ದಿಲ್ಲಿ ಗದ್ದುಗೆ ಸನಿಹ

ತಾಳ್ಮೆ ತಂದು ಕೊಳ್ಳಿ…ಇದು ಮುಲಾಯಂ ಸಿಂಗರ  ಸಮಾಜವಾದೀ ಪಕ್ಷ ಪ್ರಮುಖ ವಿರೋಧ ಪಕ್ಷ ಭಾ.ಜ.ಪ ಕ್ಕೆ ಹೇಳಿಕೊಟ್ಟ ಮಂತ್ರ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಸಮಾಜವಾದೀ ಪಕ್ಷ ದೊಡ್ಡ ದೊಡ್ಡ ಪಕ್ಷಗಳಿಗೆ ದೊಡ್ಡ ಆಘಾತವನ್ನೇ ನೀಡಿತು. ಉತ್ತರ ಪ್ರದೇಶ, ಉತ್ತರ್ ಖಾಂಡ್, ಪಂಜಾಬ್, ಗೋವಾ. ಸಿಕ್ಕಿಂ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭರವಸೆಯನ್ನೇನೂ ನೀಡಿಲ್ಲ. ಯುವರಾಜ ಎಂದೇ ಬಿರುದಾಂಕಿತರಾದ ರಾಹುಲ್ ಗಾಂಧಿಯವರ ವರ್ಚಸ್ಸು ಅಷ್ಟಾಗಿ ಕೆಲಸ ಮಾಡಿಲ್ಲ. ಇದೇ ಹಣೆ ಬರಹವೇ ಭಾಜಪ ದ್ದೂ ಸಹ. ಹಾಗಾಗಿ ಕಾಂಗ್ರೆಸ್ ಆಗಲೀ, ಭಾಜಪ ವಾಗಲೀ ಈಗಲೇ ಕೇಂದ್ರದ ಕುರ್ಚಿಯ ವಾಸನೆ ತಮ್ಮ ಮೂಗಿಗೆ ತಾಗಿಸಿ ಕೊಳ್ಳುವ ಆತುರ ತೋರಬೇಕಿಲ್ಲ. ಹಾಗೆಯೇ  ಭಾಜಪ ತನ್ನ ಪಕ್ಷದ outlook ಅನ್ನು drastic ಆಗಿ ಬದಲಿಸಿ ಕೊಳ್ಳುವ ಅಗತ್ಯವೂ ಸಹ ಇದೆ.

ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಬೀಡು. ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿರುವುದು ಹಲವು ಸಂಸ್ಕಾರಗಳನ್ನು, ನಂಬಿಕೆಗಳನ್ನು ತನ್ನದು ಎಂದು ಒಪ್ಪಿಕೊಳ್ಳುವ ಔದಾರ್ಯದ ಕಾರಣ. ಇದನ್ನು ಗಮನದಲ್ಲಿಟ್ಟು ಕೊಂಡು ಎಲ್ಲರನ್ನೂ ಸೇರಿಸಿಕೊಂಡು ದೇಶ ಕಟ್ಟುವ ಸಂಕಲ್ಪ ಈ ಪಕ್ಷ ಮಾಡಿದರೆ ದಿಲ್ಲಿ ಗದ್ದುಗೆ ಸನಿಹ.

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.

