ಒಂದು ಬಾಷ್ಪಾಂಜಲಿ, ಶಾಂತಿ ದೂತನಿಗೆ

ಬ್ರಿಟನ್ ಮೂಲದ ಶಾಂತಿ ದೂತ ಬ್ರಯಾನ್ ಹಾವ್ ಇನ್ನಿಲ್ಲ. ಎರಡು ವರ್ಷಗಳ ಹಿಂದೆ ಬ್ರಯನ್ ಹಾವ್ ನನ್ನು ‘ಬ್ರಿಟಿಷ್ ಏಕಲವ್ಯ’ ಎನ್ನುವ ಶೀರ್ಷಿಕೆಯಡಿ ಒಂದು ಲೇಖನ ಬರೆದು ನನ್ನ ‘ಹಳೇ ಸೆತುವೆ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆ. ದುರ್ದೈವ, ಈಗ ಅವನಿಗೆ ಶ್ರದ್ಧಾಂಜಲಿ ಹೇಳುವ ಸಮಯ.

ಬ್ರಿಟಿಷ್ ಸಂಸತ್ ಭವನದ ಎದುರು ಚಳಿ ಮಳೆಗೆ ಮೈಯ್ಯೊಡ್ಡಿ ಡೇರೆ ಯೊಳಗೆ ಬದುಕುತ್ತಾ ಆಫ್ಘನ್ ಗುಡ್ಡ ಗಾಡಿನ ಲ್ಲಿ ಮತ್ತು ಇರಾಕ್ ನಲ್ಲಿ ನಡೆದ ಮಾರಣ ಹೋಮ ದ ಬಗ್ಗೆ ವಿಶ್ವದ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದ ಧ್ವನಿ ನಿಸ್ತೇಜ ಈತನ ಸಾವಿನೊಂದಿಗೆ. ರಾಜಕಾರಣಿಗಳ ಬೆದರಿಕೆಗೆ, ಪೊಲೀಸರ ದಬ್ಬಾಳಿಕೆಗೆ ಸಡ್ಡು ಹೊಡೆದು ನಿಂತಿದ್ದ ಹಾವ್ ಕೊನೆಗೆ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಶರಣಾದ ಈ ತಿಂಗಳ ೧೮ ರಂದು. ಈತನ ಸಾವಿನೊಂದಿಗೆ ಬುಶ್ ಮತ್ತು ಬ್ಲೇರ್ ರಂಥ ಯುದ್ಧ ಕೋರರಿಗೆ ಒಸಾಮಾ ಸಾವಿನಿಂದಿಂದ ಸಿಕ್ಕ ‘closure’ ಭಾವ ಅಥವಾ ನಿರಾಳ ಭಾವ ಸಿಕ್ಕಿರಬಹುದು. ಲಂಚ ಸಮಾಜದ ಅವಿಭಾಜ್ಯ ಅಂಗ ಮಾತ್ರವಲ್ಲ ಅದೊಂದು ಮಾಮೂಲು ಧಂಧೆ ಎನ್ನುವ ಮಟ್ಟಕ್ಕೆ ಬಂದಾಗ ಅದರ ವಿರುದ್ಧ ಸೊಲ್ಲೆತ್ತಿದ ಸಿರಿವಂತ ಸಾಧು ರಾಮ್ ದೇವ್ ಮತ್ತು ಸಮಾಜ ಸೇವಕ ಅಣ್ಣಾ ಹಜಾರೆ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದಂತೆಯೇ ಈತನೂ ಸಹ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬ್ರಯನ್ ಕೆಚ್ಚೆದೆಯ ವ್ಯಕ್ತಿ. ನಾವೆಂದೂ ಮಾಡಲಾಗದ, ಕೆಲಸವನ್ನೂ ಆತ ಮಾಡಿ ತೋರಿಸಿದ. ಸರಕಾರದಿಂದ, ವ್ಯವಸ್ಥೆಯಿಂದ ಪ್ರತಿರೋಧ ಎದುರಾದಾಗ ವೇಷ ಬದಲಿಸಿಕೊಂಡು ಕಾಲಿಗೆ ಬುದ್ಧಿ ಹೇಳುವ ಯತ್ನ ಮಾಡಲಿಲ್ಲ.

