ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”

ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.

“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.

ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.

ಇದು ನಾನು ಅರ್ಥೈಸಿ ಕೊಂಡ supply demand story.

“ಪೆರು” ವಿಗೆ ಈ ವರುಷದ ನೊಬೆಲ್ ಸಾಹಿತ್ಯ ಪ್ರಶಸ್ತಿ



 

ಸಾಹಿತ್ಯದಲ್ಲಿ ಈ ವರ್ಷ ನೊಬೆಲ್ ಗಿಟ್ಟಿಸಿದ ಲ್ಯಾಟಿನ್ ಅಮೇರಿಕೆಯ “ಪೆರು” ದೇಶದ ಮಾರಿಯೋ ವರ್ಗಾಸ್ ಲೌಸ  ಕಾಗದ ಪುಸ್ತಕ ಪ್ರಿಯರು. “ಇ” ಪುಸ್ತಕಗಳು ಮತ್ತು ಇವನ್ನ ಓದಲು ಅನುಕೂಲ ಮಾಡಿಕೊಡುವ ಇಲೆಕ್ಟ್ರೋನಿಕ್ ಗೆಜೀಟ್ ಗಳು ಎಬ್ಬಿಸುತ್ತಿರುವ ಬಿರುಗಾಳಿಗೆ ಶತಮಾನಗಳ ನಮ್ಮ ಮಿತ್ರ “ಬಡಪಾಯಿ ಕಾಗದ” ತೂರಿ ಹೋಗುವುದು ಅವರಿಗೆ ಇಷ್ಟವಲ್ಲ.

ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ ಬಂದಿತು. ಇವರ ಆಸಕ್ತಿ ಬರೀ ಸಾಹಿತ್ಯ ಕೃಷಿಗೆ ಮಾತ್ರ ಸೀಮಿತವಲ್ಲ, ಅನ್ಯಾಯದ ವಿರುದ್ಧದ ಜನರ ಹೋರಾಟದಲ್ಲೂ ಭಾಗಿಯಾಗಿ (ನಮ್ಮ ಅರುಂಧತಿ ರಾಯ್ ರೀತಿ) ಹಲವು ಸಂಕಷ್ಟಗಳನ್ನು ಅನುಭವಿಸಿದ ಸಾಮಾಜಿಕ ಲೇಖಕ. ತನ್ನ ಹುಟ್ಟೂರಿನಲ್ಲಿ ಆಳುವವರ ದಬ್ಬಾಳಿಕೆ ಅತಿಯಾಗಿ ಅಲ್ಲಿನ ಸೇನಾಧಿಕಾರಿ ಮಾರಿಯೋ ಲೌಸ ಅವರ ಪೌರತ್ವ ಪೆರುವಿನ “ಭೌಗೋಳಿಕ ಆಕಸ್ಮಿಕ” (geographical accident) ಆಗಿದ್ದು ದೇಶದ ಪೌರತ್ವವನ್ನು ರದ್ದು ಗೊಳಿಸ ಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದಾಗ ಅಪಾಯ ಮನಗಂಡ ಈ ಲೇಖಕ ಸ್ಪೇನ್ ದೇಶದ ಪೌರತ್ವ ಪಡೆದು ಅದರ ಜೊತೆಗೆ ಪೆರುವಿನ ಪುರತ್ವವನ್ನೂ ಉಳಿಸಿಕೊಂಡರು. ಪ್ರಬಂಧಗಳು, ನಾಟಕ, ಸಾಹಿತ್ಯ ಮತ್ತು ರಾಜಕೀಯ ಹೊರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಈ ಲೇಖಕ ಅಮೆರಿಕೆಯ ಮತ್ತು ಅಇರೋಪ್ಯ ದೇಶಗಳ ವಿಶ್ವ ವಿದ್ಯಾಲಯಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ, ಭಾಷಣಕಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ರೀತಿಯ ಹಲವು ದೇಶಗಳ ಬಿಡುವಿಲ್ಲದ  ಪರ್ಯಟನದಿಂದ ಬರವಣಿಗೆಗೆ ತೊಡಕಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ  “ವಾಸ್ತವವಾಗಿ ವಿವಿಧ ಭಾಷೆ ಗಳೊಂದಿಗಿನ ತಮ್ಮ ಬದುಕು ತಮ್ಮ ಅರಿವನ್ನು ಹೆಚ್ಚಿಸಿದ್ದು, ಒಂದೇ ಭಾವನೆಯನ್ನು ಹೇಗೆ ವಿವಿಧ ಭಾಷೆಗಳು ವ್ಯಕ್ತಪಡಿಸುತ್ತವೆ ಎನ್ನುವ ಸೂಕ್ಷ್ಮತೆ ಸಹ ತನಗೆ ಕಾಣಲು ಸಿಗುತ್ತದೆ, ಹಾಗೆಯೇ ಮಾತೃ ಭಾಷೆಯೊಂದಿಗಿನ ನನ್ನ ನಂಟು ಇತರೆ ಭಾಷೆ ಗಳೊಂದಿಗಿನ ಒಡನಾಟದಿಂದ ಇನ್ನಷ್ಟು ಶ್ರೀಮಂತ ಗೊಂಡಿದೆ” ಎಂದು ಹೇಳಿದರು. ಸಂದರ್ಶನದ ವೇಳೆ ಹೇಳಿದ ಈ ಮಾತುಗಳು ಗಡಿಬಿಡಿಯ ಅಂತಾರಾಷ್ಟ್ರೀಯ ಬದುಕು ಈ ಲೇಖಕನ ಸಂಸ್ಕಾರವನ್ನು ಹೇಗೆ ಶ್ರೀಮಂತ ಗೊಳಿಸಿತು ಎನ್ನುವ ಸತ್ಯವನ್ನು ನಮಗೆ ತೋರಿಸುತ್ತದೆ.

