ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….

ನಗ್ನ ಪ್ರದರ್ಶನ

ಓರ್ವ ಮಹಿಳೆಯನ್ನು ನಗ್ನಳನ್ನಾಗಿಸಿ ಮರಕ್ಕೆ ಕಟ್ಟಿ ಹಾಕಿದ ದೃಶ್ಯ ನೋಡಿ ದಂಗಾದ ವ್ಯಕ್ತಿಯೊಬ್ಬ ಕೂಡಲೇ 911 ಕ್ಕೆ ಫೋನಾಯಿಸಿ ಪೊಲೀಸರನ್ನು ಕರೆಸುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಅಲ್ಲೇ ಅಡ್ಡಾಡುತ್ತಿದ್ದ ಒಬ್ಬ ವ್ಯಕ್ತಿ ಕಾಣಲು ಸಿಗುತ್ತಾನೆ. ಅವನನ್ನೂ, ಮರಕ್ಕೆ ಕಟ್ಟಿ ಹಾಕಲ್ಪಟ್ಟ ನಿಸ್ಸಹಾಯಕ ನೀರೆಯನ್ನೂ ಪ್ರಶ್ನಿಸಿದಾಗ ಕೃತ್ಯ ಬಯಲಿಗೆ ಬರುತ್ತದೆ. ಇಬ್ಬರೂ ಹೇಳಿದ್ದು ಪರಸ್ಪರರ ಅನುಮತಿಯೊಂದಿಗೆ (consensual rendezvous) ನಗ್ನತೆಯ ಸರ್ಕಸ್ ಏರ್ಪಟ್ಟಿದ್ದು ಎಂದು. ಯಾರನ್ನೂ ಬಂಧಿಸದೆ ಪೊಲೀಸರು ಮರಳಿದರು ನಗ್ನ ಮಹಿಳೆಯ ಅಂಗಸೌಷ್ಟವನ್ನು ಕಣ್ಣಿನಲ್ಲಿ ತುಂಬಿಸಿಕೊಂಡು. ಇದು ನಡೆದಿದ್ದು ಅಮೆರಿಕೆಯ ವಾಷಿಂಗ್ಟನ್ ರಾಜ್ಯದ ಟಕೋಮ ನಗರದ ಒವೆನ್ ಬೀಚ್ ಏರಿಯಾದಲ್ಲಿ. ಅಮೇರಿಕಾ land of opportunities ಮಾತ್ರವಲ್ಲ land of whimsical ideas ಕೂಡಾ ಎಂದು ಮೇಲಿನ ಘಟನೆ ನಮಗೆ ತಿಳಿಸುತ್ತದೆ. ನಮ್ಮಲ್ಲಿ ಈ ತೆರನಾದ ಘಟನೆ ನಡೆದಿದ್ದರೆ ? ಈ ದೃಶ್ಯವನ್ನು ಕಂಡವ ಪೊಲೀಸರಿಗೆ ಫೋನಾಯಿಸುವ ಬದಲು ಅಲ್ಲೇ ಅಡ್ಡಾಡುತ್ತಿದ್ದ ಆಕೆಯ ಪ್ರಿಯಕರನನ್ನು ಮತ್ತೊಂದು ಕಂಬಕ್ಕೆ ಕಟ್ಟಿ ಹಾಕಿ “ಕನ್ಸೆನ್ಸುವಲ್ ರಾನ್ಡೇವೂ” ಸಾಹಸದ ನೈಜ ಪಾಠ ಹೇಳುತ್ತಿದ್ದನೋ ಏನೋ?