ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ…

ಮೂಢ ನಂಬಿಕೆಗಳು ಪ್ರತೀ ಸಮಾಜದಲ್ಲೂ ಬೇರೂರಿವೆ. ಅದು ಪಾಶ್ಚಾತ್ಯವಿರಬಹುದು, ಅಥವಾ ದೇಸೀ ಇರಬಹದು. ಈ ನಂಬಿಕೆಗಳು ತಮ್ಮದೇ ಆದ ವೈವಿಧ್ಯ, ವೈಶಿಷ್ಟ್ಯವನ್ನ ಹೊಂದಿರುತ್ತವೆ. ಕಳೆದ ಜೂನ್ ತಿಂಗಳಿನಲ್ಲಿ ಭಾರತದಲ್ಲಿದ್ದಾಗ ನಮ್ಮ ಹಿತ್ತಲಿನ ಮರವೊಂದು ಇದೇ ನಂಬಿಕೆಯೊಂದಿಗೆ ತನ್ನ ಪಾಡಿಗೆ ತಾನು ಬೆಳೆಯುತ್ತಿತ್ತು. ನಮ್ಮ ಮನೆಯ ಹಿತ್ತಲಿನಲ್ಲಿ ಸುಮಾರು ೫,೦೦೦ ಚದರ ಅಡಿ ಖಾಲಿ ಸ್ಥಳವಿದೆ. ಅದರಲ್ಲಿ ಅಪ್ಪ ತೆಂಗು, ಮಾವು, ಗೋಡಂಬಿ, ಚಿಕ್ಕು, ಪೇರಳೆ, ಕಿತ್ತಳೆ, ಬಾಳೆ, ನೆಲ್ಲಿಕಾಯಿ, ಹಲಸು, ತೇಗ, ಮುಂತಾದ ಮರಗಳನ್ನ ನೆಟ್ಟಿದ್ದಾರೆ. ಒಂದು ಪುಟ್ಟ ಕಾಡು. ಈ ಸ್ಥಳ ನನ್ನ ನೆಚ್ಚಿನ ಅಡಗು ತಾಣ. ಉಯ್ಯಾಲೆಯಲ್ಲಿ ಕೂತು ಚಹಾ ಸೇವಿಸುತ್ತಾ, ಅಪ್ಪ ಅಮ್ಮ ಮರಗಳ ಪೋಷಣೆ ಮಾಡುವುದನ್ನು ನೋಡುತ್ತಾ   ಪತ್ರಿಕೆ ಓದುವುದು ವಾಡಿಕೆ. ಒಂದು ದಿನ ಹೀಗೇ ಕಣ್ಣಾಡಿಸುತ್ತಾ ಇದ್ದಾಗ ನಾನು ಗಮನಿಸದೆ ಇದ್ದ ಮರ ಕಣ್ಣಿಗೆ ಬಿತ್ತು. ಅಲ್ಲೇ ಇದ್ದ ಅಮ್ಮನನ್ನು ಇದೆಂಥ ಮರ ಎಂದು ಕೇಳಿದಾಗ ಅಮ್ಮ ಅದನ್ನು ‘ದೀಗುಜ್ಜೆ’ ಎಂದು ಕರೆಯುತ್ತಾರೆ ಎಂದರು. “ದ್ವೀಪದ ಹಲಸು” ಎಂದೂ ಹೇಳುತ್ತಾರಂತೆ. ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆರೆದು ಆಂಗ್ಲ ಭಾಷೆಯಲ್ಲಿ ಇದಕ್ಕೆ ಏನನ್ನುತ್ತಾರೆ ಎಂದು  ಗೂಗ್ಲಿಸಿದಾಗ ಸಿಕ್ಕಿತು ಉತ್ತರ, ‘bread fruit’. ಈ ‘ಬ್ರೆಡ್ ಫ್ರೂಟ್’ ಪದ ಸಹ ನನ್ನ ಕುತೂಹಲ ಕೆರಳಿಸಿತು, ಅದರ ಬಗ್ಗೆ ನಂತರ ರಿಸರ್ಚ್ ಮಾಡೋಣ ಎಂದು ಯಾವಾಗ ಈ ದೀಗುಜ್ಜೆ ಯನ್ನು ನೆಟ್ಟಿದ್ದು ಎಂದು ಅಮ್ಮನನ್ನು ಕೇಳಿದಾಗ ನಾಲ್ಕೈದು ವರ್ಷ ಆಯಿತು, ಕಳೆದ ಸಲ ಬಂದಾಗಲೂ ನೀನು ಕೇಳಿದ್ದೆ ಎಂದು ನನ್ನ ಮರೆವಿಗೆ ನಯವಾಗಿ ಗದರಿದರು. ಮುಂದುವರೆದು, ಈ ಮರ ನೆಟ್ಟವರು ಬೇಗನೆ ಸಾಯುತ್ತಾರಂತೆ, ಹಾಗಂತ ಜನ ಹೇಳುತ್ತಾರೆ ಎಂದು ಅಮ್ಮ ಹೇಳಿದಾಗ ಹೌಹಾರಿದ ನಾನು ಅಪ್ಪನೋ, ಅಮ್ಮನೋ ನೆಟ್ಟಿರಲಿಕ್ಕಿಲ್ಲವಲ್ಲ ಎಂದು   ಕೂಡಲೇ ಕೇಳಿದೆ ಸರಿ, ಈ ಮರವನ್ನ ನೆಟ್ಟವರಾರು ಎನ್ನುವ  ನನ್ನ ಪ್ರಶ್ನೆಗೆ ನಮ್ಮಲ್ಲಿಗೆ ಕೆಲಸಕ್ಕೆ ಬರುವ ರಮೇಶ್ ನೆಟ್ಟಿದ್ದು ಎಂದು ಉತ್ತರ ಬಂತು. ಮರ ನೆಟ್ಟು ನಾಲ್ಕೈದು ವರ್ಷ ಆಯಿತು, ಮರ ಚೆನ್ನಾಗಿ ಬೆಳೆಯುತ್ತಿದೆ, ನಾಲ್ಕಾರು ದೀಗುಜ್ಜೆ ಕಾಯಿಗಳನ್ನೂ ಬಿಟ್ಟಿದೆ. ರಮೇಶನೂ ಯಾವುದೇ ತೊಂದರೆಯಿಲ್ಲದೆ ತನ್ನ ಪಾಡಿಗೆ ತಾನು ದುಡಿದು, ಕುಡಿದು ಬದುಕುತ್ತಿದ್ದಾನೆ, ಸಾಕಷ್ಟು ಗಟ್ಟಿಮುಟ್ಟಾಗಿಯೂ ಇದ್ದಾನೆ, ಚೇಷ್ಟೆಗೋ, ಬೇರಾವುದೋ ಕಾರಣಕ್ಕೋ ಹೇಳಿರಬಹುದಾದ ಮಾತಿಗೆ ವಿನಾಕಾರಣ ಗಾಭರಿ ಪಟ್ಟೆನಲ್ಲಾ ಎಂದು ಮನದಲ್ಲೇ ಬೈದುಕೊಂಡೆ.

