ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ…

…”ವಿಶ್ವ ತಂಬಾಕು ರಹಿತ” ದಿನ.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ ಯಾವನೂ ಸಿಗರೇಟ್, ಬೀಡಿ ಸಹವಾಸ ಬೇಡ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಧೂಮಪಾನ ಮಾಡಬಾರದು ಎಂದು ಬಾಲ್ಯದಲ್ಲಿ ಪಾಲಕರೂ, ಯೌವನದಲ್ಲಿ ಅರ್ಧಾಂಗಿನಿಯರೂ ಹೇಳುವುದನ್ನು ಕವಡೆ ಕಾಸಿಗೆ ಬೆಲೆ ಕಲ್ಪಿಸದೆ ಸೇದುವವರ ಸಂಖ್ಯೆಯೇ ಅಧಿಕ. ಇನ್ನು ಈ ನಡವಳಿಕೆಯಲ್ಲಿ ಏನಾದರೂ ಪರಿವರ್ತನೆ ಬರಬೇಕೆಂದರೆ ಡಿಸೆಂಬರ್ ೩೧ ಅಥವಾ ಜನವರಿ ೧, ಹೊಸವರ್ಷದ ನಿರ್ಣಯವಾಗಿ ಆಶ್ವಾಸನೆ, ನಾನಿನ್ನು ಸಿಗರೇಟ್ ಸೇದೊದಿಲ್ಲ ಎಂದು. ಈ ನಿರ್ಣಯದ ಆಯುಷ್ಯ ಹೆಚ್ಚು ಎಂದರೆ ೭೨ ಘಂಟೆಗಳು. ಮೂರು ದಿನ.     

Smokers are beggars ಅಂತಾರೆ. ಒಂದು ‘ಕಡ್ಡಿ’ ಇದ್ಯೇನಣ್ಣ? lighter please.. ಪರಿಚಯದ ಅವಶ್ಯಕತೆಯಿಲ್ಲ, instant beggars. ಅವರುಗಳ ನಡುವಿನ camaraderi ಅಂಥದ್ದು. ಸ್ಮೋಕರ್ ಗಳು humble ಅಂತೆ, ಏಕೆಂದರೆ ಅವರು ಸ್ಮೋಕಿಸಲೆಂದು ಬೀಡಿ ಸಿಗರೇಟಿಗೆ ಕಿಡಿ ಹೊತ್ತಿಸುವಾಗ ಸ್ವಲ್ಪ ನಾಜೂಕಾಗಿ ಬಗ್ಗಿ ತಾನೇ ಹಚ್ಚೋದು? ಹಾಗೆಯೇ ಒಂದು “ಕಡ್ಡಿ” ಕೊಡಣ್ಣ ಎಂದು ಗಿಂಜುತ್ತಾ ಕೇಳುವುದರಲ್ಲೂ ತುಂಬಿದೆ “ಹಂಬಲ್” ನೆಸ್, ಅಲ್ವೇ?

 ಧೂಮಪಾನಿಗಳು ಯಾವುದೇ ವಿಷಯದಲ್ಲೂ ಕಂಜೂಸ್ ಗಳಾದರೂ ತಮ್ಮ ಪ್ರೀತಿಯ ಧೂಮಪಾನದ ಖರ್ಜಿಗೆ ಮಾತ್ರ ಹಿಂದೆ ಮುಂದೆ ನೋಡರು. ಚಟವೇ ಹಾಗೆ ನೋಡಿ. ಮೊದಲು ತಮಾಷೆಗೆ, ಮೋಜಿಗೆ ಎಂದು ಆರಂಭವಾದ ಚಟ ನಮ್ಮನ್ನು ಗುಲಾಮರನ್ನಾಗಿಸುತ್ತದೆ. ಕೆಲವೊಮ್ಮೆ ಈ ಚಟ ಬಹುಬೇಗನೆ ಚಟ್ಟ ಏರಲೂ ನೆರವಾಗುತ್ತದೆ. ಅನೇಕ ರೀತಿಯ ಕ್ಯಾನ್ಸರ್ ಗಳಿಗೆ ಕಾರಣ ಧೂಮಪಾನ. ಧೂಮಪಾನ ಯಾವಾಗ ಬಿಡ್ತೀಯ ಎಂದು ಅವಿವಾಹಿತನನ್ನು ಕೇಳಿದರೆ ತನ್ನ ತುಟಿಗಳಿಗೆ ಪರ್ಯಾಯವಾದದ್ದು ಸಿಕ್ಕ ನಂತರ ಎನ್ನುತ್ತಾನೆ. ಅಂದ್ರೆ ಅವನಿಗೊಂದು ಚೆಂದುಳ್ಳಿ ಹೆಣ್ಣನ್ನು ಹೊಂದಿಸಿ ಕೊಟ್ಟ ಕೂಡಲೇ ತನ್ನ ಚಟವನ್ನು ಬಿಡುತ್ತಾನೆ ಎನ್ನುವ ಖಾತರಿಯಿಲ್ಲ. “ಪರ್ಯಾಯ” ವಾಗಿ ಸಿಕ್ಕಿದ್ದು boredom ಆಗಿ ಕಾಣುತ್ತಿದ್ದಂತೆಯೇ ವಾಪಸ್ ಹಳೇ ಧಂಧೆಗೆ.  

