ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ ಮಗು ೭೦೦ ಕೋಟಿಯದು. ಭರ್ತಿ ಏಳು ಬಿಲ್ಲಿಯನ್. ವಿರಾಮ ಖುರ್ಚಿ ಪಂಡಿತರಿಗೆ ಈ ಸುದ್ದಿ ಒಂದು ಸುಗ್ಗಿ. ತಮಟೆ ಬಾರಿಸಲು ಆರಂಭಿಸುತ್ತಾರೆ ಜನಸಂಖ್ಯೆಯ ವಿಪರೀತ ವೃದ್ಧಿ ಮತ್ತು ಅದು ತರಬಹುದಾದ ಆಪತ್ತುಗಳ, ಅನಾಹುತಗಳ ವರ್ಣನೆಯೊಂದಿಗೆ.     

ಜನಸಂಖ್ಯೆ ತಡೆಯಲು ಇರುವ ನೂರ ಒಂದು ಅಥವಾ ಸಾವಿರದ ಒಂದು ಉಪಾಯಗಳ ಜೊತೆ ಮತ್ತೊಂದು ಉಪಾಯ ಈಗ ಸೇರಿಕೊಂಡಿದೆ. ಮಹಿಳೆಯರಿಗೆ ಸಂತಾನೋತ್ಪತ್ತಿ ಫ್ಯಾಕ್ಟರಿಯ ಉಸ್ತುವಾರಿ ವಹಿಸಿದರೆ ಜನಸಂಖ್ಯೆ ತಗ್ಗ ಬಹುದಂತೆ. ದೇವರೇ ಬಲ್ಲ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿನ ಧ್ವನಿ ಜೋರಾದಾಗ ಸಂತಾನೋತ್ಪತ್ತಿ ತಂತಾನೇ ನಿಧಾನ ಆಗಬಹುದು ಅನ್ನೋ ಆಶಯ. ಜನಸಂಖ್ಯೆ ಏರಿಕೆ ಈಗ ಇರುವ ಸಂಪನ್ಮೂಲಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಡಿತರ ಒಂದು ಗುಂಪು ಹೇಳುತ್ತಿದ್ದರೆ ಮತ್ತೊಂದು ಗುಂಪಿಗೆ ಈ ಥಿಯರಿ ನಥಿಂಗ್ ಬಟ್ ಟ್ರಾಶ್. ಯಾರನ್ನು ನಂಬುವುದು?

 ಕ್ಷಿಪ್ರ ಗತಿಯಲ್ಲಿ ಮುಪ್ಪಾಗುತ್ತಿರುವ ಜಪಾನ್

ಒಂದು ಕಡೆ ಏರುತ್ತಿರುವ ಜನಸಂಖ್ಯೆ ವಿಶೇಷಜ್ಞರ ಆತಂಕವನ್ನು ಹೆಚ್ಚಿಸುತ್ತಿದ್ದರೆ ಮತ್ತೊಂದು ಕಡೆ ತಮ್ಮ ದೇಶದ ಜನಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸ್ಕೌಂಟು, ಅದರ ಜೊತೆ ಟೈಮ್ ಆಫು ಮುಂತಾದುವುಗಳನ್ನು ಯುವಜನರ ಮುಂದೆ ಇಡುತ್ತಿರುವ ಬೆಳವಣಿಗೆ. ಈ ಬೆಳವಣಿಗೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾದರೂ ಪವಾಡಸದೃಶವಾಗಿ ಶ್ರೀಮಂತಿಕೆಯಿಂದ ಕಂಗೊಳಿಸಿದ ಜಪಾನ್ ದೇಶದ್ದು. time off ಏಕೆಂದರೆ ಮಕ್ಕಳನ್ನು ಹುಟ್ಟಿಸಲು, ದೊಡ್ಡ ಪರಿವಾರಕ್ಕಾಗಿ ಅಂಗಡಿ ಮುಂಗಟ್ಟು ಗಳು ರಿಯಾಯಿತಿಯನ್ನು ಘೋಷಿಸುತ್ತಿವೆ ಜಪಾನ್ ದೇಶದಲ್ಲಿ. ಹುಟ್ಟುವ ಪ್ರತೀ ಮಗುವಿನ ಮೇಲೂ ಹಣಕಾಸಿನ ಸಹಾಯ ಕೊಡ ಮಾಡುತ್ತಿದೆ ಅಲ್ಲಿನ ಸರಕಾರ. ಈ ಕ್ರಮಗಳ ಮೂಲಕ ಏನಾದರೂ ಮಾಡಿ, ಹೇಗಾದರೂ ಮಾಡಿ, ಜನಸಂಖ್ಯೆ ಹೆಚ್ಚಿಸಿರಯ್ಯ ಎಂದು ಅಲ್ಲಿನ ಸರಕಾರದ ವಿಜ್ಞಾಪನೆ. ನಮ್ಮ ದೇಶ one is fun ಎಂದು ಊಳಿಡುತ್ತಿದ್ದರೆ, ಜಪನೀಯರ ಆಕ್ರಂದನ more please ಎಂದು.  ಪ್ರಪಂಚ ವೈರುಧ್ಯಗಳ ಸಂತೆ, ಅಲ್ಲವೇ?

