ನಾಗರೀಕ ಸಮಾಜಕ್ಕೆ ಕಳಂಕವಾಗಿರುವ ವೇಶ್ಯಾವಾಟಿಕೆ ಬಗ್ಗೆ ಸನ್ಮನಸ್ಸಿನ ಕನ್ನಡಿಗರೊಬ್ಬರು “ಸಂಪದ” ದದಲ್ಲಿ ಚರ್ಚೆ ಇಟ್ಟು ತಾವು ಬೆಂಗಳೂರಿನಲ್ಲಿ ಕಂಡ ದೃಶ್ಯದ ಬಗ್ಗೆ ಓದುಗರ ಗಮನ ಸೆಳೆದರು.
ಮೈಮಾರುವ, ವೇಶ್ಯಾವಾಟಿಕೆ, ಹಾದರ, ಹೀಗೆಲ್ಲಾ ವಿವಿಧ ನಾಮಾವಳಿಗಳಿಂದ ಗುರುತಿಸಲ್ಪಡುವ flesh trade ಇಂದು ನಿನ್ನೆಯದಲ್ಲ. ಇದು world’s oldest profession ಅಂತೆ. ಈ ವೃತ್ತಿಗೆ profession ಅಂತ ಕರೆದು ದಾರ್ಶನಿಕ ಅಥವಾ ಸಮಾಜ ಶಾಸ್ತ್ರಜ್ಞ ಈ ವೃತ್ತಿಗೆ ಒಂದು definition ಕೊಟ್ಟು ಮನುಷ್ಯನ ನೂರಾರು ವೃತ್ತಿಗಳಲ್ಲಿ ಇದೂ ಒಂದು ಎಂದು ಪ್ರತಿಬಿಂಬಿಸಿ ಪರೋಕ್ಷವಾಗಿ ಪ್ರೋತ್ಸಾಹಿಸಿದ್ದಾನೆ. ಮತ್ತೊಂದು ಕಡೆ ನಮ್ಮ ಹೆಣ್ಣು ಮನೆಯ ಹೆಣ್ಣು ಮಕ್ಕಳು ಮಾನವಾಗಿ ಓಡಾಡಲು ಪರರ ಹೆಣ್ಣು ಮಕ್ಕಳು ಮಾನ ಬಿಟ್ಟು ಮೆಜೆಸ್ಟಿಕ್ ನಲ್ಲೋ ಇನ್ಯಾವುದಾದರೂ ರೆಡ್ ಲೈಟ್ ಏರಿಯಾದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಿರಾಕಿಗೆ ಕಾಯಬೇಕು. ಹೇಗಿದೆ ವ್ಯವಸ್ಥೆ? ಈ ವ್ಯವಸ್ಥೆ ಸರಿ ಎಂದು ಹೇಳುವ ಮಹಿಳೆಯರೂ ಇದ್ದಾರೆ.
ಯಾವ ಹೆಣ್ಣೂ ತನ್ನ ಸ್ವ ಇಚ್ಚೆಯಿಂದ ಈ ದಂಧೆಗೆ ಇಳಿಯುವುದಿಲ್ಲ. ಹೌದು ಶಾಪಿಂಗ್ ಗೀಳು ಹಚ್ಚಿಕೊಂಡ ಕೆಲವರು ಶೋಕಿಗಾಗಿ, (ಇದರಲ್ಲಿ ಗೃಹಿಣಿಯರೂ ಸೇರಿದ್ದಾರೆ ಎನ್ನುವುದನ್ನು ಮರೆಯಬಾರದು) ಈ ಕೆಲಸಕ್ಕೆ ಇಳಿಯುತ್ತಾರೆ. ಈ ದಂಧೆಯ ಬಗ್ಗೆ ಕೂಲಂಕುಷವಾಗಿ ನೋಡಿದಾಗ ನಮಗೆ ಸಿಗುವ ಕಾರಣಗಳು ಹಲವು. ಬಳಕೆದಾರ ಸಂಸ್ಕೃತಿ, ಕೊಳ್ಳಲು ಪ್ರೇರೇಪಿಸುವ ಜಾಹೀರಾತುಗಳು, ಸಂಪತ್ತನ್ನು ವೈಭವೀಕರಿಸುವ ಸೀರಿಯಲ್ಲುಗಳು. ಇದಲ್ಲದೆ ಸಂಪತ್ತಿನ ಬಗೆಗಿನ ಸಮಾಜದ ದೃಷ್ಟಿಕೋನ. ಯಶಸ್ವೀ ವ್ಯಕ್ತಿ ಬಳಿ ದೊಡ್ಡ ಕಾರು, ಬಂಗಲೆ ಇದ್ದರೆ ಅವನಿಗೆ ಮನ್ನಣೆ. ಆ ಬಂಗಲೆ, ಕಾರು, ಸಂಪತ್ತು ಹೇಗೆ ಬಂತು ಎಂದು ಕೇಳುವ ಅರಿಯುವ ಹಂಬಲ ಸಮಾಜಕ್ಕಿದೆಯೇ? ಯಾವುದಾದರೂ upscale neighbourhood ಕಡೆ ನಡೆದರೆ ತಿಳಿಯುತ್ತೆ. ನೋಡಪ್ಪಾ, ಅಲ್ಲಿರೋ ಬಂಗಲೆ forest conservator ಅವರದು. ಅಲ್ಲಿ ನಿಂತಿದೆಯಲ್ಲಾ ದೊಡ್ಡ ಕಾರು,ಅದು pwd engineer ಅವರದು, ಅಲ್ಲಿ ಯಮಾಹಾ ಬೈಕಿನಲ್ಲಿ ಹೋಗ್ತಾ ಇದ್ದಾನಲ್ಲ ಅವನು ಕೆಎಸ್ಸಾರ್ಟೀಸಿ ಬಸ್ಸಿನ ಕಂಡಕ್ಟರನ ಮಗ, MBBS ಮಾಡ್ತಾ ಇದ್ದಾನೆ……….