆ ಸಿನೆಮಾಗಳು, ಇವೆಲ್ಲವುಗಳ ಪಾತ್ರಗಳು ನಮಗೆ ಕಲಸುಮೇಲೊಗರ ಆಗೋದಿಲ್ಲ. ಒಂದಕ್ಕಿಂತ ಹೆಚ್ಚು ಟೀ ವೀ ಸೀರಿಯಲ್ಲುಗಳನ್ನು ವೀಕ್ಷಿಸಿ ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಾದರೆ ಪುಸ್ತಕಗಳಿಗೂ ಇದೇ ನಿಯಮ ಅನ್ವಯಿಸಿ ಕೊಳ್ಳಬಹುದು ಅಲ್ಲವೇ? 

ಅಥವಾ ಈ ರೀತಿಯ ಓದನ್ನು ರೂಢಿ ಮಾಡಿಕೊಂಡರೆ “ಓದಿ, ಓದಿ, ಮರುಳಾದ ಕೂಚು ಭಟ್ಟ” ಎಂದು ಗೇಲಿ ಮಾಡುವರೇ?

foto courtesy: fotosearch