ಬಹುಪಾಲು ಜಪನೀಯರಿಗೆ ಸಂತಾನ ವೃದ್ಧಿ ಅನ್ನೋದು ‘to do list’ ನ ಕಟ್ಟಕಡೆಯ ಎಂಟ್ರಿ. ಇದನ್ನು ಟಾಪ್ ಪ್ರಯಾರಿಟಿ ಮಾಡಲು ಸರಕಾರದ ಸರ್ಕಸ್ಸು. ಯುವಜನರ ಒತ್ತು ಪ್ರೋಗ್ರೆಸ್ ಕಡೆ, ಪ್ರೊಕ್ರಿಯೇಶನ್ ಕಡೆ ಅಲ್ಲ. ಏಕೆಂದರೆ ಅಲ್ಲಿ ವಿವಾಹ ದುಬಾರಿ. ಪ್ರತೀ ವಿವಾಹಕ್ಕೆ ಸುಮಾರು ೨೦ ಲಕ್ಷ ರೂಪಾಯಿ ಖರ್ಚು. ಮದುವೆಯಾದ ಮೇಲೆ ಮಗು ಹುಟ್ಟಿದರೆ ಮಗುವಿನ ತಾಯಿಗೆ ಒಳ್ಳೆಯ ವರಮಾನ ಕೊಡುವ ಕೆಲಸ ಸಿಗೋದು ಕಷ್ಟ. ಅಮೇರಿಕಾ ಅಥವಾ ಅಇರೋಪ್ಯ ದೇಶಗಳ ಹಾಗೆ  ಮದುವೆಯಾಗದೆ ಸಂತಾನೋತ್ಪತ್ತಿ ಜಪಾನಿನಲ್ಲಿ ವಿರಳ.  ಅಷ್ಟು ಮಾತ್ರವಲ್ಲ ಜಪಾನಿನಲ್ಲಿ ದೀರ್ಘಾಯುಷಿಗಳು ಹೆಚ್ಚು. ಮೇಲಿನ ಕಾರಣಗಳನ್ನು ಕೂಡಿಸಿ ನೋಡಿದಾಗ ಜಪಾನಿನಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಅತಿ ಕಡಿಮೆ.     

ಜನಸಂಖ್ಯೆ ವೃದ್ಧಿಗೆ ಒತ್ತು ಕೊಡುತ್ತಿರುವ ಮತ್ತೊಂದು ದೇಶ ಸ್ಪೇನ್. ಸ್ಪೇನ್ ದೇಶದಲ್ಲಿ ಹುಟ್ಟುವ ಪ್ರತೀ ಮಗುವಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಸರಕಾರ ನೀಡುತ್ತದೆ.      

ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು

ತಟ್ಟು ಚಪ್ಪಾಳೆ ಪುಟ್ಟ ಮಗು, ಇಕೋ ಕೈ, ತಕೋ ಕೈ, ತಟ್ಟು ಚಪ್ಪಾಳೆ ಪುಟ್ಟ ಮಗು… ಈ ಕವಿತೆಯನ್ನು ೭೦೦ ನೇ ಕೋಟಿ ಮಗುವಿಗೆ ಹಾಡಿ ಕೇಳಿಸಲು ಸಲ್ಮಾನ್ ರುಶ್ಡಿ ತಯಾರಲ್ಲ. ೭೦೦ ನೇ ಕೋಟಿ ಮಗುವಿಗೆ ನೀವು ಕೊಡುವ ಸಂದೇಶವೇನು ಎಂದು ಕೇಳಿದಾಗ ಬುಕರ್ ಪ್ರಶಸ್ತಿ ವಿಜೇತ, ವಿವಾದಾಸ್ಪದ ಲೇಖಕ ಹೇಳಿದ್ದು “(ಧರೆಯ ಮೇಲೆ) ಸ್ವರ್ಗವನ್ನು ಕಲ್ಪಿಸಿಕೊಳ್ಳದಿರು” ಎಂದು. imagine no heaven.

ಸಂಪನ್ಮೂಲಗಳನ್ನು ನುಂಗಲೆಂದೇ ಹುಟ್ಟುತ್ತವೆ ಮಕ್ಕಳು ಎಂದು ನಂಬುವವರು ಇದಕ್ಕಿಂತ ಒಳ್ಳೆಯ ಮಾತನ್ನು ಆಡಲಾರರು. ಸುಮಾರು ಐದು ದಶಕಗಳಿಂದಲೂ ನಾವು ಕೇಳುತ್ತಾ ಬಂದಿದ್ದು, ಜನಸಂಖ್ಯೆ ಏರುತ್ತಿದೆ, ವಾತಾವರಣ ಬದಲಾಗುತ್ತದೆ, ತಿನ್ನಲು ಏನೂ ಇರುವುದಿಲ್ಲ, ಹಸಿವಿನಿಂದ ಜನ ಸಾಯಲಿದ್ದಾರೆ, ಬರ ಬಂದೆರಗಲಿದೆ. ಏರುತ್ತಿರುವ ಜನಸಂಖ್ಯೆ ಕಾರಣ ನಮ್ಮ ಗ್ರಹ ಇಕ್ಕಟ್ಟಾಗುತ್ತಿದೆ, ಹಾಗೇ ಹೀಗೆ…ಆದರೆ ಅಂಥ ಎಚ್ಚರಿಕೆಗಳು, ‘caveat emptor’ ಗಳು  ಪ್ರಕಟವಾದ ಕಾಗದಗಳ ಜೊತೆ ರದ್ದಿ ಸೇರಿದವೆ ವಿನಃ ಯಾವುದೇ ಕೇಡುಗಾಲ ಬಂದೆರಗಲಿಲ್ಲ.   