ಶಾಂತಿಯ ಪರಂಪರೆ ಹುಟ್ಟು ಹಾಕಿದ ಬ್ರಯನ್ ನಮಗೆಲ್ಲರಿಗೂ ಒಂದು ಪಾಠ. ಉರಿ ಬಿಸಿಲಿನಲ್ಲಿ ಒಂದು ಘಂಟೆ ನಿಂತು ವ್ಯವಸ್ಥೆಯ ವಿರುದ್ಧ ಪ್ರತಿಭಟಿಸದ ನಾವು ಬ್ರಯನ್ ರೀತಿ ಹಗಲು ರಾತ್ರಿ ಪೂರ್ತಿ ಹತ್ತು ವರ್ಷಗಳ ಕಾಲ ಒಂದು ಕಡೆ ಡೇರೆ ಬಿಗಿದು ಕೂರಲು ಸಾಧ್ಯವೇ? ಅದರ ಮೇಲೆ ರಾಜಕಾರಣಿಗಳ ಕಟು ಟೀಕೆ. ಪೊಲೀಸರ ನಿರಂತರ ಒತ್ತಡ, ಡೇರೆ ಖಾಲಿ ಮಾಡಲು. ಒಮ್ಮೆ ಪೊಲೀಸರು ಬಂದು ಅವನು ಡೇರೆ ಹೊರಗೆ ಅಂಟಿಸಿದ್ದ ಕೈಬರಹದ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದರು. ಮರು ದಿನ ಶ್ರದ್ಧೆಯಿಂದ ಮತ್ತೆ ತಾನು ಬರೆಯಬೇಕಾದುದನ್ನು ಬರೆದು ನೇತು ಹಾಕಿದ ತಾನೇ ಬೀಡು ಬಿಟ್ಟಿದ್ದ ಠಿಕಾಣಿ ಹೊರಗೆ. ಈತನನ್ನು ಕೆಲವರು, ಧೀಮಂತ, ಶಾಂತಿ ದೂತ ಎಂದು ಕೊಂಡಾಡಿದರೆ ರಾಜಕಾರಣಿಗಳಿಗೆ ಈತ ಒಂದು nuisance. ಸಂಸತ್ ಭವನದ ಘನತೆಯನ್ನು ಗೌರವವನ್ನೂ ತನ್ನ ಭಿತ್ತಿ ಪತ್ರಗಳಿಂದ, ಬಾವುಟ, banner, placard, poster, teddy bears ಗಳಿಂದ ಹಾಳುಗೆಡವುತ್ತಿದ್ದಾನೆ ಎಂದು ದೂರು. ಈತ ಹಾಕಿದ್ದ ಡೇರೆ ಮತ್ತು ಅದರ ಸುತ್ತ ಮುತ್ತ ಅಂಟಿಸಿದ್ದ ಮುಗ್ಧ ಮಕ್ಕಳ, ಸ್ತ್ರೀಯರ ರೋದನದ ಚಿತ್ರಗಳು, ಭಿತ್ತಿ ಪತ್ರಗಳು ಸಂಸತ್ ವಲಯವನ್ನು ಕೊಳೆ ಗೇರಿಯಾಗಿ ಪರಿವರ್ತಿಸಿವೆ ಎಂದು ದೂರಿದ ರಾಜಕಾರಣಿಗೆ ಈ ವಿಷಯ ಹೊಳೆಯದೆ ಹೋಯಿತು ಸುಳ್ಳುಗಳನ್ನು ಹೆಣೆದು, ದಾಖಲೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಕಾಲು ಕೆರೆದು ಯುದ್ಧಕ್ಕೆ ಹೋಗೋದು ಕೊಳೆಗೇರಿ ಎಬ್ಬಿಸುವುದಕ್ಕಿಂತ ಗಬ್ಬು ಕೆಲಸ ಎಂದು.

ಬ್ರಯನ್ ಹೀಗೆ ಹಗಲು ರಾತ್ರಿ ಎನ್ನದೆ ತನ್ನ ಕೌಟುಂಬಿಕ ಬದುಕನ್ನು ಬಿಟ್ಟು ವಿಶ್ವದ ಯಾವ್ಯಾವುದೋ ಮೂಲೆಯಲ್ಲಿ ನೆಲೆಸುವ ಜನರ ಮೇಲೆ ಈತನಿಗಿರುವ ಮರುಕ, ಕಾಳಜಿಗೆ ಆಸಕ್ತರಾಗಿ ಈತನೊಂದಿಗೆ ಮಾತಿಗೆ ನಿಲ್ಲುವವರ ಮೇಲೂ ಕೆಲವು ಜನರು ಹರಿಹಾಯ್ದಿದ್ದಿದೆ. ಈ ಜನ ಎಂಥವರೆಂದರೆ ಸರಕಾರ ಮಾಡುವುದು ತಪ್ಪು ಎಂದು ತೋರಿದರೂ ಪ್ರತಿಭಟಿಸಲು ಅವರಲ್ಲಿ ಬೇಕಾದ ಕಸುವು ಇರುವುದಿಲ್ಲ, ಅಥವಾ ವೇಳೆ ಇರೋಲ್ಲ. ಬೇರೆಯವ ಈ ಕಾರ್ಯವನ್ನ ಕೈಗೆತ್ತಿಕೊಂಡಾಗ ಭೀತಿ ಆವರಿಸಿಕೊಳ್ಳುತ್ತದೆ. ಆಗ ಬೈಗುಳಗಳ ಸುರಿಮಳೆ. ಸರಕಾರದ ಪರ ವಕಾಲತ್ತು. ಇಂಥ ಜನರ ಅಲ್ಪತನದಿಂದ ಈತ ಇನ್ನಷ್ಟು ಎತ್ತರಕ್ಕೆ ಬೆಳೆದನೆ ಹೊರತು ಈತನ ಕೆಚ್ಚನ್ನು ಕುಗ್ಗಿಸಲಿಲ್ಲ. ಕಟು ಮಾತುಗಳು. ಲಂಡನ್ನಿಗೆ ಬರುವ ಪ್ರವಾಸಿಗರಿಗೆ ಈತನ ಡೇರೆ ಒಂದು ಪ್ರಮುಖ ಆಕರ್ಷಣೆಯಾಗಿತ್ತು.

