ಹೀಗೊಂದು ಸ್ವಾರಸ್ಯಕರ “ಪಂಪು”

ಕನ್ನಡದ ಪ್ರಸಿದ್ಧ ವೆಬ್ ತಾಣವೊಂದರಲ್ಲಿ “ಹೆಸರಲ್ಲಿ ಏನಿದೆ” ಶೀರ್ಷಿಕೆಯಡಿ ಒಂದು ಲೇಖನ ಬಂದಿತ್ತು. ಅದರಲ್ಲಿ ಕೆಲವೊಂದು ರಾಜ್ಯಗಳ ಜನರ ಹೆಸರುಗಳು ಬೇರೊಂದು ರಾಜ್ಯಗಳಲ್ಲಿ ಯಾವ ರೀತಿ ಆಭಾಸವಾಗಿ ಕಾಣುತ್ತದೆ ಎಂದು ಲೇಖಕಿ ಬರೆದಿದ್ದರು. ಚಟ್ಟೋಪಾಧ್ಯಾಯ ಎನ್ನುವ ಉತ್ತರಭಾರತದ ಹೆಸರು ನಮಗೆ “ಚಟ್ಟ’ ಕಟ್ಟೋದ ರಲ್ಲಿ ಫೇಮಸ್ ಎಂದು ತೋರುತ್ತದೆ. ಅದೇ ಲೇಖನದಲ್ಲಿ “ ಇಂಟರ್ವ್ಯೂವ್ ಗೆ ಬಂದಿದ್ದ ’Vivek Tulluri’ ಎಂಬ ಆಂಧ್ರ ಯುವಕನ ಹೆಸರನ್ನು ಯಾವ ರೀತಿ ಕೆಡಸಿಟ್ಟಳು ಎಂದು ನಾನು ಬಾಯ್ಬಿಟ್ಟು ಹೇಳೋಲ್ಲಪ್ಪ…ಕನ್ನಡ ಬಂದ್ರೆ ನೀವೆ ಅರ್ಥ ಮಾಡ್ಕಳಿ!” ಎಂದು ನಿರ್ಭಿಡೆಯಾಗಿ ಬರೆದು ನನ್ನನ್ನು ಚಕಿತ ಗೊಳಿಸಿದರು. ಕೆಲವೊಮ್ಮೆ ಮಡಿವಂತರು ಅಧಿಕ ಇರುವ ವೆಬ್ ತಾಣದಲ್ಲಿ ಆ ರೀತಿಯ ಬಳಕೆ ಸ್ವಲ್ಪ ಕಷ್ಟವೇ. ಆದರೆ ಸುದೈವವಶಾತ್ ಯಾರೂ ಅದಕ್ಕೆ ದೊಡ್ಡ ರೀತಿಯ ತಕರಾರು ಮಾಡದೆ ಆನಂದಿಸಿದ್ದು ಲೇಖನಕ್ಕೆ ಬಂದ ಪ್ರತಿಕ್ರಿಯಗಳಿಂದ ತಿಳಿಯಿತು. “ಸನ್ನೆ” (sign) ಭಾಷೆಯ ಬಗ್ಗೆ ನಾನು ಒಂದು ಲೇಖನವನ್ನು ಇದೇ ವೆಬ್ ತಾಣಕ್ಕೆ ಕಳಿಸಿದ್ದೆ. ಪ್ರಕಟವಾದ ೨೪ ಘಂಟೆಗಳ ಒಳಗೆ ಅದನ್ನು ತಿಪ್ಪೆ ಸೇರಿಸಿದರು ನಿರ್ವಾಹಕರು. ಏಕೆಂದರೆ ಆ ಲೇಖನದಲ್ಲಿ ಜನ ಕೋಪಗೊಂಡಾಗ ಯಾವ ಯಾವ ರೀತಿಯ ಲ್ಲಿ ಹಾವಭಾವ ಪ್ರದರ್ಶಿಸಿ ತಮ್ಮ ಕೋಪ ತೋರಿಸುತ್ತಾರೆ ಎಂದು ಬರೆದು, f**k off ಎಂದು ಅರ್ಥ ಬರಲು “ಮಧ್ಯದ ಬೆರಳನ್ನು ಹೊರಕ್ಕೆ ತೂರಿಸಿ” ಪ್ರದರ್ಶಿಸುವ ಬಗ್ಗೆ ಬರೆದಿದ್ದೆ. ಅದು ಶಿಷ್ಟಾಚಾರಕ್ಕೆ ವಿರುದ್ಧವಾಗಿ ತೋರಿತು. ನಂತರ ನನಗೂ ಒಂದು ರೀತಿಯ ಅಪರಾಧೀ ಮನೋಭಾವ ಕಾಡಿತು, ಬರೆಯುವಾಗ ಒಂದಿಷ್ಟು discretion ಪ್ರದರ್ಶಿಸಬೇಕಿತ್ತು ಎಂದು. ನಾನು ಮೇಲೆ ಪ್ರಸ್ತಾಪ ಮಾಡಿದ “ಹೆಸರಲ್ಲಿ ಏನಿದೆ’ ಬರಹಕ್ಕೆ ಪ್ರತಿಕ್ರಿಯೆ ಬರೆಯಲು ಯತ್ನಿಸಿದೆ. ಪ್ರತಿಕ್ರಿಯೆ ಪೋಲಿ ಆಗಬಹುದೋ ಏನೋ ಎಂದು ಭಯ ಬಿದ್ದು ಅಲ್ಲಿ ಬರೆಯದೆ ನನ್ನ ಬ್ಲಾಗ್ ಗೆ ಅದನ್ನು ಬರೆದು ಹಾಕಲು ತೀರ್ಮಾನಿಸಿದೆ. ಏಕೆಂದರೆ “ಹಳೆ ಸೇತುವೆ” (ನನ್ನ ಬ್ಲಾಗ್) ಬಹಳಷ್ಟು ಪೋಲಿ ಕೆಲಸಗಳನ್ನ ಕಂಡ ಸೇತುವೆ. ಇಲ್ಲಿ ಏನೇ ಬರೆದರೂ “ಇವನು ತನ್ನ ಹಳೆ ಬುದ್ಧಿ ಬಿಡುವವನಲ್ಲ“ ಎಂದು ಕೈ ಚೆಲ್ಲಿ ಕೂರಬಹುದೇ ಅಷ್ಟೇ ನನ್ನ ಸೇತುವೆ. ಈಗ ಈ ಲೇಖನಕ್ಕೆ ಪ್ರೇರೇಪಣೆ ಆದ ವಿಷಯಕ್ಕೆ ನೇರವಾಗಿ ಬರೋಣ.

