ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?

ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ ಮಲ್ಯರ ಸಂಕಷ್ಟವನ್ನು ಗಮನಿಸಿದ್ದಾರೆ. ಏನಾದರೂ ಮಾಡುವ ಭರವಸೆ ನೀಡಿದ್ದಾರೆ. ವಿಜಯ್ ಮಲ್ಯ ಚಾಣಾಕ್ಷ ಉದ್ಯಮಿಯಾದರೂ ತಮ್ಮ ಏರ್ ಲೈನ್ಸ್ ಅನ್ನು ನಷ್ಟದ ಮೋಡಗಳಿಂದ ಆಚೆ ತರಲು ಹೆಣಗುತ್ತಿರುವುದು ಖೇದಕರ.

ಇಂದು ನಮ್ಮ ಕಂಪೆನಿಯ ಜನರಲ್ ಮ್ಯಾನೇಜರ್ ರಿಯಾಧ್ ನಗರಕ್ಕೆ ಪ್ರಯಾಣಿಸಲು ವಿಮಾನದ ಟಿಕೆಟ್ ಗೆ ಹೋದಾಗ ಟಿಕೆಟ್ ಫ್ರೀ. ಫ್ರೀ………..? ಹೌದ್ರೀ, ಫ್ರೀ. ಉಚಿತ. ಪುಕ್ಕಟೆ. ಆದರೆ ತೆರಿಗೆ ಮಾತ್ರ ಪಾವತಿಸಬೇಕು. ಜೆಡ್ಡಾ ದಿಂದ ೧೨೦೦ ಕಿಲೋ ಮೀಟರ್ ದೂರ ರಾಜಧಾನಿ ರಿಯಾದ್. ಸಾಮಾನ್ಯವಾಗಿ ಟಿಕೆಟ್ ದರ ೬,೦೦೦ ರೂಪಾಯಿ. ತೆರಿಗೆ ಸೇರಿ. ಈಗ ತೆರಿಗೆ ಮಾತ್ರ ಪಾವತಿಸಿದರೆ ಸಾಕು, ರೆಕ್ಕೆಗಳು ಅರಳಿಕೊಳ್ಳುತ್ತವೆ. ತೆರಿಗೆ ೨,೦೦೦ ರೂಪಾಯಿ ಮಾತ್ರ. ಈ ಉಚಿತವಾಗಿ ಹಾರು ಎನ್ನುವ ಆಫರ್ ಕೊಡುತ್ತಿರುವ ಕಂಪೆನಿ “ನಾಸ್ ಏರ್”.  ಇದು low cost airline. ಇವರು ಸೌದಿ ಅರೇಬಿಯಾದ ಒಳಗೆ ಮಾತ್ರವಲ್ಲ ಮಧ್ಯ ಪ್ರಾಚ್ಯದ ಹಲವು ದೇಶಗಳಿಗೂ ತಮ್ಮ ಹಾರಾಟದ ಧಂಧೆ ಇಟ್ಟು ಕೊಂಡಿದ್ದಾರೆ. ಜೆಡ್ಡಾ ದಿಂದ ೧೬೦೦ ಕಿಲೋ ಮೀಟರು ಇರುವ ದಮ್ಮಾಂ ನಗರಕ್ಕೆ ಕೇವಲ ೧೨೦೦ ರೂಪಾಯಿ ಚಾರ್ಜ್ ಮಾಡುತ್ತಾರೆ ಆಫರ್ ಸಮಯದಲ್ಲಿ.  ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?   

ಮೈಸೂರು ಹುಲಿ, ಟಿಪ್ಪೂ ಸುಲ್ತಾನರ ಖಡ್ಗ ವನ್ನು ಹಣ ಕೊಟ್ಟು ಬ್ರಿಟಿಶ್ ಸಂಗ್ರಹಾಲಯದಿಂದ ಭಾರತಕ್ಕೆ ಮರಳಿ ತಂದು ಹೆಸರು ಮಾಡಿದ ಶ್ರೀಯುತ ವಿಜಯ್ ಮಲ್ಯ ಆರ್ಥಿಕ ಸಂಕಷ್ಟದಿಂದ ಹೊರ ಬಂದು ತಮ್ಮ ಕಿಂಗ್ ಫಿಶರ್ ಮತ್ತೊಮ್ಮೆ ಆಗಸವನ್ನು ಆಳುವಂತೆ ಮಾಡಲಿ ಎಂದು ಹಾರೈಸೋಣ.

