ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.

ಸುನ್ನತಿ ಕೂಡದು ಎನ್ನುವ ಸ್ಯಾನ್ ಫ್ರಾನ್ಸಿಸ್ಕೋ

ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.

ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.

ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ  ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.     

ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.

ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.  

ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು  ವೈದ್ಯರುಗಳ ಅಭಿಪ್ರಾಯ.

ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ  ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.

ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.

ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ  ನಿಲುಕುವ ಯಾವುದೇ ಧಾರ್ಮಿಕ  ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.

ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.

ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.       

ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.           

 

 

ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….

ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

ನಾವು “ಅಕಶೇರುಕ” ರಾಗಿದ್ದು ಎಂದಿನಿಂದ?

ಪಾಕಿಸ್ತಾನ ಅಮೆರಿಕೆಯ ಒಂದು ಪಪ್ಪೆಟ್. ಇದು ಪಾಕಿಸ್ತಾನದ ಸರಕಾರಕ್ಕಿಂತ ಅಲ್ಲಿನ ಜನಕ್ಕೆ ಚೆನ್ನಾಗಿ ಗೊತ್ತು. ತಮ್ಮ ಸರಕಾರಗಳು ಪ್ರತೀ ನಿರ್ಧಾರಕ್ಕೂ ವಾಷಿಂಗ್ಟನ್ ಮೇಲೆ ಪರಾವಲಂಬಿ ರೀತಿ ಅವಲಂಬಿತ ಎಂದು.  ಪಾಕಿಸ್ತಾನ ಒಂದು miserably failed state, ಪಾಕಿಸ್ತಾನದ ಈ degenaration ನೋಡಿ ಕನಿಕರ ಪಡುತ್ತಿದ್ದ ನಮಗೆ ಒಂದು ವಿಚಿತ್ರ ಆದರೆ  ಆಘಾತಕಾರಿಯಾದ ಬೆಳವಣಿಗೆ ಕಾಣಲು ಸಿಕ್ಕಿದೆ. ಒಂದು ಬೆಳಿಗ್ಗೆ ಅಮೆರಿಕೆಯ ದೂತಾವಾಸದ ಸಿಬ್ಬಂದಿಯೊಬ್ಬ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ ಬಂದು ನಿಲ್ಲುತ್ತದೆ, ಗುಂಡಿನ ಚಕಮಕಿ ನಡೆಯುತ್ತದೆ, ಬೈಕ್ ಸವಾರರಲ್ಲಿ ಇಬ್ಬರು ಸಾಯುತ್ತಾರೆ ಅಮೆರಿಕೆಯವನನ್ನು ಪೊಲೀಸರು ಬಂಧಿಸುತ್ತಾರೆ. ಪಾಕ್ ಬೀದಿಗಳಲ್ಲಿ  ಬೈಕ್ ನಲ್ಲಿ ಬರುವುದೂ, ಬಂದ ಕೂಡಲೇ ಗುಂಡಿನ ಕಾಳಗ ನಡೆಯುವುದೂ ಸಾಮಾನ್ಯವೇ. ನಾವು ನಮ್ಮ ಚಿತ್ರಗಳಲ್ಲಿ ಕಾಣುವುದನ್ನು ಅಲ್ಲಿ ನಿಜ ಜೀವನದಲ್ಲಿ ಆಡಿ ತೋರಿಸುತ್ತಾರೆ. ಆದರೆ ವಿಷಯದ ಗಾಂಭೀರ್ಯ ಇರುವುದು ಅಮೆರಿಕೆಯವ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದು. ಅದೂ ಸಾಧಾರಣ ಅಮೆರಿಕೆಯ ನಾಗರೀಕನಲ್ಲ. ದೂತಾವಾಸದ ಸಿಬ್ಬಂದಿ. ಅವನಿಗೆ ಇದ್ದೇ ಇರುತ್ತದೆ diplomatic immunity. ತನ್ನ ದೇಶದವರು ಸಿಕ್ಕಿಬಿದ್ದಾಗ ಸಹಜವಾಗಿಯೇ ಅಮೆರಿಕನ್ನರು ಕಿಡಿ ಕಿಡಿ ಯಾಗುತ್ತಾರೆ. ಈ ವಿಷಯದಲ್ಲೂ ಸಹ ಅಸಮಾಧಾನ ಗೊಂಡರು. ಮಾಮೂಲಿ ಪ್ರತಿಭಟನೆ ಕೆಲಸ ಮಾಡದಾದಾಗ ಅಮೆರಿಕೆಯಲ್ಲಿನ ಪಾಕ ರಾಜತಾಂತ್ರಿಕ ನನ್ನು ಕರೆಸಿ ನಮ್ಮ ಪ್ರಜೆಯನ್ನು ವಿಮುಕ್ತಿಗೊಳಿಸದಿದ್ದರೆ ನಿನ್ನನ್ನು ಒದ್ದೋಡಿಸುತ್ತೇವೆ ಎಂದು ಧಮಕಿ ಹಾಕಿದರು. ಧಮಕಿ ಕೇಳಿ ಮರಳಿದ ಆತ ನನಗೆ ಅಂಥ ಎಚ್ಹರಿಕೆಯನ್ನೇನೂ ಅಮೇರಿಕಾ ನೀಡಿಲ್ಲ ಎಂದು ಟ್ವೀಟಿಸಿ ಸುಮ್ಮನಾದ. ಆದರೆ ಅಮೇರಿಕ ನೇರವಾಗಿ ಅಲ್ಲಿನ ಸರಕಾರದ ಮೇಲೆ ಪ್ರಭಾವ ತೋರಿಸಲು ತೊಡಗಿತು. ಅಲ್ಲಿನ ಪೊಲೀಸರು ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಇವನು ದೂತಾವಾಸದ ಅಧಿಕಾರಿ ಅಲ್ಲ, ಬದಲಿಗೆ ಒಬ್ಬ ಗೂಢಚಾರ ಎಂದು ಕರೆದು ಅವನ ಬಳಿಯಿದ್ದ ಆಧುನಿಕ ಉಪಕರಣಗಳ ಹೆಸರುಗಳನ್ನೂ ಪಟ್ಟಿ ಮಾಡಿ ಬಹಿರಂಗಗೊಳಿಸಿದರು, charge sheet ಹಾಕಿ ಅತ್ತೆ ಮನೆಗೂ ಸಹ ಅಟ್ಟಿದರು. ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದರೆ? ಪಾಕಿಸ್ತಾನದ ಗಾಯಕ ಕೋಟ್ಯಂತರ ರೂಪಾಯಿ ಅನಧಿಕೃತವಾಗಿ  ತಂದ ಎಂದು ಬಂಧಿಸಿದ ಕೂಡಲೇ ಅವನನ್ನು ಬಿಡುಗಡೆ ಗೊಳಿಸಲು ಆದೇಶ.   