ನೀವೂ ಸಹ ನೋಡಿರಬಹುದು ಅಲ್ಲಲ್ಲಿ ಗೋಡೆ ಮೇಲೆ ನೀರಿನ ಪಂಪ್ ಒಂದರ ಜಾಹೀರಾತು. “TULLU” PUMP” ಅಂತ. ಅದು “ಟುಲ್ಲು” ಪಂಪೋ ಅಥವಾ ಉಚ್ಛಾರ ತಪ್ಪಿದಾಗ ಬೇರಾವುದಾದರೂ ಪಂಪೋ ನನಗೆ ಗೊತ್ತಿಲ್ಲ. ಆದರೆ ಅದನ್ನು ನೋಡಿದಾಗ ಮಾತ್ರ ಮನಸ್ಸು ಕಿಲ ಕಿಲ ಎಂದು ನಕ್ಕಿದ್ದಿದೆ. ಅದೇ ರೀತಿ “tulika’ ಎನ್ನುವ ಹೆಸರೂ ಅಷ್ಟೇ. ಈ ಹೆಸರನ್ನು ಇಟ್ಟುಕೊಂಡಾಕೆಯನ್ನು ಜೋರಾಗಿ, ಪೂರ್ತಿಯಾಗಿ ಕರೆಯಲೂ ಕಷ್ಟ, ಪ್ರೀತಿಯಿಂದ ಅರ್ಧ ಮಾಡಿ ಕರೆಯುವುದು ಇನ್ನೂ ಕಷ್ಟ. ಇದೆ ರೀತಿಯ ಇನ್ನೂ ತುಂಬಾ ಹೆಸರುಗಳಿವೆ. ಈ ಹೊತ್ತಿನಲ್ಲಿ ತೋಚಿದ್ದು ಇಷ್ಟು. ಇದನ್ನು ಓದುವವರು ತಮಗೆ ಕಿರಿಕ್ ಆಗಿ ತೋಚಿದ ಹೆಸರುಗಳನ್ನು ಪ್ರತಿಕ್ರಿಯೆ ಮೂಲಕ ಬರೆಯಬಹುದು…

ನನ್ನ ಸೇತುವೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತದೆ, ಭಯ ಬೇಡ.