ಹಸಿವು ಮತ್ತು ಸರ್ಕಸ್

ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.      

ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.

ವೈ ಎಸ್ಸ್ ಆರ್ – ಒಂದು ಬ್ಲಾಗಾಂಜಲಿ

ನಿಸರ್ಗದ ವೈಪರೀತ್ಯಕ್ಕೋ ಅಥವಾ ಬೇರಾವುದಾದರೂ ನಿಗೂಢ ಕಾರಣಗಳಿಗೋ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಆಂಧ್ರದ ಜನನಾಯಕ, ಜನಪ್ರಿಯ ಮುಖ್ಯಮಂತ್ರಿ Y.S. ರಾಜಶೇಖರ ರೆಡ್ಡಿಯವರ ಅಕಾಲಿಕ ಮರಣ ಆಂಧ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಂದು ದೊಡ್ಡ ಆಘಾತ ಮತ್ತು ನಷ್ಟ. ಯಾರೇ ಸಾವನ್ನಪ್ಪಿದರೂ ತುಂಬಲಾರದ ನಷ್ಟ ಎಂದು ಅನುಕಂಪದ ಮಾತು ಹೇಳುವುದಿದೆ . ಆದರೆ ಈ ಮಾತು ವೈ ಎಸ್ಸ್ ಆರ್ ಅವರಿಗೆ ಅನ್ವಯಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಡತನವನ್ನು, ನಿಸ್ಸಹಾಯಕತೆಯನ್ನು ಇವೆಲ್ಲಕ್ಕೂ ಕಾರಣವಾಗುವ ಅಧಿಕಾರಶಾಹಿಯ ಮೊಂಡುತನವನ್ನು ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಲು ಸ್ವತಃ ಪ್ರಯಾಣಿಸಿ ಪ್ರಯತ್ನಿಸುವ ರಾಜಕಾರಣಿಗಳು ವಿರಳ. ಕೇವಲ ಇವರ ವರ್ಚಸ್ಸಿನ್ನಿದಲೇ ಆಂಧ್ರ ರಾಜ್ಯವನ್ನು ಕಾಂಗ್ರೆಸ್ ತೆಕ್ಕೆಗೆ ಬೀಳಿಸಿಕೊಂಡ ಈ ಜನನಾಯಕ ಕೇಂದ್ರದ ಕಾಂಗ್ರೆಸ್ ನಾಯಕರುಗಳ ಮದ್ಧ್ಯೆ ಕಂಗೊಳಿಸುತ್ತಿದ್ದರು. ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಬಿಲ್ ಗೇಟ್ಸ್ ಮುಂತಾದ ಸೊಫ್ಟ್ವೇರ್ ಜನರ ಹಿಂದೆ ಅಲೆದು ಕೇವಲ ಹೈದರಾಬಾದ್ ನಗರವನ್ನು ( ನಮ್ಮ S.M. Krishna ಬೆಂಗಳೂರಿಗೆ ಇದ್ದ ಹಾಗೆ ) ಉದ್ಧಾರ ಮಾಡಿ ರೈತರ ಬಡ ಬಗ್ಗರ ಕಷ್ಟದ ಕಡೆ ಕಿವುಡುತನ ಪ್ರದರ್ಶಿಸಿದರೆ YSR ಹಳ್ಳಿ ಗ್ರಾಮಗಳ ಕಡೆ ದೃಷ್ಟಿ ಹರಿಸಿ ಜನ ಮೆಚ್ಚ್ಚುಗೆ ಸಾಧಿಸಿದರು. ಹೈದರಾಬಾದ್ನ ನೀರಿನ ಕಾರಂಜಿ ಚಿಲುಮೆಗಳನ್ನು, ರೈತರು ಹನಿ ಹನಿ ನೀರಿಗಾಗಿ ಪರಿತಪಿಸುವುದನ್ನು ಹೋಲಿಸಿ ಚುನಾವಣೆ ಗೆದ್ದು ತಾನು ಜನನಾಡಿ ಬಲ್ಲ ರಾಜಕಾರಣಿ ಎಂದು ದೇಶಕ್ಕೆ ತೋರಿಸಿದರು.

ಆದರೆ ವಿಧಿಯ ಆಟವೇ ಹೀಗೆ. ಜನಸೇವೆ ಮಾಡಿ ಲಕ್ಷಗಟ್ಟಲೆ ಜನರ ಮುಖದ ಮೇಲೆ ಮಂದಹಾಸ ತರಿಸುವ ರಾಜಕಾರಣಿಗಳು ಇಂಥ ಅವಘಡದಲ್ಲಿ ಸಾವನ್ನಪ್ಪಿದರೆ ಹೊಡಿ ಬಡಿ ಕಡಿ ಎಂದು ರಕ್ತಪಾತವೇ ನಮ್ಮ ಧರ್ಮ ಎಂದು ಸಮಾಜವನ್ನು ಒಡೆದು ಆಳುವ ರಾಜಕಾರಣಿಗಳು ದೀರ್ಘಾಯುಷಿಗಳಾಗಿ ಭೂಮಿಗೆ ಭಾರವಾಗಿ ಮೆರೆಯುತ್ತಾರೆ.

ಮಣ್ಣಿನ ಮಗ ರಾಜಶೇಖರ ರೆಡ್ಡಿಯವರಿಗೆ ಅಂತಿಮ ವಿದಾಯ ಹೇಳುತ್ತಾ…