ಹಸಿವು ಮತ್ತು ಸರ್ಕಸ್

ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.      

ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.

ಜಿಹಾದ್ ಎಂದರೇನು?

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ.  ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ.  ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮೇಲೊಂದು ಸೂರು.        

ಆಸ್ಟ್ರೇಲಿಯಾದಲ್ಲಿ ಜಿಹಾದ್ ನ ಬಗ್ಗೆ ಒಂದು ಸಮ್ಮೇಳನದಲ್ಲಿ ಮಾತನಾಡಿದ ಇಸ್ಲಾಮೀ ವಿಧ್ವಾಂಸರು ಹೇಳಿದ್ದು, ಜಿಹಾದ್ ಎಂದರೆ ಶ್ರಮ ಎಂದು ಹೇಳುತ್ತಾ ಒಂದು ಒಳ್ಳೆಯ ಸುಸಂಸ್ಕೃತ ಸಮಾಜ ಕಟ್ಟಲು ವಿಶ್ವದ ಎಲ್ಲಾ ದೇಶಗಳ ಥರಾ ಆಸ್ಟ್ರೇಲಿಯಾ ದೇಶದ ಸರಕಾರ ಸಹ ಜಿಹಾದ್ ಇಲಾಖೆಗಳನ್ನು ಹೊಂದಿದೆ, ಅದೆಂದರೆ ಗೃಹ ಅಥವಾ ರಕ್ಷಣಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ  ಮತ್ತು ವಿದ್ಯಾ ಇಲಾಖೆ. ಅದರ ಅರ್ಥ ಸಮಾಜದ ರಕ್ಷಣೆ, ಒಳಿತು ಮತ್ತು ಉನ್ನತಿಗಾಗಿ ಜನ ನೇಮಿಸಿದ, ಆರಿಸಿದ ಸರಕಾರ ಪರಿಶ್ರಮ ಪಡುವುದು ಎಂದು.

ಜಿಹಾದ್ ಪದದ ಮೂಲ “ಜಹ್ದ್” ಎನ್ನುವ ಅರಬ್ ಪದದಿಂದ. ಅದರ ಅರ್ಥ ಶ್ರಮ ವಹಿಸುವುದು. ಒಬ್ಬ ದುಶ್ಚಟ ಬಿಡಲು, ಕುಡಿತ ನ್=ಬಿಡಲು , ಜೂಜಾಟ ಬಿಡಲು ಪರಿಶ್ರಮಿಸುವ ಹಾಗೆಯೇ ಜಿಹಾದ್ ಎನ್ನುವುದು ಸಹ ಒಳ್ಳೆಯ ನಡತೆಗೆ ಒಬ್ಬ ಮಾಡುವ ಪರಿಶ್ರಮ. ಮೇಲೆ ಹೇಳಿದ ಮೂಲ ಪದದಿಂದ ಬಂದ ಮತ್ತೆರಡು ಪದಗಳೆಂದರೆ ಇಜ್ತಿಹಾದ್, ಮತ್ತು ತಹಜ್ಜುದ್.

ಇಜ್ತಿಹಾದ್ ಎಂದರೆ  ಜ್ಞಾನಾರ್ಜನೆ ಎಂದು. ಈ ಇಜ್ತಿಹಾದ್ ನ ಪರಿಣಾಮವೇ ಒಂದು ಸಾವಿರ ವರ್ಷಗಳಿಗೂ ಮೊದಲು ಬಾಗ್ದಾದ್, ಕೈರೋ ಮತ್ತು ಡಮಾಸ್ಕಸ್ ನಗರಗಳಲ್ಲಿ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯಗಳು ಸ್ಥಾಪಿತ ಗೊಂಡಿದ್ದು ಮತ್ತು ಅಲ್ಲಿಂದಲೆ ಅಂಧಕಾರದಲ್ಲಿದ್ದ ಅಇರೋಪ್ಯ ದೇಶಗಳಿಗೆ ಜ್ಞಾನ ಹರಡಿದ್ದು.

“ಇಜ್ತಿಹಾದ್” ನ ಪರಿಣಾಮವೇ ಇರಬೇಕು ಹಿಂದೂ ವೇದಗಳನ್ನು ಮುಘಲ್ ಚಕ್ರವರ್ತಿ  ಷಾಜಹಾನನ ಮಗ “ದಾರಾ ಶಿಕೋ” ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಿ ವಿಶ್ವಕ್ಕೆ ಪರಿಚಯಿಸಿದ್ದು. ಆಗಲೇ ವೇದಗಳ ಸೊಗಸು ವಿಶ್ವಕ್ಕೆ ತಿಳಿದಿದ್ದು, ಅದರ ಕಂಪು ಪಸರಿದ್ದು.   

“ತಹಜ್ಜುದ್: ಎಂದರೆ ಏಕಾಂತದ ಆರಾಧನೆ: ಗಾಢ ನಿದ್ದೆಯಿಂದ ರಾತ್ರಿ ಎಚ್ಚರವಾದರೆ ಕೂಡಲೇ ಎದ್ದು ನಮಾಜ್ ಮಾಡಬೇಕೆಂದು ನಿಯಮವಿದೆ. ಆ ನಮಾಜ್ ಕಡ್ಡಾಯವಲ್ಲ,  ಆದರೆ ಬಹಳಷ್ಟು ಜನ ಈ ತಹಜ್ಜುದ್ ನಮಾಜ್ ಮಾಡುತ್ತಾರೆ. ಏಕೆಂದರೆ ನೀರವ ರಾತ್ರಿಯಲ್ಲಿ ಇಡೀ ವಿಶ್ವ ಗಾಢ ನಿದ್ದೆಯಲ್ಲಿರುವಾಗ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ನೆನೆದು ಸಾಷ್ಟಾಂಗ ಮಾಡಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಲ್ಲದೆ ಅವನು ದೇವರಿಗೆ ತೀರಾ ಹತ್ತಿರದವನಾಗುತ್ತಾನೆ ಎನ್ನುವ ನಂಬಿಕೆಯಿಂದ.  

ಈಗ ನನ್ನ ಈ ಬರಹವನ್ನ ಅತ್ಯಂತ  ಸಂಯಮದಿಂದ ಯಾವುದೇ ಆವೇಶಕ್ಕೆ ಒಳಗಾಗದೆ ನೀವು ಓದುತ್ತಿದ್ದರೆ ನೀವು ಜಿಹಾದ್ ಮಾಡುತ್ತಿದ್ದೀರಿ ಎಂದರ್ಥ. ಅಂದರೆ ಕಾತುರತೆಯನ್ನು ಹತ್ತಿಕ್ಕಿ ಶಾಂತರಾಗಿ ಸಂಯಮದಿಂದ ಮುಂದೆ ಬರೆದಿದ್ದನ್ನು ಓದುವ, ನೀವು ಮಾಡುವ ಯತ್ನ ಅಥವಾ ಪರಿಶ್ರಮ, ಇದೇ ನಿಜವಾದ ಜಿಹಾದ್ ನ ಅರ್ಥ.  

