ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು

ಪ್ರತೀ ವರ್ಷವೂ ನಡೆಯುವ ಆಸ್ಟ್ರಿಯಾದ ವಾರ್ಷಿಕ ಮೋಜಿನ ಕಾರ್ಯಕ್ರಮದಲ್ಲಿ (annual ball season) ಮೊರಾಕ್ಕೋ ದೇಶದ ಷೋ ಗರ್ಲ್ ಮತ್ತು ಇಟಲಿಯ ಪ್ರಧಾನಿ ಬೆರ್ಲಸ್ಕೊನಿಯವರ ಗರ್ಲ್ ಫ್ರೆಂಡ್ ಹದಿಹರೆಯದ  “ರೂಬಿ” ಯ ಉಪಸ್ಥಿತಿಯನ್ನು ಅಲ್ಲಿಗೆ ಬಂದ ಅತಿಥಿಗಳು ವಿರೋಧಿಸಿದರು. ಇದೊಂದು ಗೌರವಾನ್ವಿತರ ಸಮಾರಂಭ ಮತ್ತು ಮೋಜಿನ ಕಾರ್ಯಕ್ರಮವಾಗಿದ್ದು ಇಲ್ಲಿಗೆ ಕರೆವೆಣ್ಣು ಗಳು ಬಂದು ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ದೂರಿದರು. ಈಕೆಯನ್ನು ಕರೆತಂದಿದ್ದ ಶ್ರೀಮಂತನೊಬ್ಬನಿಗೆ ಮುಂದಿನ ವರ್ಷ ಈ ಸಮಾರಂಭಕ್ಕೆ ಟಿಕೆಟ್ ನೀಡೋದಿಲ್ಲ ಎಂದು ಆಯೋಜಕರು ಹೇಳಿದರು. ಹೀಗೆ, ಪ್ರತಿಷ್ಠಿತ ವ್ಯಕ್ತಿಗಳ, ಶ್ರೀಮಂತರ, ಪ್ರಭಾವೀ  ರಾಜಕಾರಣಿಗಳ ಮತ್ತ ಅವರ ಸಂಸಾರವಂದಿಗರ ಮೋಜಿನ ಮೇಳಕ್ಕೆ ಯಕಃಶ್ಚಿತ್ call girl ಬರುವುದು ಎಂದರೆ ಅಪರಾಧವೇ. ಮೋಜು ಮುಗಿದ ನಂತರ ಅಲ್ಲಿಗೆ ಬಂದ ಕೆಲವರು ಇದೇ call girl ಗಳು ಮಾಡೋ ಕೆಲಸವನ್ನೇ ಮಾಡಿದರೂ ಅದು ಪ್ರತಿಷ್ಠೆ, ಘನತೆ, ಶ್ರೀಮಂತಿಕೆಯ ಕಂಬಳಿಯಡಿ ನುಸುಳಿ ಹೋಗುತ್ತದೆ, we are having ball of a time, you see? ಅದಿರಲಿ, ಈ ಸಮಸ್ಯೆಗೆ ಧಾರ್ಮಿಕ ತಿರುವನ್ನು ನೀಡಿದರು ಕ್ರೈಸ್ತ ಪಾದ್ರಿಯೊಬ್ಬರು. ರೂಬಿಯ ಉಪಸ್ಥಿತಿಯನ್ನು ಸಮರ್ಥಿಸುತ್ತಾ ಪಾದ್ರಿಗಳು ಹೇಳಿದರು,

“ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು ಎಲ್ಲರಿಗಿಂತ ಮೊದಲು ದೇವನ ಸಾಮ್ರಾಜ್ಯವನ್ನು ಸೇರುವರು”. ಇದಕ್ಕೆ ಉತ್ತರ ಗಡಚ್ಚಿಕ್ಕುವ ಡ್ರಂ ಗಳ ಸದ್ದಿನಲ್ಲಿ, ಕುಣಿತದ ಗದ್ದಲದಲ್ಲಿ, ರೂಬಿಯ ಮೈಮಾಟದ ಪ್ರದರ್ಶನದಲ್ಲಿ ಕೇಳಿಸಲೇ ಇಲ್ಲ.

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.