ಅಪ್ಪನೊಂದಿಗೆ ಒಂದು ಸಂಜೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ ನಾನು ಇಂದು ಆಫೀಸಿನಿಂದ ಸ್ವಲ್ಪ ಬೇಗ ಬಿಡುವು ಮಾಡಿಕೊಂಡು ಅಪ್ಪನನ್ನೂ ಮತ್ತು ಮಡದಿ ಮಕ್ಕಳ ಸಮೇತ ಮಕ್ಕಾದ ಕಡೆ ಹೊರಟೆ. ಸಂಜೆ ಐದಾದರೂ ಮರುಭೂಮಿಯ ಸೂರ್ಯ ಸುಲಭವಾಗಿ ಇರುಳಿಗೆ ಕೊರಳೊಡ್ಡುವುದಿಲ್ಲ. ಪ್ರಖರತೆ ಸ್ವಲ್ಪ ಜೋರೇ. ತನ್ನ ದಿನಚರಿಯ ಕೊನೆಯಲ್ಲೂ ಪೊಗರು ತೋರಿಸಿಯೇ ವಿರಮಿಸುವುದು. ಡ್ರೈವ್ ಮಾಡುತ್ತಾ ಪಪ್ಪ ರನ್ನು ಮಾತಿಗೆ ಎಳೆದೆ. ಮನೆಯಲ್ಲಿ ಹಿರಿಯರ ಇದೆಂಥಾ ಆಂಗ್ಲ ಸಂಸ್ಕಾರ ಎನ್ನುವ ಪ್ರತಿಭಟನೆಯ ನಡುವೆಯೂ ನಾವು ಅಪ್ಪ ಅಮ್ಮನನ್ನು ಪಪ್ಪ- ಮಮ್ಮಿ ಎಂದು ಕರೆಯುತ್ತೇವೆ. ಇದು ನಮ್ಮ ಚಿಕ್ಕಮ್ಮಂದಿರು ಹಾಕಿದ ಚಾಳಿ. ಹರಟುತ್ತಾ ನಾನು ಡ್ರೈವ್ ಮಾಡುತ್ತಿದ್ದ GMC Yukon ಗಾಡಿಯ ಡ್ಯಾಶ್ ಬೋರ್ಡ್ ೧೪೦ ಕೀ ಮೀ ಮುಳ್ಳನ್ನು ಮುಟ್ಟಿದ್ದನ್ನು ನೋಡಿ ಪಪ್ಪ ತಮ್ಮ ಸಂದು ಹೋದ ಕಾಲದ ಮುಳ್ಳನ್ನು ಹಿಂದಕ್ಕೆ ಓಡಿಸಿ ಸುಂದರ ನೆನಪಿನ ಸುರುಳಿ ಬಿಚ್ಚಿದರು.

