ಈಗಿನ ಕಾಲದ ಹುಡುಗ ರಿಗೆ concentration ಕಡಿಮೆ ಎಂದು ಹೇಳ್ತಾರೆ. ಏನೇ ಹೇಳಿದರೂ ಒಂದೋ, ತಲೆಗೆ ಹೋಗೋದಿಲ್ಲ, ಇಲ್ಲಾ, ಎಲ್ಲಾ ಕೇಳಿ ನನಗೆ ಅರ್ಥವಾಯಿತು ಅಂತ ಗೋಣಾಡಿಸಿ ಮರೆತು ಬಿಡೋದು, ಇದು ಈಗಿನ ಪೀಳಿಗೆಯ ವೈಶಿಷ್ಟ್ಯ. ಕಳೆದ ವಾರ ಹಾನಗಲ್ಲಕ್ಕೆ ಹೋಗುತ್ತಾ ನನ್ನ ಸೋದರ ಮಾವನ ಮಗನಿಗೆ ದಾರಿಯಿಂದ ಫೋನ್ ಮಾಡಿ ಹೊಳೆ (ಭದ್ರಾವತಿ) ಸಾಲಿನಿಂದ (ಮರದಿಂದ ಬಿದ್ದಿದ್ದರೆ) ಒಂದು ಹಕ್ಕಿ ಗೂಡನ್ನು ತೆಗೆದು ಕೊಂಡು ಬರಲು ನಿನ್ನ ಅಣ್ಣನಿಗೆ ಹೇಳು ಎನ್ನುವ ಸಂದೇಶ ನೀಡಿ ಅರ್ಥ ಆಯಿತು ಎಂದು ಖಾತ್ರಿ ಪಡಿಸಿ ಕೊಂಡ ನಂತರ ಫೋನ್ ಇಟ್ಟೆ. ರಾತ್ರಿ ಮನೆಗೆ ವಾಪಸಾದ ನಂತರ ಹೋಂ ವರ್ಕ್ ಮಾಡುತ್ತಾ ಕೂತವನಿಗೆ ಕೇಳಿದೆ ನನ್ನ ಬೆಳಗ್ಗಿನ ಸಂಭಾಷಣೆಯ ಬಗ್ಗೆ. ಏನೂ ಗೊತ್ತಿಲ್ಲದವನಂತೆ ನಾಟಕ ವಾಡಿದ. ಹತಾಶನಾಗಿ, ಅಲ್ಲಾ ಕಣೋ ನಿನಿಗ್ ನಾನ್ ಫೋನ್ ಮಾಡಿ ಏನ್ ಹೇಳ್ದೆ ಎಂದಾಗ, ಫೋನಾ? ಯಾವಾಗ? ಎಂದು ಇಷ್ಟಗಲ ಬಾಯ್ತೆರೆದ. ನಿನ್ನ ಅಣ್ಣನಿಗೆ ಏನ್ ಮೆಸೇಜ್ ಕೊಡಲು ನಾನ್ ಹೇಳ್ದೆ, ಎಂದು ಸಿಡುಕಿ ಕೇಳಿದಾಗ ಮೆಸೇಜಾ, ಊಂ, ಹಾಂ… ತಲೆ ಕೆರೆದುಕೊಳ್ಳುತ್ತಾ, ಹಾಂ…. ಈಗ ಜ್ಞಾಪಕ ಬಂತು ಎಂದ. ಸರಿ ಜ್ಞಾಪಕ ಬಂದಿದ್ದು ಏನಂತ ಹೇಳು ನೋಡೋಣ ಅಂದಾಗ, ಅದೇ…. ಅಟ್ಟದ ಮೇಲಿನಿಂದ ಕೊಬ್ಬರಿ ತೆಗೆಯೋದಕ್ಕೆ ಆಲ್ವಾ ನೀವು ಹೇಳಿದ್ದು ಎಂದಾಗ ನನ್ನ ಸಹನೆಯ ಕಟ್ಟೆ ಒಡೆಯದಿದ್ದರೂ ಸಂಭಾಳಿಸಿಕೊಂಡು ಹೇಳಿದೆ, ಅಲ್ಲಾ ಕಣೋ ಪೆದ್ದೆ, ನಾನು ಹೇಳಿದ್ದು ಅಟ್ಟದ ಮೇಲಿಂದ ಕೊಬ್ಬರಿ ಇಳಿಸೋದಕ್ಕಲ್ಲ, ಹೊರಗಿರುವ ಮಾವಿನ ಮರದಲ್ಲಿ ತೆಂಗು ಬಿಟ್ಟಿದೆ ಅದನ್ನು ಕೀಳು ಎಂದು ಹೇಳಿದ್ದು ಎಂದು ಹಲ್ಲು ಮಸೆಯುತ್ತಾ ಜಾಗ ಬಿಟ್ಟೆ. ಈ ಬೆಳವಣಿಗೆ growing years ನ ಮತ್ತೊಂದು ಪ್ರಾರಬ್ದ ಅಂತ ಬಿಟ್ಹಾಕೋದೋ, ಇಲ್ಲ, ಇದೂ (lack of concentration) ಒಂದು ರೀತಿಯ ರೋಗ ಎಂದು ಚಿಕಿತ್ಸೆ ಕಡೆ ಗಮನ ಹರಿಸೋದೋ ತಿಳಿಯುತ್ತಿಲ್ಲ.