ಸಿಗರೇಟ್ ಸೇದುವವರ ಮಧ್ಯೆ ಸಿಕ್ಕಿ ಕೊಂಡ ನಮ್ಮ ಪಾಡು ಸ್ವಲ್ಪ ನೋಡಿ. ಸೇದುವವನೇನೋ ಸುಖವಾಗಿ, ತನ್ನ ಚಟದ ಮಜಾ ತೆಗೆದು ಕೊಳ್ಳುತ್ತಾ, ಸುರುಳಿಯಾಗಿಯೂ, ಕೊಳವೆಯಾಗಿಯೂ, ತರಾವರಿ ರೀತಿಯ ಹೊಗೆಯನ್ನು ಬಿಡುತ್ತಾ, ಹೊಗೆ ಬಿಡುವ ತನ್ನ creativity ಗೆ ತನಗೆ ತಾನೇ ತಲೆದೂಗುತ್ತಾ ಮತ್ತಿನಲ್ಲಿರುತ್ತಾನೆ. ಆದರೆ ನಾವು? ನಮಗೇನು ಸಿಗುತ್ತದೆ ಅದರಿಂದ ಆನಂದ? ಅವನ ಸಿಗರೇಟ್ ನ ತುದಿಯಿಂದ ಹೊರ ಬರುವ ಹೊಗೆ, ಅವನ ಬಾಯಿಂದ ಬರುವ ಹೊಗೆ, ಅವನ ಮೂಗಿನಿಂದ ಬರುವ ಹೊಗೆ, ಅವನ ಕವಿ ಕಣ್ಣುಗಳಿಂದ ಬರುವ ಹೊಗೆ, ಹೀಗೆ ನಾನಾ ರೀತಿಯಲ್ಲಿ, ಅವನ ಶರೀರದ ಎಲ್ಲಾ ರಂಧ್ರಗಳಿಂದಲೂ ‘ಫಿಲ್ಟರ್’ ಆಗಿ ಬರುವ ಹೊಗೆಯನ್ನು ನಾವು ಸೇವಿಸಬೇಕು. ಪ್ರತಿಭಟಿಸಿದಿರೋ, ಮೇಲೆ ಹೇಳಿದ ಹಂಬಲ್ ನೆಸ್ ಎಲ್ಲಾ ಮಾಯಾ. ನಿಮ್ಮ ಕಡೆ ಕೆಕ್ಕರಿಸಿ ಒಂದು ನೋಟ, ದಮ್ಮು ಸೇರಿಸಿ ಜೋರಾಗಿ ಮತ್ತೊಂದು ದಮ್ಮು. ಹೀಗೆ ಸಿಗರೆಟ್ ಸೇದದೆಯೂ ಅದರ ಎಲ್ಲಾ ಬ್ಯಾನೆಗಳನ್ನು ಅಂಟಿಸಿ ಕೊಳ್ಳುವ ಸೆಕೆಂಡರಿ ಸ್ಮೋಕರ್ ಗಳಾದ ನಮಗೆ ಯಾವ ರಕ್ಷಣೆಯೂ ಇಲ್ಲ. secondary smoking, ವೈದ್ಯಕೀಯ ಅಧ್ಯಯನದ ಪ್ರಕಾರ, active smoking ಗಿಂತ ಅಪಾಯಕಾರಿ ಅಂತೆ. ಕೆಲವು ವರ್ಷಗಳ ಹಿಂದೆ ಹೀಗೆ ಸೆಕೆಂಡರಿ ಸ್ಮೋಕಿಂಗ್ ಕಾರಣ ಕ್ಯಾನ್ಸರ್ ತಗುಲಿಸಿಕೊಂಡ ಕೊಂಡ ಓರ್ವ ಪಾಶ್ಚಾತ್ಯ ಮಹಿಳೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಳು ಪರಿಹಾರ ಕೇಳಿ ಎಂದು ಓದಿದ ನೆನಪು. ಪರಿಹಾರ ಸಿಕ್ಕಿತೋ ಇಲ್ವೋ ಗೊತ್ತಿಲ್ಲ. ‘ಫಿಲಿಪ್ ಮೋರಿಸ್’ ನಂಥ ಕಂಪೆನಿಗಳಿಂದ ಹಣ ಕೇಳೋದು ಒಂದೇ, ಹೋದ ಪ್ರಾಣ ವಾಪಸ್ಸು ಕೊಡು ಎಂದು ಯಮನ ಹಿಂದೆ ಬೀಳೋದು ಒಂದೇ.