ನನ್ನ ತಂದೆ ಕೇರಳದ ಕಾಸರಗೋಡಿನಿಂದ ಸುಮಾರು ೮ ಕೀ.ಮೀ ದೂರದಲ್ಲಿರುವ ಚೇರೂರ್ ಗ್ರಾಮದವರು. ಬದುಕಿನ ಸಂಗಾತಿಯಾಗಿ ಬಂತು ಕಡು ಬಡತನ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಪಪ್ಪ ಮ್ಯಾಟ್ರಿಕ್ ಮುಗಿಸಿದ್ದರು. ನಂತರ ಓದಲು ಹಣದ ಕೊರತೆಯಿಂದ ಶಾಲೆ ಬಿಟ್ಟು ವಿವಿಧ ಧಂಧೆ ಗೆ ಇಳಿದರು. ಚೇರೂರ್ ನ ಗುಡ್ಡದ ತಳದಲ್ಲಿ ಅವರ ಮನೆಯಂತೆ. ತನ್ನ ಅಣ್ಣನ ಸೈಕಲ್ ಅನ್ನು ಗುಡ್ಡದ ಮೇಲೆ ತಲುಪಿಸಬೇಕು ಪಪ್ಪ. ಕಿರಿಯರ ಮೇಲೆ ಹಿರಿಯರ ಸವಾರಿ. ದೂರವೆಲ್ಲಾದರೂ ಹೋಗಬೇಕೆಂದರೆ ಕಾಸರಗೋಡಿನವರೆಗೆ ಸೈಕಲ್ ಅಥವಾ ನಡೆದುಕೊಂಡು ಬಂದು ನಂತರ “ಚಾರ್ಕೋಲ್ ಬಸ್” ಹತ್ತಬೇಕು ಎಂದರು ಪಪ್ಪ. ಚಾರ್ಕೋಲ್ ಬಸ್ಸಾ, ಎಂದು ನಾನು ಅಚ್ಚರಿಯಿಂದ ಕೇಳಿದೆ. ಹೌದು ಕಲ್ಲಿದ್ದಲ ಬಸ್ಸು ಕಣೋ ಆಗಿನ ಕಾಲದಲ್ಲಿ ಎಂದರು ಪಪ್ಪ. ನನಗೆ ನಂಬಲಾಗಲಿಲ್ಲ. ಉಗಿ ಬಂಡಿಯನ್ನು ನೋಡಿ, ಹತ್ತಿ ಪರಿಚಯವಿದ್ದ ನನಗೆ ಕಲ್ಲಿದ್ದಲ ಬಸ್ಸು ವಿಚಿತ್ರವಾಗಿ ತೋರಿತು. ಬಸ್ಸಿನ ಬಾನೆಟ್ ಮೇಲೆ ಒಂದು ತೂತಿರುತ್ತದೆ. ಅದಕ್ಕೆ ಲಿವರ್ ಹಾಕಿ ಕಂಡಕ್ಟರ್ ಜೋರಾಗಿ ತಿರುಗಿಸುತ್ತಾನೆ ಗಿರ್ರ್, ಗಿರ್ರ್ ಅಂತ. ಈ ಗಿರ್ರ್, ಗಿರ್ರೂ, ಕಂಡಕ್ಟರನ ಏದುಸಿರೂ ಸೇರಿ ಬಸ್ಸು ಡುರ್ರ್, ಡುರ್ರ್, ಎಂದು ಸದ್ದು ಮಾಡುತ್ತಾ ಜೀವ ತುಂಬಿಕೊಳ್ಳುತ್ತದೆ. ವಾಹ್ ಎಂಥ ಸುಂದರ ಪ್ರಯಾಣವಾಗಿರಬಹುದು ಕಲ್ಲಿದ್ದಲಿನ ಬಸ್ಸಿನದು. ನನ್ನ ದೊಡ್ಡಪ್ಪ ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಇನ್ನೂ ಚಿಕ್ಕ ಪ್ರಾಯದ ನನ್ನ ಅಪ್ಪ ಬಂದರು ಅಣ್ಣನ ಸಹಾಯಕ್ಕೆಂದು. ಭದ್ರಾವತಿಯಿಂದ ಕಾಸರಗೋಡಿಗೆ ಪ್ರಯಾಣ ಬೆಳೆಸುವುದು ಚಂದ್ರಯಾನದಂತೆ ಇರಬೇಕು ಎಂದು ತೋರಿತು ನನಗೆ ನನ್ನ ಅಪ್ಪನ ಅನುಭವ ಕೇಳಿ.  ಕೇರಳದಲ್ಲಿ ಅಕ್ಕಿ, ಸಕ್ಕರೆ ಹೀಗೆ ಅವಶ್ಯಕ ವಸ್ತುಗಳ ಅಭಾವವಂತೆ. ಅದರ ಮೇಲೆ ಕಾಳ ಧಂಧೆ ಬೇರೆ. ಮೂರು ಹೊತ್ತಿನ ಊಟ ಬಹಳಷ್ಟು ಜನರಿಗೆ ಅಪರೂಪ. ಬೆಳಿಗ್ಗೆ ತಿಂದರೆ ಮಧ್ಯಾಹ್ನ ಇಲ್ಲ ಕೂಳು. ಮಧ್ಯಾಹ್ನ ತಿಂದರೆ ರಾತ್ರಿ ಉಪವಾಸ. ನನ್ನ ಅಪ್ಪನ ಬಳಿ ನನ್ನ ದೊಡ್ಡಪ್ಪ ೧೦ ಕೆಜಿ ಸಕ್ಕರೆ ಕಳಿಸಿದರು ಊರಿಗೆಂದು. ಶಿವಮೊಗ್ಗದಿಂದ ಆಗುಂಬೆಗೆ ಒಂದು ವ್ಯಾನು ಹಿಡಿಯಬೇಕು. ಆಗುಂಬೆಯಿಂದ ಸೋಮೆಶ್ವರಕ್ಕೆ ಮತ್ತೊಂದು ವ್ಯಾನು. ಸೋಮೇಶ್ವರದಿಂದ ಮಂಗಳೂರಿಗೆ ಮತ್ತೊಂದು ವ್ಯಾನು. ಈ ವ್ಯವಸ್ಥೆ ಏಕೆ ಎಂದರೆ ಘಾಟಿ ಏರಿ ಇಳಿಯಲು ಬಯಲು ಸೀಮೆಯಲ್ಲಿ ಪಳಗಿದ ವಾಹನಗಳಿಗೆ ಸಾಧ್ಯವಿಲ್ಲವಂತೆ. ಒಂದು ರೀತಿಯ ghat specialist ಈ ಆಗುಂಬೆಯಿಂದ ಸೋಮೇಶ್ವರಕ್ಕೆ ಜನರನ್ನು ಕೊಂಡೊಯ್ಯುವ ವಾಹನಗಳು. ಆಗುಂಬೆ ತಲುಪಿದ ನಂತರ ಸೋಮೇಶ್ವರಕ್ಕೆ ಅಂದು ವ್ಯಾನಿಲ್ಲ. ಬೇರೆ ದಾರಿ ಕಾಣದೆ ಸಕ್ಕರೆ ಚೀಲವನ್ನು ಹೊತ್ತು ನಡೆದುಕೊಂಡು ಆಗುಂಬೆ ಇಳಿದು ಬಂದರಂತೆ. ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟು ಕೊಂಡಿದ್ದ ದೊಡ್ಡಪ್ಪ ಎರಡನೇ ವಿಶ್ವ ಯುದ್ಧದ ಸಮಯ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಯುದ್ಧ ಮುಗಿದ ನಂತರ ಬೇಕಾದರೆ ನಿವೃತ್ತಿ ತೆಗೆದು ಕೊಳ್ಳಬಹುದು ಎಂದು ಸರಕಾರ ಹೇಳಿದಾಗ ನಿವೃತ್ತಿ ತೆಗೆದುಕೊಂಡರಂತೆ. ಇದನ್ನು ಕೇಳಿ ನನಗೆ ರೋಮಾಂಚನ. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ. ಇನ್ನಷ್ಟು ತಿಳಿಯುವಾ ಎಂದರೆ ಆಗ ಅಪ್ಪ ತೀರಾ ಚಿಕ್ಕವರಾಗಿದ್ದರಿಂದ ಹೆಚ್ಚಿನ ವಿವರ ಸಿಗಲಿಲ್ಲ. ದೊಡ್ದಪ್ಪನನ್ನೇ ಕೇಳೋಣ ಎಂದರೆ ಅವರು ನಿಧನರಾಗಿ ೧೮ ವರ್ಷಗಳು.  