ಪ್ರಥಮ ಕೊಲ್ಲಿ ಯುದ್ಧದ ವೇಳೆ ಅಮೆರಿಕೆಯ ಯುದ್ಧ ವಿಮಾನಗಳಿಗೆ ಇಂಧನ ಹಾಕಬಾರದು ಎಂದು ನಿರ್ಣಯಿಸಿದ್ದ ನಮ್ಮ  ಸರಕಾರ ಕೊನೆಗೆ ಸದ್ದಿಲ್ಲದೇ ಇಂಧನ ತುಂಬಿಸಿ ಕೊಟ್ಟಿತು. ಬಿಳಿ ನಗು ನಮ್ಮ ಮೇಲೆ ಚೆನ್ನಾಗಿ ಪ್ರಭಾವ ಬೀರುತ್ತದೆ. ಈ ಪಾಠವನ್ನು ಅಮೆರಿಕನ್ನರಿಗೆ ನೀಡಿದ್ದು ನಮ್ಮನ್ನು ೨೦೦ ವರ್ಷ ಗಳ ಕಾಲ ಆಳಿದ ಬ್ರಿಟಿಷರು. ಇರಾನ್ ನಮ್ಮ ದೇಶದ ಆಪ್ತ ಮಿತ್ರ. ಆದರೆ ಇರಾನ ವಿರುದ್ಧದ ಭದ್ರತಾ ಮಂಡಳಿಯ ನಿರ್ಣಯಕ್ಕೆ ಪರವಾಗಿ ನಾವು ಮತ ಚಲಾಯಿಸಿ ಮಧ್ಯ ಪ್ರಾಚ್ಯದಲ್ಲಿನ ಒಂದು ದೇಶದ ಬೆಂಬಲವನ್ನು ಕಳೆದು ಕೊಂಡೆವು.

