ರಮದಾನ್ ಶುಭಾಶಯಗಳು

 

ನಾಳೆ ಪವಿತ್ರ ರಮದಾನ್ ನ ಪ್ರಥಮ ದಿನ ಎಂದು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳು ಘೋಷಿಸಿವೆ. ಸಾವಿರ ಮಾಸಗಳಿಗಿಂತಲೂ ಶ್ರೇಷ್ಠ ಎಂದೂ, ವ್ರತಾಚರಣೆಯ ಪವಿತ್ರ ಮಾಸ ಎಂದೂ ಅರಿಯಲ್ಪಡುವ ರಮದಾನ್ ಜಗದಾದ್ಯಂತ ಮುಸ್ಲಿಂ ಬಾಂಧವರಲ್ಲಿ ಧಾರ್ಮಿಕ ಸಂಚಲನೆ ಆರಂಭಿಸಲಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೂರು ಕೋಟಿ ಮುಸ್ಲಿಂ ಬಾಂಧವರಲ್ಲಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ದಿನ ಪೂರ್ತಿ ಉಪವಾಸ ಇದ್ದು ಪವಿತ್ರ  ಕುರಾನ್ ಪಠಣ, ನಮಾಜ್, ದಾನ, ಮುಂತಾದ ಸತ್ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅತ್ಯಪೂರ್ವವಾದ ಧಾರ್ಮಿಕತೆ ವಿಶ್ವವನ್ನು ಬೆರಗುಗೊಳಿಸಲಿದೆ.

ರಮಾದಾನ್ ಮಾಸದ ಚಂದ್ರ ದರ್ಶನ ಆಗುತ್ತಲೇ ಸಮಾಜ ಬಾಂಧವರು ಪರಸ್ಪರರನ್ನು ಅಭಿನಂದಿಸುತ್ತಾ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಫೇಸ್ ಬುಕ್, ಯೂ ಟ್ಯೂಬ್ ತಾಣಗಳಲ್ಲಿ ರಮಾದಾನ್ ಸಂದೇಶಗಳು ಆಗಮಿಸುತ್ತಿವೆ.  twitter ತಾಣವಂತೂ ರಮಾದಾನ್ tweet  ಗಳ ಅಭೂತಪೂರ್ವ ಸುಗ್ಗಿಯನ್ನೇ ಕಾಣುತ್ತಿದೆ. twitter ನಲ್ಲಿ ಸಿಕ್ಕ tweet  ಹೀಗಿವೆ ನೋಡಿ….

Ramadan is the time when you reboot your soul…

I wish everyone on the planet a beautiful ramadan..

Ramadan is coming, Shaitan is leaving…

Let us reflect on the year that has passed…

ರಮದಾನ್ ಮಾಸ ಮುಸ್ಲಿಂ ಬಾಂಧವರಿಗೂ, ಹಿಂದೂ, ಕ್ರೈಸ್ತ, ಸಿಖ್, ಬುದ್ಧ, ಜೈನ, ಪಾರ್ಸಿ, ಯಹೂದ್ಯ ಮತ್ತಿತರ ಧಾರ್ಮಿಕ ಬಾಂಧವರಿಗೂ ಸಂತಸ, ಉಲ್ಲಾಸವನ್ನು ತರಲಿ, ದೇಶದಲ್ಲಿ ಸುಭಿಕ್ಷೆ ಹೆಚ್ಚಲಿ, ಕೈ ಕೊಟ್ಟು ಕೂತಿರುವ ಮಳೆರಾಯ ರಮಾದಾನ್ ತಿಂಗಳ ಪುಣ್ಯದಿಂದ ಮೋಡಗಳನ್ನು ಕರಗಿಸಿ ಭೂಮಿಗೆ ನವ ಚೇತನ ತರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಾ ,

 

ಸರ್ವರಿಗೂ ರಮಾದಾನ್ ತಿಂಗಳ ಶುಭಾಶಯಗಳು.

 

 

ಕೋಶ ಓದು, ಇಲ್ಲಾ ದೇಶ ಸುತ್ತು

 ಕೋಶ ಓದು ಇಲ್ಲಾ ದೇಶ ಬಿಡು….ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ ಮಾತುಗಳನ್ನು ಪಲ್ಟಾಯಿಸುವ ರೀತಿ ಎಂದು ಯೋಚಿಸಿದಿರಾ?

