“ಮೇಕೆ” ಗೆ ಕೇವಲ ೫ ಲಕ್ಷ ರೂಪಾಯಿ

ಊರು ಇಂದೂರು. ಮಧ್ಯಪ್ರದೇಶದ ಈ ಪಟ್ಟಣ ಹೆಸರು ಮಾಡಿತು ಮೇಕೆ ವ್ಯಾಪಾರದಲ್ಲಿ. ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ‘ಬಕ್ರೀದ್’ ದಿನ ಬಲಿಕೊಡಲೆಂದು ಮೇಕೆ ಅರಸುತ್ತಾ ಒಬ್ಬ ಸಿರಿವಂತ ಮುಸ್ಲಿಂ ಬಾಂಧವ ಮಾರುಕಟ್ಟೆಗೆ ತನ್ನ ಕಿರಿ ಮಗನೊಂದಿಗೆ ಬಂದ. ಮಗ ಆಯ್ಕೆ ಮಾಡಿದ ಮೇಕೆ ಗೆ ಐದು ಲಕ್ಷದ ಹನ್ನೊಂದು ಸಾವಿರ ಎಂದು ವ್ಯಾಪಾರಿ ಹೇಳಿದಾಗ without blinking ಅಷ್ಟು ಹಣ ಕೊಟ್ಟು ಮೇಕೆ ಕೊಂಡು ಕೊಂಡ. ಹಣದುಬ್ಬರದ ಕಾರಣ ನಮ್ಮ ರೂಪಾಯಿ ನೆಲಕಚ್ಚಿದ ಪರಿಣಾಮ ಅಲ್ಲ ಈ ದುಬಾರೀ ಮೇಕೆ ವ್ಯಾಪಾರ. ಹಣದುಬ್ಬರ ವಿಪರೀತವಾದಾಗ ಒಂದು ಪ್ಯಾಕೆಟ್ ಹಾಲನ್ನು ಕೊಳ್ಳಲು ಗೋಣೀ ಚೀಲ ತುಂಬಾ ಹಣ ಬೇಕಾಗುತ್ತದೆ. ಮೇಕೆ ಕೊಳ್ಳಲು ಒಂದು ಟ್ರಾಕ್ಟರ್ ತುಂಬಾ ಹಣ ಬೇಕು. ಆ ಪರಿಸ್ಥಿತಿಗೆ ನಮ್ಮ ಸರಕಾರ ನಮ್ಮನ್ನು ತಂದು ನಿಲ್ಲಿಸದಿದ್ದರೆ ಸಾಕು.

ಈಗ ಮತ್ತೆ ಮೇಕೆ: ಕಿರಿ ಮಗ ಆಯ್ಕೆ ಮಾಡಿದ ಮೇಕೆ ಅದೆಷ್ಟೇ ಆದರೂ ಕೊಂಡು ಕೊಳ್ಳುವ ಸಂಪ್ರದಾಯ ಈ ಸಿರಿವಂತನ ಮನೆಯವರದಂತೆ. ಆದ ಕಾರಣ ಯಾವುದೇ ತಕರಾರಿಲ್ಲದೆ, ತಡ ಬಡಿಸದೆ ಮೇಕೆ ವ್ಯಾಪಾರ ಅರ್ಧ ಮಿಲಿಯನ್ ರೂಪಾಯಿಗೆ ತಂದು ನಿಲ್ಲಿಸಿ ದಾಖಲೆ ಮಾಡಿದ.

 

ಜ್ಯೋತಿಷ್ಯ ವೈಜ್ಞಾನಿಕವೇ?