ಈ ಮೇಲಿನ ವಿಶ್ಲೇಷಣೆ ನೋಡಿದಾಗ ಜಿಹಾದ್ ಪದಕ್ಕೂ ಹಿಂಸೆ, ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಮಗೆ ತಿಳಿಯುತ್ತದೆ. “ಜುಹ್ದ್” ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ಕೌಶಲ್ಯವನ್ನೂ, ಉತ್ತಮ ಪಡಿಸಿ ಕೊಳ್ಳಲು ಮಾಡುವ ಪ್ರಾಮಾಣಿಕ ಯತ್ನ, “ಇಜ್ತಿಹಾದ್” ಎಂದರೆ ಆ ಪ್ರಾಮಾಣಿಕ ಯತ್ನದ ಕಡೆ ಜ್ಞಾನದ ಸಹಾಯ ಪಡೆಯುವುದು ಮತ್ತು ತನ್ನ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಅನ್ವೇಷಣೆಯಲ್ಲಿ ತನ್ನನ್ನು ಸೃಷ್ಟಿಸಿದ ತನ್ನ ಭಗವಂತನ ಸಹಾಯ ಯಾಚಿಸುವುದು ಏಕಾಂತದ ಆರಾಧನೆಯಾದ ” ತಹಜ್ಜುದ್” ಮೂಲಕ. ಹಾಗಾದರೆ ಯುದ್ಧಕ್ಕೆ, ಹೋರಾಟಕ್ಕೆ ಅರಬ್ಬೀ  ಏನೆಂದು ಕರೆಯುತ್ತಾರೆ?   

ಜಿಹಾದ್ ಎಂದರೆ ಯುದ್ಧ ಹಿಂಸೆ ಮಾತ್ರ ಅಲ್ಲ ಎಂದಾದರೆ ಯುದ್ಧ ಮತ್ತು ಈ ತೆರನಾದ ಸ್ವರಕ್ಷಣೆಯ ಹೋರಾಟಕ್ಕೆ “ಹರ್ಬ್” ಮತ್ತು “ಕತ್ಲ್” ಎಂತಲೂ ಕರೆಯತ್ತಾರೆ. “ಹರ್ಬ್” ಎಂದರೆ ಯುದ್ಧ. “ಕತ್ಲ್” ಎಂದರೆ ಕೊಲೆ ಎಂದು. (ಹಿಂದೀ ಮತ್ತು ಉರ್ದು ಭಾಷೆಯಲ್ಲಿ ಕೂಡಾ ಕತ್ಲ್ ಅಂದರೆ ಕೊಲೆ ಎಂದೂ, ಕಾತಿಲ್ ಎಂದರೆ ಕೊಲೆಗಾರ ಎಂದೂ ಕರೆಯುತ್ತಾರೆ).

ಹಾಗಾದರೆ ಮಾಧ್ಯಮಗಳು ಮತ್ತು ಇಸ್ಲಾಂ ಟೀಕಾಕಾರ ರಿಗೆ ಈ ವಿವರಣೆ ಆಗಲಿ, ಅರಬ್ಬೀ ವ್ಯಾಕರಣದ ಈ ಅಂಶಗಳಾಗಲಿ ತಿಳಿದಿಲ್ಲ ಎಂದಲ್ಲ. ಇಸ್ಲಾಮನ್ನು ದೂಷಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಕ್ರೈಸ್ತರ ಮೊದಲ ಧರ್ಮ ಯುದ್ಧ ದ (crusade) ನಂತರ ಮತ್ತು ಎರಡನೇ ಧರ್ಮ ಯುದ್ಧದಲ್ಲಿ ಇಂಗ್ಲೆಂಡಿನ ರಾಜ richard the lion heart ಮುಸ್ಲಿಮರ ವಿರುದ್ಧ ನಡೆದ ಜೆರುಸಲೆಂ ಕದನದಲ್ಲಿ ಸೋತ ನಂತರ ಆರಂಭ ಗೊಂಡ ಈ wittch hunting and slandering campaign ನಿರಂತರವಾಗಿ ನಡೆದುಕೊಂಡು ಬಂದು ಸೆಪ್ಟಂಬರ್ ಧಾಳಿಯ ನಂತರ ಆಧುನಿಕ ರೂಪ ಪಡೆದುಕೊಂಡಿತು.  

ಜಿಹಾದ್ ಅಂದರೆ ಯುದ್ಧ ಅಲ್ಲವೇ ಅಲ್ಲ ಎಂತಲೋ? ಸ್ವರಕ್ಷಣೆಗೆ ರಾಷ್ಟ್ರಗಳು ಯುದ್ಧ ಸಾರಿವೆ, ಅವನ್ನು ಜಿಹಾದ್ ಎಂದೂ ಕರೆಯಲಾಗಿದೆ. ಆದರೆ ಕಂದಹಾರದ, ಪಾಕಿಸ್ತಾನದ ಗುಡ್ಡ ಗಾಡಿನಲ್ಲಿ ಅವಿತುಕೊಂಡು ನಮ್ಮ ಮೇಲೆ ಮತ್ತು ಅಲ್ಲಿನ ಮುಗ್ಧ ಜನರ ಮೇಲೆ ಆಕ್ರಮಣ ನಡೆಸಿ ರಕ್ತ ಪಾತ ಎಸಗುವ ಮತಾಂಧರು ಜಿಹಾದ್ ಅಲ್ಲ ಮಾಡುತ್ತಿರುವುದು. ಧರ್ಮದ್ರೋಹದ, ಅಮಾನವೀಯ ಕೃತ್ಯ.

ಇಸ್ಲಾಮೀ ರಾಜಕೀಯ ಶಾಸ್ತ್ರದಲ್ಲಿ ಎರಡು ರೀತಿಯ ರಾಷ್ಟ್ರ ಸಮೂಹಗಳ ಉಲ್ಲೇಖವಿದೆ. ಒಂದು, “ದಾರುಲ್ ಹರ್ಬ್”, ಮತ್ತೊಂದು “ದಾರುಲ್ ಇಸ್ಲಾಮ್”. ದಾರುಲ್ ಹರ್ಬ್ ಎಂದರೆ ಶತ್ರು ರಾಷ್ಟ್ರ. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತು ಚೀನಾ ದೇಶಗಳಂತೆ. ಇಂಥ ರಾಷ್ಟ್ರಗಳು ದಾರುಲ್ ಹರ್ಬ್ ವ್ಯಾಖ್ಯಾನಕ್ಕೆ ಬರುತ್ತವೆ. ದಾರುಲ್ ಇಸ್ಲಾಂ ಎಂದರೆ ಮುಸ್ಲಿಂ ರಾಷ್ಟ್ರ. ಮುಸ್ಲಿಂ ರಾಷ್ಟ್ರ ಮಾತ್ರವಲ್ಲ ಇಸ್ಲಾಮನ್ನು ಗೌರವಿಸಿ, ಆದರಿಸಿ ಮುಸ್ಲಿಮರ ಆರಾಧನೆಗೆ ಅನುಕೂಲ ಮಾಡಿಕೊಡುವ, ಮಸೀದಿ, ಮದ್ರಸಗಳನ್ನು ಕಟ್ಟಲು ಸಹಾಯ ಮಾಡುವ, ಸರಿಸಮನಾದ ಹಕ್ಕುಗಳನ್ನೂ ನೀಡಿ ಕಾಳಜಿ ವಹಿಸುವ ಮುಸ್ಲಿಮೇತರ ರಾಷ್ಟ್ರವೂ ದಾರುಲ್ ಇಸ್ಲಾಂ ವ್ಯಾಖ್ಯಾನದ ಅಡಿಗೆ ಬರುತ್ತದೆ. ನಮ್ಮ ಭವ್ಯ ಭಾರತ ಈ ರಾಷ್ಟ್ರದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರನ್ನು, ಅವರ ಸಂಸ್ಕೃತಿಯನ್ನು ಆದರಿಸುವ ರೀತಿ ನೋಡಿ ಜಗತ್ತಿನ ಇತರೆ ಇಸ್ಲಾಮೀ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಮೋಘ ಭಾರತೀಯ ಸಂಸ್ಕಾರವನ್ನು,  ಹೃದಯ ವೈಶಾಲ್ಯತೆಯನ್ನು ಕೊಂಡಾಡಿವೆ.  ಹೀಗಿರುವಾಗ ಈ ದೇಶದ ಮೇಲೆ ಶಸ್ತ್ರ ಪ್ರಯೋಗ ಮಾಡುವುದು, ಅಮಾಯಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಅಂಥ ವಿದ್ರೋಹಿಗಳನ್ನು ನೇರ ಮಾಡಲು ಸಾಧ್ಯವಿಲ್ಲದಿದ್ದರೆ ನೇರವಾಗಿ ನೇಣಿಗೆ ಕಳಿಸಬೇಕಾದ್ದು ನಾಗರೀಕ ಸಮಾಜ ಮಾಡಬೇಕಾದ ಪ್ರಥಮ ಕೆಲಸ.