ಆಗಿನ ಕಾಲದಲ್ಲಿ ಕೆಲವರು ಹೆಚ್ಚಿನ ಸಂಪಾದನೆಗಾಗಿ ಮಲೇಷ್ಯಾ, ಶ್ರೀಲಂಕೆಗೆ ಹೋಗುತ್ತಿದ್ದರಂತೆ. ಮತ್ತೊಬ್ಬ ದೊಡ್ಡಪ್ಪ ಶ್ರೀಲಂಕೆಯಲ್ಲಿ ಇದ್ದರು. ಅವರ ಸಂಬಳ ತಿಂಗಳಿಗೆ ೫೦ ರೂಪಾಯಿ. ಸುಮಾರು ಅರವತ್ತು ವರ್ಷಗಳ ಹಿಂದೆ ಅದು ದೊಡ್ಡ ಮೊತ್ತ. ದೊಡ್ಡಪ್ಪ ಹಣ ಹೇಗೆ ಕಳಿಸುತ್ತಿದ್ದರು ಎಂದು ನಾನು ಕೇಳಿದಾಗ ಪೋಸ್ಟ್ ಮ್ಯಾನ್ ತರುತ್ತಿದ್ದ ಎಂದು ಉತ್ತರಿಸಿದ ಅಪ್ಪ ಮತ್ತೊಂದು ಸ್ವಾರಸ್ಯವನ್ನು ಹೇಳಿದರು. ಪೋಸ್ಟ್ ಮ್ಯಾನ್ ಬಂದ ಎಂದು ಜನರಿಗೆ ತಿಳಿಯುವುದು ಘಂಟೆಯ ಸದ್ದು ಕೇಳಿದಾಗಲಂತೆ. ಹೆಗಲ ಮೇಲೆ ಒಂದು ದೊಣ್ಣೆ, ಅದಕ್ಕೆ ಒಂದು ಘಂಟೆ ಸಿಕ್ಕಿಸಿ ಘಂಟೆ ಬಾರಿಸುತ್ತಾ ಬರುತ್ತಾನಂತೆ ಅಂಚೆಯವ ಕಾಸು ಕಾಗದ ವಿತರಿಸಲು. oh, how much I miss that rustic life. ಈಗಿನ ಕಾಲದ ಈ ಮೇಲು, ಸ್ಪ್ಯಾಮು, ಕ್ರೆಡಿಟ್ ಕಾರ್ಡ್ ಸ್ಕ್ಯಾಮು ಮತ್ತು ಆಗಿನ ಕಾಲದ ಘಂಟೆಯ ನಿನಾದ.

ಪಪ್ಪ ಇಷ್ಟು ಹೇಳಿ ಮುಗಿಸುತ್ತಿದ್ದಂತೆ ಮೇಲೆಲ್ಲಾ ಥಳಕು, ಒಳಗೆಲ್ಲಾ ಟೊಳಕನ್ನು ಇಟ್ಟುಕೊಂಡು ನಮ್ಮನ್ನು ಮರುಳು ಮಾಡುತಿರುವ ಆಧುನಿಕತೆ ಬಿಂಬಿಸುವ  ಗಗನ ಚುಂಬಿ ಕಟ್ಟಡಗಳು ಭವ್ಯವಾದ ಮಕ್ಕಾ ಮಸ್ಜಿದ್ ನ ನೀಳ ಗೋಪುರಗಳನ್ನು ಕುಬ್ಜವಾಗಿಸುವ ದೃಶ್ಯ ಗೋಚರಿಸಿ ಕಾರನ್ನು ಪಾರ್ಕಿಂಗ್ ಲಾಟ್ ನತ್ತ ತಿರುಗಿಸಿದೆ ಹಳೆ ಕಾಲದ ಗುಂಗಿನಲ್ಲಿ.            

ವಯಸ್ಸಾದವರೊಂದಿಗೆ ಮಾತನಾಡುತ್ತಿದ್ದರೆ ಕೆಲವರು ಹಳೆ ತಲೆಯವನ ಜೊತೆ ಏನ್ ಕೆಲಸ ನಡಿ ಎಂದು ಗದರಿಸಿ ಎಬ್ಬಿಸುವುದಿದೆ. ನನ್ನ ಪಾಲಿಗೆ ಹಿರಿಯರು ಮನೆಗೆ ಕಿರೀಟವಿದ್ದಂತೆ. ವಯಸ್ಸಾದವರೊಂದಿಗೆ ಸಮಯ ಕಳೆಯಲು ನನಗೆ ಬೇಸರ ಎನ್ನಿಸುವುದಿಲ್ಲ. ಮುಪ್ಪು ಏನು, ಹಾಗೂ ಆ ಮುಪ್ಪಿನ ಹಿಂದೆ ಇರುವ ಅನುಭವವನ್ನು ಸವಿಯಬೇಕೆಂದರೆ ವಯಸ್ಸಾದವರೊಂದಿಗೆ ಕಾಲ ಕಳೆಯವೇಕು. ಬದುಕಿನ ಸುವರ್ಣ ಕಾಲವನ್ನು, ಪ್ರೀತಿ, ನಿಸ್ವಾರ್ಥತೆ, ಸಹನೆ, ಸರಳತೆಯಿಂದ ಕೂಡಿದ ಬದುಕನ್ನು ಕಂಡ “ಮುದಿ ತಲೆಗಳು” ತಮ್ಮ ತಲೆಯ ಮೇಲಿನ ಕೂದಲು ಬೆಳ್ಳಿ ವರ್ಣಕ್ಕೆ ತಿರುಗಿದ ಕೂಡಲೇ ಸಮಾಜಕ್ಕೆ ಹೊರೆಯಾಗಿ ಬಿಡುವುದು ಖೇದಕರ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಹಿರಿಯರಿದ್ದಾರೆ ಅವರನ್ನು ಕಂಡು ಮಾತನಾಡಿಸಿ, ಏಕತ ಕಪೂರಳ ಸುಳ್ಳಿನ ಸರಮಾಲೆಯ ಸೀರಿಯಲ್ಲುಗಳಿಗಿಂತ ಸ್ವಾರಸ್ಯಕರ ಇವರು ಬದುಕಿದ ಬದುಕು. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ ಸೇವೆ ಸಲ್ಲಿಸಿದ್ದರು ಎಂದು ನನಗೆ ತಿಳಿದದ್ದು ಅವರು ಸತ್ತು ಹದಿನೆಂಟು ವರುಷಗಳ ನಂತರ, ಅದೇ ರೀತಿ ಸುಮಾರು ಅರವತ್ತು ವರುಷಗಳ ಮೊದಲು ಮೆಟ್ರಿಕ್ ಕಲಿತಿದ್ದ ನನ್ನ ಅಜ್ಜಿ ಸಹಾ ಕಳೆದ ವರುಷ ತೀರಿಕೊಂಡರು. ಇವರಿಬ್ಬರಿಂದ ನನಗೆ ತಿಳಿಯುವುದು ಬಹಳಷ್ಟಿತ್ತು, ಆದರೆ ಆಧುನಿಕ ಬದುಕಿನ ಬ್ಯಾನೆ ಆ ಅವಕಾಶವನ್ನು ನಿರಾಕರಿಸಿತು.   

