ಪ್ರಾಚೀನ
ಯಾರು ಕದ್ದರು ನನ್ನ ಮತವ?
ಯಾರು ಕದ್ದರು ನನ್ನ ಮತವ? where is my vote, dude? ಇದು ತೆಹೆರಾನಿನ ಮತ್ತು ಇರಾನಿನ ಬೀದಿಗಳಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ. ಈ ಪ್ರಶ್ನೆಗಳಿಗೆ ಉತ್ತರ ಇರಾನಿನ ಧರ್ಮ ಗುರುಗಳ ಮುಂಡಾಸಿನಲ್ಲಿ ಬೆಚ್ಚಗೆ ಅಡಗಿ ಕೂತಿದೆ. ಈಗಿನ ಅಧ್ಯಕ್ಷ ಅಹ್ಮದಿ ನಿಜಾದ್ ಚುನಾವಣೆ ಗೆದ್ದೆ ಎಂದರೆ ಪ್ರತಿಪಕ್ಷದ ಮೂಸಾವಿ ಇಲ್ಲ, ಮೋಸ ನಡೆದಿದೆ ಮರು ಎಣಿಕೆ ಆಗಲಿ ಎಂದು ಗರ್ಜಿಸಿದರು. ಅವರ ಗರ್ಜನೆ ಇರಾನಿನ ಆಡಳಿತಗಾರನ್ನು ಹೊರತು ಪಡಿಸಿ ವಿಶ್ವವೆಲ್ಲ ಕೇಳಿತು. ಊಹೂಂ, ನೋ ಚೇಂಜ್ ಇನ್ ಸ್ಟೇಟಸ್. ಯಾವಗಲೂ ತನ್ನ ಮೂಗನ್ನು ತನ್ನ ದೇಶದ ಗಡಿ ಹೊರಗೆ ತೂರಿಸಿ ಕೂರುವ ಅಮೇರಿಕ ಸಹ ಅಂಥ ದೊಡ್ಡ ಹೇಳಿಕೆಯನ್ನೇನೂ ಕೊಡಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮರು ಎಣಿಕೆ ಆಗಲಿ ಎಂದವು. ಗಲಾಟೆ ಜಾಸ್ತಿ ಆಯಿತು. ಕೆಲವರು ಪ್ರಾಣವನ್ನೂ ಕಳೆದುಕೊಂಡರು. ತೆರೆಮರೆಯಲ್ಲಿ ಒಂದಿಷ್ಟು ಮಠಗಳನ್ನು ಎಣಿಸಿದಂತೆ ಮಾಡಿದ ಆಡಳಿತಗಾರರು ಎಲ್ಲ ಫೈನ್, ಇದೆಲ್ಲ ನಮ್ಮ ಶತ್ರುಗಳ ಕೆಲಸ, ಹೆಚ್ಚು ಕಿತಾಪತಿಗಿಳಿಯದೆ ತೆಪ್ಪಗೆ ಇರಿ ಎಂದು ತನ್ನ ಜನರಿಗೆ ಬೋಧಿಸಿದರು.
ಇರಾನ್ ನಮ್ಮ ದೇಶದಂತೆ ಪ್ರಾಚೀನ ರಾಷ್ಟ್ರ. ಜನ ಬಹಳ ಬುಧ್ಧಿವಂತರು. ಸರ್ವಾಧಿಕಾರಿ, ಐಶಾರಾಮಿ ರಾಜ ಷಾ ಪಹಲವಿಯನ್ನು ಇಸ್ಲಾಮೀ ಕ್ರಾಂತಿ ಮೂಲಕ ಕಿತ್ತೊಗೆದು ಧರ್ಮ ಗುರುಗಳ ಸರಕಾರ ಕೂರಿಸಿದವರು. ಏನೋ ಒಳ್ಳೆ ಕೆಲಸ ಮಾಡಬಹುದು ಎಂದು. ಆದರೆ ಅಮೇರಿಕೆಗೆ ಸದ್ದು ಹೊಡೆಯುವುದೇ ತಮ್ಮ ನೀತಿ ಎಂದು ಭಾವಿಸಿ ಹಲವು ಬಾರಿ ಜಗಳಕ್ಕೆ ನಿಂತರು. ಈಗಿನ ಪ್ರದರ್ಶನ, ಪ್ರತಿಭಟನೆಗಳಲ್ಲಿ ಅಮೆರಿಕೆಯ ಕೈವಾಡ ಅಲ್ಲಗಳೆಯುವಂತಿಲ್ಲ. ಏಕೆಂದರೆ ಅಮೆರಿಕೆಯ ಆಟಗಳನ್ನು ನೋಡಿಲ್ಲವೇ ನಾವು, ಸಾಕಷ್ಟು?