ಜ್ಯೋತಿಷ್ಯ ಶಾಸ್ತ್ರವನ್ನು “ಖೋಟಾ ಅಧ್ಯಯನ” (fake discipline) ಎಂದಿದ್ದಾರೆ ವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ವಿಜೇತರಾದ ವೆಂಕಟರಾಮನ್ ರಾಮಕೃಷ್ಣನ್ ಅವರು. ಚನ್ನೈ ನಗರದ ಭಾರತೀಯ ವಿದ್ಯಾ ಭವನದಲ್ಲಿ ಉಪನ್ಯಾಸ ನೀಡುತ್ತಿದ್ದ ಇವರು ಜ್ಯೋತಿಷ್ಯದೊಂದಿಗೆ ಹೋಮಿಯೋಪತಿ ವೈದ್ಯ ಶಾಸ್ತ್ರವನ್ನೂ ತರಾಟೆಗೆ ತೆಗೆದುಕೊಂಡರು. ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುವ ಪರಿಪಾಠ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಜ್ಯೋತಿಷ್ಯ ಕ್ಷೇತ್ರ multi million dollar ಉದ್ದಿಮೆ ಎಂದು ಸುಲಭವಾಗಿ ಹೇಳಬಹುದು. unsuspecting ಜನರನ್ನು ಲೀಲಾ ಜಾಲವಾಗಿ ವಂಚಿಸಿ ಹಣ ಕೊಳ್ಳೆ ಹೊಡೆಯುವ ಇವರಿಗೆ ನಿಯಮದ ಯಾವ ತೊಡಕೂ ಇಲ್ಲ. ಭಾಜಪ ಸರಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಮುರಳಿ ಮನೋಹರ್ ಜೋಶಿ ಜ್ಯೋತಿಷ್ಯವನ್ನು ವೈದಿಕ ವಿಜ್ಞಾನದ ಅಡಿಯಲ್ಲಿ ತಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ವಸ್ತುವನ್ನಾಗಿಸಿದ್ದರು. ಭಾರತದಲ್ಲಿ ಎಲ್ಲ ಸಮಾಜದ ಬಹಳಷ್ಟು ಜನ ನಂಬುವ ಜ್ಯೋತಿಷ್ಯದ ಬಗ್ಗೆ ಇಸ್ಲಾಮಿನ ನಿಲುವು ಅತ್ಯಂತ ಕಟುವಾದುದು. ಯಾವುದಾದರೂ ಜ್ಯೋತಿಷಿಯನ್ನು ಒಬ್ಬ ಕಂಡರೆ ಅವನ ನಲವತ್ತು ದಿನಗಳ ಕಾಲದ ಆರಾಧನೆ ನಷ್ಟ ಪಡುವುದು ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಪಡೆದವನು ಪಾಪದ ಹೊರೆಯನ್ನು ಹೊರುತ್ತಾನೆ ಎನ್ನುತ್ತದೆ ಇಸ್ಲಾಂ. ಜ್ಯೋತಿಷ್ಯದ ಕುರಿತ ಪವಿತ್ರ ಕುರಾನಿನ ಹೇಳಿಕೆ ಹೀಗಿದೆ.

“With Him are the keys to the unseen and none knows it except Him”.The Holy Qur’an, Chapter 6, Verse 59

“Say: None in the heavens or earth knows the unseen except Allah.”The Holy Qur’an, Chapter 27, Verse 65

ಮತ್ತೊಂದೆಡೆ ಪ್ರವಾದಿಗಳನ್ನು ಸಂಬೋಧಿಸುತ್ತಾ ಪವಿತ್ರ ಕುರಾನ್ ಹೀಗೆ ಹೇಳುತ್ತದೆ: “ಹೇಳಿ ಪ್ರವಾದಿಗಳೇ, ನನಗೆ ಅಗೊಚರವಾದದ್ದು ಕಾಣುವಂತಾಗಿದ್ದಿದ್ದರೆ ನಾನು ಒಳ್ಳೆಯದನ್ನೇ ಬಯಸುತ್ತಿದ್ದೆ, ಆದರೆ ನಾನು ಒಬ್ಬ ಸಂದೇಶವಾಹಕ ಮತ್ತು ವಿಶಾಸಿಗಳಿಗೆ ಶುಭ ವಾರ್ತೆ ತರುವವ ಮಾತ್ರ”

ಈ ರೀತಿಯ ಹೇಳಿಕೆಗಳು ಮತ್ತು ವಿಧ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತ ವಾಗಿದ್ದೂ ಬಹಳಷ್ಟು ಮುಸ್ಲಿಮರು ಹಸ್ತ ಸಾಮುದ್ರಿಕೆ, ಅದೂ ಇದೂ ಎಂದು ಅಲೆಯುವುದನ್ನು ನಾನು ಕಂಡಿದ್ದೇನೆ.

ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.