ಕಲ್ಲಿದ್ದಲ ಬಸ್ಸಿನ ಬಗ್ಗೆ ಮತ್ತಷ್ಟು: ಕಲ್ಲಿದ್ದಲ ಬಸ್ಸುಗಳು ೧೯೫೦ ರವರೆಗೂ ಚೈನಾದಲ್ಲಿ ಉಪಯೋಗದಲ್ಲಿದ್ದವು ಮತ್ತು ಈಗಲೂ ಉತ್ತರ ಕೊರಿಯಾದಲ್ಲಿ ಕಲ್ಲಿದ್ದಲ ಬಸ್ಸುಗಳು ಓಡಾಡುತ್ತಿವೆ. ಎರಡನೇ ವಿಶ್ವ ಯುದ್ಧದ ನಂತರವೂ ಜಪಾನಿನಲ್ಲಿ ಇಂಥ ಬಸ್ಸುಗಳು ಓಡಾಡುತ್ತಿದ್ದವು. ೧೯೩೧ ರಲ್ಲಿ Tang Zhongming  ಕಲ್ಲಿದ್ದಲಿನಿಂದ ಓಡಾಡುವ ವಾಹನವನ್ನು ಚಲಾವಣೆಗೆ ತಂದನು.

“ಮೊಣಕೈ” ಸಮಾಜ ಮತ್ತು ಕಳಚಿಕೊಂಡ ಕಾಲುಂಗುರ

“elbow society” ಅಂದರೆ ಮೊಣಕೈ ಸಮಾಜ. ಮೊಣ ಕಯ್ಯಿಲ್ಲದ ಸಮಾಜ ಎಲ್ಲಿದೆ ಎಂದು ಊಹಾಲೋಕಕ್ಕೆ ಓಡದಿರಿ. ಈ ತೆರನಾದ ಸಮಾಜ ಜಬರದಸ್ತಿಯ ಸಮಾಜ ಅಂತ. ಒಂಥರಾ ರೌಡಿಸಂ ವರ್ತನೆ. ಅಂದರೆ ನೂಕುನುಗ್ಗಲಿನಲ್ಲಿ ತನ್ನ ಮೊಣ ಕೈ ಎಷ್ಟು ಬಲ ಶಾಲಿ ಮತ್ತು ಪರಿಣಾಮಕಾರಿ ಎಂದು ಪರೀಕ್ಷಿಸಿ ಅದರಲ್ಲಿ ಗೆಲ್ಲವುದು, ರೈಲಿನ ಅಥವಾ ಬಸ್ಸಿನ ಸೀಟು ಹಿಡಿಯುವ ಮೂಲಕ. ಕೆಲವರು ಮೊಣಕೈಗಿಂತಲೂ ಟವಲನ್ನೋ, ಬೀಡಿ ಪಾಕೀಟನ್ನೋ ಸೀಟಿನ ಮೇಲೆ ಎಸೆದು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ ಆಸ್ತಿಯನ್ನು, ತಾವು ಕೂರಲು ಹೊರಟ ಸೀಟನ್ನು. ಹೌದಲ್ವಾ? ನಾವೆಷ್ಟು ಅನಾಗರೀಕರು ಎಂದು ಮನದೊಳಗೆ ಮರುಗಬೇಡಿ. ನಮ್ಮನ್ನು ಮೀರಿಸುವವರಿಲ್ಲದಿದ್ದರೂ ನಮ್ಮಷ್ಟೇ ಯಶಸ್ವಿಯಾಗಿ ಮೊಣ ಕಯ್ಯನ್ನು ಉಪಯೋಗಿಸುವ ಇತರರೂ ಇದ್ದಾರೆ. ಆ ಇತರರ ಸಾಲಿಗೆ ಜಪಾನೀಯರೂ ಸೇರಿ ಕೊಂಡರು ಎಂದರೆ ಆಹ್, ನಮ್ಮ ಜನ್ಮ ಅಥವಾ ಮೊಣ ಕೈ ಸಾರ್ಥಕ. ಇಷ್ಟು ಶಿಸ್ತು ಬದ್ದ ಬದುಕನ್ನು ನಡೆಸುವ ಚಪ್ಪಟೆ ಮೂಗಿನ ಜಪಾನೀಯರು ನೂಕು ನುಗ್ಗಲಿನ ಸ್ಪರ್ದೆಯಲ್ಲಿ ಮುಂದು ಎಂದರೆ ನಾವು ಮಾಡುತ್ತಿರುವುದು ಸರಿಯೇ ಇರಬೇಕು ಎಂದು self congratulating mode ಗೆ ಬಂದು ಹಿಗ್ಗೋಣ ಮೊಣಕೈಯ್ಯನ್ನು ಇನ್ನಷ್ಟು ಉತ್ಸಾಹದಿಂದ ಹಾರಿಸುತ್ತಾ.