೯೯೯೯

ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು ಎಂದು ೯೯.೯೯ ಅಂತ ಬೆಲೆ ಇಟ್ಟು ನೂರು ರೂಪಾಯಿ ಪೂರ್ತಿಯಾಗಿ ಪೀಕಿಸಿ ಕೊಂಡು ಒಂದು ಪೈಸೆಯ ಚೇಂಜ್ ಸಹ ಕೊಡದೆ ನೂರು ರೂಪಾಯಿ ಕೊಟ್ಟೆ ಈ ಚಪ್ಪಲಿಗೆ ಎಂದು ಹೇಳಲೂ ಭಯ ಆಗುವಂತೆ ಮಾಡಿದ್ದು ? ನೂರು ರೂಪಾಯಿಗೆ ಒಂದು ಪೈಸೆ ಕಡಿಮೆ ಕೊಟ್ಟು ನೂರು ಕೊಟ್ಟೆ ಎಂದು ಹೇಳೋದು ನಾಗರೀಕರ ಲಕ್ಷಣ ಅಲ್ಲ, ಅಲ್ಲವೇ? ಹಾಳು ಪುರಾಣ ಬಿಡಿ, ಈ ೯೯೯೯ ಬಾಟಾ ದ ಎಕ್ಕಡ ಬೆಲೆಯೂ ಅಲ್ಲ, ಯಾವುದೋ ಎಮೆರ್ಜೆನ್ಸಿ ನಂಬರ್ ಸಹ ಅಲ್ಲ. ಇದು ನನ್ನ ಪ್ರೀತಿಯ ಊರಿನ, ಪ್ರೀತಿಯ ಹಳೇ ಸೇತುವೆ ಮೇಲೆ ದೌಡಾಯಿಸಿದ ಜನರ ಸಂಖ್ಯೆ. ಅಂದರೆ ಹಳೇ ಸೇತುವೆ ಬ್ಲಾಗ್ ಅನ್ನು ಇದುವರೆಗೆ ೯೯೯೯ ಜನ ನೋಡಿದ್ದಾರೆ. ಒಂದು ರೀತಿಯ ಶುಭ ಸಂಖ್ಯೆ, ಈ ಶುಭ ಕಾಮನ ಹುಣ್ಣಿಮೆಯಂದು. ಸೂಪರ್ ಮೂನ್ ಹೇಳಿ ಕೊಳ್ಳುವಂಥ ಸೂಪರ್ ಆಗಿ ಕಂಗೊಳಿಸದಿದ್ದರೂ ಈ ಸಂಖ್ಯೆ ಮಾತ್ರ ನನ್ನಲ್ಲಿ ಒಂದು ತೆರನಾದ ಸಂಚಲನ ತಂದಿದ್ದಂತೂ ನಿಜವೇ.  

ನನ್ನ ಬರಹ ನೋಡಿದ ಜನರಿಗೆ ನಾನು ಬರಹಗಾರ ಅಲ್ಲ ಎಂದು ಅನ್ನಿಸಿದರೆ ನನ್ನ ಮೇಲೆ ಸೂಪರ್ ಮೂನ್ ಆಗಲಿ, ವಿಶಾಲವಾದ ಆಗಸವಾಗಲಿ ಕಳಚಿ ಬೀಳೋಲ್ಲ. ನನ್ನಲ್ಲಿ ಕೀಳರಿಮೆ ಸಹ ಮನೆ ಮಾಡೋಲ್ಲ. ಯಾರೋ ಒಬ್ಬರು ಹೇಳಿದಂತೆ ನಾನು ಗಟ್ಟಿ ಮನುಷ್ಯ. ಎಷ್ಟಿದ್ದರೂ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ನಗರಿಯವನಲ್ಲವೇ ನಾನು? 