ಕೇಂದ್ರ ಸರಕಾರದಲ್ಲಿ ಕೆಲಸ ಮಾಡದ ಅಥವಾ ಮಾಡಲು ಬಾರದ ಒಂದು ಇಲಾಖೆ ಇದ್ದರೆ ಅದೇ ವಿದೇಶಾಂಗ ಇಲಾಖೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಎಂದರೆ ಗರಿ ಗರಿಯಾದ ಸೂಟು, ಅಥವಾ ರೇಶಿಮೆ ಸೀರೆ ಉಟ್ಟು ದೇಶ ಸುತ್ತುವುದು ಎನ್ನುವ ತಪ್ಪು ಕಲ್ಪನೆ ಮನೆ ಮಾಡಿದೆ. ನೆಹರೂ ಕಾಲಾದ outdated ರಾಜನೀತಿಯ ನಿಯಮಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವ ಭಾವನೆ ಬೇರೆ. ನಾವು ಯಾರ ಪರವೂ ಅಲ್ಲ, ಎಲ್ಲರ ಸವಾರಿ ನಮ್ಮ ಮೇಲೆ ನಡೆಯಲಿ ಎನ್ನುವ ನಿರ್ಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ. ಆ ನೀತಿಗೆ ಒಂದೇ ಒಂದು ಬದಲಾವಣೆಯಂತೂ ಕಾಣಲು ಸಿಕ್ಕಿದೆ. ಅದೇ ಅಮೇರಿಕಾ ಪರ ನೀತಿ. ಹಿಂದೆ ರಷ್ಯಾ ಪರ, ಈಗ ಅಮೇರಿಕಾ ಪರ. ನಮಗೇಕೆ ಸ್ವಂತಿಕೆ ಇಲ್ಲ ಅಥವಾ ಇರಕೂಡದು? ವಿನಾಕಾರಣ ಕಾರ್ಗಿಲ್ ಅನ್ನು ಆಕ್ರಮಿಸಿ ನಮ್ಮ ಸಾವಿರಾರು ಸೈನಿಕರ ಸಾವಿಗೆ ಕಾರಣವಾದ ಪಾಕಿಸ್ತಾನವನ್ನು ಸದೆ ಬಡಿಯುವ ಸುಂದರ, ಬಹುಶಃ ಇನ್ನೆಂದೂ ಬರದ ಅವಕಾಶವನ್ನು ನಾವು ಕಳೆದು ಕೊಂಡೆವು. ಇದಕ್ಕೆ ಕಾರಣ ನಮಗೆ ಅಮೇರಿಕೆಯಿಂದ ಬಂದ ಮನವಿ. ಅವರಿಗೆ ಬೇಕಾದಾಗ ಮನವಿ, ಅಥವಾ ಬೆದರಿಕೆ. ಈ ಎರಡರಲ್ಲಿ ಒಂದನ್ನು ಕೊಟ್ಟು ಅಮೇರಿಕಾ ತನ್ನ ಕೆಲಸವನ್ನೂ ಸಾಧಿಸಿ ಕೊಳ್ಳುತ್ತದೆ.