ಜಪಾನಿನ ರೈಲು ವ್ಯವಸ್ಥೆ ವಿಶ್ವ ದರ್ಜೆ. ಕೇವಲ ಸೌಲಭ್ಯಗಳು ಮಾತ್ರವಲ್ಲ ಸರಿಯಾದ ಸಮಯಕ್ಕೆ ಬಂದು ಕಾದು ನಿಂತ ಎಲ್ಲರನ್ನೂ ಕರೆದುಕೊಂಡು ಹೋಗುವ ವ್ಯವಸ್ಥೆ ಜಪಾನೀಯರ ಹೆಮ್ಮೆ. ಆದರೆ ರೈಲಿಗಾಗಿ ಕಾಯುತ್ತಾ ನಿಂತು ತಮಗೆ ಬೋಗಿಯೊಳಕ್ಕೆ ಸೇರಲು ಸಾಧ್ಯವಾಗದಿದ್ದರೆ? ಆಗಲೇ ನೋಡಿ, ರೈಲಿನ ಆಗಮನದೊಂದಿಗೆ ಎಲ್ಲಾ ಶಿಷ್ಟಾಚಾರಗಳ ಮೌನ ನಿರ್ಗಮನ. ರೈಲಿನ ಮೂತಿ ಕಂಡಿದ್ದೇ ತಡ ನೆರೆದ ಜನಸ್ತೋಮಕ್ಕೆ ಮರು ಜೀವ ಬಂದಂತೆ. ಅದುವರೆಗೂ excuse me, sorry, may i beg your pardon, please, ಗ್ಲೀಸ್ ಎಂದೆಲ್ಲಾ ಉಲಿಯುತ್ತಾ ತಮ್ಮ ನಡತೆ, ವಿದ್ಯೆಯ ಮಟ್ಟ ತೋರಿಸುತ್ತಾ ನಡೆದ ಜನ ಸಮೂಹ ರೈಲು ಕಂಡ ಕೂಡಲೇ ತನ್ನ ಶಿಷ್ಟಾಚಾರವನ್ನೆಲ್ಲಾ ತನ್ನ ಮೊಣ ಕೈಯ್ಯಿಗೆ ಬದಲಾಯಿಸಿ ಶುರು ಮಾಡುತ್ತದೆ ರೌಡಿತನದ ನಗ್ನ ನೃತ್ಯವನ್ನು. social grace ಎಲ್ಲಾ ರೈಲಿನ ಹಳಿಗಳಿಗೆ ಒಪ್ಪಿಸಿ ನಾ ಮೊದಲು, ತಾ ಮೊದಲು ಎಂದು ನುಗ್ಗುತ್ತಾರೆ. ವೃದ್ಧರು, ಮಕ್ಕಳು, ಮಹಿಳೆಯರು ಎಂಬುದಿಲ್ಲ, ಅಂಡಿಗಲ್ಲದಿದ್ದರೂ ತನ್ನ ಕಾಲಿಗೆ ಒಂದು ನೆಲೆ ಸಿಕ್ಕರೆ ಸಾಕು ಎಂದು ಎಲ್ಲರನ್ನೂ ನೂಕಿ, ಕೆಡವಿ ಹೋಗುತ್ತಾರೆ. ಇಂಥ ಮೊಣ ಕೈಗಳ ಜಬರದಸ್ತಿ ನಡುವೆಯೇ ಈ ನೂಕು ನುಗ್ಗಲಿನಲ್ಲಿ ಮಹಿಳೆಯರ ಬೇಡದ ಸ್ಥಳಕ್ಕೆಲ್ಲಾ ಹಸ್ತಗಳನ್ನು ಕಳಿಸಿ ಅಲ್ಲೂ ಒಂದು ರೀತಿಯ sexual harassment ನಡೆಸಿ ಖುಷಿ ಪಡೆಯುವವರು ಕೆಲವರು. ಸರ್ವಾಂತರ್ಯಾಮಿ ಕೈಗಳು. ಇವರೆಲ್ಲಾ ಸೂಟು ಬೂಟಿನಲ್ಲಿ ಬೋರ್ಡ್ ರೂಮಿಗೋ, ಸಭೆಗೋ ಹೋಗುವ ಮಾನ್ಯ ವ್ಯಕ್ತಿಗಳು. ಸ್ವಲ್ಪ ಹೊತ್ತಿಗಾದರೂ ಮಾನ್ಯತೆಯನ್ನ “ತಿಪ್ಪೆ ರೌಂಡ್ಸ್” ಗೆ ಕಳಿಸದಿದ್ದರೆ ಏನು ಮಜಾ ಆಲ್ವಾ? ತಮ್ಮ ಕೈಗಳನ್ನೂ, ಹಸ್ತಗಳನ್ನು ಈ ರೀತಿ ಬೇಡದ ಟ್ರಿಪ್ ಮೇಲೆ ಕಳಿಸುವ ಮಹೋದಯರ ಗೊಡವೆಯೇ ಬೇಡ ಎಂದು ನಾರೀ ಮಣಿಗಳು ತಮಗೆಂದೇ ಮೀಸಲಾದ ಪ್ರತ್ಯೇಕ ಬೋಗಿ ಗಳಲ್ಲೊ ಅಥವಾ ರೈಲುಗಳಲ್ಲೋ ಪ್ರಯಾಣಿಸುತ್ತಾರೆ. ಧೂಮಪಾನದಷ್ಟೇ ubiquitous ಹಸ್ತ ಪ್ರಯಾಣ.