ಲ್ಯಾಟಿನ್ ಅಮೆರಿಕಾದ ದೇಶಗಳು ಕಿತ್ತು ತಿನ್ನುವ ಬಡತನದೊಂದಿಗೆ ಮಾದಕ ದ್ರವ್ಯಗಳ ಮಾರಾಟ ಮತ್ತು ದಂಧೆಯನ್ನು ನಡೆಸುವ ಭೂಗತ ದೊರೆಗಳ ದಬ್ಬಾಳಿಕೆ ಯಿಂದಲೂ ತತ್ತರಿಸುತ್ತಿದೆ. ಈ ಹಾವಳಿಯನ್ನ ತಡೆಯಲು ಸರಕಾರಗಳು ಕೋಟ್ಯಂತರ ಡಾಲರುಗಳನ್ನು ಇವರ ವಿರುದ್ಧ ದ ಹೋರಾಟಕ್ಕೆ ವ್ಯಯಿಸಿದರೂ ಆ ಹಣ ಲಂಚಕೋರ ಸೇನಾಧಿಕಾರಿಗಳ, ರಾಜಕಾರಣಿಗಳ ಪಾಲಾಗುವುದನ್ನು ಕಂಡ ಈ ಲೇಖಕ ಸರಕಾರದ ಈ ನೀತಿಯನ್ನು ವಿರೋಧಿಸಿ ಹಣವನ್ನ ಶಸ್ತ್ರಗಳನ್ನು ಖರೀದಿಸಲು ವ್ಯಯಿಸದೆ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ಆರಂಭಿಸಲು ಮತ್ತು ಮಾದಕ ದ್ರವ್ಯವ್ಯಸನಿಗಳ ಚಿಕಿತ್ಸೆಗೆ ಖರ್ಚು ಮಾಡಲು ಕರೆ ನೀಡಿದರು. ಸೇನಾಧಿಕಾರಿಗಳ ಮತ್ತು ರಾಜಕಾರಣಿಗಳ ವಿಷವರ್ತುಲ ಇವರ ಮಾತುಗಳನ್ನು ಕೇಳುವ ಗೋಜಿಗೆ ಹೋಗಲಿಲ್ಲ.