ಹೀಗೆ ಹೊರಗಿನವರ, ಸಂಘಟನೆಗಳ ವಶೀಲಿ ಬಾಜೀ ಇಲ್ಲದೆ ತೆರನಾದ ಸವಾಲುಗಳಿಗೆ ಧೃತಿಗೆಡದೆ ಸ್ಥೈರ್ಯದಿಂದ ತಾವು ನಂಬಿದ ಮೌಲ್ಯಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಡುವ ಸಾಧಕರು ಅಲ್ಲಲ್ಲಿ ಕಾಣಲು ಸಿಗುತ್ತಾರೆ. ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಿದ ನಮ್ಮವರೇ ಆದ ವ್ಯಕ್ತಿಯೊಬ್ಬರ ಉದಾಹರಣೆ ಇದೆ. ಅವರೇ ‘ಹೊಟ್ಟೆ ಪಕ್ಷ’ ದ ರಂಗ ಸ್ವಾಮಿ.

ಅತ್ಯಧಿಕ ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಉಂಡದ್ದು ಸೋಲನ್ನೇ ಆದರೂ ಬಡವರಿಗೆ ಕಿಲೋ ಗ್ರಾಂ ಗೆ ಒಂದು ರೂಪಾಯಿ ಅಕ್ಕಿ ಕೊಡುವ ವಾಗ್ದಾನ ದ ಮೂಲಕ ಚುನಾವಣೆಗಳನ್ನು ಸೆಣಸುತ್ತಿದ್ದರು ಹೊಟ್ಟೆ ಪಕ್ಷದ ರಂಗ ಸ್ವಾಮಿ. ಚಿಕ್ಕಮಗಳೂರಿನಲ್ಲಿ ಇಂದಿರಾ ವಿರುದ್ಧವೂ ಸ್ಪರ್ದಿಸಿದ್ದ ರಂಗ ಸ್ವಾಮೀ ಬಹುಶಃ ತಾವು ಗೆಲ್ಲುವುದಿಲ್ಲ ಎನ್ನುವ ಸ್ಪಷ್ಟ ಅರಿವಿದ್ದೂ ಚುನಾವಣೆಯಲ್ಲಿ ಸ್ಪರ್ದೆಗೆ ಮುಂದಾಗುತ್ತಿದ್ದದ್ದು ಒಪ್ಪೊತ್ತಿನ ಅನ್ನಕ್ಕಾಗಿ ಬಡವರು ಪಡುವ ಬವಣೆ ಬಗ್ಗೆ ರಾಜಕಾರಣಿಗಳ ಮನ ಸೆಳೆಯುವ ಉದ್ದೇಶವೂ ಆಗಿರಬಹುದು. ಚುನಾವಣೆ ಪ್ರಚಾರಕ್ಕೆ ಇವರು ಬಂದಾಗ ಸೋಲುವುದು ಗ್ಯಾರಂಟಿಯಾದರೂ ಯಾಕಾದರೂ ಈತ ನಿಲ್ಲುತ್ತಾರೋ ಎಂದು ಜನ ಕನಿಕರ ಮತ್ತು ಅಪಹಾಸ್ಯದಿಂದ ಮಾತಾಡಿದರೆ ಇವರಿಗೆ ಅದರ ಪರಿವೆಯಿಲ್ಲ. ರಂಗ ಸ್ವಾಮೀ ನಿಧನರಾಗಿ ನಾಲ್ಕು ವರ್ಷಗಳಾ ದುವಂತೆ. ಆದರೆ ನನಗೆ ತಿಳಿದಿದ್ದು ಬ್ರಯನ್ ಹಾವ್ ತೀರಿ ಹೋದ ದಿನ.