ಕೆಲವೊಮ್ಮೆ ನನಗನ್ನಿಸುವುದು ಈ ಶೋಕಿ ಗಂಡಿಗೆ ಮಾತ್ರ ಏಕೆ? ರೋಗ, ಬ್ಯಾನೆಗಳು, ಚಟಗಳು ಇವೆಲ್ಲಾ ಎರಡೂ ಲಿಂಗಗಳಿಗೆ ಇರುವಂಥವು. ಆದರೆ ಲೈಂಗಿಕ ಕಿರುಕುಳ ಅಥವಾ ಕಚಗುಳಿ ಕೊಡುವ ಈ ವಿದ್ಯೆ ಗಂಡಿಗೆ ಮಾತ್ರ ಒಲಿದಿದ್ದು ಏಕೆ? for a pleasant change ಹೆಣ್ಣಿಗೇಕೆ ಕರಗತವಾಗಲಿಲ್ಲ ಈ ವಿದ್ಯೆ? ಬಸ್ಸಿನಲ್ಲೇ ನೋಡಿ. ಮುಂದುಗಡೆ ಯಿಂದ ಹೆಣ್ಣು ಹತ್ತಬೇಕು, ಹಿಂದಿನಿಂದ ಗಂಡು ಹತ್ತಬೇಕು. ಹಿಂದೆ ಹತ್ತಿದ ಗಂಡು ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಒಳಗಾಗಿ ನಿಧಾನ ಮುಂದಿನ ಬಾಗಿಲಿನ ಕಡೆ ತಲುಪಿರುತ್ತಾನೆ. ಈ ಚಟುವಟಿಕೆ ಕಾಲೇಜು ಬಿಡುವ ವೇಳೆ ಕೊಂಚ ಅಧಿಕ. ಈ ಲೈಂಗಿಕ ಕಿರುಕುಳ ಅಥವಾ ಮೇಲೆ ಹೇಳಿದ ಕಚಗುಳಿ ಗಂಡು ಮಾತ್ರ ಸವಿಯುತ್ತಾನೆ ಎಂದರೂ ತಪ್ಪೇ.

ತುಂಬಾ ವರ್ಷಗಳ ಹಿಂದೆ ನಡೆದ ಘಟನೆ. ಬಸ್ಸಿನಲ್ಲಿ ಒಬ್ಬ ರೋಮಿಯೋ ಕೂತಿದ್ದ. ಅವನ ಹಿಂದಿನ ಸೀಟಿನಲ್ಲಿ ಗಂಡ ಹೆಂಡಿರ ಜೋಡಿ ಕುಳಿತಿತ್ತು. ಹಿಂದೆ ಕೂತ ಮಹಿಳೆಯನ್ನು ನೋಡಿ ಮಿಸುಕಾಡುತ್ತಿದ್ದ ರೋಮಿಯೋ ಕೂತಾಕೆಗೆ ಇಷ್ಟವಾದ. ಅವನ ಸೀಟಿನ ಮೂಲೆಯಿಂದ ಆಕೆ ತನ್ನ ಕಾಲನ್ನು ತೂರಿಸಿದಳು. ಸ್ವಲ್ಪ ಹೊತ್ತಿನ ನಂತರ ಕಚಗುಳಿ ಜಾಸ್ತಿಯಾದಾಗ ಆಕೆ ಕಾಲನ್ನು ಹಿಂದಕ್ಕೆ ಎಳೆದುಕೊಂಡಳು. ಕಾಲೇನೋ ಹಿಂದಕ್ಕೆ ಬಂತು ಆದರೆ ಆಕೆ ತೊಟ್ಟಿದ್ದ ಕಾಲುಂಗುರ ಅವನ ಕೈಯ್ಯಲ್ಲೇ ಉಳಿಯಿತು.ಈಗ reverse acting. ಕಚಗುಳಿ ಇಡುವ ಸರತಿ ಈಕೆಯದು. ಉಂಗುರ ಮರಳಿಸು ಎಂದು ತಿವಿದೂ ತಿವಿದೂ ಕೇಳಿದಳು. ಇವನಿಗೆ ಒಂಥರಾ ಖುಷಿ. ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ. ಕಣ್ಣಿನಲ್ಲೇ ಗೋಗರೆದಳು ಉಂಗುರ ಕೊಡು ಎಂದು. ಕಾಲುಂಗುರ ಉದುರಿ ಹೋಯಿತು ಎಂದರೆ ಯಾರದಾರೂ ನಂಬುವರೇ?ಯಾರು ನಂಬಿದರೂ ಸದಾ ಸಂಶಯಿ ಅತ್ತೆಮ್ಮ ನಂಬುವಳೇ? ಕೈಯ್ಯುನ್ಗುರ, ವಾಲೆ, ಜುಮ್ಕಿ, ಸರ, ಉದುರೋದಿದೆ, ಆದರೆ ಕಾಲುಂಗುರ? ಸಾಕಷ್ಟು ಮನೋರಂಜನೆ ಪಡೆದ ರೋಮಿಯೋ ಉಂಗುರ ಮರಳಿಸಿದ ಅನ್ನಿ.