ಪ್ರಪಂಚದಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ಒಂದಲ್ಲ ಒಂದು ರೀತಿಯ ಹೋರಾಟದಲ್ಲಿ ನಿರತರಾಗಿದ್ದನ್ನು ನಾವು ಕಂಡಿದ್ದೇವೆ. ಯೂರೋಪ್ ಖಂಡದಲ್ಲಿ ೬೦ ಲಕ್ಷ ಯೂಹೂದ್ಯರನ್ನು ಕೊಂದಿದ್ದು, gas chamber ಗಳಿಗೆ ಕಳಿಸಿ ನಿರ್ನಾಮ ಮಾಡಿದ್ದು “ನಾಜಿಗಳು”. ನಾಜಿಗಳು ಯಾವ ಧರ್ಮೀಯರೆಂದು ಯಾರಿಗಾದರೂ ತಿಳಿದಿದೆಯೇ? ಬೋಸ್ನಿಯಾದಲ್ಲಿ ೮೦ ಸಾವಿರಕ್ಕೂ ಮುಸ್ಲಿಮರನ್ನು ಕೊಂದವರು “ಸರ್ಬಿಯನ್ನರು”. ಸರ್ಬಿಯನ್ನರು ಯಾವ ಧರ್ಮೀಯರೆಂದು ಎಲ್ಲೂ ಉಲ್ಲೇಖವಿಲ್ಲ. ಶ್ರೀಲಂಕೆಯಲ್ಲಿ ಅಮಾಯಕ ತಮಿಳರ ಹಿಂಸೆ, ಕೊಲೆ ನಡೆಸಿದ್ದು “JVP” ಯವರು, JVP ಯವರು ಯಾವ ಧರ್ಮದರೆಂದು ಉಲ್ಲೇಖವಿಲ್ಲ. ಅದೇ ಶ್ರೀಲಂಕೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಕಾಲ ಬೌದ್ಧರನ್ನೂ, ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನೂ ಕೊಂದವರು “ವ್ಯಾಘ್ರರು”. ವ್ಯಾಘ್ರರು ಯಾವ ಧರ್ಮೀಯರೆಂದು ಉಲ್ಲೇಖವಿಲ್ಲ. ಇತ್ತೀಚೆಗೆ ಅಮೆರಿಕೆಯಲ್ಲಿ ಅಪಾರ ಆಯುಧ ಶೇಖರಿಸಿ ದೊಡ್ಡ ರೀತಿಯ ಹಿಂಸೆಗೆ ಅಣಿಯಾಗುತ್ತಿದ್ದ ಜನರು “ಹುಟಾರಿ” ಪಂಗಡದವರು. “ಹುಟಾರಿ” ಗಳು ನಂಬಿದ ಧರ್ಮ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಈ ಮಾನದಂಡ ಮುಸ್ಲಿಮರೆಂದು ಕರೆದುಕೊಂಡು ಧರ್ಮಕ್ಕೆ ಕಳಂಕ ತರುವ ಜನರಿಗೆ ನೀಡಲು ಮಾಧ್ಯಮ, ಕುಬುದ್ಧಿಯ ಪಂಡಿತರು ತಯಾರಿಲ್ಲ. ಸಿಕ್ಕಿ ಹಾಕಿಕೊಂಡವನ ಹೆಸರು ಮುಸ್ಲಿಂ ಆದರೆ ಸಾಕು ಟಾಮ್ ಟಾಮ್ ಶುರು; ಮುಸ್ಲಿಮ್ ಭಯೋತ್ಪಾದಕ, ಶಂಕಿತ ಮುಸ್ಲಿಂ ತೀವ್ರವಾದಿ, ಮುಸ್ಲಿಂ ಮೂಲಭೂತವಾದಿ, islamic activist, muslim radical, muslim fundamentalist…………………ಯಾವ ರೀತಿಯ ಲೇಬಲ್ಲುಗಳು ಬೇಕು ನಿಮಗೆ, ಆ ರೀತಿಯ ಲೇಬಲ್ಲುಗಳು ತಯಾರು. ಹಾಗಾದರೆ ಮೇಲೆ ನಾನು ಉದ್ಧರಿಸಿದ ಹತ್ಯಾಕಾಂಡಗಳ ಕರ್ತೃಗಳು ಯಾರು? “ಹುಟಾರಿ”, “ನಾಜಿ” ಎಂದರೆ ಮಂಗಳ ಗ್ರಹದಿಂದಲೋ ಅಥವಾ ಬೇರಾವುದು ಗ್ರಹದಿಂದ ಬಂದಪ್ಪಳಿಸಿದ ಅನರ್ಥವೋ? ವ್ಯಾಘ್ರ ಅಂದರೆ ಒಂದು ರೀತಿಯ ಸೊಂಕೋ, ರೋಗವೋ? JVP ಎಂದರೆ AIDS ರೀತಿಯ ಬ್ಯಾನೆಯೋ? ಸರ್ಬಿಯನ್ ಎಂದರೆ ಪ್ರಳಯವೋ, ಜ್ವಾಲಾಮುಖಿಯೋ? ಏಕೀ ಇಬ್ಬಂದಿತನ? ಲೇಖನಿಗೆ ದ್ರೋಹ ಬಗೆಯುವ ಪರಿಪಾಠ? ಲೇಖನಿ ಹುತಾತ್ಮನ ರಕ್ತಕ್ಕಿಂತಲೂ ಪವಿತ್ರ ಅಂತಾರೆ. ಆದರೆ ಮೇಲೆ ಹೇಳಿದ ಉದಾಹರಣೆಗಳಲ್ಲಿ ಎಷ್ಟೊಂದು ಪಾವಿತ್ರ್ಯ ಅವಿತುಕೊಂಡಿದೆ ನೋಡಿ. 