ಒಂದು ಕಡೆ ಬುಶ್ ಮತ್ತು ಬ್ಲೇರ್ ರ ಸುಳ್ಳಿನಿಂದ ಪ್ರೇರಿತವಾದ ಸೈನ್ಯಗಳು ದಿನದ ೨೪ ಘಂಟೆಗಳ ಕಾಲ ನಿರಂತರ ಇರಾಕ್ ಆಫ್ಘಾನಿಸ್ತಾನ, ಮುಂತಾದ ದೇಶಗಳ ಮೇಲೆ ಬಾಂಬುಗಳ ಮಳೆಗರೆಯುತ್ತಿದ್ದರೆ ಈ ಕೃತ್ಯಗಳ ವಿರುದ್ಧ ಈತ ಪ್ರತಿರೋಧ ನಡೆಸಿದ ೧೦ ವರ್ಷ ಪೂರ್ತಿ. ಕ್ಯಾನ್ಸರ್ ರೋಗದ ಚಿಕಿತ್ಸೆಗೆಂದು ಜರ್ಮನಿ ದೇಶಕ್ಕೆ ಹೋದ ಬ್ರಯನ್ ಮರಳಿ ಬರದೆ ಡೇರೆ ಖಾಲಿಯಾಯಿತೆ ವಿನಃ ಅವನನ್ನು ಹೊರಹಾಕಲು ಬ್ರಿಟಿಶ್ ಸರಕಾರ ನಡೆಸಿದ ಎಲ್ಲ ಪ್ರಯತ್ನಗಳೂ (ನಮ್ಮ ದೇಶದ UPA ಸರಕಾರಕ್ಕೆ ಈತನ ಡೇರೆ ಖಾಲಿ ಮಾಡಿಸುವ ಕೆಲಸದ ಗುತ್ತಿಗೆ ನೀಡಿದ್ದರೆ ಏನಾಗುತ್ತಿತ್ತೋ ಊಹಿಸಿ) ವಿಫಲವಾದವು. ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷಿಯಿಲ್ಲದೆ ‘ಮೆಗಾ ಫೋನ್’ ಹಿಡಿದು ತನ್ನ ಕಸುಬನ್ನು ಅತೀ ಶ್ರದ್ಧೆಯಿಂದ ಮಾಡುತ್ತಿದ್ದ ಈ ‘ಬಡಗಿ’ ಗೆ ೨೦೦೭ ರಲ್ಲಿ ‘ಚಾನಲ್ ೪’ ಟೀವೀ ಸಂಸ್ಥೆ ‘ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ಅವನನ್ನು ಆಯ್ಕೆ ಮಾಡಿದಾಗ ಹಿಗ್ಗಿದ ಬ್ರಯನ್ ತನಗೆ ಟೋನಿ ಬ್ಲೇರ್ ಮತ್ತು ಡೇವಿಡ್ ಕೆಮರೂನ್ ರಿಗಿಂತ ಹೆಚ್ಚು ಮತ ನೀಡಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಹರ್ಷದಿಂದ ಅಭಿನಂದನೆ ಸಲ್ಲಿಸಿದ. ಯುದ್ಧ ಕೋರ ನಾಯಕರ ಕೃತ್ಯಗಳ ಕಾರಣ ನೋವನ್ನನುಭವಿಸುವ ಜನರಿಗಾಗಿ ಏಕಾಂಗಿಯಾಗಿ ಹೋರಾಡಿದ ಬ್ರಯನ್ ವೈಯಕ್ತಿಕ ಜೀವನದಲ್ಲಿ ನೋವನ್ನೂ, ಹಿನ್ನಡೆಯನ್ನೂ ಕಂಡ. ೨೦೦೧ ರಲ್ಲಿ ಈ ಅಪರೂಪದ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ಆರಂಬಿಸಿದ ಒಂದು ವರ್ಷದ ಒಳಗೆ ಈತನ ಪತ್ನಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ವಿಚಲಿತನಾಗದ ಬ್ರಯನ್ ಹೇಳಿದ್ದು ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ, ಅವರು ದೂರವಾಗುವಂತೆ ಮಾಡಿದ್ದೂ ದುರುಳ ನಾಯಕರೆ ಎಂದು ಹಲುಬುತ್ತಾನೆ.

ಬ್ರಯನ್ ಗೆ ಏಳು ಜನ ಮಕ್ಕಳಿದ್ದರು.

ಸೂರಿನ ಕೂಗು

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ “ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು” ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ. pent up anger ಒಳ್ಳೆಯದಲ್ಲ.  ವೈಯಕ್ತಿಕ ಜೀವನದಲ್ಲಿ ಹೀಗಾದರೆ ಪ್ರಜಾಪ್ರಭುತ್ವದಲ್ಲಿ ಈ ಕೋಪ, ನಿರಾಶೆ, ಹತಾಶೆಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳು. ನಾಯಕನ ಅಥವಾ ವಿರೋಧಿಯ ಪ್ರತಿಕೃತಿ ಸುಟ್ಟೋ, ಘೋಷಣೆ ಕೂಗಿಯೋ (ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ೧೯೭೭ ರಲ್ಲಿ ಜನತಾ ಪಕ್ಷದವರು ಹೇಳುತ್ತಿದ್ದುದು, ಈಗ ಇದು ಹಳೆ ಫ್ಯಾಶನ್), ಕಪ್ಪು ಬಾವುಟ ಮೂತಿಗೆ ಹಿಡಿದೋ, ರಸ್ತೆ ತಡೆ ನಡೆಸಿಯೋ ಪ್ರಕಟ. ಮೇಲೆ ಹೇಳಿದವು run of the mill ಅಂತಾರಲ್ಲ ಹಾಗೆ. ಕೇಳಿ, ನೋಡಿ ಸಾಕಾಗಿ ಹೋದ ನಮೂನೆಗಳು. ಎಲ್ಲಿ ಹೋದರೂ, ಯಾವ ಸಂದರ್ಭಗಳಲ್ಲೂ ಎಲ್ಲಾ ಹೆಣ್ಣು ಮಕ್ಕಳ ಮೈ ಮೇಲೂ ನಡೆದಾಡುವ “ಮಾಕ್ಸಿ” ಗಳ  ಹಾಗೆ. ಸರ್ವಾಂತರ್ಯಾಮಿ. ಇತ್ತೀಚೆಗೆ ಈ ಏಕತಾನತೆಗೆ, monotonous ಗೆ, ಬಿಡುವು ಸಿಕ್ಕಿತು. ನಮ್ಮಲ್ಲೂ ಇದೆ ಕ್ರಿಯಾಶೀಲತೆ ಎಂದು ತೋರಿಸಿದೆವು. ಪ್ರೇಮಿಗಳ ದಿನದಂದು ಈ ಆಚರಣೆ ಸಲ್ಲದು ಎಂದು ಪ್ರೇಮಿಗಳಿಗೆ ಎಚ್ಚರಿಸಿದವರ ಅಂಡುಗಳಿಗೆ ಕೆಂಪು ಕೆಂಪಾದ ಚಡ್ಡಿಗಳ ವಿತರಣೆ. ಜಯಲಲಿತಾಳ ಸೀರೆ ವಿತರಣೆ ಥರ, ಐಶ್ವರ್ಯಾ ರೈ ವಿವಾಹದ ಲಡ್ಡುಗಳ ಥರ ಅತ್ಯುತ್ಸಾಹದ ಚಡ್ಡಿ ವಿತರಣೆ. ಪ್ರತಿಭಟಿಸಲು ನಾವು ಕಂಡುಕೊಂಡ ಈ ವಿನೂತನ ವಿಧಾನ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಜನಪ್ರಿಯವಾಗಿ ಅಮೆರಿಕೆಯ ಪ್ರಸಿದ್ಧ NPR ರೇಡಿಯೋ ಸಹ ಬಿತ್ತರಿಸಿತು. ಈಗಾಗಲೇ ಚಡ್ಡಿಗಳು ಸವೆದೋ, ಹರಿದೋ ಹೋದರೂ ಈ ಪ್ರತಿಭಟನೆಯ “ರೂವಾರಿಣಿ” ಮಾತ್ರ ಅಜರಾಮರಳಾದಳು. ಕ್ರಿಯಾಶೀಲತೆಗೆ “ಚಡ್ಡಿ ಸಾಕ್ಷಿ” ಯಾದಳು.   