ಕಳೆದ ವರ್ಷ ಅಮೆರಿಕೆಗೆ ಹೋಗುವ ಅವಕಾಶ ಸಿಕ್ಕಿತು. ಪ್ರತೀ ವರ್ಷ ಮಾರಾಟ ಇಲಾಖೆಯಿಂದ ಸಮ್ಮೇಳನಕ್ಕೆ ಎಂದು ಕಂಪೆನಿಯಿಂದ  ಇಬ್ಬರು ಹೋಗುತ್ತಿದ್ದರು. ಈ ಸಲ ಲೆಕ್ಕಪತ್ರ ಇಲಾಖೆಯಿಂದ ಒಬ್ಬರನ್ನು ಕಳಿಸೋಣ ಎಂದು ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದರು. ಅಮೆರಿಕೆಗೆ ಹೋಗುವ ಮುನ್ನ ವಿಸಾ ಸಿಗುವ, ಸಾಹಸಿಕ ಆದರೂ ಸ್ವಾರಸ್ಯಕರ ಪ್ರಕ್ರಿಯೆ ಬಗ್ಗೆ, ಮತ್ತು ಪ್ರವಾಸದ ಬಗ್ಗೆ ಸಂಪದಕ್ಕೆ ಬರೆಯಲು ಆಗಲೇ ಇಲ್ಲ. ಸಮ್ಮೇಳನ ಇದ್ದಿದ್ದು ಅಮೆರಿಕೆಯ ‘ನಾರ್ತ್ ವೆಸ್ಟ್’ ಪ್ರಾಂತ್ಯದ ” ಓರಿಗನ್ ” ರಾಜ್ಯದಲ್ಲಿ. “ರೆಡ್ಮಂಡ್” ಒಂದು ಚಿಕ್ಕ ಪಟ್ಟಣ, ಅಲ್ಲಿಂದ ಅರ್ಧ ಘಂಟೆ ಪ್ರಯಾಣ ಮಾಡಿದರೆ “ಸನ್ ರಿವರ್ ರೆಸಾರ್ಟ್”. ೭,೦೦೦ ಎಕರೆ (ಹೌದು, ಏಳು ಸಾವಿರ ಎಕರೆ) ವಿಸ್ತೀರ್ಣದ ಈ ರೆಸಾರ್ಟ್ ನಲ್ಲಿ ನದಿಯೂ ಹರಿಯುತ್ತದೆ. ಒಂದು ದಿನ, ಸಮ್ಮೇಳನ ಮುಗಿದ ನಂತರ ಹೀಗೇ ಅಡ್ಡಾಡುತ್ತಾ ಇದ್ದಾಗ ಅಮೇರಿಕನ್ ಮಹಿಳೆಯೊಬ್ಬಳು ತನ್ನ ಕೈ ಮೇಲೆ ಒಂದ ದೊಡ್ಡ ಗಾತ್ರದ ಪಕ್ಷಿ ಕೂರಿಸಿ ಕೊಂಡು ಹೋಗುತ್ತಿದ್ದದ್ದು ನೋಡಿ ಮಾತನಾಡಿಸಿದೆ. ನೋಡಿದರೆ ಆ ಪಕ್ಷಿ ಬೇರೇನೂ ಅಲ್ಲ,  ಗೂಬೆ. ಅದರ ಕಾಲಿಗೆ ಬ್ಯಾಂಡೇಜ್ ಸಹ ಕಟ್ಟಿತ್ತು. ವಿಚಾರಿಸಿದಾಗ ಆಕೆ ಹೇಳಿದ್ದು, ನನ್ನ ಮನೆಯ ಹಿತ್ತಿಲಿನಲ್ಲಿ ಈ ಗೂಬೆ ಕಾಲಿಗೆ ಏಟು ಮಾಡಿಕೊಂಡು ಬಿದ್ದಿತ್ತು, ಅದನ್ನು ತಂದು ಶುಶ್ರೂಷೆ ಮಾಡಿ ಬ್ಯಾಂಡೇಜ್ ಕಟ್ಟಿದ್ದೇನೆ, ಆರಾಮವಾದ ಕೂಡಲೇ ಅದನ್ನು ಕಾಡಿಗೆ ಬಿಡುತ್ತೇನೆ ಎಂದು ಗೂಬೆಯನ್ನು ಅಕ್ಕರೆಯಿಂದ ನೋಡುತ್ತಾ ಹೇಳಿದಾಗ ನನಗೆ ಆಶ್ಚರ್ಯ. ನನಗೆ ತಿಳಿದಂತೆ ಯಾರದಾದರೂ ಮನೆಯ ಮೇಲೆ ಗೂಬೆ ಕೂತರೆ ಆ ಮನೆಯಲ್ಲಿ ಸಾವು ಸಂಭವಿಸುತ್ತದೆ, ಇಲ್ಲಿ ಇದಕ್ಕೆ ಅಮೇರಿಕನ್ ಮಹಿಳೆಯಿಂದ  ವರೋಪಚಾರ ಎಂದು ಮನದಲ್ಲೇ ನಗುತ್ತಾ ಇದರ ಹೆಸರೇನು ಎಂದು ಕೇಳಿದೆ. it is ‘great horned owl’ ಎಂದು ಹೇಳುತ್ತಾ ಅದರ ತಲೆಯ ಮೇಲೆ ಇದ್ದ ಎರಡು ಪುಟ್ಟ ಜುಟ್ಟನ್ನು ತೋರಿಸಿದಳು.  ಅಲ್ಲಲ್ಲ, ಅದಕ್ಕೆ ನೀನೇನೆಂದು ಕರೆಯುತ್ತೀಯಾ ಎಂದಾಗ ಆಕೆ ಹೇಳಿದ್ದು. “ನಾವು ಕಾಡಿನ ಪ್ರಾಣಿಗಳಿಗೆ ಹೆಸರಿಡುವುದಿಲ್ಲ, ಏಕೆಂದರೆ ಹೆಸರಿಟ್ಟ ಕೂಡಲೇ ಅದು ಸಾಕು ಪ್ರಾಣಿ (pet animal) ಯಾಗಿ ಬಿಡುತ್ತೆ” ಎಂದು ಹೇಳುತ್ತಾ, “ನನಗೆ ಈ ಗೂಬೆಯನ್ನ ಸಾಕು ಪ್ರಾಣಿಯನ್ನಾಗಿ ಇಟ್ಟು ಕೊಳ್ಳುವ ಇರಾದೆ ಇಲ್ಲ, he will be fine in the woods” ಎಂದು ಹೇಳಿ ತನ್ನ ದಾರಿ ಹಿಡಿದಳು. ಈ ಗೂಬೆ  ಅನುಭವ ಅಮೆರಿಕೆಯ ಬದುಕಿನ ತುಣುಕೊಂದನ್ನು ಸ್ಮೃತಿ ಪಟಲಕ್ಕೆ ಸಿಕ್ಕಿಸಿ ಕೊಳ್ಳುವ ಅವಕಾಶ ನನಗೆ ಕಲ್ಪಿಸಿತು.