೨೦೦೧ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕೆಯ ಮೇಲೆ ನಡೆದ ಧಾಳಿಗೆ ತತ್ತರಿಸಿ ಪ್ರಪಂಚದ ಎಲ್ಲ ದೇಶಗಳಿಂದ ಮುಚ್ಚಳಿಕೆ ಬರೆಸಿ ಕೊಂಡಿತು ಅಮೇರಿಕಾ. ಭಯೋತ್ಪಾದಕರು, ಅದಕ್ಕೆ ಧನ ಸಹಾಯ ನೀಡುವವರು ಯಾರದೇ ನೆಲದ ಮೇಲೆ ಇದ್ದರೋ ಅಮೆರಿಕೆಯ ಸುಪರ್ದಿಗೆ ಒಪ್ಪಿಸತಕ್ಕದ್ದು ಎನ್ನುವುದು ಮುಚ್ಚಳಿಕೆ. ವಿಧೇಯರಾಗಿ ಎಲ್ಲಾ ದೇಶಗಳೂ ತಲೆ ಬಾಗಿದವು. ನಮ್ಮ ದೇಶದ ಗಡಿ ನುಗ್ಗಿ ಒಂದು ನಗರವನ್ನು ತನ್ನ ಹಿಂಸೆಯಿಂದ ತತ್ತರಿಸುವಂತೆ ಮಾಡಿದ ಪಾಕ ಬಗ್ಗೆ ಮಾತ್ರ ಬೇರೆಯೇ ತೆರನಾದ ನಿಲುವು. ಉಗ್ರವಾಗಿ ಪ್ರತಿಭಟಿಸಿದಾಗ ಅಲ್ಲಿಂದ ಧಾವಿಸಿ ಬಂದ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಒಂದ್ರೆಅದು ಮೊಂಬತ್ತಿ ಗಳನ್ನು ಹಚ್ಚಿ, ಎರಡು ನಿಮಿಷ ಮೌನ ಆಚರಿಸಿ ಸಮಾಧಾನ ಮಾಡಿ ಹೋದರು. ಮುಂಬೈ ಮೇಲಿನ ಆಕ್ರಮಣದ ವೇಳೆಯೂ ಭಾರತಕ್ಕೆ ಒಂದು ಸುವರ್ಣಾವಕಾಶ ಇತ್ತು ಪಾಕಿಗೆ ಒಂದು “ಝಟ್ಕಾ” ನೀಡಲು. ಅಲ್ಲೂ ಬಿಳಿ ನಗೆ ನಮ್ಮ priority ಮರೆಯುವಂತೆ ಮಾಡಿತು. ಬಿಳಿ ನಗುವಿನ ಮಾಯೆ ಅಂಥದ್ದು.     

ನಮ್ಮ ರಕ್ಷಣಾ ಸಚಿವ (ಜಾರ್ಜ್ ಫೆರ್ನಾಂಡಿಸ್) ರನ್ನು ಬೆತ್ತಲೆ ಮಾಡಿ ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅದು ದೊಡ್ಡ ವಿಷಯವಲ್ಲ ನಂಗೆ. ಮೆಚ್ಚುಗೆ, ಅಬ್ಬಾ, ಎಂಥ ಭದ್ರತಾ ವ್ಯವಸ್ಥೆ ಅವರದು. ನಮ್ಮ ರಾಷ್ಟ್ರಪತಿ ಕಲಾಂ ರನ್ನು ವಿಮಾನ ನಿಲ್ದಾಣ ದಲ್ಲಿ ಅನುಚಿತವಾಗಿ ವರ್ತಿಸಿದಾಗಲೂ ನಿರ್ಲಿಪ್ತತೆ. ನಮ್ಮ ವಿದ್ಯಾರ್ಥಿಗಳನ್ನು ಅಲ್ಲಿನ ವಿದ್ಯಾಲಯವೊಂದು ಮೋಸ ಮಾಡಿ ನಂತರ ವಿದ್ಯಾರ್ಥಿಗಳು ಓಡಿ ಹೋಗದಂತೆ electronic tag ಅವರ ಕಾಲಿಗೆ ಕಟ್ಟಿ ಅವರ ಮೇಲೆ ನಿರಂತರ ನಿಗಾ ಇಟ್ಟಾಗಲೂ ನಮಗೆ ಅಮೆರಿಕೆಯ ನಡವಳಿಕೆ ಅಸಹನೀಯವಾಗಿ ತೋರುವುದಿಲ್ಲ. ಇನ್ನು ನಮಗೆ ತಿಳಿಯದ ಇನ್ಯಾವ್ಯಾವ ರೀತಿಯಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆಯೋ ದೇವರೇ ಬಲ್ಲ. ನಮ್ಮ ಸರಕಾರ ಗಳನ್ನು ನಡೆಸಲು ಮಂತ್ರಿಗಳು, ಕಾರ್ಯದರ್ಶಿಗಳು ಎಲ್ಲಾ ಅರವತ್ತು, ಎಪ್ಪತ್ತು ವಯಸ್ಸು ದಾಟಲೇ ಬೇಕು. ಒಂದೆರಡು ಅಪವಾದಗಳನ್ನು ಬಿಟ್ಟರೆ ವಯೋವೃದ್ಧರ ಕಾರುಬಾರು. ಅವರಿಗೆ ರೋಷ ಎಲ್ಲಿಂದ ತಾನೇ ಬರಬೇಕು.   