ಬ್ಲಾಗ್ ಒಂದರಲ್ಲಿ ಬಂದ ಲೇಖನದಲ್ಲಿ ಈ ಕುರಿತು ಓದಿದೆ. ಕೋಲಾರದಲ್ಲಿ, ಸಮಾರಂಭ ವೊಂದರಲ್ಲಿ ಮಾನ್ಯ ಸಚಿವರು “ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು ಎಂದು ಬರೆದಿದ್ದರು. ಸನ್ಮಾನ್ಯ ಶಿಕ್ಷಣ ಮಂತ್ರಿಗಳೇ ಹೀಗೆ ಹೇಳಿದಾಗ ಸಮಾಜ ಯಾವ ರೀತಿ ಪ್ರತಿಸ್ಪಂದಿಸಬಹುದು. ಸಮಾಜದಲ್ಲಿ ವಿಷಬೀಜ ಬಿತ್ತಲೆಂದೇ ಹುಟ್ಟಿ ಕೊಂಡ ಮಾಧ್ಯಮಗಳು ಸಚಿವರ ಈ rhetoric ನ ಎಳೆ ಹಿಡಿದು ಕೊಂಡು ಸಮಾಜದಲ್ಲಿ ಮತ್ತಷ್ಟು ಗದ್ದಲ ಗೊಂದಲಕ್ಕೆ ಕಾರಣರಾಗಲಾರರೆ? ಅತ್ಯಂತ ಜವಾಬ್ದಾರೀ ಹುದ್ದೆಯಲ್ಲಿರುವವರು, ಅದರಲ್ಲೂ ಜನರಿಂದ ನೇರವಾಗಿ ಆರಿಸಲ್ಪಟ್ಟವರ ಬಾಯಲ್ಲೇ ಇಂಥ ಮಾತುಗಳು ಉದುರಿದರೆ ಜನಸಾಮಾನ್ಯರ ಪಾಡೇನು?

ಕೋಶ ಓದು, ದೇಶ ಸುತ್ತು ಹಳೇ ಕಾಲದ ಮುತ್ಸದ್ದಿಗಳು, ಹಿರಿಯರು ಹೇಳಿದ್ದು. ಈ ಮಾತುಗಳಲ್ಲಿ ಅನುಭವ ತುಂಬಿ ತುಳುಕುತ್ತದೆ. ಕೋಶ ಓದು ಇಲ್ಲಾ ದೇಶ ಬಿಡು ಎನ್ನುವುದು ಆಧುನಿಕ ಮನೋಭಾವದ ಹಿರಿಯರು. ಇಂಟರ್ನೆಟ್ ಯುಗದ ಪ್ರಾಡಕ್ಟ್ ಗಳು. ಒಂದರಲ್ಲಿ ಅನುಭವ ತುಂಬಿ ತುಳುಕುತ್ತಿದ್ದರೆ, ಮತ್ತೊಂದರಲ್ಲಿ ಅಸಹನೆಯ ಕೊಡ ತುಂಬಿ ತುಳುಕುತ್ತಿರುತ್ತದೆ. ನಮ್ಮ ಪ್ರಯಾಣ ಯಾವ ಕಡೆ ಎಂದು ಅರಿಯದೆ ಜನ ಸಾಮಾನ್ಯ ಕಕ್ಕಾಬಿಕ್ಕಿಯಾಗುತ್ತಾನೆ ಈ ಮಾತುಗಳನ್ನು ಕೇಳಿ. ಇನ್ನು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ? ವಿದ್ಯಾರ್ಥಿಯೊಬ್ಬ ಶಿಕ್ಷಕನಲ್ಲಿ ತನ್ನ ಅಳಲನ್ನು ತೋಡಿ ಕೊಳ್ಳುತ್ತಾನೆ. ತನಗೆ ಆಂಗ್ಲ ಬಾಷೆ ತುಂಬಾ ಕಷ್ಟ ಆಗ್ತಾಯಿದೆ, ತಲೆಗೆ ಏನೂ ಹೋಗೋದಿಲ್ಲ ಎಂದು. ಅದಕ್ಕೆ ಶಿಕ್ಷಕ ತಲೆಗೆ ಹೋಗದಿದ್ದರೆ ಶಾಲೆ ಬಿಡು ಅಥವಾ ಊರು ಬಿಡು ಎಂದು terrorize ಮಾಡಬಾರದು. ಅಸಹಾಯಕನಾಗಿ ಬಂದ ಶಿಷ್ಯನ ತಲೆ ನೇವರಿಸಿ ಇನ್ನಷ್ಟು ಶ್ರಮ ಪಡಲು ಹೇಳಬೇಕು ಅಥವಾ ಬೇರಾವುದಾದರೂ ಪರಿಹಾರ ಸೂಚಿಸಿ ಅವನಲ್ಲಿ ವಿದ್ಯೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅದು ಬಿಟ್ಟು ಅವನನ್ನು ಗದರಿಸಿ ಬೆದರಿಸಿ ದಾರಿಗೆ ತರಲು ನೋಡಿದರೆ ಆಗದ ಮಾತು. ಶಿಕ್ಷಕ ರಿಯಾಕ್ಟಿವ್ ಆಗಬಾರದು. compassionate ಆಗಬೇಕು.