ಆಂಗ್ಲ ಸಾಹಿತ್ಯದಲ್ಲಿ ನನಗೆ ಆಸಕ್ತಿ ಹುಟ್ಟಿಸಿದ್ದು ನನ್ನ ಮೂರು ಜನ ಸ್ನೇಹಿತರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅವರು ಕಲಿಯುತ್ತಿದ್ದರು. Somerset Maugham, Daphne Du Maurier, Thomas Hardy, jane Austen ಮತ್ತು D.H. Lawrence ಮುಂತಾದವರು ನನಗೆ ಇಷ್ಟ. ‘ಥಾಮಸ್ ಹಾರ್ಡಿ’ ನಿಸರ್ಗವನ್ನು ಚೆನ್ನಾಗಿ ವರ್ಣಿಸಿ ಬರೆದರೆ ಡೀ.ಎಚ್. ಲಾರೆನ್ಸ್ ತನ್ನ Lady Chatterley’s Lover ಪುಸ್ತಕದಲ್ಲಿ  ಲೈಂಗಿಕತೆಯನ್ನು ಚೆನ್ನಾಗಿ ವರ್ಣಿಸಿ ಬರೆದು ಅಂದಿನ ಮಡಿವಂತ ಸಮಾಜದಿಂದ ತಿರಸ್ಕಾರಕ್ಕೆ ಒಳಗಾದ ಲೇಖಕ. ಮೇಲಂತಸ್ತಿನ ವಿವಾಹಿತ ಮಹಿಳೆ ಮತ್ತು ಕೆಳ ಅಂತಸ್ತಿನ ಸೇವಕನೊಂದಿಗಿನ  ಚಕ್ಕಂದ ಈ ಪುಸ್ತಕದ ಕಥಾ ವಸ್ತು. ಈ ತೆರನಾದ ಚಕ್ಕಂದ ಈಗಿನ ಕಾಲದಲ್ಲಿ ನಮಗೂ, ಪಾಶ್ಚಾತ್ಯರಿಗೂ ಹೊಸತಲ್ಲದಿದ್ದರೂ, ೨೦ ನೇ ಶತಮಾನದ ಆದಿ ಭಾಗದಲ್ಲಿ ಇದು ಅಪರೂಪ.  taboo. ಬಿಸಿಯೇರಿಸುವ  ಸನ್ನಿವೇಶವೊಂದರಲ್ಲಿ ಕಥಾ ನಾಯಕಿ ಮತ್ತು ನಾಯಕ ತಲೆ ಒರೆಸಿ ಕೊಳ್ಳಲು ಟವೆಲ್ ಇಲ್ಲದಿದ್ದರಿಂದ ಬೆಡ್ ಶೀಟ್ ಉಪಯೋಗಿಸುತ್ತಾರೆ. ಒಂದೇ ಟವೆಲ್ ನಲ್ಲಿ ಇಬ್ಬರೂ ಒರೆಸಿಕೊಂಡರೆ ಜಗಳ ಆಗು ತ್ತಂತೆ ಎಂದು ಆಕೆ ಹೇಳಿದಾಗ ನಾಯಕ ಹೇಳುತ್ತಾನೆ, ಇರಬಹುದು, ಗೊತ್ತಿಲ್ಲ, ಆದರೆ ಇದು ಟವೆಲ್ ಅಲ್ಲವಲ್ಲಾ, ಬೆಡ್ ಶೀಟ್ ತಾನೇ ಎಂದು ಸಮಾಧಾನ ಮಾಡುತ್ತಾನೆ. ನಾವು ಕೇಳಿದ್ದೇವೆಯೇ ಈ ವಿಷಯವನ್ನು? ಒಂದೇ ಟವೆಲ್ ನಲ್ಲಿ ಇಬ್ಬರು ಒರೆಸಿಕೊಂಡಾಗ ಆಗಬಹುದಾದ ಜಗಳದ ಬಗ್ಗೆ?