ಜನರನ್ನು ಲೇಬಲ್ ಅಡಿಯಲ್ಲಿ ವ್ಯಾಖ್ಯಾನಿಸಿ ದೂರ ಮಾಡುವುದಕ್ಕಿಂತ ಒಳ್ಳೆಯ ಕೆಲಸ ಸಂವಾದದ ಪ್ರಕ್ರಿಯೆ ಶುರು ಮಾಡುವುದು. ಜನರ ಮಧ್ಯೆ ಕಂದಕ ತೋಡಲೆಂದೇ ಅವತರಿಸಿದ ಸಮೂಹವನ್ನು ನಾಗರೀಕ ಸಮಾಜ ದೂರ ಮಾಡಿ ಎಲ್ಲರೂ ಮೇಲೆ ಕೂತ ಭಗವಂತನ ಮಕ್ಕಳು, ಎಲ್ಲರಿಗೂ ಸರಿಸಮನವಾಗಿ ವಿಶಾಲವಾದ ಭೂಮಿಯನ್ನು ಹರಡಿ ತಾರತಮ್ಯ ಮಾಡದೆ ಗಾಳಿ ಬೆಳಕು ನೀರು ಒದಗಿಸುತ್ತಿರುವ ಮಹಾ ಪ್ರಭುವಿನ ಮಕ್ಕಳೆಂದು ಭಾವಿಸಿ ಬದುಕನ್ನು ಸಾಗಿಸುವುದು. ಹಕ್ಕಿಯಂತೆ ಹಾರಲು ಕಲಿತ, ಮೀನಿನನಂತೆ ಈಜಲು ಕಲಿತ ಮನುಷ್ಯ ಮನುಷ್ಯನ  ರೀತಿ ಬಾಳಲು ಕಲಿಯುವುದನ್ನು ಕಲಿಯುವುದು ಅತ್ಯವಶ್ಯಕ. man should “relearn” how to live like a man.

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು

ಅಪರೂಪದ ಚಿತ್ರಗಳು, ಅಪರೂಪ ಚೇತನಗಳದು…

ಗಾಂಧೀಜಿ ಗಡಿ ನಾಡ ಗಾಂಧೀ ಖಾನ್ ಅಬ್ದುಲ್ ಗಫ್ಫಾರ್ ಖಾನರೊಂದಿಗೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಖಾನ್ ಸಾಹೇಬರು ಭಾರತದ ಬಗ್ಗೆ ಉತ್ಕಟ ಪ್ರೀತಿ ಇಟ್ಟುಕೊಂಡಿದ್ದವರು. ಭಾರತದ ವಿಭಜನೆಯನ್ನು ಶತಾಯ ಗತಾಯ ವಿರೋಧಿಸಿದ್ದ ಭಾರತ ಮಾತೆಯ ಅಪೂರ್ವ, ನೆಚ್ಚಿನ ಪುತ್ರ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಿಗೆ “ಭಾರತ ರತ್ನ” ಪ್ರಶಸ್ತಿ ನೀಡುವ ಮೂಲಕ ದೇಶ ತನ್ನ ಕೃತಜ್ಞತೆ ಅರ್ಪಿಸಿತು.      

ಗಾಂಧೀಜಿ, ನೆಹರೂ, ವಲ್ಲಬ್ಹ್ ಪಟೇಲ್ ಜೊತೆ

ಗಾಂಧೀಜಿ ರೈಲಿನಿಂದ ಇಳಿಯುತ್ತಿರುವುದು…

ಗಮನಿಸಿ, ಬೋಗಿ ಮೂರನೇ ದರ್ಜೆಯದು (third class). ಗಾಂಧೀಜಿ ಯಾವಾಗಲೂ ಈ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು. ಬೋಗಿ ಮೂರನೇ ದರ್ಜೆಯಾದರೂ ಮಹಾತ್ಮ ಹತ್ತಿದ ಕೂಡಲೇ ಮೂರನೇ ದರ್ಜೆಯ ಬೋಗಿ ಉನ್ನತ ಮಟ್ಟಕ್ಕೇರಿತು, ಅಲ್ಲವೇ?

ನೆಹರೂ ಕ್ರಿಕೆಟ್ ಮೈದಾನದಲ್ಲಿ

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು “ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ. ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. “ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ” ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

ಗಾಂಧೀ ದೇಶದ ಒಳಗೆ ಮಾತ್ರವಲ್ಲ ವಿಶ್ವದೆಲ್ಲೆಡೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಆಫ್ರಿಕಾದ ಮಂಡೇಲಾ ರಿಂದ ಹಿಡಿದು ಅಮೆರಿಕೆಯ ಮಾರ್ಟಿನ್ ಲೂಥೆರ್ ಕಿಂಗ್ ವರೆಗೆ ಮಹನೀಯರಿಗೆ ಗಾಂಧೀ ಆದರ್ಶ ವ್ಯಕ್ತಿ. ಇಂಗ್ಲೆಂಡಿನಿಂದ ಪ್ರಕಟವಾಗುವ independent ಪತ್ರಿಕೆಯಲ್ಲಿ ಗಾಂಧಿಯವರ ಬಗ್ಗೆ ಲೇಖನ ನಿನ್ನೆ ಪ್ರಕಟವಾಯಿತು. ಸಾಧಾರಣ ರಾಜಕೀಯ ಆಶಯಗಳ ಬಗೆಗಿನ ಲೇಖನವಾಗಿದ್ದರೆ ಆಸಕ್ತಿ ಇರುತ್ತಿರಲಿಲ್ಲವೇನೋ. ಆದರೆ ಇದು ಗಾಂಧೀಯವರ ಲೈಂಗಿಕ ಬದುಕಿನ ಬಗ್ಗೆ ಬರೆದ ಲೇಖನವಾಗಿತ್ತು. ಒಂದು ರೀತಿಯ explosive material. ಇದನ್ನು ನೋಡಿ ನಾನು ಸ್ವಲ್ಪ ಹಿಮ್ಮೆಟ್ಟಿದರೂ ಪೀಯುಸೀ ಯಲ್ಲಿದ್ದಾಗ ” intimate sex lives of famous people” ಪುಸ್ತಕದಲ್ಲಿ ಹಿಟ್ಲರ್ ಮಹಾಶಯನ ಲೀಲೆಗಳಿಂದ ಹಿಡಿದು ಗಾಂಧಿಯ ತನಕ ಪ್ರಸ್ತಾಪವಿತ್ತು. ಈಗ ಮತ್ತೊಮ್ಮೆ ಈ ಪೆಡಂಭೂತ ತಲೆ ಎತ್ತಿದ್ದು ನೋಡಿ ಈ ಲೇಖನವನ್ನು ತಮ್ಮೊಂದಿಗೂ ಹಂಚಿ ಕೊಳ್ಳಲು ನಿರ್ಧರಿಸಿದೆ.

