ನಾಸ್ತಿಕನ ಬಾಯಲ್ಲಿ ದೇವರು

 

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ ಬಿರುಸಾಗಿ ನಡೆದ ಅಂತಾ ರಾಷ್ಟ್ರೀಯ ವಿದ್ಯಮಾನದಲ್ಲಿ ಅಮೇರಿಕಾ ಬರ್ಲಿನ್ ಗೋಡೆಗೂ ಒಂದು ಗತಿ ಕಾಣಿಸಿ ಸೋವಿಎಟ್ ಮೂರಾಬಟ್ಟೆ ಆಗಿಸುವಲ್ಲಿ ಯಶಸ್ಸನ್ನು ಕಂಡಿತು. ಈ ಯಶಸ್ಸಿಗೆ ಅಮೆರಿಕೆಯ ಕಪಟತನ ಕ್ಕಿಂತ ಒಂಚೂರು ಗೋರ್ಬಚೋಫ್ ಮತ್ತೊಂಚೂರು ಸಾಕ್ಷಾತ್ ಪರಮಾತ್ಮನೇ ಕಾರಣೀಕರ್ತರಾದರು. ದೇವರು ಯಾಕೆ ಬಂದ ಇಲ್ಲಿ ಎನ್ನುತ್ತೀರೋ? ಅಲ್ಲ, ಈ ವಿಶ್ವವನ್ನು, ಅಗಾಧ ಆಗಸವನ್ನು, ಗ್ರಹ, ಧೂಮಕೇತಾದಿಗಳನ್ನು, ನಂತರ ಇವುಗಳೆಲ್ಲವಕ್ಕೆ viceroy ಆಗಿ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ ತಪ್ಪಿಗೆ ರಷ್ಯಾದವರು ದೇವ ಸ್ಮರಣೆಯೇ ಬೇಡ ಎಂದರೆ  ಅವನಾದರೂ ಏಕೆ ಸುಮ್ಮನಿರಬೇಕು? ಗೋರ್ಬಚೋಫ್ ನನ್ನು ದಾಳವಾಗಿ ಉಪಯೋಗಿಸಿ ವಿಶ್ವದ ಮಹಾ ಶಕ್ತಿ ರಶ್ಯಾವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟ ದೇವರು ಈಗಲಾದರೂ ನನ್ನ ಜಪ ಮಾಡುತ್ತಾ ಬಿದ್ದಿರಿ ಎಂದು.

ಆಫ್ಘಾನಿಸ್ತಾನದ ಯುದ್ಧದಲ್ಲಿ ತಲ್ಲೀನವಾದ ಅಮೆರಿಕೆಗೆ ಚಾರಿತ್ರಿಕ ಮತ್ತು ರಾಜತಾಂತ್ರಿಕ ತಿರುಗೇಟಾಗಿ ಪರಿಣಮಿಸಿದೆ ಆಫ್ಘನ್ ಯುದ್ಧ ಎಂದು ಗೋರ್ಬಚೋಫ್ ವಾದ. ಆಫ್ಘಾನಿಸ್ತಾನದಲ್ಲಿ ರಷ್ಯಾ ಬೆಂಬಲಿತ ಸರಕಾರವನ್ನು ಉರುಳಿಸಲು ಮುಜಾಹಿದೀನ್ಗಳನ್ನು ಹರಿಬಿಟ್ಟ ಅಮೆರಿಕೆಗೆ ಈಗ ಅದೇ ಮುಜಾಹಿದೀನ್ ಗಳೇ ಸವಾಲಾಗಿ ಪರಿಣಮಿಸಿರುವುದು ಒಂದು ರೀತಿಯ ಕಾಕತಾಳೀಯ ಬೆಳವಣಿಗೆ.” ನನ್ನ ಪ್ರಕಾರ ದೇವರು ತಪ್ಪು ಮಾಡುವವರನ್ನು ಶಿಕ್ಷಿಸಲು ತನ್ನದೇ ಆದ mechanism ಅನ್ನು ಬಳಸುತ್ತಾನೆ ಎಂದು ಗೋರ್ಬಚೋಫ್ ನುಡಿಯುತ್ತಾರೆ. ಕಮ್ಯುನಿಸ್ಟರೆಂದರೆ ನಮ್ಮ ಪ್ರಕಾರ ನಿರೀಶ್ವರವಾದಿಗಳು, ಗೋರ್ಬಚೋಫ್ ಒಬ್ಬ ಕಮ್ಯುನಿಸ್ಟ್. ಇವರ ಬಾಯಲ್ಲಿ ದೇವರ ಪ್ರಸ್ತಾಪವೇ? ಅಥವಾ ನಿರೀಶ್ವರವಾದಿಯಾಗಿದ್ದ ಗೋರ್ಬಚೋಫ್ ರ ಕೊರಳಿಗೆ ಅವರ ಮಿತ್ರ ಅಮೆರಿಕೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಶಿಲುಬೆ ಕಟ್ಟಿಬಿಟ್ಟರೆ? ಏನೇ ಆದರೂ ಆಫ್ಘಾನಿಸ್ತಾನ ಮಾತ್ರ ಅಮೆರಿಕೆ ಮಟ್ಟಿಗೆ ನೀನೆ ಸಾಕಿದಾ ಗಿಳಿ, ನಿನ್ನಾ ಮುದ್ದಿನ ಗಿಳೀ, ಹದ್ದಾಗಿ ಕುಕ್ಕಿತಲ್ಲೋ….. ಆಗಿದ್ದಂತೂ ಗುನುಗಿಸಲೇಬೇಕಾದ ಬೇಕಾದ ಸತ್ಯವೇ.

ಚಿತ್ರ ಸೌಜನ್ಯ: independent ಪತ್ರಿಕೆ (UK)

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.