ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ?

ಪುರುಷರೇಕೆ ಚಿಕ್ಕ ಪ್ರಾಯದ ಅಥವಾ ಎಳೆ ಪ್ರಾಯದ ಹೆಣ್ಣುಗಳನ್ನು ಬಯಸುತ್ತಾರೆ? ಭಾರತದಲ್ಲಿ ಈ ವಿದ್ಯಮಾನ ದೊಡ್ಡ ರೀತೊಯಲ್ಲಿ ಇಲ್ಲದಿದ್ದರೂ ಪಾಶ್ಚಾತ್ಯರಲ್ಲಿ ಇದನ್ನು ಹೆಚ್ಚು ಕಾಣಬಹುದು. ಉದಾಹರಣೆಗೆ ಇಟಲಿಯ ಪ್ರಧಾನಿ ಅಗರ್ಭ ಶ್ರೀಮಂತ ೭೨ ವರುಷ ಪ್ರಾಯದ ಬೆರ್ಲಸ್ಕೊನಿ ಗೆ ೧೮ ರ ಹರೆಯದ ಪ್ರೇಯಸಿ. ಈ ಪ್ರಣಯದ ಪರಿಣಾಮ ವಿಚ್ಚೇದನ. ಇಟ್ಟು ಕೊಂಡವಳು ಬಂದಾಗ ಕಟ್ಟಿ ಕೊಂಡವಳು ಕಟ್ಟಿಕೊಂಡಳು ಗಂಟು ಮೂಟೆಯನ್ನು. ೭೨ ರ್ ಈ ತರುಣನಿಗೆ ಇದು ಹೊಸತಲ್ಲ. ಸಾಮಾನ್ಯವಾಗಿ ಈತ ಬೇಟೆಯಾಡುವುದೇ “ಮೈ ತುಂಬಿದಾ ಮಾಗಿದ ಸಿಹಿಯ” ಹುಡುಗಿಯರನ್ನು. ಈ ರೀತಿಯ ಮುದುಕರು ಹರೆಯದ ಹೆಣ್ಣುಗಳ ಹಿಂದೆ ಹೋಗುವಾಗ ಸ್ತ್ರೀ ಮಣಿಗಳಿಗೆ ಉರಿ. ಈ ಗಂಡಸರಲ್ಲಿ ಏನಿರಬಹುದು ಎಂದು ಹುಡುಗಿಯರು ಹಿಂದೆ ಬೀಳುತ್ತಾರೋ ಎಂದು.  ಕೆಲವರಿಗೆ ತಮಾಷೆ, ತಮ್ಮದೇ ಕಾರಣಗಳನ್ನು ನೀಡಿ ಉರಿಯುವ ಉದರಕ್ಕೆ ಒಂದಿಷ್ಟು ಶಾಂತಿ ಮಾಡೋದು. ಕೆಳಗಿವೆ ನೋಡಿ ಕೆಲವೊಂದು ಕಾರಣಗಳು ಪಡ್ಡೆ ಹುಡ್ಗೀರು ಏಕೆ ಮುದಿಯರ ಬೆನ್ನ ಹಿಂದೆ ಎಂದು.

೧. ಮುದಿಯನೊಂದಿಗೆ ಬರುತ್ತದೆ ಅವನು ಉಳಿಸಿದ ಹಣ.

೨. ದಿನಕ್ಕೆರಡು, ಮೂರು ಸಾರಿಯಾದರೂ ಫೋನ್ ಮಾಡಿ ವಿಚಾರಿಸಿ ಕೊಳ್ಳುತ್ತಾನೆ. (ಇದ್ದಾಳೋ, ಇಲ್ಲಾ ಇನ್ಯಾವುದಾದರೂ ತರಲೆ ಮುದುಕ ಹಾರಿಸಿ ಕೊಂಡು ಹೋದನೋ ಎಂದು ನೋಡಲಾದರೂ )

೩. ಅವಳ home work ನಲ್ಲಿ ಅವನು ಸಹಾಯ ಮಾಡಬಹುದು.

೪. ಅವಳಿಗೆ ಉಳುಕಿದಾಗ ಅವನ ಊರುಗೋಲನ್ನು ಉಪಯೋಗಿಸಬಹುದು.