ಮುಂದುವರಿದ ದೇಶಗಳಲ್ಲಿ ಧೂಮಪಾನಿಗಳಿಗೆ ಎಲ್ಲೂ ಧೂಮಪಾನ ಮಾಡಲು ಸ್ಥಳವಿಲ್ಲದಂತೆ ಮಾಡಿದ್ದಾರೆ, ಅಷ್ಟು ಮಾತ್ರವಲ್ಲ ಅದರ ಮೇಲೆ ಜನ ಜಾಗೃತಿ, ಅಭಿಯಾನ ಬೇರೆ. ಹಾಗಾದರೆ ಮುಂದುವರಿದ ದೇಶಗಳಲ್ಲೇ ಹುಟ್ಟಿದ, ಅವರೇ ನಡೆಸುವ ಸಿಗರೆಟ್ ಕಂಪೆನಿಗಳ ಕಥೆ ? ಅಲ್ಲಿನ ಜನರು ಧೂಮಪಾನ ಕಂಪೆನಿಗಳನ್ನು “ಮುಂದಕ್ಕೆ ಹೋಗಪ್ಪಾ” ಎಂದು ಅಟ್ಟಿದರೆ, ಇವರುಗಳು ಮುಂದು ಮುಂದಕ್ಕೆ ಬಂದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ, ಹೊಂದದ ದೇಶಗಳಿಗೆ ತಮ್ಮ ಸರಕುಗಳನ್ನು ಇಳಿಸಿದರು. ಸುಲಭ ಬೆಲೆಗೆ ಮಾರಲು ಶುರು ಮಾಡಿದರು. ಇಲ್ಲಿ ಸೌದಿ ಅರೇಬಿಯಾದಲ್ಲಿ ಯುವಜನರ ಫೇವರಿಟ್ ಆದ marlboro ಸಿಗರೇಟ್  ಒಂದು ಪ್ಯಾಕ್ ಗೆ ೫.೫೦ ರಿಯಾಲ್  ( ೭೦.೦೦ ರೂ) ಆದರೆ marlboro ಕಂಪೆನಿಯ ತವರೂರು ಅಮೆರಿಕೆಯಲ್ಲಿ ಈ ಸಿಗರೆಟ್ ಗೆ ಬೆಲೆ ನಾಲ್ಕು ಪಟ್ಟು ಹೆಚ್ಚು. ಸೇದಬಾರದು ಎಂದು ಎಟುಕದ ಬೆಲೆ. ನೋಡಿ, ಸ್ವದೇಶೀಯರನ್ನು ಎಷ್ಟು ಚೊಕ್ಕವಾಗಿ ಇಟ್ಟುಕೊಳ್ಳುತ್ತಾರೆ ಅಮೆರಿಕನ್ನರು.