ಪುಕ್ಕಟೆ ಸಿಗುವ ಆಸೆಗೆ ಬಲಿ ಬಿದ್ದು ಶುರು ಮಾಡಿದ್ದು ಈ ಧಂಧೆ. ಬರೆಯುವ ಧಂಧೆ.  ಅದೇನು ಪುಕ್ಕಟೆ ಅಂತ ಜೊಳ್ಳು ಸುರಿಸಿದಿರಾ? ನಾಚಿ ಕೊಳ್ಳಬೇಡಿ, ಮನುಷ್ಯನ ಜಾಯಮಾನವೇ ಅದು. ಪುಕ್ಕಟೆ ಸಿಕ್ಕಿದ್ದು ಬ್ಲಾಗ್ ಆರಂಭಿಸುವ ಸೌಲಭ್ಯ.  ಕರ್ನಾಟಕ ರಾಜ್ಯದ ೧೦ ಲಕ್ಷದ, ೧೦ ಲಕ್ಷ ಪೂರ್ತಿ ಕೈಗೆ ಬರದ  ಲಾಟರಿಯಂತೂ ಅಲ್ಲ. ವರ್ಡ್ಪ್ರೆಸ್, ಬ್ಲಾಗ್ಸ್ಪಾಟ್, “tumblr” ಮುಂತಾದವರು ಜನರಿಗೆ ತಮ್ಮ ಬರವಣಿಗೆಯ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಬ್ಲಾಗ್ ಸೈಟ್ ಆರಂಭಿಸಿಕೊಳ್ಳುವ ಸವಲತ್ತು ನೀಡಿದಾಗ ಮುಗಿಬಿದ್ದು ಕೈ ಚಾಚಿದವರಲ್ಲಿ ನಾನೂ ಒಬ್ಬ.  ಬ್ಲಾಗಿಗೊಂದು ಹೆಸರು ಕೊಡಬೇಕು. ಚಿತ್ರ ವಿಚಿತ್ರ ಹೆಸರುಗಳು ಮನಃ ಪಟಲದ ಮೇಲೆ ಹಾದು ಹೋದರೂ ಸೊರಗಿದ ಭದ್ರಾ ನದಿಯ ಸಂಗಾತಿ ಹಳೇ ಸೇತುವೆ ಹೆಸರನ್ನು ಇಟ್ಟೆ. ಶಾಲೆಗೆ ಚಕ್ಕರ್ ಹೊಡೆದು ಇದೇ ಹಳೇ ಸೇತುವೆ ದಾಟಿ ಕನಕ ಮಂಟಪಕ್ಕೆ ಬಂದು ಪುಢಾರಿಗಳ ಭಾಷಣ ಕೇಳುತ್ತಿದ್ದೆ. ಎಲ್ರೂ ಚಕ್ಕರ್ ಹೊಡೆದು ಸಿನೆಮಾಕ್ಕೂ, ಕ್ರಿಕೆಟ್ ಆಡೋಕ್ಕೂ ಹೋದ್ರೆ ಈ ಅಬ್ಬೇಪಾರಿ ಏನು ಪುಡ್ಹಾರಿ, ಗಿಡ್ಹಾರಿ ಅಂತಿದ್ದಾನೆ ಎಂದು ಮೂಗಿನ ಮೇಲೆ ಬೆರಳಿಡ ಬೇಡಿ. ರಾಜಕಾರಣ ಎಂದರೆ ೧೯೭೭ ರಿಂದ ನನಗೆ ತುಂಬಾ ಇಷ್ಟ. ನನ್ನ ಪಕ್ಷ ಜನತಾ ಪಕ್ಷ. ಮೊರಾರ್ಜಿ ಭಕ್ತ. ಚರಣ್ ಸಿಂಗ್ ಮೊರಾರ್ಜಿಗೆ ಕೈ ಕೊಟ್ಟಾಗ ತಲೆ ಮೇಲೆ ಕೈಹೊತ್ತು ಕೂತ ಮಿಡ್ಲ್ ಸ್ಕೂಲ್ ಬಾಲಕ ನಾನು. ಮಾರ್ವಾಡಿ ಸ್ನೇಹಿತನೊಬ್ಬ ಇಂದಿರಾ ನಮ್ ತಾಯಿ ಎಂದಾಗ, ನಾನೇಕೆ ಇವನನ್ನು ಮೀರಿಸಬಾರದು ಎಂದು ಮೊರಾರ್ಜಿ ನಮ್ಮಪ್ಪ ಎಂದು ಹೇಳಿ embarrass ಆದವನು.  ನನ್ನ ಬ್ಲಾಗ್ ನ “ಹಳೇ ಸೇತುವೆ” ಹೆಸರು ಕೆಲವರಿಗೆ ಹಿಡಿಸಿತೂ ಕೂಡಾ, ಅದರೊಂದಿಗೆ ಸವಾರಿಯಾಗಿ ಬಂದ ಬ್ಲಾಗ್ ಪೋಸ್ಟ್ ಗಳೂ ಕೆಲವರಿಗೆ ಇಷ್ಟವಾದವು. ಇನ್ನೂ ಕೆಲವರಿಗೆ “ತುಂಬಾ” ಇಷ್ಟವಾಗಿ ಅಜೀರ್ಣಕ್ಕೂ ದಾರಿ ಮಾಡಿ ಕೊಟ್ಟಿತು. ಒಂದಂತೂ ಸತ್ಯ, ಮೆಚ್ಚಿದವರು, ಮೆಚ್ಚದವರು ನನ್ನಲ್ಲಿ ಹುರುಪನ್ನಂತೂ ತುಂಬಿದರು ನನ್ನ ಬರಹ ಮುಂದುವರೆಯಲಿ ಎಂದು. ಕನ್ನಡಿಗ ಉದಾರಿ, ಸಹೃದಯಿ ಎನ್ನುವ ಮಾತಿಗೆ ನನ್ನ ಬಡ, ಸುಣ್ಣದ ಕಲ್ಲಿನ ಸೇತುವೆಗೆ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ.   

ಮೆಚ್ಚಿದವರಿಗೂ, ಮೆಚ್ಚದವರಿಗೂ ನನ್ನ ಸವಿನಯ, ಗೌರವಪೂರ್ವಕ  ಪ್ರಣಾಮಗಳು.