ಲೇಖಕರೂ ಸಹ ಸಾಮಾನ್ಯ ಜನರಂತೆ ಪೌರರಾಗಿದ್ದು ಜನರ ಹೋರಾಟ ಮತ್ತು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ನೈತಿಕ ಹೊಣೆ ಅವರ ಮೇಲೆ ಇರಬೇಕು ಎಂದು ನೊಬೆಲ್ ಪ್ರಶಸ್ತಿ ಪಡೆಯುವ ಮುನ್ನ ನಡೆದ ಚರ್ಚೆಯಲ್ಲಿ ಹೇಳಿದ್ದರು ಲೌಸ. ೧೯೯೦ ರಲ್ಲಿ ಆಲ್ಬರ್ಟೋ ಫುಜಿಮೋರಿ ವಿರುದ್ಧ ಸೋತ ಈ ಲೇಖಕ ಮತ್ತೆ ರಾಜಕೀಯದ ಕಡೆ ತಲೆಹಾಕದೆ ಪೂರ್ಣ ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಸರ್ವಾಧಿಕಾರಿಗಳನ್ನು ಚುನಾವಣೆಯಲ್ಲಿ ಬಗ್ಗು ಬಡಿಯದಿದ್ದರೇನಂತೆ ತಮ್ಮ ಪ್ರಖರ ಬರಹವನ್ನೇ ಅಸ್ತ್ರವನ್ನಾಗಿ ಉಪಯೋಗಿಸಿ ಲೇಖನಿಯೂ ಓಟು ಗಳಷ್ಟೇ ಪರಿಣಾಮಕಾರಿ ಎಂದು ತೋರಿಸಿದರು. “ಪದಗಳೇ ಕೃತ್ಯಗಳು…. ಬರಹದ ಮೂಲಕ ಚರಿತ್ರೆಯನ್ನು ಬದಲಿಸಲು ಸಾಧ್ಯ” ಎಂದು ಬಲವಾಗಿ ನಂಬಿದವರು. ಲ್ಯಾಟಿನ್ ಅಮೆರಿಕಾದಲ್ಲಿ ಎಲ್ಲೇ ಶೋಷಣೆ ಅನ್ಯಾಯ ನಡೆದರೂ ಅಲ್ಲಿಗೆ ಧಾವಿಸುವ ಈ ಲೇಖಕ ತಾವು ಕಂಡಿದ್ದನ್ನು ಬರೆದು ನೀಚ ಕೃತ್ಯಗಳನ್ನು ಬಯಲಿಗೆಳೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕ್ರೌರ್ಯ ಸಹ ಇವರ ಲೇಖನಿಯ ಮೊನಚಿಗು ಸಿಕ್ಕು ಸಮಾಜದ ಕಣ್ಣು ತೆರೆಸುವಂತೆ ಮಾಡುತ್ತದೆ ಇವರ ಬರಹಗಳು. ಇಂಥದ್ದೇ ಒಂದು ಘಟನೆ ಮತ್ತೊಂದು “ಡೊಮಿನಿಕನ್ ರೆಪಬ್ಲಿಕ್”. ಅಲ್ಲಿನ ಸರ್ವಾಧಿಕಾರಿ ರಾಫೆಲ್ ಟ್ರೂಜಿಲೋ ೧೯೩೦ ರಿಂದ ೧೯೬೧ ರವರೆಗಿನ ತನ್ನ ಆಳ್ವಿಕೆಯಲ್ಲಿ ತನ್ನ ಮಗಂದಿರೊಂದಿಗೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯವನ್ನು ಪ್ರತಿರೋಧವಿಲ್ಲದೆ ನಡೆಸುತ್ತಿದ್ದ. ಎಷ್ಟೋ ಜನ ತಮ್ಮ ಹೆಣ್ಣು ಮಕ್ಕಳನ್ನು ಈ ಸರ್ವಾಧಿಕಾರಿ ಮತ್ತು ಮಗಂದಿ ರಿಗೆ “ಉಡುಗೊರೆ” ಯಾಗಿ ಕೊಡುತ್ತಿದ್ದರಂತೆ ಭಯ ಬಿದ್ದು. (ಉತ್ತರ ಭಾರತದ ಠಾಕೂರ ಜಮೀನ್ದಾರರಿಗೆ ಹೆದರಿ ಬಡ ರೈತರು ಬದುಕಿದಂತೆ).  ರಾಫೆಲೋ ನ ದೌರ್ಜನ್ಯವನ್ನು “the feast of the goat” ಪುಸ್ತಕದಲ್ಲಿ ಸವಿವರವಾಗಿ ವರ್ಣಿಸಿದ್ದಾರೆ ಈ ಲೇಖಕ. ಇದೇ ತೆರನಾದ ಮಹಿಳೆಯರ ಮೇಲಿನ ದೌರ್ಜನ್ಯ ಇರಾಕಿನ ಸದ್ದಾಮ್ ಹುಸೇನರ ಮಕ್ಕಳೂ ಬೀದಿಯಲ್ಲಿ ಕಂಡ ಸುಂದರ ಹೆಣ್ಣುಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದರು ಎಂದು ಈ ಲೇಖಕರು ಹೇಳಿದರೂ  ( ಅಮೇರಿಕ ನಿಯಂತ್ರಿತ ಮಾಧ್ಯಮಗಳ ಅಪಪ್ರಚಾರವೂ ಆಗಿರಲಿಕ್ಕೆ ಸಾಕು ) “ಕ್ರೌರ್ಯ ಯಾವುದೇ ಸರ್ವಾಧಿಕಾರಿಗಳ ಆಡಳಿತದಲ್ಲೂ ಸಮನಾಗಿರುತ್ತದೆ” ಎನ್ನುವ ಅಭಿಪ್ರಾಯ “ಮಾರಿಯೋ ವರ್ಗಾಸ್ ಲೌಸ” ಅವರದು. ಕೊನೆಯದಾಗಿ ಸಾಹಿತ್ಯದ ಬಗ್ಗೆ ವರ್ಗಾಸ್ ಅವರ, ವಿಶೇಷವಾಗಿ ನಮಗೆ ಅನ್ವಯವಾಗುವ,   ಮುತ್ತಿನಂಥ ಮಾತುಗಳು…

“I think that literature has the important effect of creating free, independent, critical citizens who cannot be manipulated.”