ಲಿಬ್ಯಾದ ಅಧ್ಯಕ್ಷ ಮುಅಮ್ಮರ್ ಗದ್ದಾಫಿ ವಿರುದ್ಧ ಜನಾಂದೋಲನ ದಿನಗಳೆದಂತೆ ವಿಕೋಪಕ್ಕೆ ಹೋಗುತ್ತಿದೆ. ಜನ ಸಾಯುತ್ತಿದ್ದಾರೆ, ಗದ್ದಾಫಿ ತನ್ನ ಹಿಂದಿನ ಪೊಗರು ಬಿಡದೆ ಲಿಬಿಯನ್ನರನ್ನು ಇಲಿ, ಜಿರಲೆಗಳಿಗೆ ಹೋಲಿಸಿ ಅವರನ್ನು (ಅವುಗಳನ್ನ) ನಿರ್ನಾಮ ಮಾಡುತ್ತೇನೆ, ಇಡೀ ದೇಶವನ್ನೇ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ನೀಡುತ್ತಿದ್ದಾನೆ. ಈ ಬೆದರಿಕೆ ನೀಡುವಾಗ ತಾನೂ ಅದೇ ದೇಶದಲ್ಲೇ ಹುಟ್ಟಿದವ ಎನ್ನುವ ಸಾಮಾನ್ಯ ಪ್ರಜ್ಞೆಯೂ ಅವನಿಂದ ವಿದಾಯ ಪಡೆದು ಕೊಂಡಿದೆ.
೧೯೬೯ ರ ಕ್ರಾಂತಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಕೇವಲ ೨೭ ರ ಪ್ರಾಯದ ಸೇನಾ ಕ್ಯಾಪ್ಟನ್ ಗದ್ದಾಫಿಗೂ, ಇಂದಿನ ಗದ್ದಾಫಿಗೂ ಅಜಗಜಾಂತರ ವ್ಯತ್ಯಾಸ. ಸರ್ವಾಧಿಕಾರಿಗಳೇ ಹೀಗೆ ಏನೋ? ತಾವು ಹಿಡಿದ ಅಧಿಕಾರ ಸ್ವಲ್ಪ ಹೆಚ್ಚು ಕಾಲ ನಿಂತರೂ ಮದ್ಯದ ಬಟ್ಟಲನ್ನು ಬಿಡದ ಮದ್ಯ ವ್ಯಸನಿಯಂತೆ ಆಡಲು ತೊಡಗುತ್ತಾರೆ. ಅಧಿಕಾರದ ಅಮಲಿಗೂ, ಮಧ್ಯದ ಅಮಲಿಗೂ ದೊಡ್ಡ ವ್ಯತ್ಯಾಸವೇನೂ ಕಾಣದು. ೧೯೭೭ ರ ತುರ್ತು ಪರಿಸ್ಥಿತಿ ವೇಳೆಯ ಇಂದಿರಾ ಗಾಂಧೀ ಮತ್ತು ಆಕೆಯ ಮಗ ಸಂಜಯ್ ಗಾಂಧೀಯವರುಗಳ ಸರ್ವಾಧಿಕಾರ ಮಾತ್ರ ನಮಗೆ ಗೊತ್ತು. ಚರಿತ್ರೆಯ ಆ ಒಂದು ಕಹಿ ಪಾಠ ಒಂದು ನೆನಪು ಮಾತ್ರ.
ಸರ್ವಾಧಿಕಾರಿಗಳ ಕೈಗೆ ಸರ್ವ ಅಧಿಕಾರಗಳೂ ಪ್ರಾಪ್ತವಾದಾಗ ಇಂದ್ರಿಯಗಳು ಕಾಲಿಗೆ ಬುದ್ಧಿ ಹೇಳುತ್ತವೆ. ವಿಶೇಷವಾಗಿ ಕಿವುಡುತನ ಆವರಿಸಿ ಕೊಳ್ಳುತ್ತದೆ. ಜನರ ನಾಡಿಮಿತ ಕೇಳುವುದಿಲ್ಲ. ತುನೀಸಿಯಾದ, ಈಜಿಪ್ಟ್ನ ಅಧ್ಯಕ್ಷರುಗಳಿಗೆ ಆಗಿದ್ದು ಇದೇ. ದೀರ್ಘಕಾಲ ಆಡಳಿತ ನಡೆಸುತ್ತಾ ತಮಗೆ ಬೇಕಾದ ಹೊಗಳು ಭಟ್ಟರನ್ನು ತಮ್ಮ ಸುತ್ತಾ ಹೆಣೆದು ಕೊಂಡು ರಾಜ್ಯದ ಜನರನ್ನು ಮರೆತರು. ಒಂದು ಸುದಿನ ಜನರ ಬಂಡಾಯಕ್ಕೆ ಬೆಲೆ ತೆತ್ತರು.
ಸರ್ವಾಧಿಕಾರಿಗಳು delusional ಆಗಿ ಬಿಡುತ್ತಾರಂತೆ ಸುದೀರ್ಘ ಕುರ್ಚಿ ವಾಸದ ಕಾರಣ. ಈ delusion ಬಗ್ಗೆ ಒಂದು ಸುಂದರ ಕಾರ್ಟೂನ್ ಕಾಣಲು ಸಿಕ್ಕಿತು ವೆಬ್ ತಾಣವೊಂದರಲ್ಲಿ. ಈ ಕಾರ್ಟೂನ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆ ನಾನು. ನಿಮಗೂ ಆ ಅನುಭವ ಆಗಲೇ ಬೇಕಿಂದಿಲ್ಲ ಆದರೆ ತುಟಿಯಂಚಿನಲ್ಲಿ ಮುಗುಳ್ನಗು ವನ್ನಾದರೂ elicit ಮಾಡಿಯೇ ತೀರುತ್ತದೆ ಈ ವ್ಯಂಗ್ಯ ಚಿತ್ರ. ಆಸ್ವಾದಿಸಿ.