ಹೀಗೆ ನಿಮಗೂ ಒಂದಲ್ಲ ಒಂದು ರೀತಿಯ ಅನುಭವವಾಗಿರಲೇಬೇಕು ಪ್ರಯಾಣದ ವೇಳೆ, ರೇಶನ್, ಸೀಮೆಣ್ಣೆಗಾಗಿ, ಸರತಿಯಲ್ಲಿ ನಿಂತಾಗ.

ಕಟುಕನಿಗಾಗಿ ಕಾಯುತಿಹ ಕುರಿಗಳು ಮತ್ತು ಕುವರಿಯರು

                                            

ನಾಗರೀಕ ಸಮಾಜಕ್ಕೆ ಕಳಂಕವಾಗಿರುವ ವೇಶ್ಯಾವಾಟಿಕೆ ಬಗ್ಗೆ ಸನ್ಮನಸ್ಸಿನ ಕನ್ನಡಿಗರೊಬ್ಬರು “ಸಂಪದ” ದದಲ್ಲಿ ಚರ್ಚೆ ಇಟ್ಟು ತಾವು ಬೆಂಗಳೂರಿನಲ್ಲಿ ಕಂಡ ದೃಶ್ಯದ ಬಗ್ಗೆ ಓದುಗರ ಗಮನ ಸೆಳೆದರು.

ಮೈಮಾರುವ, ವೇಶ್ಯಾವಾಟಿಕೆ, ಹಾದರ, ಹೀಗೆಲ್ಲಾ ವಿವಿಧ ನಾಮಾವಳಿಗಳಿಂದ ಗುರುತಿಸಲ್ಪಡುವ flesh trade ಇಂದು ನಿನ್ನೆಯದಲ್ಲ. ಇದು world’s oldest profession ಅಂತೆ. ಈ ವೃತ್ತಿಗೆ profession ಅಂತ ಕರೆದು ದಾರ್ಶನಿಕ ಅಥವಾ ಸಮಾಜ ಶಾಸ್ತ್ರಜ್ಞ ಈ ವೃತ್ತಿಗೆ ಒಂದು definition ಕೊಟ್ಟು ಮನುಷ್ಯನ ನೂರಾರು ವೃತ್ತಿಗಳಲ್ಲಿ ಇದೂ ಒಂದು ಎಂದು ಪ್ರತಿಬಿಂಬಿಸಿ ಪರೋಕ್ಷವಾಗಿ ಪ್ರೋತ್ಸಾಹಿಸಿದ್ದಾನೆ. ಮತ್ತೊಂದು ಕಡೆ ನಮ್ಮ ಹೆಣ್ಣು ಮನೆಯ ಹೆಣ್ಣು ಮಕ್ಕಳು ಮಾನವಾಗಿ ಓಡಾಡಲು ಪರರ ಹೆಣ್ಣು ಮಕ್ಕಳು ಮಾನ ಬಿಟ್ಟು ಮೆಜೆಸ್ಟಿಕ್ ನಲ್ಲೋ ಇನ್ಯಾವುದಾದರೂ ರೆಡ್ ಲೈಟ್ ಏರಿಯಾದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಿರಾಕಿಗೆ ಕಾಯಬೇಕು. ಹೇಗಿದೆ ವ್ಯವಸ್ಥೆ? ಈ ವ್ಯವಸ್ಥೆ ಸರಿ ಎಂದು ಹೇಳುವ ಮಹಿಳೆಯರೂ ಇದ್ದಾರೆ.