೫. ಲೈಂಗಿಕ ಕ್ರೀಡೆಯಲ್ಲಿ ಸಾವಧಾನ ಮತ್ತು ಸಹನೆ.

೬. ಅವನು ಆಕೆಯನ್ನು ಸುಲಭವಾಗಿ ಬದಲಿಸುವುದಿಲ್ಲ (ಬದಲಿಸಿದರೆ ಇದೆ ಥರದ ಗಿಳಿ ಎಲ್ಲಿ ಸಿಕ್ಕಬಹುದು?)

ಇನ್ನೂ ಏನೇನೋ ನಮೂನಿ, ನಮೂನಿ, ಕಾರಣಗಳು…

ವರದಕ್ಷಿಣೆ

ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ  ಸಮಾನತೆ ವಿಜ್ರಂಭಿಸುತ್ತದೆ. ಗಂಡಿಗೆ ಲಾಭ ಆಗುವ ಸಮಾನತೆ. ಜಮಾತೆ ಇಸ್ಲಾಮಿನವರು ( ಮುಸ್ಲಿಂ ಸಾಮಾಜಿಕ ಸಂಘಟನೆ ) ಒಂದು ಅಭಿಯಾನ ಆರಂಭಿಸಿದರು. ವರದಕ್ಷಿಣೆ ಪುರುಷ ವೇಶ್ಯಾವಾಟಿಕೆಗೆ ಸಮಾನ ಎಂದು. ಎಲ್ಲ ಧರ್ಮಗಳ ಸುಧಾರಕರು ಈ ಅನಿಷ್ಟದ ವಿರುದ್ಧ ಕೂಗೆತ್ತಿದರು. ಫಲ ಅಷ್ಟಕ್ಕಷ್ಟೇ.

 ಸರಿ ಅಷ್ಟೆಲ್ಲಾ ಕೊಟ್ಟು ಮದುವೆಯಾಗುವ ಹೆಣ್ಣಿಗೆ ಸಿಗುವುದು ಏನು? ವಿವಾಹಿತೆ ಅನ್ನೋ ಕಿರೀಟ. ಮದುವೆಯಾದ ಕೂಡಲೇ ತನ್ನ ತಂದೆಯ ಹೆಸರಿನಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ ಇಂಥಹ ಮಹಾತ್ಮನ ಪತ್ನಿ ಎಂದು ಗುರುತಿಸುತ್ತಾರೆ ಜನ. ಅವಳ ವೇಷ ಭೂಷಣಗಳಲ್ಲೂ ಬದಲಾವಣೆ. ಒಂದಿಷ್ಟು ಹೆಚ್ಚುವರಿ ಉಡುಗೆ. ತಾಳಿಯಿಂದ ಹಿಡಿದು ಕಾಳುನ್ಗುರದವರೆಗೆ  ಗಂಡನ ಅಸ್ತಿತ್ವ, ಪಾರುಪತ್ಯ ಸಾರಿ ತೋರಿಸುವ ಕುರುಹುಗಳು. ಈ ತ್ಯಾಗ ಹೆಣ್ಣಿನ ತಂದೆ ಸಾಲ ಸೋಲ ಮಾಡಿಯೋ, ಜೀವನ ಪೂರ್ತಿ ಉಳಿಸಿದ ಹಣ ತೆತ್ತೋ ಕೊಟ್ಟ ಕಪ್ಪ ಕಾಣಿಕೆ. ಅಷ್ಟೇ ಅಲ್ಲ, ವರದಕ್ಷಿಣೆ ಕೊಟ್ಟರಷ್ಟೇ ಸಾಲದು. ನೆರೆದ ನೂರಾರು ಜನರ ಮುಂದೆ ಇವನ ಪಾದಾರವಿನ್ದಗಳನ್ನು ಅತ್ತೆ ಮಾವ ತೊಳೆಯಬೇಕು. ಬೆಳ್ಳಿ ಬಟ್ಟಲಿನಲ್ಲೇ ತೀರ್ಥ ಕುಡಿಸಬೇಕು ಕಪ್ಪ ಕಾಣಿಕೆ ಪಡೆದ ದಣಿದ ದೇಹಕ್ಕೆ. ಬೆಳ್ಳಿ ಲೋಟ ಇಲ್ಲವೊ ಮಾವ ಕೊಟ್ಟ ವರದಕ್ಷಿಣೆಯ ಸ್ಕೂಟರಿನಲ್ಲೇ ಜಾಗ ಖಾಲಿ ಮಾಡುತ್ತಾನೆ.