ಈ ಲೇಖನದ ಕರ್ತೃವಿನ ಸಂದೇಶ

ಕಂದಾ ಸುಸ್ವಾಗತ, ನಮ್ಮ ಭವ್ಯ ಧರೆಗೆ. ಶತಮಾನಗಳಿಂದ ಪೂರ್ವದಿಂದ ಹುಟ್ಟುತ್ತಿರುವ ಸೂರ್ಯ ಮತ್ತು ಪಶ್ಚಿಮದಲ್ಲಿ ಮುಳುಗುವ ಸೂರ್ಯನ ನಡಿಗೆಯ ನಿಯಮವನ್ನು ನಾವು ಬದಲಿಸಲಿಲ್ಲ. ಉಸಿರಾಡುವ ಗಾಳಿ ಎಂದಿನ ಹಾಗೇ ಈಗಲೂ ತೆರಿಗೆಯಿಂದ ಮುಕ್ತ. ಹೌದು ನಿನ್ನಿಂದ ಎರವಲು ಪಡೆದಿದ್ದ ಭೂಮಿಯ ಮೇಲೆ ನಮ್ಮ ಅಹಂ ಮತ್ತು ಸ್ವಾರ್ಥದ ಕಾರಣ ಸಾಕಷ್ಟು ಅನಾಚಾರ ಎಸಗಿದ್ದೇವೆ. ನಮ್ಮ ಮಣ್ಣನ್ನು ಮೊನ್ಸಾಂಟೊ ಕಂಪೆನಿಗೆ ಗುತ್ತಿಗೆ ಕೊಟ್ಟು ಉಸಿರುಗಟ್ಟಿಸಿದ್ದೇವೆ. ಕಾಯಿ ಹಣ್ಣಾಗಲು ನಿಸರ್ಗ ನಿಯಮ ತೆಗೆದುಕೂಳ್ಳುವ ಸಮಯಕ್ಕೆ ಕಾಯುವ ವ್ಯವಧಾನ ನಮ್ಮಲ್ಲಿಲ್ಲ, ಅದಕ್ಕೆ. ಆದರೂ, ಇವೆಲ್ಲದರ ನಡುವೆಯೂ, ಕೆಲವೊಂದು ಒಳ್ಳೆಯ ಅವಿಷ್ಕಾರಗಳನ್ನೂ ನಿನಗಾಗಿ ತಯಾರಿಸಿ ಇಟ್ಟಿದ್ದೇವೆ. ನೀನು ಜನರೊಂದಿಗೆ ಬೇರೆಯದೇ, ಯಾವುದೇ ಸಭೆ ಸಮಾರಂಭ ಗಳಿಗೂ ಹೋಗುವ ತಾಪತ್ರಯವಿಲ್ಲದೆ ಮನೆಯಲ್ಲೇ ಕೂತು ಜೇಡನ ಬಲೆಯೊಳಕ್ಕೆ ಅವಿತುಕೊಂಡು ಮೊಬೈಲ್, ಫೇಸ್ ಬುಕ್, ಟ್ವಿಟ್ಟರ್, ಎಸ್ಸೆಮ್ಮೆಸ್, ಐ-ಪ್ಯಾಡ್, ಐ-ಪಾಡ್, ಇ-ಮೇಲ್ ಮುಂತಾದ ಸಾಮಾಜಿಕ ತಾಣ, ಅನುಕೂಲಗಳ ಮೂಲಕ ಜನರೊಂದಿಗೆ ನೇರವಾಗಿ ಬೆರೆಯದೆ ವ್ಯವಹರಿಸಲು ಅನುಕೂಲ ಮಾಡಿದ್ದೇವೆ. ಜನರೊಂದಿಗೆ ಬೆರೆತಾಗ ತಾನೇ ತಾಪತ್ರಯ? ಇಂಥ ಸುಂದರ ಪ್ರಪಂಚಕ್ಕೆ ನಿನಗಿದೋ ನನ್ನ ಸ್ವಾಗತ. ನೆನಪಿರಲಿ, ವಿಶ್ವ ಸಮಾನ ಅವಕಾಶ ನೀಡುವ fair ground ಅಂತೂ ಅಲ್ಲ, ಇದು ದಗಲಬಾಜಿಗಳ, ಸುಳ್ಳರ, ಕಪಟ ಜನರ, ಪ್ರತೀ ಕಾರ್ಯಕ್ಕೂ ಕಮಿಷನ್ ವಾಸನೆಯ ಬೆನ್ನು ಹತ್ತಿ ಹೋಗುವ ಅತಿ ದೊಡ್ಡ fair (ಜಾತ್ರೆ). ಲಂಚಗುಳಿತನದ ಒಂದು ಸುಂದರ eco system ಅನ್ನು  ಹುಟ್ಟುಹಾಕಿದ್ದೇವೆ.  ಲಕ್ಷಾಂತರ ವರ್ಷಗಳ ಕಾಲ ನಿರಂತರ ಪ್ರಯಾಣ ಮಾಡಿದ ವೀರ್ಯದ ಫಲ ನೀನಾಗಿರೋದರಿಂದ ಈ ಪ್ರಪಂಚದಲ್ಲಿ ಬಾಳಿಬದುಕಲು ನಿನಗೆ ಕಷ್ಟವೇನೂ ಆಗಲಿಕ್ಕಿಲ್ಲ, you will effortlessly adapt.     