ಯಾವ ಹೆಣ್ಣೂ ತನ್ನ ಸ್ವ ಇಚ್ಚೆಯಿಂದ ಈ ದಂಧೆಗೆ ಇಳಿಯುವುದಿಲ್ಲ. ಹೌದು ಶಾಪಿಂಗ್ ಗೀಳು ಹಚ್ಚಿಕೊಂಡ ಕೆಲವರು ಶೋಕಿಗಾಗಿ, (ಇದರಲ್ಲಿ ಗೃಹಿಣಿಯರೂ ಸೇರಿದ್ದಾರೆ ಎನ್ನುವುದನ್ನು ಮರೆಯಬಾರದು) ಈ ಕೆಲಸಕ್ಕೆ ಇಳಿಯುತ್ತಾರೆ. ಈ ದಂಧೆಯ ಬಗ್ಗೆ ಕೂಲಂಕುಷವಾಗಿ ನೋಡಿದಾಗ ನಮಗೆ ಸಿಗುವ ಕಾರಣಗಳು ಹಲವು. ಬಳಕೆದಾರ ಸಂಸ್ಕೃತಿ, ಕೊಳ್ಳಲು ಪ್ರೇರೇಪಿಸುವ ಜಾಹೀರಾತುಗಳು, ಸಂಪತ್ತನ್ನು ವೈಭವೀಕರಿಸುವ ಸೀರಿಯಲ್ಲುಗಳು. ಇದಲ್ಲದೆ ಸಂಪತ್ತಿನ ಬಗೆಗಿನ ಸಮಾಜದ ದೃಷ್ಟಿಕೋನ. ಯಶಸ್ವೀ ವ್ಯಕ್ತಿ ಬಳಿ ದೊಡ್ಡ ಕಾರು, ಬಂಗಲೆ ಇದ್ದರೆ ಅವನಿಗೆ ಮನ್ನಣೆ. ಆ ಬಂಗಲೆ, ಕಾರು, ಸಂಪತ್ತು ಹೇಗೆ ಬಂತು ಎಂದು ಕೇಳುವ ಅರಿಯುವ ಹಂಬಲ ಸಮಾಜಕ್ಕಿದೆಯೇ? ಯಾವುದಾದರೂ upscale neighbourhood ಕಡೆ ನಡೆದರೆ ತಿಳಿಯುತ್ತೆ. ನೋಡಪ್ಪಾ, ಅಲ್ಲಿರೋ ಬಂಗಲೆ forest conservator ಅವರದು. ಅಲ್ಲಿ ನಿಂತಿದೆಯಲ್ಲಾ ದೊಡ್ಡ ಕಾರು,ಅದು pwd engineer ಅವರದು, ಅಲ್ಲಿ ಯಮಾಹಾ ಬೈಕಿನಲ್ಲಿ ಹೋಗ್ತಾ ಇದ್ದಾನಲ್ಲ ಅವನು ಕೆಎಸ್ಸಾರ್ಟೀಸಿ ಬಸ್ಸಿನ ಕಂಡಕ್ಟರನ ಮಗ, MBBS ಮಾಡ್ತಾ ಇದ್ದಾನೆ……….ಹೀಗೆ ಸಾಗುತ್ತದೆ ಗುಣಗಾನ, ಪ್ರಶಂಸೆ, ಭಕ್ತಿ ಭಾವ. ನಾವೆಂದಾದರೂ ಯೋಚಿಸಿದ್ದೇವೆಯೇ ಈ ವ್ಯಕ್ತಿಗಳು ಪಡೆಯುವ ಸಂಬಳದಲ್ಲಿ ಈ ಸೌಕರ್ಯಗಳನ್ನು ತಮದಾಗಿಸಿಕೊಳ್ಳಲು ಅವರಿಂದ ಸಾಧ್ಯವೇ ಎಂದು? ಮಾನ ಬಿಟ್ಟು ಸಂಪಾದನೆ ಮಾಡಿದರೆ ಸಂಪಾದನೆ ಮಾನವನ್ನು ತಂದು ಕೊಡುತ್ತದಂತೆ. ಎಷ್ಟು ಸೊಗಸಾಗಿ ಮರಳಿ ಬಂತು ನೋಡಿ ಮಾನ ಇಲ್ಲಿ. ಈಗ ವೇಶ್ಯಾವಾಟಿಕೆಗೂ ಇಲ್ಲಿ ಬರೆದಿರುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ತಾನೇ?

ಅನೈತಿಕ ಸಂಪಾದನೆಯನ್ನು ಕಂಡು ಹಿಗ್ಗಿ, ಹೊಗಳುವ ಸಮಾಜ ಒಳಗೊಳಗೇ ಅದೇ ರೀತಿ ತಾನೂ ಆಗಬೇಕೆಂದು ಬಯಸುತ್ತದೆ. ಈ ಸಂಪತ್ತನ್ನು ನೋಡಿದ ಸಾಮಾನ್ಯ ಗೃಹಿಣಿ ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ ಅಡ್ಡ ದಾರಿ ಹಿಡಿ ದು ಸಂಪಾದಿಸಲು. ಅಬಲೆ ಬಯಸುತ್ತಾಳೆ ತನ್ನ ಮೈ ಮಾಟವನ್ನು ಶ್ರೀಮಂತನಿಗೆ ಉಣಿಸಿದರೆ ಅವನಂತೆಯೇ ತಾನೂ ಸುಖವಾಗಿ ಇರಬಹುದು ಎಂದು. ಲಂಚ ಪಡೆಯುವ ವ್ಯಕ್ತಿ ಒಂದು ರೀತಿಯ ಹಾದರ ಮಾಡಿದರೆ ಏರು ಜವ್ವನೆ ಮತ್ತೊಂದು ರೀತಿಯ ಹಾದರಕ್ಕೆ ಇಳಿಯುತ್ತಾಳೆ. ಇಬ್ಬರ ಉದ್ದೇಶ ಸ್ಪಷ್ಟ. ಭರ್ಜರಿಯಾಗಿ ಬಾಳುವುದು.

ಶೀಲ ಮತ್ತು ಅಶ್ಲೀಲದ ಮಧ್ಯೆ ಇರುವ ಪರದೆ ಬಹು ತೆಳುವಾದುದು. ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ಆ ಪರದೆ ಸರಿಯಿತೋ ಪಯಣ ಶುರು ಅನೀತಿಯೆಡೆಗೆ. ಚಿಕ್ಕ ಪುಟ್ಟ, ಒಂದು ಸಲ, ಎರಡು ಸಲ, ಎಂದು ತಮಗರಿವಿಲ್ಲದೆಯೇ ಅನೈತಿಕತೆಯ ಪ್ರಪಾತಕ್ಕೆ ಜಾರುತ್ತಾರೆ. ಟೀವೀ ಆನ್ ಮಾಡಿದರೆ ಸೀರಿಯಲ್ಲುಗಳಲ್ಲಿ ಸಾವಿರ ಕೋಟಿಗಳ ಮಾತು, ಬೀದಿಯಲ್ಲಿ ಹೋದರೆ ಭರ್ರ್ ಎಂದು ಹೋಗುವ ಮಾರುತಿ, ಹೊಂಡಾ, ಮರ್ಸಿಡೀಸ್ ಗಳು. ಪರಿಣಾಮ? ಈ ಮೇಲೆ ಹೇಳಿದ ಸಂಪತ್ತನ್ನು ಕಂಡು ಜೊಲ್ಲು ಸುರಿಸಿ ನೋಡುತ್ತಾ ಮೆಜೆಸ್ಟಿಕ್ನಲ್ಲಿ ನಿಲ್ಲುವ ನೀರೆಯರು.