 ಒಮ್ಮೆ ಇಂಥ ಒಂದು ಸಂತೆಗೆ ಹೋಗುವ ಭಾಗ್ಯ ನನ್ನದು. ಮದುವೆಗೆ ಮುಂಚೆ ನಡೆಯುವ ಚೊಕಾಸಿ ವ್ಯಾಪಾರ ಕಂಡು ಹೇಸಿಗೆ ಆಯಿತು. ಜನ ಯಾವ ಮಟ್ಟಕ್ಕೆ ಇಳಿಯುವರು ಹಣದ ಆಸೆಯಲ್ಲಿ ಎಂದು ಅಚ್ಚರಿ ಪಟ್ಟೆ. ಕೋಲೆ ಬಸವನಂತೆ ಭಾವಿ ಮಾವನೆದುರು ತನ್ನ ತಂದೆ  ಶಾಪಿಂಗ್ ಲಿಸ್ಟ್ ಓದುವುದನ್ನು ಜೊಳ್ಳು  ಸುರಿಸುತ್ತಾ ನೋಡುವ ಗಂಡಿಗೆ ಎಕ್ಕಡ ಸೇವೆ ಮಾಡುವ ಮನಸ್ಸಾದರೂ ಭಯದಿಂದ ಸುಮ್ಮನಾಗುತ್ತೇನೆ. ಈ ಕುದುರೆ ವ್ಯಾಪಾರ ನಮ್ಮ ಮೌಲ್ವಿಗಳ ಎದುರಿನಲ್ಲಿ ನಡೆಯುವುದು  ಮತ್ತೊಂದು ರೀತಿಯ ಅವಮಾನ.

 ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ. ಬೂಟಾಟಿಕೆ ಬಹಳಷ್ಟಿದೆ.  ಗಂಡು ವಧು ದಕ್ಷಿಣೆ ಕೊಡಬೇಕು. ಓಕೆ, ವೈ ನಾಟ್? ನೆರೆದವರ  ಮುಂದೆ ಕವಡೆ ಬಿಸಾಕಿ ಹಿಂದಿನ ಬಾಗಿಲಿನಿಂದ ಲಾರಿಗಟ್ಟಲೆ ಸಾಮಾನು, ನಾಗ ನಾಣ್ಯ ಲೂಟಿ. ದುಡ್ಡಿನ ಮುಂದೆ ಆದರ್ಶಗಳು ಆಲಸ್ಯದಿಂದ ಆಕಳಿಸುತ್ತವೆ.   

 ತೀರ ಗತಿಕೆಟ್ಟ ಕುಟುಂಬದವರಿಂದಲೂ   ಹಣ ಬಯಸುವ ಗಂಡು ಅದ್ಹೇಗೆ ತಾನು ಗಂಡು ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುತ್ತಾನೋ? ದರೋಡೆಕೋರನಿಗೆ ಕರುಣೆ ಎಲ್ಲಿಂದ ಅಲ್ಲವೇ? ಶ್ರೀಮಂತನ ಮನೆಯಾದರೂ ಸರಿ ದರಿದ್ರದವನ ಮನೆಯಾದರೂ ಸರಿ ತನಗೆ ಬೇಕಿದ್ದು ಸಿಗುವಾಗ ತಾರತಮ್ಯವೇಕೆ?   

 ಗಂಡಾಗಿ ಹುಟ್ಟುವುದೇ ಒಂದು ಕ್ವಾಲಿಫಿಕೇಶನ್ ಕೆಲವರಿಗೆ. ಈ ಕ್ವಾಲಿಫಿಕೇಶನ್ ಇಟ್ಟುಕೊಂಡು ಅವನು ಕೊಡುವ ಸರ್ವಿಸ್ ಗೊತ್ತೇ ಇದೆಯಲ್ಲ?