ಬೀಳ್ಕೊಡುವ ಮೊದಲು ಒಂದು ಮಾತು ನೆನಪಿರಲಿ…..ಯಾರು ತಾವು ಕಾಣುವ ಸುಂದರ ಕನಸನ್ನು ನಂಬುವರೋ ಅವರಿಗೆ ಮಾತ್ರ ಭವಿಷ್ಯ ಸೇರಿದ್ದು; “ಸ್ವರ್ಗ ಕಲ್ಪಿಸಿಕೊಳ್ಳದಿರು” ಎಂದು ಹೇಳುವ ಮತಿಹೀನರಿಗಂತೂ ಖಂಡಿತಾ ಅಲ್ಲ. ಧುಮುಕು ಧರೆಗೆ ಧೈರ್ಯವಾಗಿ.   

 ಚಿತ್ರ ಸೌಜನ್ಯ: ಇಂಗ್ಲೆಂಡಿನ “ಗಾರ್ಡಿಯನ್” ದಿನಪತ್ರಿಕೆ.

star war

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.

mother of all battles. ಈ ನುಡಿಮುತ್ತುಗಳನ್ನು ಚಲಾವಣೆಗೆ ತಂದಿದ್ದು ಇರಾಕಿನ ಮಾಜಿ ಅಧ್ಯಕ್ಷ ಸದ್ದಾಮ್ ಹುಸೇನ್. ೧೯೯೦ ರ ಲ್ಲಿ ಕುವೈತ್ ದೇಶವನ್ನು ಆಕ್ರಮಿಸಿಕೊಂಡಾಗ ಅಮೆರಿಕೆಯೂ ಸೇರಿ ಬಲಿಷ್ಠ ರಾಷ್ಟ್ರಗಳು ಎಚ್ಚರಿಕೆ ನೀಡಿದ್ದಕ್ಕೆ ಸದ್ದಾಮ್ ಗುಡುಗಿದ್ದು ನನ್ನ ತಂಟೆಗೆ ಬಂದರೆ ಕೊಲ್ಲಿ ಯುದ್ಧ mother of all battles ಗೆ ಕಾರಣವಾಗುತ್ತದೆ ಎಂದು.   

ವಿಕಿ ಲೀಕ್ ವಿರುದ್ಧದ ಕಾರ್ಯಾಚರಣೆ ಈ ರೀತಿ ಆರಂಭ. ಅಸಾಂಜ್ ತನ್ನ ವಿಕಿಲೀಕ್ ಎನ್ನುವ ಟಾಮ್ ಟಾಮ್ ಅಂಗಡಿಯನ್ನು ನಡೆಸುತ್ತಿದ್ದದ್ದು ದೇಣಿಗೆಯ ಸಹಾಯದಿಂದ. ಅದಕ್ಕೆ ಬಿತ್ತು ಮೊದಲ ಕತ್ತರಿ. ಹಣ paypal, visa, master card ನಂಥ ವ್ಯವಸ್ಥೆಗಳ ಮೂಲಕ ಬರುತ್ತಿದ್ದರಿಂದ ಅಮೆರಿಕೆಗೆ ಹೆದರಿ ಅವೂ ಸಹ ತಮ್ಮ ಗಿರಾಕಿ ಅಸಾಂಜ್ ನನ್ನು ಹೊರಗಟ್ಟಿದವು. ಹಾಗೆಯೇ ಅವನ ‘ಅಂಗಡಿ’ ಗೆ ಸ್ಥಳ ದಯಪಾಲಿಸಿದ್ದ ವೆಬ್ ಸರ್ವರ ಗಳ ಮೇಲೂ ಸರಕಾರಗಳ ಕೆಂಗಣ್ಣು. ಸರ್ವರುಗಳೂ ಅಸಾಂಜ ನ ಮುಖಕ್ಕೆ ಬಡಿದವು ಕದಗಳನ್ನು. ಅಸಾಂಜ್ ನನ್ನು ಅತ್ಯಾಚಾರದ ಆರೋಪ ಹೊರಿಸಿ ಸರಳುಗಳ ಹಿಂದಕ್ಕೆ ನೂಕಿದ ಕ್ರಮ ಪ್ರತಿಭಟಿಸಿ, ಕುಪಿತರಾದ ಆತನ ಬೆಂಬಲಿಗರು ಎಲ್ಲಾ ರೀತಿಯ ವೆಬ್ ಧಾಳಿಗಳನ್ನು ಹರಿ ಬಿಟ್ಟಿದ್ದಾರೆ ವಿರೋಧಿ ಪಾಳೆಯದ ಮೇಲೆ. ಬೆಂಬಲಿಗರು facebook , twitter ಮೂಲಕ ಸಭೆ ನಡೆಸಿದರು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ಇಲ್ಲಿಗೂ ಬಂತು ಕುತ್ತು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಹ ಅಸಾಂಜ್ ಗೆ ವಿರೋಧ ವ್ಯಕ್ತಪಡಿಸಿದವು. ಇಷ್ಟೆಲ್ಲಾ ರಾದ್ಧಾಂತವನ್ನು ನೋಡಿದ ನಮಗೆ ಅನ್ನಿಸದೆ ಇರುತ್ತದೆಯೇ ನಮ್ಮ ಪುರಾಣದ ಸತ್ಯ ಹರೀಶ್ ಚಂದ್ರನೂ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿರಲಿಕ್ಕಿಲ್ಲವೇನೋ ಎಂದು?