ಗಾಂಧೀಜಿ ಕೇವಲ ಒಬ್ಬ ರಾಜಕಾರಣಿ ಯಾಗಿರದೆ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದರು. ಮುಸ್ಲಿಂ ಪರ ಎಂದು ಅವರನ್ನು ಧ್ವೇಷಿಸುತ್ತಿದ್ದ ಹಿಂದೂ ಪರ ವ್ಯಕ್ತಿಗಳಿಗಿಂತ ಹೆಚ್ಚು ಸಂಪ್ರದಾಯಸ್ಥರಾಗಿದ್ದರು ಗಾಂಧೀ. ತಮ್ಮ ಆಶ್ರಮದ ಲ್ಲಿ ಭಜನೆ, ವ್ರತ ಗಳಂಥ ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುತ್ತಿದ್ದ ಗಾಂಧೀಜಿಗೆ ಲೈಂಗಿಕ ಬದುಕಿನ ಬಗ್ಗೆ ಒಂದು ರೀತಿಯ ಪಾಪ ಭಾವನೆ ಇತ್ತು. ತಮ್ಮ ಪ್ರೀತಿಯ ತಂದೆ ಕೊನೆಯುಸಿರೆಳೆಯುತ್ತಿದ್ದರೂ ಅದರ ಮಧ್ಯೆ ಎದ್ದು ಹೋಗಿ ತಮ್ಮ ಲೈಂಗಿಕ ಚಪಲ ತೀರಿಸಿ ಕೊಳ್ಳಲು ಹೋಗಿದ್ದರು. ಆದರೆ ತಮಗೆ ಬೇಕಿದ್ದನ್ನು ಪಡೆದುಕೊಂಡ ಗಾಂಧೀ ತನ್ನ ತಂದೆಯಯನ್ನು ಕಳೆದುಕೊಂಡಿದ್ದರು. ಇಲ್ಲಿಂದ ಶುರುವಾಗಿದ್ದು ಗಾಂಧೀಜಿಯ ವೈರಾಗ್ಯ ಭಾವ. ವಿವಾಹಿತರಾದರೂ ಲೈಂಗಿಕ ಕ್ರಿಯೆ ನಡೆಸದೆ ಸನ್ಯಾಸದ ಬದುಕು ನಡೆಸಿ ಎಂದಾಗ ಬಹಳ ಷ್ಟು ಜನ ಹುಬ್ಬೇರಿಸಿದ್ದರು. ಸಹಜ ತಾನೇ. ಮನುಷ್ಯ ಮದುವೆಯಾದ ಕೂಡಲೇ ಜಿಗಿಯುವುದು ಪ್ರಸ್ಥದ ಕೋಣೆಗೆ. ಅದು ಬಿಟ್ಟು ವೃತಾಚರಿಸುತ್ತಾ “ರಘು ಪತಿ ರಾಘವ ರಾಜಾರಾಂ ಎನ್ನುತ್ತ ಇರು ಎಂದರೆ ಜನ ಹುಬ್ಬೆರಿಸದೆ ಇರುತ್ತಾರೆಯೇ, ಅದರಲ್ಲೂ ನೆಹರೂರಂಥ ರಸಿಕ ಮಹಾನರು? ಗಾಂಧೀಜಿಯ ಈ ಹೊಸ ವಾದ ಕೇಳಿದ ನೆಹರೂ ಹೇಳಿದ್ದು ” ಅಸ್ವಾಭಾವಿಕ ಮತ್ತು ವಿಕೃತ” ಎಂದು. ಗಾಂಧೀಜಿಯನ್ನು ರಾಷ್ಟ್ರ ಪಿತ ಪಟ್ಟಕ್ಕೆ ಏರಿಸಿದ್ದರಿಂದ ಬಹಳಷ್ಟು ಅಪ್ರಿಯ ವಿಷಯಗಳನ್ನ ಮುಚ್ಚಿ ಹಾಕಲಾಯಿತು. ಹೀಗೆ ಗಾಂಧೀಜಿಯ ಕೆಲವೊಂದು ವಿಷಯಗಳನ್ನು ಒಪ್ಪದವರು ಶಿಷ್ಟಾಚಾರಕ್ಕೆ ಮಣಿದು ಮೌನವಾಗಿದ್ದರೆ ಇನ್ನೂ ಕೆಲವರು ಗಾಂಧೀಜಿಯನ್ನು ” ಅತ್ಯಂತ ಅಪಾಯಕಾರಿ ಮತ್ತು ಪಾರ್ಶ್ವವಾಗಿ ಅದುಮಿಟ್ಟ ಕಾಮೋನ್ಮತ್ತ” ಎಂದು ಕರೆದರು. ಅಂದರೆ ಗಾಂಧೀಜಿಯ ಜೀವಿತ ಕಾಲದಲ್ಲೂ ಬಹಳಷ್ಟು ಟೀಕಾಕಾರರು ಅವರನ್ನು ವಿಮರ್ಶಿಸಿದ್ದರು ಎಂದು ನಮಗೆ ಅರಿವಾಗುವುದು.

ಹೀಗೆ ತಮ್ಮ ತಂದೆಯ ಸಾವಿನ ಸಂದರ್ಭದ ಘಟನೆಯಿಂದ ನೊಂದ ಗಾಂಧೀಜಿ ವೈರಾಗ್ಯದ ಕಡೆ ವಾಲ ತೊಡಗಿ ತಾವೇ ನಡೆಸುತ್ತಿದ್ದ ಪತ್ರಿಕೆಗೆ ಹೀಗೆ ಬರೆದರು. ” ವಿವಾಹಿತರಾಗದೆ ಇರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹಾಗೇನಾದರೂ ಆತ ವಿವಾಹದ ವಿಷಯದಲ್ಲಿ ನಿಜಕ್ಕೂ ನಿಸ್ಸಹಾಯಕನಾದರೆ ತನ್ನ ಪತ್ನಿಯೊಂದಿಗೆ ಲೈಂಗಿಕತೆಯನ್ನು ತ್ಯಜಿಸಬೇಕು”. ಇದೊಂಥರಾ ವಿಚಿತ್ರ ನಡವಳಿಕೆಯಾಗಿ ತೋರಿತು ಜನರಿಗೆ. ಹಸಿದವನ ಮುಂದೆ ಮೃಷ್ಟಾನ್ನ ಬಡಿಸಿ ಉಪವಾಸವಿರು ಎಂದಂತೆ. ಆದರೆ ಮನುಷ್ಯನ ಈ ನೈಸರ್ಗಿಕ ಭಾವನೆಗಳನ್ನು ಅದುಮಿಡಲು ಸಾಧ್ಯವಾಗದು ಎನ್ನುವ ಸಾಮಾನ್ಯ ಜ್ಞಾನ ಗಾಂಧೀಜಿಗೆ ಹೇಗೆ ತಪ್ಪಿತೋ ಏನೋ. ಹೀಗೆ ಜನರನ್ನು ಲೈಂಗಿಕತೆಯಿಂದ ದೂರ ಎಳೆಯಲು ಪ್ರಯತ್ನಿಸಿದ ಅವರು ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ದಾಹವನ್ನು ಬೇರೆಯದೇ ಆದ ರೀತಿಯಲ್ಲಿ ಅದುಮಿಡಲು ದಾರಿ ಕಂಡು ಕೊಂಡರು. ತಮ್ಮ ಆಶ್ರಮದಲ್ಲಿ ಹೆಣ್ಣು ಗಂಡುಗಳು ಒಟ್ಟಿಗೆ ಸ್ನಾನ ಮತ್ತು ಮಲಗುವುದಕ್ಕೆ (ಲೈಂಗಿಕ ಚಟುವಟಿಕೆ ಖಂಡಿತಾ ಇಲ್ಲ) ಅನುಮತಿ ನೀಡಿ, ಲೈಂಗಿಕತೆ ಕೂಡಿದ ಮುಕ್ತ ಹರಟೆಗಳಿಂದ ಅವರನ್ನು ತಡೆದರು. ಅಷ್ಟೇ ಅಲ್ಲ, ಗಂಡಂದಿರು ತಮ್ಮ ಪತ್ನಿಯರೊಂದಿಗೆ ಯಾವಾಗಲೂ ಏಕಾಂತ ವಾಗಿ ಇರಕೂಡದು ಮತ್ತು ಹಾಗೇನಾದರೂ ಎಡವಟ್ಟಾಗುವ ಭಯವಿದ್ದಲ್ಲಿ ತಣ್ಣೀರಿನ ಸ್ನಾನ ಮಾಡಬೇಕೆಂದು ತಾಕೀತು ಮಾಡುವುದನ್ನು ಮರೆಯಲಿಲ್ಲ ಮಹಾತ್ಮ.