ಹೀಗೆ ಸಾಗುತ್ತದೆ ಗುಣಗಾನ, ಪ್ರಶಂಸೆ, ಭಕ್ತಿ ಭಾವ. ನಾವೆಂದಾದರೂ ಯೋಚಿಸಿದ್ದೇವೆಯೇ ಈ ವ್ಯಕ್ತಿಗಳು ಪಡೆಯುವ ಸಂಬಳದಲ್ಲಿ ಈ ಸೌಕರ್ಯಗಳನ್ನು ತಮದಾಗಿಸಿಕೊಳ್ಳಲು ಅವರಿಂದ ಸಾಧ್ಯವೇ ಎಂದು? ಮಾನ ಬಿಟ್ಟು ಸಂಪಾದನೆ ಮಾಡಿದರೆ ಸಂಪಾದನೆ ಮಾನವನ್ನು ತಂದು ಕೊಡುತ್ತದಂತೆ. ಎಷ್ಟು ಸೊಗಸಾಗಿ ಮರಳಿ ಬಂತು ನೋಡಿ ಮಾನ ಇಲ್ಲಿ. ಈಗ ವೇಶ್ಯಾವಾಟಿಕೆಗೂ ಇಲ್ಲಿ ಬರೆದಿರುವುದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ ತಾನೇ?
ಅನೈತಿಕ ಸಂಪಾದನೆಯನ್ನು ಕಂಡು ಹಿಗ್ಗಿ, ಹೊಗಳುವ ಸಮಾಜ ಒಳಗೊಳಗೇ ಅದೇ ರೀತಿ ತಾನೂ ಆಗಬೇಕೆಂದು ಬಯಸುತ್ತದೆ. ಈ ಸಂಪತ್ತನ್ನು ನೋಡಿದ ಸಾಮಾನ್ಯ ಗೃಹಿಣಿ ತನ್ನ ಗಂಡನನ್ನು ಪ್ರೇರೇಪಿಸುತ್ತಾಳೆ ಅಡ್ಡ ದಾರಿ ಹಿಡಿ ದು ಸಂಪಾದಿಸಲು. ಅಬಲೆ ಬಯಸುತ್ತಾಳೆ ತನ್ನ ಮೈ ಮಾಟವನ್ನು ಶ್ರೀಮಂತನಿಗೆ ಉಣಿಸಿದರೆ ಅವನಂತೆಯೇ ತಾನೂ ಸುಖವಾಗಿ ಇರಬಹುದು ಎಂದು. ಲಂಚ ಪಡೆಯುವ ವ್ಯಕ್ತಿ ಒಂದು ರೀತಿಯ ಹಾದರ ಮಾಡಿದರೆ ಏರು ಜವ್ವನೆ ಮತ್ತೊಂದು ರೀತಿಯ ಹಾದರಕ್ಕೆ ಇಳಿಯುತ್ತಾಳೆ. ಇಬ್ಬರ ಉದ್ದೇಶ ಸ್ಪಷ್ಟ. ಭರ್ಜರಿಯಾಗಿ ಬಾಳುವುದು.
ಶೀಲ ಮತ್ತು ಅಶ್ಲೀಲದ ಮಧ್ಯೆ ಇರುವ ಪರದೆ ಬಹು ತೆಳುವಾದುದು. ಯಾವುದೋ ಒಂದು ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ಆ ಪರದೆ ಸರಿಯಿತೋ ಪಯಣ ಶುರು ಅನೀತಿಯೆಡೆಗೆ. ಚಿಕ್ಕ ಪುಟ್ಟ, ಒಂದು ಸಲ, ಎರಡು ಸಲ, ಎಂದು ತಮಗರಿವಿಲ್ಲದೆಯೇ ಅನೈತಿಕತೆಯ ಪ್ರಪಾತಕ್ಕೆ ಜಾರುತ್ತಾರೆ. ಟೀವೀ ಆನ್ ಮಾಡಿದರೆ ಸೀರಿಯಲ್ಲುಗಳಲ್ಲಿ ಸಾವಿರ ಕೋಟಿಗಳ ಮಾತು, ಬೀದಿಯಲ್ಲಿ ಹೋದರೆ ಭರ್ರ್ ಎಂದು ಹೋಗುವ ಮಾರುತಿ, ಹೊಂಡಾ, ಮರ್ಸಿಡೀಸ್ ಗಳು. ಪರಿಣಾಮ? ಈ ಮೇಲೆ ಹೇಳಿದ ಸಂಪತ್ತನ್ನು ಕಂಡು ಜೊಲ್ಲು ಸುರಿಸಿ ನೋಡುತ್ತಾ ಮೆಜೆಸ್ಟಿಕ್ನಲ್ಲಿ ನಿಲ್ಲುವ ನೀರೆಯರು.