ಈ “ಹೈ ಟೆಕ್” ಸಮರ ಒಂದು ರೀತಿಯ ಸೈ ಫೈ (sci fi )  ಸಿನೆಮಾ ನೋಡಿದಂತೆ. ಮೂರನೇ ಮಹಾಯುದ್ಧಕ್ಕೆ ನಾಂದಿ ಸಹ ಹಾಡಬಹುದೇನೋ ಇದು. ಈ ಸಮರದಲ್ಲಿ apache helicopter ಗಳಿಗಾಗಲಿ, F 16, JAGUAR ಯುದ್ಧ ವಿಮಾನಗಳಿಗಾಗಲಿ, HEAT SEEKING MISSILE ಗಳಿಗಾಗಲಿ ಕೆಲಸವಿಲ್ಲ. ಇಲ್ಲಿ “ಕೀಲಿ ಮಣೆ” ಗಳದೇ ದರ್ಬಾರು. ಈ ಕೀಲಿ ಮನೆಗಳ ವಟ ಗುಟ್ಟುವಿಕೆಗೆ ಎಲ್ಲರೂ ತತ್ತರ. ಎಲ್ಲರೂ ಎಂದರೆ ಅಸಾಂಜ್ ನ ಮೇಲೆ ನಂಜು ಕಾರುವವರು. ಅಸಾಂಜ್ ನ ಬೆಂಬಲಿಗರು ಮೇಲೆ ಸರಕಾರಗಳ ಕಿರುಕುಳಗಳಿಗೆ ಉತ್ತರ ನೀಡಲು ತೀರ್ಮಾನಿಸಿದರು. ಆಪರೇಶನ್ ಪೇ ಬ್ಯಾಕ್. ಅಂದರೆ ಮರು ಪಾವತಿ ಕಾರ್ಯಾಚರಣೆ.  PAY PAL, VISA, MASTER CARD, SERVER ಇವುಗಳ ಮೇಲೆ ಮಿಂಚಿನ ಧಾಳಿ. ವೆಬ್ಸೈಟ್ ಗಳು ಒಂದೊಂದಾಗಿ ತರಗೆಲೆಗಳಂತೆ ಉದುರ ತೊಡಗಿದವು. ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಗಂಭೀರ ಎಚ್ಚರಿಕೆ. ಅತ್ಯಾಚಾರ ನಡೆದಿದ್ದು ಸ್ವಿಸ್ ನಲ್ಲಿ ಎಂದು ಅಲ್ಲಿನ ಸರಕಾರ ಅಸಾಂಜ್ ನ ಕಸ್ಟಡಿ ಕೇಳಿದ್ದಕ್ಕೆ ಅಲ್ಲಿನ ಸರ್ಕಾರದ ವೆಬ್ ತಾಣದ ಮೇಲೂ ಧಾಳಿ. ಸರಕಾರದ ವೆಬ್ ತಾಣದ ಮೇಲೆಯೇ ಧಾಳಿ ಮಾಡಿದ ಬೇಕೆಂದರೆ ಅಸಾಂಜ್ ನಿಗೆ ಯಾವ ರೀತಿಯ ಆರಾಧಕರಿದ್ದಾರೆ ಮತ್ತು ಅವರ ಸಾಮರ್ಥ್ಯ ಎಂಥದ್ದು ಎಂದು ಊಹಿಸಿ. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಅಸಾಂಜ್ ಮಾತ್ರ ವಿಚಲಿತನಾಗಲಿಲ್ಲ. ಛಲ ಬಿಡದ ತ್ರಿವಿಕ್ರಮ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೊಂದನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಬಂದೆರಗುವ ಆಪತ್ತುಗಳನ್ನು ಊಹಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ ಎಂದು ತನ್ನ ಸಂದರ್ಶಕರಿಗೆ ಕೂಲ್ ಆಗಿ  ಹೇಳಿದ.  