ಬಹಳ ಸಂಭಾವಿತರಾದ, ಸುಸಂಸ್ಕೃತರಾದ ನಾವು ಜನ ಚಡ್ಡಿ ಹಾಕಿಕೊಳ್ಳಲಿ ಎಂದು ಸರಬರಾಜು ಮಾಡಿದರೆ ಮತ್ತೊಂದೆಡೆ ಪ್ಯಾಂಟ್ ಬಿಚ್ಚಿ ಪ್ರತಿಭಟನೆ. ಆಂ, ಏನ್ರೀ ಇದು ಉದ್ಧಟತನ ಎಂದಿರಾ? ಯಾರಿಗ್ರೀ ಉದ್ಧಟತನ?  ಉದ್ಧತನ ನಮಗೆ. ನಗ್ನತೆಯೇ ನೈಜತೆ ಎಂದು ನಂಬುವ, ನಂಬಿದಂತೆ ನಡೆಯುವ ಪಾಶ್ಚಾತ್ಯರಿಗೆ ಏನ್ರೀ ಉದ್ಧಟತನ? ಮೇಲೆ ಹೇಳಿದ ಪ್ಯಾಂಟ್ ಅವರೋಹಣ ಮಾಡಿ ಪ್ರತಿಭಟನೆ ನಡೆದಿದ್ದು ಇಟಲಿಯ ರೋಮ್ ನಗರದಲ್ಲಿ. ಇಟಲಿ ಎಂದ ಕೂಡಲೇ ಕಿವಿ ನಿಮಿರುತ್ತವೆ ನಮ್ಮದು, ಎಷ್ಟಿದ್ದರೂ ನಮ್ಮ ಬೀಗರಲ್ಲವೇ ಅವರು?  ರೋಮ್ ನಗರದ ಮೇಯರ್ ಹೊಸ ತೆರಿಗೆ ಒಳಗೊಂಡಿದ್ದ ಆಯ-ವ್ಯಯ ಪತ್ರ ಮಂಡಿಸಲು ತಯಾರಿಲ್ಲ. ಚುನಾವಣೆ ಹತ್ರ ಬಂತು ಎಂದು ಆಯ-ವ್ಯಯ ಪತ್ರ ಅಡಿಗಿಟ್ಟು ಕೂತು ಬಿಟ್ಟ ಪರಮ ಪೂಜ್ಯ ಮೇಯರ್. ಇದನ್ನು ತೆಗೆಸಲು ಮಾಡಿದ ಎಲ್ಲಾ ಪ್ರಯತ್ನವೂ ವಿಫಲವಾದ ಮೇಲೆ ಈ ಅವರೋಹಣ ಕಾರ್ಯಕ್ರಮ. ಇದರ ಉದ್ಘಾಟನೆ ಯಾರು ಮಾಡಿದರೋ ಗೊತ್ತಿಲ್ಲ, ಅವರೋಹಣ ಸಾಂಗವಾಗಿ ಜರುಗಿತು. ಜನರ ಅವಸ್ಥೆ ಕಂಡು ಬಂಡೆ ಕರಗಿದರೂ ಮೇಯರ್ ನ ಹೃದಯ ಕರಗದೆ ಆಯ ವ್ಯಯ ಪತ್ರ ಬಚ್ಚಲು ಸೇರಿಕೊಂಡಿತು.