“ಈ ಲೋಕದಲ್ಲಾಗಲೀ, ಬೇರೆಲ್ಲೇ ಆಗಲಿ ಸಂಶಯ ಪಡುವವನಿಗೆ ಸಂತೋಷ ಸಿಗದು”

“ಕೋಪದ ಕಾರಣ ಭ್ರಮೆ ಹುಟ್ಟುತ್ತದೆ. ಭ್ರಮೆಯ ಕಾರಣ ಮನಸ್ಸು ಗೊಂದಲಗೊಳ್ಳುತ್ತದೆ. ಮನಸ್ಸು ಗೊಂದಲ ಗೊಂಡಾಗ ತರ್ಕ ನಾಶವಾಗುತ್ತದೆ. ತರ್ಕ ನಾಶವಾದಾಗ ಮನುಷ್ಯ ಬೀಳುತ್ತಾನೆ”

ಇಂಥ ನುಡಿ ಮುತ್ತುಗಳನ್ನು ನೀಡಿದ ಭಗವದ್ಗೀತೆಯ ಅಧ್ಯಯನಕ್ಕೆ ಈ ರೀತಿಯ ಧಮಕಿ ಕೂಡಿದ “ಉತ್ತೇಜನ” ವೇ ಹಿರಿಯರಿಂದ? – ಗೀತೆ ಗೀತೆಯಲ್ಲಿರುವ ಇಂಥ ಸಂದೇಶಗಳನ್ನು ಜನರಿಗೆ ತಿಳಿ ಹೇಳುವುದು ತರವೋ ಅಥವಾ ಇದನ್ನು ಬೇಡ ಎನ್ನುವವರು ದೇಶ ಬಿಟ್ಟು ತೊಲಗಲಿ ಎಂದು ಗೀತೆಯಿಂದ ಜನರನ್ನು ದೂರ ಓಡಿಸುವುದು ತರವೋ? ಸಚಿವರ ಈ ಹೇಳಿಕೆಯ ಔಚಿತ್ಯವನ್ನು ಜನರು ಪ್ರಶ್ನಿಸಬೇಕು. ಶಾಲೆಗಳಲ್ಲಿ ಗೀತೆ, ಕುರಾನ್, ಬೈಬಲ್, ಗುರುಗ್ರಂಥ್ ಸಾಹಿಬ್, ಬುದ್ಧರ ತ್ರಿಪಿಟಕ, ಪಾರ್ಸಿಗಳ ‘ಜೆಂದ್ ಅವೆಸ್ತಾ’, ಯಹೂದ್ಯರ ‘ತೋರಾ’ ಹೀಗೆ ಹೇಳಿಕೊಡುತ್ತಾ ಕೂತರೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಹೇಳಿಕೊಡಲು ಸಮಯ ಇರುವುದೇ ಎಂದು ಪ್ರಶ್ನಿಸುವವರಿದ್ದಾರೆ. ಪರಿಹಾರವಾಗಿ ಎಲ್ಲಾ ಧರ್ಮಗಳ ಸಾರವನ್ನು ಹೇಳಿಕೊಡುವ ಒಂದು ಪುಸ್ತಕದ ರಚನೆಯಾಗಲಿ. ಗೀತೆ, ಕುರಾನ್, ಬೈಬಲ್ ಮುಂತಾದವುಗಳ ಸುವರ್ಣ ವಾಕ್ಯಗಳು ಅದರಲ್ಲಿ ಸೇರಿರಲಿ. ವಿದ್ಯಾರ್ಥಿಗಳು ನಾವೆಂಥ ಸೊಗಸಾದ ಬಹು ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನೋ ಭಾವನೆ ಬೆಳೆಸಿಕೊಳ್ಳಲಿ.