ಈ ಚಿತ್ರವನ್ನು ನನ್ನ ಎರಡು ವರ್ಷದ ಮಗಳು ಇಸ್ರಾ ತೆಗೆದದ್ದು. ನನ್ನ ತಂಗಿ ಇತ್ತೀಚೆಗೆ ಭಾರತಕ್ಕೆ ಹೋದಾಗ ನಮ್ಮ ಮನೆಯ ಮುಂದಿನ ಮರದಲ್ಲಿ ಆದ ಮಾವಿನ ಹಣ್ಣುಗಳನ್ನು ತಂದಿದ್ದಳು. ಹಣ್ಣು ಬಹಳ ರುಚಿಯಾಗಿದ್ದವು. ಅದೂ ಅಲ್ಲದೆ ನಮ್ಮ ಮನೆಯ ತೋಟದಲ್ಲಿ ಬೆಳೆದ ಹಣ್ಣು ಎಂದರೆ ವಿಶೇಷವಾದ ರುಚಿ ಅದಕ್ಕೆ ಇರುತ್ತದಲ್ಲವೇ? ಮನೆಯ ಮುಂದಿನ ಮಾವಿನ ಮರಕ್ಕೆ ಹಾದು ಹೋಗುವ ಪಡ್ಡೆ ಹುಡುಗರ ದುರ್ಗಣ್ಣು. ಯಾರೂ ಇಲ್ಲದಾಗ ಮರ ಬೋಳಿಸಿ ಹೋಗಿ ಬಿಡುತ್ತಾರೆ. ನನ್ನಮ್ಮನ ಶಾಪವೋ ಶಾಪ.
ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟ ಪಡದವರು ವಿರಳ. ಕೆಲವರಿಗೆ ಮಾವಿನ ಹಣ್ಣು ಶರೀರವನ್ನು ಸ್ಥೂಲ ವಾಗಿಸುತ್ತದೆ ಎಂದು ತಿನ್ನಲು ಭಯ. ಒಂದು ದೊಡ್ಡ ಬಾಳೆ ಹಣ್ಣಿನಲ್ಲೂ ಮತ್ತು ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲೂ ಇರುವುದು ೧೦೦ ಕ್ಯಾಲೋರಿಗಳು. ಬಾಳೆಹಣ್ಣನ್ನು ತಿನ್ನಲು ತಕರಾರಿಲ್ಲದೆ ಇದ್ದರೆ ಮಾವಿನ ಹಣ್ಣಿಗೇಕೆ ತಕರಾರು?
ಮಾವಿನ ಹಣ್ಣನ್ನು ತಿನ್ನುವ ಕಲೆ ತಿಳಿದಿರುವುದು ಕೆಲವರಿಗೆ ಮಾತ್ರ. ಇಡಿಯಾದ ಹಣ್ಣನ್ನು ಕತ್ತರಿಸದೆ ತಿಂದರಂತೂ ಆಗುವ ಪಾಡು ಗೊತ್ತೇ ಇದೆಯಲ್ಲ. ಮಾವಿನ ಹಣ್ಣಿನ ಕಲೆಯೂ ಸಹ ಸುಲಭವಾಗಿ ಹೋಗುವನ್ಥದ್ದಲ್ಲ. ಚಿಕ್ಕವನಿದ್ದಾಗ ಹಣ್ಣನ್ನು ತಿನ್ನುವಾಗ ಅದರ ರಸ ಅಂಗೈಯಿಂದ ಹಿಡಿದು ಮೊಣಕಯ್ಯವರೆಗೂ ಬಂದು ಅಲ್ಲಿಂದ ತನ್ನ ದಿಕ್ಕನ್ನು ಬದಲಿಸಿ ಅಂಗಿಯ ಮೇಲೂ ಬಿದ್ದು, ಮುಂದುವರೆದು ಚಡ್ಡಿ ಪ್ಯಾಂಟಿ ನ ಮೇಲೆ ಎರಗಿದಾಗ ಮನೆಯಲ್ಲಿ ಅಮ್ಮನ ಕೈಯ್ಯಲ್ಲಿ ಹೊಡೆತ ತಿಂದ ಉದಾಹರಣೆಗಳು ಬಹಳ. ಹೇಗೆ ತಿಂದರೂ ತನ್ನ ಒಸರುವ ಬುದ್ಧಿ ಬಿಡದ ತುಂಟ ರಸ ಮೈ, ಬಟ್ಟೆ ಮೇಲೆ ಹರಿಯುವುದರಿಂದ ತಡೆಯಲು ಒಂದು ಮಾರ್ಗವಿದೆ. ಅದೆಂದರೆ ನಮ್ಮ ಪ್ರೀತಿಯ ಹಣ್ಣನ್ನು ನಮ್ಮೊಂದಿಗೆ ತಿನ್ನಲು ಕೊಂಡೊಯ್ಯುವುದು ಸ್ನಾನ ಗೃಹಕ್ಕೆ. ಶವರ್ ಅಡಿಯಲ್ಲಿ ನಿಂತು ತಿನ್ನಬೇಕು ಹಣ್ಣನ್ನು. ರಸ ತನಗೆ ಬೇಕಾದ ರೀತಿಯಲ್ಲಿ, ಬೇಕಾದ ಕಡೆ ಒಸರಿ ಕೊಳ್ಳಲಿ, ಹಾಡುತ್ತಾ ತಿಂದು, ಗೊರಟೆಯ ಬುಡ ಕಾಣುವವರೆಗೂ ಸರಿಯಾಗೇ ಚೀಪಿ ಶವರ್ ಆನ್ ಮಾಡಿದರೆ ಸಂಪೂರ್ಣ ಮುಕ್ತಿ ರಸದಿಂದ. ಹೇಗಿದೆ ಪ್ಲಾನು?