ಅಸಾಂಜ್ ನ ಮೇಲೆ ಅತ್ಯಾಚಾರದ ಆರೋಪ. ಈಗ ಈ ಸಮಸ್ಯೆಗೆ ಒಂದು ರೋಮಾಂಟಿಕ್ angle ಸಹ ಇದೆ. ಘಟನೆ ನಡೆದಿದ್ದು ಸ್ವಿಸ್ ನಲ್ಲಿ. ಅದಕ್ಕೆ ಸ್ವಿಸ್ ಸರಕಾರಕ್ಕೆ ಅಸಾಂಜ್ ನ ಕಸ್ಟಡಿ ಬೇಕಿರುವುದು.  ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನಮ್ಮೊಂದಿಗೆ ಲೈಂಗಿಕವಾಗಿ ನಡೆದು ಕೊಂಡ ಎಂದು ಇಬ್ಬರು ತರುಣಿಯರ ದೂರು. ಅಸಾಂಜ್ ನ ವಿರುದ್ಧದ ಅತ್ಯಾಚಾರದ ಆರೋಪ ದ ಬಗ್ಗೆ ಸ್ವಲ್ಪ ನೋಡೋಣ. ಇಬ್ಬರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಚಟುವಟಿಕೆ ವೇಳೆ ಗರ್ಭ ನಿರೋಧಕ ಕಾಂಡೋಂ ಅಸಾಂಜ್ ಧರಿಸಿರಲಿಲ್ಲ, ಹಾಗಾಗಿ ಇದರಿಂದ ತಮಗೆ AIDS ರೋಗ ಅಥವಾ STD ಅಂಟಿ ಕೊಂಡಿತೆ ಎಂದು ಒಬ್ಬ  ಹುಡುಗಿಯ ಗಾಭರಿ. AIDS ಅಥವಾ STD (Sexually transmitted disease) ಇದೆಯೋ ಎನ್ನುವ ಗಾಭರಿ ಕೋಣೆ ಸೇರುವಾಗ ಇರಲಿಲ್ಲವೇ ಎಂದು ಬಹುಶಃ ಅಸಾಂಜ್ ನ ವಕೀಲರು ಕೇಳಬಹುದು ನ್ಯಾಯಾಲಯದಲ್ಲಿ. ಮತ್ತೊಬ್ಬಾಕೆಯ ದೂರು ಹೀಗೆ. ಲೈಂಗಿಕ ಚಟುವಟಿಕೆ ಸಮಯ ಅಸಾಂಜ್ ಧರಿಸಿದ್ದ ಗರ್ಭ ನಿರೋಧಕ ಚೀಲ ‘ದಾರಿ’ ಮಧ್ಯೆ ಹರಿದು ಹೋಯಿತು, ಉದ್ದೇಶ ಪೂರ್ವಕವಾಗಿ ಅಸಾಂಜ್ ಈ ರೀತಿ ಮಾಡಿದ ಎಂದು. ಹೇಗಿದೆ ನೋಡಿ ಸಂಸ್ಕಾರ. ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆತ ಸಂಭಾವಿತ ಎಂದು ಖಾತರಿಯಾದ ಮೇಲೆ ಅವನೊಂದಿಗೇ ಇರುಳನ್ನು ಕಳೆಯೋದು, ಬೆಳಗಾದ ಕೂಡಲೇ, ಅಮಲಿಳಿದ ನಂತರ, ಕಲ್ಪನಾ ಲಹರಿಯನ್ನು ಹರಿ ಬಿಟ್ಟು ನಲ್ಲನ ಚಾರಿತ್ರ್ಯ ವಧೆ ಮಾಡುವುದು. ವಿವಾಹದ ಹೊರಗೆ, ಕಾನೂನು ಬಾಹಿರವಾಗಿ ಈ ಕೆಲಸ ಮಾಡುವವರಿಗೆ ಚಾರಿತ್ರ್ಯ ಎಲ್ಲಿಂದ ಬಂತು ಎಂದು ಮಾತ್ರ ಕೇಳಬೇಡಿ. ಏಕೆಂದರೆ they do things differently. 