ಆದರೆ ಈ ತಾಕೀತು ತಮಗೆ ಅನ್ವಯಿಸಿಕೊಳ್ಳ ಲಿಲ್ಲ ಗಾಂಧೀಜಿ ಎಂದು ಹೇಳುತ್ತಾರೆ ಲೇಖಕ ಆಡಮ್ಸ್. ಗಾಂಧೀಜಿಯವರ ಆಪ್ತ ಸಹಾಯಕರ ಆಕರ್ಷಕ ಸೋದರಿ ಸುಶೀಲ ನಾಯರ್ (ಈಕೆ ಗಾಂಧೀಜಿಯವರ ಖಾಸಗಿ ವೈದ್ಯೆ ಸಹ) ಗಾಂಧೀಜಿ ಯೊಂದಿಗೆ ಸ್ನಾನವನ್ನೂ ಮಾಡುತ್ತಿದ್ದರು ಮತ್ತು ಒಟ್ಟಿಗೆ ಮಲಗುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಹೇಳಿದ್ದು “ಸಭ್ಯತೆ ಮೀರದಂತೆ ನಾವೀ ಕೆಲಸ ಮಾಡುತ್ತಿದ್ದದ್ದು, ಮತ್ತು ಆಕೆ ಸ್ನಾನ ಮಾಡುವಾಗ ನಾನು ಕಣ್ಣು ಮುಚ್ಚಿ ಕೊಂಡು ಇರುತ್ತಿದ್ದೆ ಮತ್ತು ಆಕೆ ವಿವಸ್ತ್ರಳಾಗಿದ್ದಳೋ ಎಂದು ನನಗೆ ತಿಳಿಯದು, ಆದರೆ ಸಾಬೂನನ್ನು ಹಚ್ಚಿಕೊಳ್ಳುತ್ತಿದ್ದ ಶಬ್ದ ಮಾತ್ರ ನನಗೆ ಕೇಳಿಸುತ್ತಿತ್ತು”. ಈ ರೀತಿಯ ಗಾಂಧೀಜಿಯ “ಪ್ರಯೋಗ” ಗಳು ಆಶ್ರಮದ ಸಹ ನಿವಾಸಿಗಳಲ್ಲಿ ಮತ್ಸರವನ್ನು ಹುಟ್ಟಿಸಿತು ಮಾತ್ರವಲ್ಲ ಇದು ಸ್ವಲ್ಪ ಅತಿಯಾಯಿತೆಂದು ಕೆಲವರಿಗೆ ತೋರಿದರೆ ಗಾಂಧೀಜಿಗೆ ಅನ್ನಿಸಿದ್ದು ” ಈ ಪ್ರಯೋಗದ ಮೂಲಕವೇ ನಿಜವಾದ ದೇಶ ಸೇವೆ ಸಾಧ್ಯ” ಎಂದು. ಈ ರೀತಿಯದಾದ ದೇಶ ಸೇವೆಯ ಮಾದರಿಯನ್ನು ಸಹಿಸದ ಕೆಲವರು ಗಾಂಧೀಜಿ ನಡೆಸುತ್ತಿದ್ದ ಪತ್ರಿಕೆಯನ್ನು ತೊರೆದರು.

ಆದರೆ ಈ ವಿಷಯಗಳೆಲ್ಲಾ ಗಾಂಧೀಜಿಯ ಸುತ್ತಮುತ್ತಲಿನವರಿಗೆ ತಿಳಿದಿದ್ದರೂ ಗಾಂಧೀಜಿ ಇದರ ಬಗ್ಗೆ ಗೌಪ್ಯತೆ ಯನ್ನು ಪಾಲಿಸಲಿಲ್ಲ. ಮತ್ತು ಇದರ ಬಗ್ಗೆ ತಮ್ಮ ಮಗನಿಗೂ ಪತ್ರದ ಮೂಲಕ ಬರೆದು ತಿಳಿಸಿದ್ದರು. ಹೀಗೆ ನಿರ್ಭಿಡೆಯಿಂದ, ಗೌಪ್ಯತೆ ಪಾಲಿಸದೆ ತನ್ನದೇ ಆದ ವಿಶ್ಲೇಷಣೆ ಗಳನ್ನು ನೀಡುತ್ತಾ ನಡೆದ ಗಾಂಧೀಜಿ ಬಹುಶಃ ಸಾಮಾನ್ಯವಾಗಿ ಸಾಧಾರಣ ಜನರಲ್ಲಿ ಕಾಣಸಿಗುವ ಲೈಂಗಿಕತೆಯಿಂದ ಮುಕ್ತರಾಗಿದ್ದರೋ ಏನೋ. ತಮ್ಮ ಮಗನಿಗೆ ತಮ್ಮ ಈ ಪ್ರಯೋಗ ಗಳ ಬಗ್ಗೆ ಬರೆಯಲು ಗಾಂಧೀಜಿ ಹೇಳಿದರೂ ಪುತ್ರ ಇದಕ್ಕೆ ಸಮ್ಮತಿಸದೆ ಸಂಬಂಧಿಸಿದವರಿಗೆ ತಾಕೀತನ್ನೂ ಮಾಡಿದರು ಬರೆಯದಂತೆ.

ಬದುಕಿಗೆ ಎದುರಾಗುವ ಸವಾಲುಗಳನ್ನು ಎದುರಿಸುವತ್ತ ಬೌಧ್ದಿಕ ದೃಢಚಿತ್ತತೆಯ ಅಗತ್ಯ ಇರುತ್ತದೆ ಮತ್ತು ಇದಕ್ಕಾಗಿ ಕಿರಿ ವಯಸ್ಸಿನ ಮಹಿಳೆಯರನ್ನು ಗಾಂಧೀಜಿ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಜಾಡ್ ಆಡಮ್ಸ್ ಹೇಳುತ್ತಾರೆ.

ಮಹಾನ್ ವ್ಯಕ್ತಿಗಳು ತಮ್ಮ ಕಾರ್ಯ ಸಿದ್ದಿ ಗಾಗಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯ ತಂತ್ರ ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವು ನಮಗೆ ಆಭಾಸವಾಗಿ ಕಂಡರೂ ಮಹಾತ್ಮರಿಗೆ ಹಾಗೆ ತೋರುವುದಿಲ್ಲ. ಗಾಂಧೀಜಿ ತಮ್ಮಲ್ಲಿ ಆಗಾಗ ತಲೆಎತ್ತುತ್ತಿದ್ದ ಕಾಮ, ಕ್ರೋಧ, ಮದ, ಮತ್ಸರಗಳನ್ನು ಗೆಲ್ಲಲು ತಮ್ಮದೇ ಆದ ಮಾರ್ಗ ಅನುಸರಿಸಿದರು. ಉದಾಹರಣೆಗೆ, ಕೇವಲ ಉಪವಾಸ ಸತ್ಯಾಗ್ರಹದಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟು ವಿಶ್ವವನ್ನು ದಂಗು ಬಿಡಿಸಿದ ಗಾಂಧೀಜಿಯ ಈ ಮಾರ್ಗವನ್ನು ಎಷ್ಟು ಜನ, ಎಷ್ಟು ಮಹನೀಯರು ಅನುಕರಿಸುತ್ತಿದ್ದಾರೆ? ಏಕೆಂದರೆ ಅಹಿಂಸಾತ್ಮಕ ಹೋರಾಟದಲ್ಲಿ ಗಾಂಧೀಜಿಗೆ ಬಲವಾದ ನಂಬಿಕೆ ಇತ್ತು ಮತ್ತು ಆ ನಂಬಿಕೆ ಅವರನ್ನು ಹುಸಿಗೊಳಿಸಲಿಲ್ಲ.