 

“ಪಂಚ ಕನ್ಯೆ” ಯರ ವಿದಾಯ

“ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ.  ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ…. ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ……ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ, ಇದು ಆ ಗತಕಾಲದ ನಮ್ಮೆಲ್ಲರ ಮನ ರಂಜಿಸಿದ ಕನ್ನೆಯರ ಕಥೆಯಲ್ಲ, ನಮ್ಮ ದೇಶದ ಉತ್ತರದ ಗಡಿಯಾಚೆಗಿನ ನೇಪಾಳದ ಕನ್ನೆಯರ ವ್ಯಥೆಯ ಕಥೆಯಿದು.

ನೇಪಾಳದ ರಾಷ್ಟ್ರ ನಾಯಕ ಹೊರದೇಶದ ಪ್ರವಾಸ ಹೊರಟಾಗ ಅವರನ್ನು ಬೀಳ್ಕೊಡಲು ಐದು ಕನ್ಯೆಯರನ್ನು ಸಿದ್ಧ ಪಡಿಸಲಾಗುತ್ತಿತ್ತಂತೆ. ದುರ್ಗ, ಸರಸ್ವತಿ, ಲಕ್ಷ್ಮಿ, ರಾಧ, ಅನ್ನಪೂರ್ಣ ಎನ್ನುವ ಯಶಸ್ಸನ್ನು ತರುವ ಈ ದೇವತೆಗಳನ್ನು ಪ್ರತಿನಿಧಿಸುವ ಪಂಚ ಕನ್ಯೆಯರು ಪ್ರವಾಸ ಹೋಗುವ ನಾಯಕನಿಗೆ ಶುಭವಾಗಲು ಮತ್ತು ಸಂಪತ್ತು ಸಿಗಲೆಂದು ಹಾರೈಸಿ ಈ ವ್ಯವಸ್ಥೆ ಮಾಡುತ್ತಿದ್ದರಂತೆ. ಶಾಲೆಗೆ ಹೋಗುವ ಈ ಹೆಣ್ಣು ಮಕ್ಕಳು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಿಂತು ಅವರಿಗೆ ಶುಭ ಕೋರುವುದನ್ನು ಕಂಡು ಮರುಗಿದ ಅಧ್ಯಕ್ಷರು ಈ ಪರಂಪರೆಗೆ ಮಂಗಳ ಹಾಡಲು ತೀರ್ಮಾನಿಸಿದರಂತೆ.

ಶತಮಾನಗಳಿಂದ ನಡೆದು ಕೊಂಡು ಬರುತ್ತಿದ್ದ ಈ five virgin farewell ಸಮಾರೋಹದ ಪರಂಪರೆಗೆ ನೇಪಾಳದ ಅಧ್ಯಕ್ಷರು ಕೊನೆಗೂ good bye, good riddance ಹೇಳಿ ಸುಡು ಬಿಸಿಲಿನ ಬೇಗೆಯಿಂದ ಕನ್ನೆಯರ ಬಿಡುಗಡೆಗೆ ನಾಂದಿ ಹಾಡಿದರು.

ಕಣ್ಣು ಹೋಗಿ, ಬಂತು ಕಾರಂಜಿ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ “ಅಲ್-ಬಾಹ” ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು.

ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.

ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ  engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ.

ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ  “ಥೀ ಐನ್” ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು “ಧೀ ಐನ್”. ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, “ಹರಪ್ಪಾ”, “ಮೊಹೆಂಜೋದಾರೋ” ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.

ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ “ಥೀ ಐನ್”. ಇದರ ಅರ್ಥ “ಝರಿ ಇರುವ ಹಳ್ಳಿ” ಎಂದು. ಮತ್ತೊಂದು ಅರ್ಥ “ಒಕ್ಕಣ್ಣಿನ ಮನುಷ್ಯ” ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು  ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.

ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ “ಕಲೆ”ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.