ಈಗಿನ ವಿಶ್ವ bi-polar ಆಗಬೇಕಿಲ್ಲ. ಪ್ರಪಂಚದ ತುಂಬಾ ದೊಡ್ಡದು. ಹಳೇ ಕಾಲದ ರೀತಿಯ ರಾಜಕಾರಣವನ್ನು ಅಲ್ಲ ನಾವು ಕಾಣುತ್ತಿರುವುದು. ಪಕ್ಕದ ಚೀನಾ ಅತ್ಯಾಧುನಿಕ ಆಯುಧಗಳನ್ನು ಶೇಖರಿಸುತ್ತಿದೆ ಎಂದು ನಮ್ಮ ಗೃಹ ಮಂತ್ರಿ ಕಳವಳ ವ್ಯಕ್ತ ಪಡಿಸಿದರು. ಅವರ ಮನೆಯೊಳಗೇ ಕೂತು ಅವರೇನಾದರೂ ಮಾಡಿಕೊಳ್ಳಲಿ. ನಮಗೇಕೆ ಅವರ ಉಸಾಬರಿ? 3G ಸ್ಕ್ಯಾಮು ಮತ್ತು ಸ್ವಿಸ್ ಮತ್ತು ಇತರೆ ಬ್ಯಾಂಕುಗಳಲ್ಲಿ ನಮ್ಮ ಜನ ಹುಗಿದಿಟ್ಟಿರುವ ಸಂಪತ್ತನ್ನು ಉಪಯೋಗಿಸಿ ನಮ್ಮ ಸೈನ್ಯವನ್ನೂ ಬಲ ಗೊಳಿಸಲಿ. ಭಾರತದ ನೇತೃತ್ವದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಧ್ರುವೀಕರಣ ನಡೆಯಲಿ. ನಮ್ಮೊಂದಿಗೆ ಹೆಜ್ಜೆ ಹಾಕಲು ಲ್ಯಾಟಿನ್ ಅಮೆರಿಕೆಯಲ್ಲೂ, ಮಧ್ಯ ಪ್ರಾಚ್ಯದೇಶ ಗಳಲ್ಲೂ, ಆಫ್ಫ್ರಿಕಾ ಖಂಡದಲ್ಲೂ ದೇಶಗಳಿವೆ.

ಪ್ರವಾದಿ ಜಯಂತಿ. ಭಾರತದಲ್ಲಿ ರಜೆ, ಸೌದಿಯಲ್ಲಿ ಇಲ್ಲ.