ಸಾವಿರಾರು ವರ್ಷಗಳಿಂದ ಮಾನವ ಸಂತತಿಯನ್ನು ಕಾಪಾಡುತ್ತಾ, ಉಳಿಸುತ್ತಾ ಬಂದಿರುವ ವೀರ್ಯದ ಶಕ್ತಿಯ ಬಗ್ಗೆ ಅಪಾರ ವಿಶ್ವಾಸವಿದ್ದ ಗಾಂಧೀಜಿ ಹೇಳಿದ್ದು, “ಗಂಡಿನಲ್ಲಿ ಹರಿಯುವ ಈ ದ್ರವವನ್ನು ಉಳಿಸಿಕೊಳ್ಳುವವರು ಅಜೇಯ ಶಕ್ತಿ ಪಡೆಯುವರು” ಎಂದು. ಗಾಂಧೀಜಿ ತಮ್ಮ ವೀರ್ಯವನ್ನು ಹಿಡಿದಿಟ್ಟು ಕಾಮವನ್ನು ಗೆಲ್ಲಲು ಯತ್ನಿಸಿ ಯಶಸ್ಸನ್ನು ಸಹ ಪಡೆದರೂ ತಮ್ಮ ಪ್ರೀತಿಯ ದೇಶ ಮಾತ್ರ ಇಬ್ಭಾಗವಾಗುವುದನ್ನು ಈ “ಪ್ರಯೋಗ” ದಿಂದ ತಡೆಗಟ್ಟಲು ಸಾಧ್ಯವಾಗದೆ ಇದ್ದದ್ದು ದೊಡ್ಡ ದುರಂತವೆಂದೇ ಹೇಳಬಹುದು.

ಚಿತ್ರ ಕೃಪೆ: ಇಂಗ್ಲೆಂಡಿನ ದಿನ ಪತ್ರಿಕೆ Independent

* ಅಭಿವ್ಯಕ್ತಿ ಸ್ವಾತಂತ್ರ್ಯ

View Imageಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?

ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ “ಕೃತಿ” ಗಳನ್ನು ಖಂಡಿಸೋಣ. ಆದರೆ ಹೇಗೆ? ಹುಸೇನರ ಕುಂಚ ತನ್ನ ಪಾತ್ರಗಳನ್ನು ವಿವಸ್ತ್ರಗೊಳಿಸಿ ಆತ ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವಂತೆ ಮಾಡಿದರೆ ಇದರ ಬಗ್ಗೆ ನಮ್ಮ ಲೇಖನಿಯನ್ನು (ಕೀಲಿಗಳನ್ನು) ಸಂಭ್ರಮದಿಂದ ಹರಿಬಿಟ್ಟು ನಾವೂ ವಿವಸ್ತ್ರರಾದೆವು. ನಮ್ಮ ಮಟ್ಟಿಗೆ ಹುಸೇನ್ ದೇಶ ಕಳೆದುಕೊಂಡರೂ ಆತನ ಮಟ್ಟಿಗೆ ದೇಶದ ಪರಿಕಲ್ಪನೆ ಅವನಿಗೆ ಇಲ್ಲವಂತೆ. ಆತನ ಅಥವಾ ಯಾವುದೇ ಕಲಾವಿದನ ರಾಜ್ಯ ಭೌಗೋಳಿಕ ಅಲ್ಲವಂತೆ. ಅವರದು ಕುಂಚದ ಸಾಮ್ರಾಜ್ಯ. ಅವರುಗಳು ಕುಂಚ ಮಾತೆಯ ಸುಪುತ್ರರು. ಅವರು ಗೀಚುವ ಗೆರೆಗಳೇ ಅವರ ಗಡಿ. ವ್ಯಾಪ್ತಿಯಿಲ್ಲದ ಸರಹದ್ದು. ಗಾಳಿ ಬಂದ ಕಡೆ ತೂರಿ ಕೊಳ್ಳುವ ಹಾಗೆ. ಕುಂಚ ತೋರಿದೆಡೆ ಪಯಣ. “ಕಾಯಾ, ವಾಚಾ, ಕುಂಚ” ಇವರ ಮಂತ್ರ.

ಹುಸೇನರ ಬಗ್ಗೆ ಟೀಕಿಸಿ ಬಂದ ವಾಕ್ಯ ರತ್ನಗಳನ್ನೂ, ವ್ಯಂಗ್ಯವನ್ನೂ ನೋಡಿದಾಗ ಸುಶಿಕ್ಷಿತ ಸಮಾಜಕ್ಕೆ ಇನ್ನಷ್ಟು ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ. ಇಲ್ಲಿ ನಮಗೆ ತೋಚಿದ ರೀತಿಯಲ್ಲಿ ಬರೆದು ನಾವು ಸಾಧಿಸಿದ್ದು ನಮ್ಮ ತಿಳುವಳಿಕೆಯ ಕೊರತೆಯ ಪ್ರದರ್ಶನ. ಈ ಮಾತನ್ನು ನಾನು ಹೇಳುತ್ತಿರುವ ಉದ್ದೇಶ ದಯಮಾಡಿ ಅರ್ಥ ಮಾಡಿಕೊಳ್ಳಿ. ನಾನು ಸೇರಿದ ಸಮಾಜ ಇಂಥ ವಿಷಯಗಳು ಬಂದಾಗ ಹದ್ದು ಮೀರಿ ಅಸಹನೆ ಮೆರೆದು, ಕಲ್ಲು ಹೊಡೆದು, ಅರಚಾಡಿ ತಮಗೆ ತೋಚಿದ ರೀತಿಯಲ್ಲಿ ಅಸಮಾಧಾನವನ್ನೂ ಕೋಪವನ್ನೂ ಪ್ರದರ್ಶಿಸಿತು. ಪರಿಣಾಮ? ದೊಡ್ಡ ನಾಮ. ಡೆನ್ಮಾರ್ಕಿನಿಂದ ಹಿಡಿದು ಶಿವಮೊಗ್ಗದವರೆಗೂ ನಮ್ಮ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಗ್ಲೆಂಡಿನಿಂದ, ಇರಾನಿನವರೆಗೂ ನಾವು ನಗೆಪಾಟಲಿಗೀಡು. ಪವಿತ್ರ ಕುರಾನ್ “ಸಹನೆ, ಸಂಯಮ” ವನ್ನು ಜೀವನ ರೀತಿಯಾಗಿಸುವಂತೆ ಪದೇ, ಪದೇ ಹಲವು ಕಡೆಗಳಲ್ಲಿ ಸಾರಿದರೂ ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸಮಾಜದ ಒಂದು negligible ಭಾಗ ಅಸಹನೆಯ ವಿಷವನ್ನು ಪಸರಿಸುತ್ತಾ ಸಾಗುತ್ತಿದೆ. (and verily whoso is patient and forgiveth, that verily is the steadfast heart of things 42-43) ಸಹನಾಮಯಿಗಳೂ, ಕ್ಷಮಾಶೀಲರೂ ಆದವರು ಸಮರ್ಪಕ ಕಾರ್ಯಗಳನ್ನೇ ಮಾಡುವರು. ಪವಿತ್ರ ಕುರಾನಿನ ಈ ಸೂಕ್ತಕ್ಕೂ ಧರ್ಮದ ಭಾರವನ್ನು ತಮ್ಮ ಮೆದುಳಿಲ್ಲದ, ಚಿಂತಿಸದ ತಲೆಯ ಮೇಲೆ ಹೊತ್ತು ಹೇಸಿಗೆಯ ವಾತಾವರಣವನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆಯ ಜನರ ನಡವಳಿಕೆಗೂ ಇರುವ ವ್ಯತ್ಯಾಸ ನೋಡಿ. ಹುಸೇನರ ಕುರಿತ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಬಂದ ಮಹಾ ವಾಕ್ಯಗಳನ್ನು ಆಫ್ಘಾನಿಸ್ತಾನದ “ಪಷ್ತು” ಭಾಷೆಗೋ ಅಥವಾ ಕಂದಹಾರದ ಯಾವುದಾದರೂ ಭಾಷೆಗೋ ಅನುವಾದಿಸಿ ನೋಡಿ. ಕಣ್ಣಿನೆದುರು ಬಂದು ನಿಲ್ಲುವುದಿಲ್ಲವೇ ಮುಲ್ಲಾ ಉಮರನ, ಅವನಂಥವರ ಹೇಳಿಕೆಗಳು, ಹಾವ ಭಾವಗಳು? ಸರಿಯೋ ತಪ್ಪೋ? ಆವೇಶದಿಂದ ಬರೆದಾಗ ನಮ್ಮ ನಿಜ ವೇಷ ಸರ್ವವೇದ್ಯವಾಗಿ ಬಿಡುತ್ತೆ. ಹಾಗಾಗುವುದು ಬೇಡ. ನಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ರಕ್ಷಿಸಲು ವೈಚಾರಿಕ ಮಾರ್ಗಗಳಿವೆ. ವಿಚಾರವಂತರು ಎಂದು ಬಿರುದು ಇಟ್ಟುಕೊಂಡು ನಮ್ಮ ಭಾವನೆಗಳೊಂದಿಗೆ ಚೆಲ್ಲುತನ ತೋರುವ ವಿಚಾರವಾದಿಗಳಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳೋಣ. ಅವರ ಸೃಷ್ಟಿ (ಅದೆಂಥದ್ದೇ ಮಹಾಕಾವ್ಯವಾಗಿರಲಿ, ಇತಿ”ಹಾಸ್ಯ”ವಾಗಿರಲಿ, ಚಿತ್ರವಾಗಿರಲಿ) ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಜನರಲ್ಲಿ ಅರಿವು ಮೂಡಿಸಿ ಅಂಥ ಕಲಾವಿದರಿಗೆ ಮಣೆ ಹಾಕುವುದರಿಂದ ಜನರನ್ನು ತಡೆಯೋಣ. ಆದರೆ ಎಲ್ಲವೂ ನಾಗರೀಕ ಶೈಲಿಯಲ್ಲಿ. ನಮ್ಮ ಮನೆ (charity begins at home), ಮತ್ತು ಶಿಕ್ಷಣ ಹೇಳಿಕೊಟ್ಟ ಮಾದರಿಯಲ್ಲಿ. ಕಾಲದ ಪರೀಕ್ಷೆ ಗೆದ್ದು ನಾವು ಉಳಿಸಿಕೊಂಡು ಬಂದ ಸಂಸ್ಕೃತಿಯ ರೀತಿಯಲ್ಲಿ. ಅಪನಂಬಿಕೆ, ಅಸಹನೆಯಿಂದ ರೋಸಿದ, ಬಳಲಿದ ವಿಶ್ವ ನಮ್ಮೆಡೆ ದೃಷ್ಟಿ ಬೀರುತ್ತಿದೆ…