ಬರದಿರಿ ನಮ್ಮ ದೇಶಕ್ಕೆ

ಒಂದು ಕಡೆ ವಿಶ್ವ ನಮ್ಮ ಪ್ರಗತಿಯ ಬಗ್ಗೆ ಮೆಚ್ಚುಗೆ ತೋರಿದರೆ ಮತ್ತೊಂದೆಡೆ ನಮ್ಮ ಅಧಿಕಾರಿ, ರಾಜ ಕಾರಣಿಗಳಿಗೆ ತಮ್ಮ ದೇಶಗಳಿಗೆ ಬರದಂತೆ ವಿಸಾ ನೀಡದೆ ಅಪಮಾನ ಮಾಡುತ್ತಿದೆ. ವಿಶ್ವ ರಾಜಕಾರಣದಲ್ಲಿ ನಮ್ಮದೇ ಆದ ಛಾಪು ಮೂಡಿಸಲು ಯತ್ನಿಸುತ್ತಿರುವ ನಮಗೆ ವಿವಿಧೆಡೆಗಳಿಂದ ಊಹಿಸಲಾಗದ ತೊಡಕುಗಳು ಎದುರಾಗುತ್ತಿವೆ. ನಮ್ಮ ಮೇಲೆ ಹಗೆ ಸಾಧಿಸುವುದೇ ತಮ್ಮ ಕಸುಬು ಎಂದುಕೊಂಡಿರುವ ನೆರೆಯ ದೇಶಕ್ಕೆ ಅದರ ಎಲ್ಲಾ ರೀತಿಯ ಹುನ್ನಾರಗಳ ಅರಿವಿದ್ದೂ ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೃಷ್ಟಿಯನ್ನು ಮತ್ತೆಲ್ಲೋ ಬೀರಿ ಪರೋಕ್ಷ ಬೆಂಬಲವನ್ನು ನೀಡುತ್ತಿವೆ. ಅವರ ಪ್ರಕಾರ ಪಾಕ್ ನಿಜವಾಗಿಯೂ “ಪಾಕ್” (ಶುದ್ಧ). ನಮ್ಮ ವಿದೇಶಾಂಗ ಇಲಾಖೆಯನ್ನು ನಿರ್ವಹಿಸುತ್ತಿರುವವರಿಗೆ ತಮ್ಮ ಸೂಟು, ಗರಿಗರಿಯಾದ ರೇಷ್ಮೆ ಸೀರೆ ಪ್ರದರ್ಶಿಸುವುದೇ ತಮ್ಮ ಪ್ರತಿಭೆ ಎಂದು ಬಗೆದು ನಡೆಯುತ್ತಿರುವುದು ಖೇದಕರ.

ಉತ್ತರ ಅಮೇರಿಕಾ ಖಂಡದ ಕೆನಡಾ ದೇಶ ಅಂತರ ರಾಷ್ಟ್ರೀಯ ರಾಜಕಾರಣದಲ್ಲಿ ಅಷ್ಟೇನೂ ದೊಡ್ಡ ಪಾತ್ರ ವಹಿಸದ ದೇಶ. ಈ ದೇಶಕ್ಕೆ ಹೋಗಲು ಗಡಿ ಭದ್ರತಾ ಪಡೆಗೆ ಸೇರಿದ ನಿವೃತ್ತ ಪೇದೆ ವಿಸಾ ಕೇಳಿದಾಗ ಸಿಕ್ಕ ಉತ್ತರ  “ಕುಪ್ರಸಿದ್ಧ ಹಿಂಸಾತ್ಮಕ ಪಡೆ” (notoriously violent force) ಗೆ ಸೇರಿದವರಿಗೆ ಕೆನಡಾ ಒಂದು ಕನಸು ಎಂದು. ನಮ್ಮ ಅರೆ ಸೈನಿಕ ಪದೆಯನ್ನು “ಕುಪ್ರಸಿದ್ಧ” ಎನ್ನುವ ಮಟ್ಟಿಗೆ ಬೆಳೆಯಿತು ದಾರ್ಷ್ಟ್ಯತನ ಈ ಸದಾ ಮಗುಮ್ಮಾಗಿ ಇರುವ ದೇಶಕ್ಕೆ.  ಇನ್ನಿತರ ಸೈನಿಕ ಅಧಿಕಾರಿಗಳಿಗೂ ಇದೇ ರೀತಿ ಒಂದಲ್ಲ ಒಂದು ರೀತಿಯ “ನೀವು ನಮ್ಮ ದೇಶಕ್ಕೆ ಬರಲು ಅರ್ಹರಲ್ಲ” ಎಂದು ಹಣೆ ಪಟ್ಟಿ. ಈಗ ಒಂದು ಪ್ರಶ್ನೆ. ಪಕ್ಕದ ಪಾಕಿಸ್ತಾನದ ಅಧಿಕಾರಿಗಳಿಗೂ ಇದೇ ರೀತಿಯ ಉಪಚಾರ ಸಿಕ್ಕಿದೆಯೇ? ಸಿಕ್ಕಿರಲಿಕ್ಕಿಲ್ಲ. ಏಕೆಂದರೆ ಅಲ್ಲಿನ ಅಧಿಕಾರಿ, ರಾಜಕಾರಣಿಗಳು ಸಮಯ ಸಾಧಕರು, ಅವರಿಗೆ ರೊಟ್ಟಿಯ ಯಾವ ಮಗ್ಗುಲಿಗೆ ಬೆಣ್ಣೆ ತಗುಲಿದೆ ಎಂದು ಚೆನ್ನಾಗಿ ಗೊತ್ತು, ಅದರ ಪ್ರಕಾರವೇ ನಡೆದುಕೊಂಡು ತಮ್ಮ ಕಾರ್ಯ ಸಾಧಿಸಿ ಕೊಳ್ಳುತ್ತಾರೆ. ನಾವಾದರೋ, ಬೆಳ್ಳಗಿರುವುದೆಲ್ಲಾ ಹಾಲು ಎನ್ನುವ ಸಮೂಹ. ಅಷ್ಟು ಮಾತ್ರವಲ್ಲ, ಬಿಳಿಯರ ಯುದ್ಧವನ್ನು ಪಾಕಿ ಸೈನಿಕರು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೂ ಅವರ ತಂಟೆಗೆ ಯಾರೂ ಹೋಗುವುದಿಲ್ಲ.  