ಇಂದು ಬೆಳಿಗ್ಗೆ ನನ್ನ ಮಿತ್ರ ನಾಗರಾಜನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಾಗ ಏನಪ್ಪಾ, ನಾಳೆ ಹಬ್ಬಾ ಜೋರಾ, ಎಂದು ಕೇಳಿದ. ಇದ್ಯಾವ ಹಬ್ಬಾ ನಾಳೆ, ಎಂದು ಯೋಚಿಸುತ್ತಿರುವಾಗ ಅವನು ಹೇಳಿದ ಅದೇ, ನಿಮ್ ಹಬ್ಬ ಈದ್ ಮಿಲಾದ್ ನಾಳೆ, ಇಲ್ಲಿ ಸರಕಾರೀ ರಜೆ ಎಂದ. ಓಹೋ, ಹೌದಾ ಎಂದು ಉದ್ಗಾರ ತೆಗೆದಾಗ ಅವನಿಗೆ ಆಶ್ಚರ್ಯ. ಏನು ಅಲ್ಲಿ ಇಲ್ವಾ ರಜೆ ಎಂದ. ನಾನಂದೆ ಇಲ್ಲಿ ಸೌದಿ ಅರೇಬಿಯಾದಲ್ಲಿ ಪ್ರವಾದಿಗಳ ಜಯಂತಿಗೆ ರಜೆ ಇಲ್ಲ. ಅಂಥ ಒಂದು ದಿನ ಇದೆ ಎಂದೂ ಇಲ್ಲಿನ ಜನಕ್ಕೆ ಗೊತ್ತಿಲ್ಲ. ಪ್ರವಾದಿ ಜಯಂತಿ ಇರಲಿ, ಇಲ್ಲಿನ ರಾಜ ಸತ್ತಾಗಲೂ ರಜೆ ಕೊಡದ ದುರುಳರು ಇವರು ಎಂದು ನನ್ನ ದುಃಖವನ್ನು ವ್ಯಕ್ತಪಪಡಿಸಿದಾಗ ಅವನೂ ಸಂತಾಪ ಸೂಚಿಸಿದ ನನ್ನ ದೌರ್ಭಾಗ್ಯಕ್ಕೆ. ದೌರ್ಭಾಗ್ಯವಲ್ಲದೆ ಮತ್ತೇನು? ಭಾರತದಲ್ಲಿ ಪ್ರತೀ ಮೂರು ದಿನಗಳಿಗೊಮ್ಮೆ ಒಂದಲ್ಲ ಒಂದು ರಜೆ ವಕ್ಕರಿಸಿಕೊಳ್ಳುತ್ತಲೇ ಇರುತ್ತದೆ. ಹಾಗೇನಾದರೂ ರಜೆ ಸಿಗದೇ ಒಂದೆರಡು ವಾರಗಳಾದವು ಅನ್ನಿ, ಆಗ ಯಾವುದಾದರೂ ಒಂದು ನೆಪದಲ್ಲಿ, ನಮ್ಮ ರಾಜಕೀಯ ಪಕ್ಷಗಳ ಕೃಪಾ ಕಟಾಕ್ಷ ದಲ್ಲಿ ಬಂದೋ, ದೊಂಬಿಯೋ ನಡೆದು ರಜೆ ಸಲೀಸಾಗಿ ಸಿಗುತ್ತದೆ. ಯಡ್ಡಿ ಹತ್ತಿರ ಬಹುಮತ ಸಾಬೀತು ಪಡಿಸಿ ಎಂದರೂ ರಜೆ, ಅಯೋಧ್ಯೆಯ ವಿವಾದ ಕ್ಕೆ ನ್ಯಾಯಾಲಯ ಕೊಡುವ ತೀರ್ಪಿನಂದೂ ರಜೆ.  