ಈ ವಿವಾದದಲ್ಲಿ ಏನೆಲ್ಲಾ ಸಂಗತಿಗಳು ಹೊರಬಂದವು ನೋಡಿ. ಸರಕಾರಗಳು ವ್ಯವಹರಿಸುವ ರೀತಿ, ರಾಷ್ಟ್ರ ರಾಷ್ಟ್ರ ಗಳ ಮಧ್ಯೆ ಮಾತುಕತೆಗಳ ಧಾಟಿ, ಮೋಸ, ವಂಚನೆ, ಇಬ್ಬಂದಿತನ.   

ಅಸಾಂಜ್ ಮತ್ತು ಸರಕಾರಗಳ ನಡುವಿನ ಜಟಾಪಟಿ ವಿಶ್ವದ ವಿಶ್ವವಿದ್ಯಾಲಯಗಳಲ್ಲಿ ಹೊಸ ಅಧ್ಯಯನ ಕೇಂದ್ರಗಳ ಸ್ಥಾಪನೆಗೂ ನಾಂದಿ ಹಾಡಬಹುದೇನೋ?  

ಮತ್ತಷ್ಟು: ವಿಕಿ ಲೀಕ್ ಮೇಲೆ ಆಗಂತುಕರು ಹಲ್ಲೆ ನಡೆಸಿದ್ದು distributed denial of service attack ಮೂಲಕ. ಅಂದರೆ ನಮಗಿಷ್ಟವಾಗದ ವೆಬ್ ಸೈಟ್ ಮೇಲೆ ನಿರಂತರವಾಗಿ, ಅವ್ಯಾಹತವಾಗಿ ಲಾಗ್ ಇನ್ ಆಗಿ ಅದನ್ನು ಅಸ್ತವ್ಯಸ್ತಗೊಳಿಸೋದು. ಒಂದು ರೀತಿಯ carpet bombing. ಉದಾಹರಣೆಗೆ ಒಂದು ಚಿಕ್ಕ ಚಾದಂಗಡಿಗೆ ಒಮ್ಮೆಲೆ ನೂರಾರು ಜನ ಗಿರಾಕಿಗಳು ಬಂದಾಗ ಆಗುವ ಅವ್ಯವಸ್ಥೆ. ಓಡಿ ಹೋಗುತ್ತಾನೆ ಅಡುಗೆ ಭಟ್ಟ. ಮಾಹಿತಿಗಾಗಿ ಎಲ್ಲರೂ ವೆಬ್ಸೈಟ್ ಮೇಲೆ ಧಾಳಿ ಮಾಡಿದಾಗ ಒತ್ತಡ ತಾಳಲಾರದೆ ಕ್ಷಣ ಕಾಲ ಮುಚ್ಚಿ ಹೋಗುತ್ತದೆ. ಕೆಲವೊಮ್ಮೆ ಟ್ವಿಟ್ಟರ್ ಗೆ ಸಹ ಈ ಪರಿಸ್ಥಿತಿ ಎದುರಾಗುವುದುಂಟು. 

pic courtesy: http://editorialcartoonists.com/cartoon/display.cfm/93568/