ಇಂಥ ಕಸಿವಿಸಿಯುಂಟು ಮಾಡುವ ಘಟನೆಗಳಿಂದ ನಮಗೆ ಮುಕ್ತಿ ಕೊಡಿಸಲು ಚಾಣಕ್ಯ ಪುರಿಯ ಸಾಹೇಬರುಗಳಿಂದ (ಅಲ್ಲಿ ಈಗ ಮಹಿಳಾ ಸಾಹೇಬರೂ ಇದ್ದಾರೆ) ಸಾಧ್ಯವೇ? ಕೇವಲ ಕೋಪದಿಂದ ಒಂದು ಪತ್ರ ಬರೆದು ಸ್ಪಷ್ಟೀಕರಣ ಕೇಳಿ, ಸಂಜೆಯಾದ ಕೂಡಲೇ ಇದೇ ಬಿಳಿಯರ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲುಗಳಲ್ಲಿ ಮಜಾ ಉಡಾಯಿಸುವವರಿಂದ ದೇಶ ತನಗೆ ಸಲ್ಲಬೇಕಾದ ಮಾನವನ್ನು ನಿರೀಕ್ಷಿಸ ಬಹುದೇ?

ಈ ತೆರನಾದ ಘಟನೆಗಳಿಗೆ ಬಿಳಿಯರ ದೃಷ್ಟಿದೋಷ ಕಾರಣವೋ ಅಥವಾ ನಮ್ಮಲ್ಲೇ ಏನಾದರೂ ನಮಗೇ ಕಾಣದ ಐಬಿದೆಯೋ ತಿಳಿಯದು. ಹೌದು ಕೆಲವೊಮ್ಮೆ ಪ್ರಮಾದಗಳು ಸಂಭವಿಸಿರಬಹುದು, ಅಂಥ ಘಟನೆಗಳನ್ನ ಆಧಾರವಾಗಿಟ್ಟು ಕೊಂಡು ನಮ್ಮನ್ನು ಈ ರೀತಿ ಹೀನಾಯವಾಗಿ ನಡೆಸಿಕೊಂಡರೆ ಅದಕ್ಕೆ ನಮ್ಮ ಉತ್ತರ ಹೇಗಿರಬೇಕು? ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಲಿಪ್ತ ನೀತಿಯ ಮೇಲೆ ವಿಪರೀತ ಅವಲಂಬನೆ ಮಾಡಿದ್ದರಿಂದ ನಮ್ಮಲ್ಲಿನ ರೋಷ ಮಾಯವಾಗಿ ಎಲ್ಲವನ್ನೂ ಸೈರಿಸಿಕೊಂಡು ಸೋತ ನಗೆಯೊಂದಿಗೆ ನಮ್ಮ ದಾರಿ ನೋಡಿ ಕೊಳ್ಳುವ ನಮ್ಮ ಜಾಯಮಾನ ನಮಗೇ ಮುಳು ವಾಗುತ್ತಿದೆ. ವಿದೇಶಾಂಗ ಇಲಾಖೆಗೆ ಹೊಸರಕ್ತ ತುಂಬಿ, ಈ ಇಲಾಖೆ ನಡೆಸಲು ವಯಸ್ಸಾದವರ ಅಗತ್ಯವಿಲ್ಲ, ಯುವ ಅಧಿಕಾರಿಗಳಿಗೆ ಸಿಗಲಿ ಚುಕ್ಕಾಣಿ.