Time tested value ಗಳಿಗಾಗಿ. let us not disappoint.

* intellectual terrorists

A book must be the ax for the frozen sea within us.
  —
Franz Kafka
 “ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು”.  

ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ ಸಾಹಿತ್ಯ ನೋಡಿದರೆ ಅಂತರಾಳವನ್ನು ನರಕವಾಗಿಸುವುದರಲ್ಲಿ ಪುಸ್ತಕಗಳು ನಾಮುಂದು ತಾಮುಂದು ಎಂದು ಬರುತ್ತಿವೆ. ಧ್ವೇಷ ಕಾರುವ, ಜನರಲ್ಲಿ ವೈಮನಸ್ಸನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿ ಭೇಷ್ ಎಂದು ಪ್ರಶಂಸೆ ಗಳಿಸುತ್ತಿರುವ,  ನಾಡಿನ ಶ್ರೇಷ್ಠ ಬರಹಗಾರರೆಂದು ಬೀಗಿ ನಡೆಯುತ್ತಿರುವ ಸಾಹಿತಿಗಳು ತಾವು ರಚಿಸುತ್ತಿರುವ ಕೃತಿಗಳು, ಬರಹಗಳು ಭಯೋತ್ಪಾದಕನ ಗುಂಡುಗಳಿಗಿಂತ ಅಪಾಯಕಾರಿ ಎಂದು ಕಾಣಲು ವಿಫಲರಾಗುತ್ತಿರುವುದು ನಮ್ಮ ದೌರ್ಭಾಗ್ಯ ಎಂದೇ ಹೇಳಬೇಕು. ಈ ರೀತಿ ಮನುಷ್ಯರ ಮಧ್ಯೆ, ಸಮುದಾಯಗಳ ನಡುವೆ ಒಡಕನ್ನು ತಂದು ನಿಲ್ಲಿಸುವವರು “ಬೌದ್ಧಿಕ ಭಯೋತ್ಪಾದಕರು” (intellectual terrorists) ಮತ್ತು ಈ ಸಾಹಿತಿಗಳ ಭಯೋತ್ಪಾದನೆ ದೇಶಕ್ಕೆ ಗಂಡಾಂತರಕಾರಿ ಎಂದು ನಾವು ಅರಿತುಕೊಳ್ಳುವುದು ಸಮಯ ಮೀರಿದಾಗಲೋ? ಏಕೆಂದರೆ ಓರ್ವ ಭಯೋತ್ಪಾದಕ ತನ್ನ ಕೋವಿಯಿಂದ ಒಂದಿಷ್ಟು ಗುಂಡುಗಳನ್ನು ಹರಿ ಬಿಟ್ಟು ಒಬ್ಬಿಬ್ಬರದೋ, ನಾಲ್ಕಾರು ಜನರದೋ ಜೀವಗಳನ್ನು ಆಹುತಿ ತೆಗೆದುಕೊಳ್ಳಬಹುದು, ಆದರೆ ಬುದ್ಧಿಜೀವಿಯೆಂದು ಸಮಾಜದ ಮುಂದೆ ನಿಂತು ತಮ್ಮ ಕೊಳಕು, ಅಸಹ್ಯ ಹುಟ್ಟಿಸುವ ವಿಚಾರಗಳನ್ನು ಪ್ರಸ್ತುತಪಡಿಸಿ ಅವನ್ನು ಪುಸ್ತಕ ರೂಪಕ್ಕೂ ಇಳಿಸುವ ಗೋಮುಖ ವ್ಯಾಘ್ರರು ಸಮಾಜವನ್ನು ಒಡೆಯುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. 

ಈ ವಿಷ ಜಂತುಗಳ ಬಗ್ಗೆ ಜನಸಾಮಾನ್ಯರು ಮತ್ತು ಸುಶಿಕ್ಷಿತ ವ್ಯಕ್ತಿಗಳು ಜಾಗೃತರಾಗಿ ಅವರನ್ನು ಮೂಲೆಗುಂಪು ಮಾಡಬೇಕಾದ ಅವಶ್ಯಕತೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು.     

ಮೇಲಿನ Franz Kafka ಆಂಗ್ಲ ನುಡಿಗಳ ಕನ್ನಡ ಭಾಷಾಂತರ ಎಷ್ಟು ಹತ್ತಿರ ಎಂದು ನನಗೆ ಖಾತರಿಯಿಲ್ಲ ಆದರೂ ಪ್ರಯತ್ನವನ್ನಂತೂ ಮಾಡಿದ್ದೇನೆ.