ಸೌದಿ ಅರೇಬಿಯಾದ ಹಿಂದಿನ ರಾಜ ಫಹದ್ ರವರು ತೀರಿ ಕೊಂಡ ಸುದ್ದಿ ಬಂದಾಗ ನಾನು ಬ್ಯಾಂಕಿನಲ್ಲಿ ಇದ್ದೆ. ನನ್ನ ಕೆಲಸ ಬೇಗ ಬೇಗನೆ ಪೂರೈಸಿ ಹಾಗೆಯೆ ಅಲ್ಲಿನ ಕ್ಲರ್ಕ್ ಹತ್ತಿರ ಕೇಳಿದೆ, ಎಷ್ಟು ದಿನ ರಜೆ ಕೊಡ್ತಾರೆ ಅಂತ? ಅವನು ಕೇಳಿದ, ರಜೆ? ಯಾವುದಕ್ಕೆ? ನಾನು ದೊರೆಯ ಮರಣದ ವಾರ್ತೆ ಆತನಿಗೆ ಹೇಳಿದಾಗ, ಅವನು ಫಹದ್ ನ ಸಮಯ ಮುಗಿಯಿತು ಅವನು ಸೇರಿಕೊಂಡ ಭಗವಂತನ ಪಾದಚರಣಗಳಿಗೆ, ಅದಕ್ಕೇಕೆ ರಜೆ, ನಿಮ್ ದೇಶದಲ್ಲಿ ಇದಕ್ಕೂ ಕೊಡ್ತಾರ ರಜೆ ಎಂದು ಅವನು ಮರು ಪ್ರಶ್ನೆ ಹಾಕಿದಾಗ ಉತ್ತರಿಸಲಾಗದೆ ಮುಗುಳ್ನಕ್ಕು ಹೊರ ನಡೆದೆ. ಸಾವು ನೈಸರ್ಗಿಕ, ಅದನ್ನು ತಡೆಯಲಾಗಲೀ, ವಿಳಂಬಿಸಲಾಗಲೀ ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಯಾರಾದರೂ ಸತ್ತರೂ ಅತಿಯಾಗಿ ಶೋಕ ವ್ಯಕ್ತ ಪಡಿಸಲೂ ಬಾರದು. ಹಾಗೆ ಮಾಡಿದ್ದೇ ಆದರೆ ಅವನಿಗೆ ದೇವನ ನಿರ್ಣಯ ಇಷ್ಟವಾಗಿಲ್ಲ ಎಂದು ಅರ್ಥ. ಇದು ಬಹುತೇಕ ಮುಸ್ಲಿಮರ ಅಭಿಪ್ರಾಯ. ಈಗ ಹೇಳಿ ಬಂದ್ ಕೊಡೋದಾದರೂ ಹೇಗೆ ಸಾಧ್ಯ? ಅಲ್ಲೂ ಬಾರದಂತೆ, ಬಂದ್ ಮಾತು ದೂರ ಉಳಿಯಿತು ಅಲ್ಲವೇ? ಅಲ್ಲಾ, ನಾನು ಮಾತಾಡ್ತಾ ಇದ್ದಿದ್ದು ಜಯಂತಿ ಬಗ್ಗೆ, ಇಲ್ಯಾಕೆ ಮುಖಹಾಕಿದ ಯಮ ಧರ್ಮರಾಯ? ಸಾವೆಂದರೆ ಹೀಗೆಯೇ. ಅಚಾನಕ್ ಆಗಿ ಹೊಂಚು ಹಾಕಿ ಬಿಡುತ್ತದೆ.  

ನಾನು ಹೋದ ವರ್ಷ, ಜುಲೈ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದಾಗ ವಾಲ್ಮೀಕಿ ಜಯಂತಿ. ನಾನು ನನ್ನ ಮಿತ್ರನಿಗೆ ಕೇಳಿದೆ ಇದ್ಯಾವಗಿಂದ ಆರಂಭವಾಯ್ತು ಹೊಸ ಜಯಂತಿ ಎಂದು. ಭಾಜಪ ಸರಕಾರ ಆಲ್ವಾ ಇರೋದು, ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸಲು ಈ ರಜೆ ಅಂದ. ಇಂದು ಬೆಳಿಗ್ಗೆ ಅವನೊಂದಿಗೆ ಮಾತನಾಡಿದಾಗ ಅವನು ಹೇಳಿದ ರಜೆಯ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ, ಬಸವ ಜಯಂತಿ, ಕನಕ ಜಯಂತಿ. ವಚನಗಳ ಮಹಾತ್ಮ, ವೀರಶೈವ ಪಂಗಡ ಗುರುಗಳಾದ ಬಸವಣ್ಣರಿಗೆ ಅವರು ಹುಟ್ಟಿದ ದಿನ ಜನ ರಜೆಯಲ್ಲಿ ದಿನ ಕಳೆಯೋದು ಎಷ್ಟು ಪ್ರಿಯವಾದ ವಿಷಯವೋ ನಾ ಕಾಣೆ. ಬಸವ ಜಯಂತಿ ಇವತ್ತು ಎಂದು ಸಂಭ್ರಮ ಪಡುತ್ತಿರುವವರಿಗೆ ಅವರ ಒಂದೇ ಒಂದು ವಚನವನ್ನಾದರೂ ಒದರಲು ಹೇಳಿದರೆ ಅನಾಹುತವಾಗಬಹುದೋ, politically incorrect ಆಗಬಹುದೋ?