ಅಮೆರಿಕೆಯ ಆಪ್ತ ಮಿತ್ರ, ತಾನು ಪಶ್ಚಿಮ ಎಂದರೆ ಪೂರ್ವ ಎನ್ನುವ ಇರಾನ್ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ. ಹಾಲಿ ಅಧ್ಯಕ್ಷ “ಅಹ್ಮದಿ ನಿಜಾದ್” ಸೋತರೂ ಸೋಲೊಪ್ಪದೆ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಶ್ ಸಾಹೇಬರು ಪ್ರತಿಸ್ಪರ್ದಿ “ಅಲ್ ಗೋರ್” ಗೆ ಹಾಕಿದ ಟೋಪಿಯನ್ನೇ ತಮ್ಮ ಎದುರಾಳಿಗೆ ತೊಡಿಸಿ recycling ನ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಜಗಕ್ಕೆ, ವಿಶೇಷವಾಗಿ ಪಾಶ್ಚಾತ್ಯರಿಗೆ (recycling ಪಾಶ್ಚಾತ್ಯರ ಕೂಸು) ಪಾಠ ಹೇಳಿಕೊಟ್ಟರು. ಈ ವಿಷಯದಲ್ಲಿ ಅಹ್ಮದಿ ನಿಜಾದ್ ಬುಶ್ ಅಭಿಮಾನಿ. ಪ್ರಪಂಚದ ಯಾವುದೇ ದಿಕ್ಕುಗಳಲ್ಲಿ ಹರಡಿ ಹೋದರೂ ತಮ್ಮ ಗುಣ ವೈಶಿಷ್ಟ್ಯಗಳ ಜನರನ್ನು ಕಂಡುಕೊಳ್ಳುತ್ತಾರೆ ಖದೀಮರು. ವಿರೋಧ ಪಕ್ಷದ ಅಭ್ಯರ್ಥಿ ಬಿಡುತ್ತಾನೆಯೇ, ಅದೂ  ಉರಿಯುವ ಬೆಂಕಿಗೆ ಅಮೇರಿಕಾ ಗಾಳಿ ಹಾಕಲು ತಯಾರಾಗಿರುವಾಗ? ವಿದ್ಯಾರ್ಥಿಗಳು ಬೀದಿಗೆ ಬಂದರು. ನಮ್ಮ ನೆರೆಯ ಮಿತ್ರ ೧೯೮೯ ರಲ್ಲಿ “ತಿಯಾನನ್ಮೆನ್ ಚೌಕ” ದ ಬಳಿ ಸೇನೆಯ ಟ್ಯಾಂಕರು ಗಳನ್ನು ಕಳಿಸಿ ರಸ್ತೆಯನ್ನು ಕೆಂಬಣ್ಣಕ್ಕೆ (ಪ್ರದರ್ಶನಕಾರರ ರಕ್ತದಿಂದ) ತಿರುಗಿಸಿದ ಹಾಗೆ ಮಾಡಲಿಲ್ಲ ಪ್ರೊಫೆಸರ್ ಅಹ್ಮದಿ ನಿಜಾದ್. ಡ್ರಿಲ್ ಮಾಸ್ತರ್ ನಂತೆ ಒಂದಿಷ್ಟು ಲಾಠಿ, ಮತ್ತೊಂದಿಷ್ಟು ಬೆದರಿಕೆ ಹಾಕಿ ಒಳಕ್ಕೆ ಕಳಿಸಿದರು ಪ್ರದರ್ಶನಕಾರರನ್ನು. ಈಗ “ಪೆಂಟ್ ಅಪ್” ಕೋಪವನ್ನೇನು ಮಾಡೋದು? ನೆಲೆ ಕಾಣದ ಕೋಪ ಸೂರು ಹತ್ತಿತು. ಜನ ತಮ್ಮ ಮನೆಗಳ ಸೂರಿನ ಮೇಲೆ ನಿಂತು ಅರಚಿದರು ಘೋಷಣೆಗಳನ್ನು. ದಿನವೂ ನಿರ್ದಿಷ್ಟ ಸಮಯಕ್ಕೆ ಕಿರುಚುವುದು. ಪಾಪ ಇವರಿಗೆ ಗೊತ್ತಿಲ್ಲ ರಾಜಕಾರಣಿಗಳು ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲನೆಯದಾಗಿ ಕಳೆದುಕೊಳ್ಳುವುದು ಕಿವಿಗಳನ್ನು ಎಂದು. ಎರಡನೆಯದಾಗಿ ಕಳಕೊಳ್ಳೋದು ಮಾನವನ್ನು. ಟೆಹರಾನಿನಲ್ಲೂ, ಇರಾನಿನ ಇತರೆ ನಗರಗಳಲ್ಲೂ ನಡೆದ ಗದ್ದಲ ಬೇರೆಲ್ಲ ದೇಶಗಳ ನಿದ್ದೆಗೆಡಿಸಿ ಗಡದ್ದಾಗಿ ಮಲಗಿದ್ದ ಶ್ವೇತ ಭವನವನ್ನು ಎಚ್ಚರಿಸಿತು. ಎಂದಿನಂತೆ ಕಟುವಾದ ಶಬ್ದಗಳು ಉರುಳಲಿಲ್ಲ ತಡಬಡಿಸಿ ಎದ್ದ ಶ್ವೇತ ಭವನದ ಹಸಿರು ಹುಲ್ಲು ಹಾಸಿನಿಂದ. ಏಕೆಂದರೆ ಇದು ಬುಶ್ ಶ್ವೇತ ಭವನವಲ್ಲ, ಒಬಾಮ ಭವನ. ಸ್ವಲ್ಪ ನಯವಾಗಿಯೇ ಗದರಿಸಿತು ಅಮೇರಿಕಾ. ನೋಡಪ್ಪಾ ಹೀಗೆಲ್ಲ ಮಾಡಬಾರದು, ಸರಿಯಾಗಿ ಮತಗಳನ್ನೂ ಎಣಿಸು, ಎಣಿಸಲು ಬರದಿದ್ದರೆ ಬೇಕಾದರೆ ನಮ್ಮ ಜನಗಳನ್ನು ಕಳಿಸುತ್ತೇವೆ ಎಂದು. ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರೂ ಆದ ಇರಾನಿನ ಅಧ್ಯಕ್ಷರು ಅಮೆರಿಕೆಗೆ ತಮ್ಮದೇ ಭಾಷೆಯಲ್ಲಿ mind your business ಎಂದು ಹೇಳಿ ಅಮೆರಿಕೆಯ ಪ್ರತಿಭಟನೆಗೂ, ವಿದೇಶೀ ಸರಕಾರಗಳ ಮೂದಲಿಕೆಗೂ, ಮಾಧ್ಯಮಗಳ ತಿವಿತಗಳಿಗೂ ಅಸಾಧಾರಣವಾದ ಕಿವುಡುತನ ಪ್ರದರ್ಶಿಸಿದರು. ತಾವು ತಮಗರಿವಿಲ್ಲದೆಯೇ ಮಹಾತ್ಮ ಬುಶ್ ರ ಅಭಿಮಾನಿ ಎಂದು ತೋರಿಸಿಕೊಟ್ಟರು ಪ್ರಪಂಚಕ್ಕೆ.