ಕನಕ ಜಯಂತಿ ಯಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವಾನ್ ಶ್ರೀ ಕೃಷ್ಣನ ಮಂದಹಾಸವನ್ನು ನೋಡಲು ದಲಿತನಿಗೆ ದಾರಿ ಮುಕ್ತವಾಗಿ ತೆರೆದಿರಬಹುದೇ? ಇಂಥ ಪ್ರಶ್ನೆಗಳು ರಜೆಯ ದಿನ ಏಳಲೇ ಬೇಕು, ನಾವದಕ್ಕೆ ಉತ್ತರ ಕಂಡು ಕೊಳ್ಳಲೇ ಬೇಕು. ನನಗೆ ಅದಕ್ಕೆ ಸಮಯವಿಲ್ಲ, ಏಕೆಂದರೆ ನನಗೆ ಇಂಥಾ ರಜೆಗಳ ಸೌಕರ್ಯ ಇಲ್ಲ  ಅಥವಾ ಸೌಭಾಗ್ಯ ಇಲ್ಲ.

Switzerland. ಭೂಮಿಯ ಮೇಲಿನ ಸ್ವರ್ಗ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ  ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  

ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   

ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein (ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  

ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  

ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು  ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.

ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  

ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?

ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   

ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 

 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.

ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.

ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.

child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   

“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?

ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.

ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

ಭಾರತದ ವಿಜಯ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳು ತಮ್ಮ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “

ವಸುಧೈವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಸದ್ದಿಲ್ಲದೇ ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು ಸರಕಾರದ ಕಟ್ಟುನಿಟ್ಟಾದ ನಿರ್ದೇಶನದ ನಡುವೆಯೂ “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಈ ತೆರನಾದ, ಉದ್ರೇಕಿಸುವ ಪತ್ರಿಕೆಗಳ ತಲೆಬರಹಗಳನ್ನು ನಿರ್ಲಕ್ಷಿಸಿ ನ್ಯಾಯಾಲಯದ  ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ.  ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕುತೂಹಲದಿಂದ ನೋಡುತ್ತಾ ಕೂತ ನಮಗೆ ಕಿಟಕಿಯ ಮೂಲಕ ಕಾಣಲು ಸಿಕ್ಕಿದ್ದು, ನನ್ನ ಎರದುಉವರೆ ವರ್ಷದ ಪುಟ್ಟ ಪೋರಿ ಕಾಲುದ್ದ ಮಾಡಿಕೊಂಡು ನನ್ನ ಮೇಜಿನ ಮೇಲಿನಿಂದ ಎಗರಿಸಿದ ಪುಟ್ಟ ಭಾರತದ ಧ್ವಜದಿಂದ ತನ್ನ ಮುಖಕ್ಕೆ ತಂಗಾಳಿಯನ್ನು ಬೀಸಿಕೊಳ್ಳುತ್ತಾ ಮಂದಿರ ಮಸೀದಿ ವಿವಾದ ನನಗೆ ನಗಣ್ಯ ಎನ್ನುವ ಥರ ಕೂತಿದ್ದಳು.

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಮುಸ್ಲಿಮರಲ್ಲಿ ಕಾಣಲು ಸಿಕ್ಕಿದ ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..