ಥಾಯ್ಲೆಂಡಿನಲ್ಲಿ ಪದಚ್ಯುತ ಪ್ರಧಾನಿ “ಥಕ್ಸಿನ್ ಶಿನಾವತ್ರ” ರನ್ನು ಮರಳಿ ಅಧಿಕಾರಕ್ಕೆ ತರಬೇಕೆಂದು ಪಟ್ಟು ಹಿಡಿದು  ಜನ ಬೀದಿಗಿಳಿದರು ಕೆಂಪು ಅಂಗಿ ಧರಿಸಿ. ನಗರವೆಲ್ಲಾ ಕೆಂಪೋ ಕೆಂಪು. ಪ್ರತಿಭಟನೆಯ ವ್ಯಾಲೆಂಟೈನ್. ಜಪ್ಪಯ್ಯ ಎನ್ನಲಿಲ್ಲ ಸೇನಾ ಬೆಂಬಲಿತ “ಅಭಿಸಿತ್ ವೆಜ್ಜಜೀವ”. ೪೫ ರ, ಆಕ್ಸ್ಫೋರ್ಡ್ ನಲ್ಲಿ ಕಲಿತ ಸ್ಫುರದ್ರೂಪಿ ರಾಜಕಾರಣಿ ಥಾಯಿಲೆಂಡ್ ಅನ್ನು ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಆಕರ್ಷಕವನ್ನಾಗಿ ಮಾಡಿದ್ದರು. ಆದರೆ ಶಿನಾವತ್ರ ಬೆಂಬಲಿಗರಿಗೆ ಈ ಬದಲಾವಣೆಯಾಗಲಿ, ಪ್ರಗತಿಯಾಗಲಿ ಬೇಕಿಲ್ಲ. ತರಬೇಕು ಮರಳಿ ತಮ್ಮ ನಾಯಕನನ್ನು ಗದ್ದುಗೆಗೆ. ಕೊನೆಗೆ ಎಲ್ಲರೂ ತಮ್ಮ ತಮ್ಮ ರಕ್ತ ಶೇಖರಿಸಿಕೊಂಡು ಬಕೇಟು ಗಳಲ್ಲಿ ತುಂಬಿ ಅಭಿಸಿತ್ ನಿವಾಸದ ಮುಂದೆ ಸುರಿದರು. ಅಭಿಸಿತ್ ಅವರ ಜಗುಲಿ ನೆತ್ತರುಮಯವಾಯಿತು, ಕ್ಷಣಗಳಲ್ಲಿ ರಕ್ತ ಹೆಪ್ಪುಗಟ್ಟಿತು. ಅದರೊಂದಿಗೆ ಅಭಿಸಿತ್ ನ ಅಧಿಕಾರದ ಮೋಹವೂ ಇನ್ನಷ್ಟು ಹೆಪ್ಪುಗಟ್ಟಿತು.         

ಹೀಗೆ ಪ್ರತಿಭಟನೆಗಳು ಒಂದಲ್ಲ ಒಂದು ತಮ್ಮದೇ ಆದ ರೀತಿಯಲ್ಲಿ ಪ್ರತ್ಯಕ್ಷಗೊಂಡು, ಸೋತ, ನೀರಸ ವಿಶ್ವಕ್ಕೆ ಗೆಲುವನ್ನೂ, ಲವಲವಿಕೆಯನ್ನು ತಂದು ಕೊಡುತ್ತವೆ. ನಿಮ್ಮದೂ ಏನಾದರೂ ವಿಶಿಷ್ಟ ವಿಧಾನಗಳಿದ್ದರೆ ಹೇಳಿ. ನಿಮಗಾಗದ ಸಹೋದ್ಯೋಗಿ ಸಮೀಪ ಇಲ್ಲದಾಗ ಅವನ ಹೆಸರಿನಲ್ಲಿ (ಆತ ತೆರೆದಿಟ್ಟು ಹೋದ office outlook ಮೂಲಕ) ಬೇಡದ ಮೇಲ್ ಕಳಿಸಿ ಆತನ ಬಾಳನ್ನು ಬಂಗಾರ ಮಾಡಿದ ನಿದರ್ಶನಗಳಿದ್ದರೆ ಹಂಚಿಕೊಳ್ಳಿ.

ಹಾರುವ ಚಪ್ಪಲಿ

ಇದೀಗ ಬಂದ ವರದಿಯ ಪ್ರಕಾರ ಓರ್ವ ವ್ಯಕ್ತಿ ಅಡ್ವಾಣಿ ಯವರ ಮೇಲೆ ಚಪ್ಪಲಿಯನ್ನು ಬೀಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ. ಅಭಿಪ್ರಾಯಗಳನ್ನು, ಕುಂದುಕೊರತೆಗಳನ್ನು ದುಃಖ ದುಮ್ಮಾನಗಳನ್ನು ವ್ಯಕ್ತಪಡಿಸಲು ಹತ್ತು ಹಲವು ಮಾರ್ಗಗಳು. ಇರಾಕಿನಲ್ಲಿ ಮುಂತಸರ್ ಜೈದಿ ಎನ್ನುವ ಪತ್ರಕರ್ತನೊಬ್ಬ ಅಮೆರಿಕೆಯ ಬುಷ್ ಮೇಲೆ ಬೂಟುಗಳನ್ನು ಎಸೆದು ಅಭಿವ್ಯಕ್ತಿ ಸ್ವಾಂತ್ರ್ಯದ expression ಗೆ ಹೊಸ ನಾಂದಿ ಹಾಡಿದ. ಲಕ್ಷಗಟ್ಟಲೆ ಇರಾಕಿಗಳನ್ನು ವಿನಾಕಾರಣ ಕೊಂದ ಬುಷ್ನ ಮೇಲೆ ಆಕ್ರಮಣ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ತನ್ನ ಕೆಲಸವನ್ನು ಸಮರ್ಥಿಸಿಕೊಂಡ ಜೈದಿ. ಬಾಗ್ದಾದಿನಿಂದ ಆರಂಭಗೊಂಡ ಈ ಫ್ಯಾಷನ್ ವಿಶ್ವದ ಹಲವು ನಗರಗಳ ಪರ್ಯಟನ ಮಾಡುತ್ತಿದೆ, cat walk ಥರ. ಅತ್ಯಂತ ವಿಧೇಯವಾಗಿ, ದೈನ್ಯತೆಯಿಂದ ನಮ್ಮ ಕಾಲಡಿ ಬದುಕನ್ನು ನಡೆಸುತ್ತಿರುವ ಬೂಟು, ಎಕ್ಕಡ ಇತ್ಯಾದಿಗಳು ನಮ್ಮ ಮೇಲೇ ಎರಗಲು ಆರಂಭಿಸಿದರೆ ಹೇಗೆ?

 

೧೯೯೪ ರಲ್ಲಿ ಅಮೇರಿಕೆಯಲ್ಲಿ “ಲೋರೆನ್ ಬಾಬ್ಬಿಟ್” ಹೆಸರಿನ ತರುಣಿಯೊಬ್ಬಳು ತನ್ನ ಪ್ರಿಯಕರ ತನ್ನನ್ನು ಬಲಾತ್ಕರಿಸಲು ಯತ್ನಿಸಿದಾಗ ಅವನ ಲಿಂಗಚ್ಚೇಧ ಮಾಡಿ ವಿಶ್ವ ಪ್ರಸಿದ್ದಿ ಪಡೆದಳು. ಅಷ್ಟೇ ಅಲ್ಲ “ಲಿಂಗಚ್ಚೇಧ” ಕ್ಕೆ ಪರ್ಯಾಯ ಪದವಾಗಿ “bobbitt” ಆಂಗ್ಲ ಶಬ್ದಕೋಶವನ್ನೂ ಸೇರಿ ಅವಳ ಹೆಸರು ಅಮರವಾಯಿತು.  

 

ಪಾಶ್ಯಾತ್ಯ ಸಂಸ್ಕೃತಿಯಲ್ಲಿ ನಾಲ್ಕೂ ಬೆರಳುಗಳನ್ನು ಮಡಚಿ ಮಧ್ಯದ ಬೆರಳನ್ನು ತೋರಿಸುವುದು ದೊಡ್ಡ ಅವಮಾನ, ತೆಗಳಿಕೆ. ಶ್ರೀಲಂಕ ದಲ್ಲಿ  ತೋರು ಬೇರನ್ನು ತೋರಿಸಿದರೆ ವಕ್ಕರಿಸಿತು ಗ್ರಹಚಾರ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಬಲಗೈಯ ಮಧ್ಯದ ಬೆರಳನ್ನು ಎಡಗೈಯ ಹಸ್ತದೊಳಕ್ಕೆ ಚುಚ್ಚಿದರೆ ದೊಡ್ಡ ರಂಪ. ಹೀಗೆ ಸಾಗುತ್ತದೆ ಅವಮಾನಿಸುವ ವೈವಿಧ್ಯಗಳ  ಸರಣಿ. 

ಎಲ್ಲಾ ಸರಿ ಭಾರತವನ್ನೇಕೆ ಬಿಟ್ಟೆ? ನಾವು ಕೈ ಸನ್ನೆ ಮಾಡೋದು ಬಸ್ಸನ್ನು ನಿಲ್ಲಿಸೋಕೆ ಮಾತ್ರ. ಅದು ಬಿಟ್ರೆ ನಾವು more verbal.