ಧೂಮಪಾನವನ್ನು ದೊಡ್ಡ ಹವ್ಯಾಸವಾಗಿ ತೆಗೆದು ಕೊಳ್ಳುತ್ತಿರುವ ಮತ್ತೊಂದು ದೇಶ ಎಂದರೆ ಇಂಡೋನೇಶಿಯ. ಈ ದೇಶದಲ್ಲಿ ಎರಡು ಕೋಟಿ ಗೂ ಹೆಚ್ಚು “ಬಾಲ ಧೂಮಪಾನಿ” ಗಳಿದ್ದಾರಂತೆ. ನಮ್ಮಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಥರ. ನೈಜೀರಿಯ, ಯುಕ್ರೇನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಸಿಗರೆಟ್ ಕಂಪೆನಿಗಳು ಬರೀ ಕ್ರೀಡೆಗಳನ್ನು ಮಾತ್ರವಲ್ಲ ರಾತ್ರಿ ಕ್ಲಬ್ಬುಗಳನ್ನೂ ಪ್ರಾಯೋಜಿಸುತ್ತಿದ್ದಾರಂತೆ. ಕುಡಿದು, ಸೇದಿ, ಮಸ್ತ್ ಮಜಾ ಮಾಡಿ ಎಂದು. Life is short, you see?  ರಷ್ಯಾದಲ್ಲಿ ಮಹಿಳೆಯರನ್ನು ಸ್ಮೋಕಿಂಗ್ ಚಟಕ್ಕೆ ಎಳೆಯಲು ಸಿಗರೆಟ್ ಪ್ಯಾಕೆಟ್ ಗಳನ್ನು ವಜ್ರ ಲೇಪನದ ಸುಗಂಧ್ಯ ದ್ರವ್ಯದ ಬಾಟಲಿನಂತೆ ರೂಪಿಸಿದ್ದಾರಂತೆ. ನೋಡಿದಿರಾ, ಜನರನ್ನು ಕೊಲ್ಲಲು ಅನುಸರಿಸುವ ವಿಧಿ ವಿಧಾನಗಳನ್ನು? ಆದರೂ ಇವರು ಪಾಶ್ಚಾತ್ಯರು, ಸುಸಂಸ್ಕೃತರು. ಇವರು ಮಾಡುವಕ್ಕೆದೆಲ್ಲಾ free trade ಎನ್ನುವ ಹಣೆಪಟ್ಟಿ.      

ಕ್ಯಾನ್ಸರ್ ತಜ್ಞ ನೂ (oncologist) ಆದ ಉರುಗ್ವೆ ದೇಶದ ಅಧ್ಯಕ್ಷ ಧೂಮಪಾನದ ಮೇಲೆ ನಿಗ್ರಹ ಹೇರಿದ್ದಕ್ಕೆ ವಿಶ್ವ ವಿಖ್ಯಾತ ಸಿಗರೆಟ್ ಕಂಪೆನಿ ‘ಫಿಲಿಪ್ ಮೋರಿಸ್’ ಅಲ್ಲಿನ ಸರಕಾರವನ್ನು ನ್ಯಾಯಾಲಯಕ್ಕೆ ಎಳೆದಿದೆ. ಈ ವ್ಯಾಜ್ಯದಲ್ಲಿ ಒಂದು ವೇಳೆ ಗ್ರಹಚಾರಕ್ಕೇನಾದರೂ ಉರುಗ್ವೆ ಸೋತರೆ ಸುಮಾರು ೯,೦೦೦ ಸಾವಿರ ಕೋಟಿ ರೂಪಾಯಿ ಈ ಕಂಪೆನಿಗೆ ಪಾವತಿಸಬೇಕಂತೆ. ಪಾಪ ಟೋಬಾಕೋ ಕಂಪೆನಿಗಳ ಈ ನಿಲುವಿಗೆ ಹೆದರಿ ಮಧ್ಯ ಅಮೆರಿಕೆಯ ಇತರ ಬಡ ರಾಷ್ಟ್ರಗಳು ಸೊಕ್ಕಿದ ಫಿಲಿಪ್ ಮೋರಿಸ್ ನಂಥ ಕಂಪೆನಿಗಳ ಸಹವಾಸಕ್ಕೆ ಹೋಗುತ್ತಿಲ್ಲವಂತೆ. ಉರುಗ್ವೆ ವಿರುದ್ಧದ ಈ ವ್ಯಾಜ್ಯದಲ್ಲಿ ಫಿಲಿಪ್ ಮೋರಿಸ್ ಗೆದ್ದರೆ ಗೊತ್ತೇ ಇದೆಯಲ್ಲಾ, ಇನ್ನಷ್ಟು ರಂಗು ರಂಜಿತ ಪ್ಯಾಕೆಟ್ ಗಳು ಮಾರಾಟಕ್ಕೆ ಬರುತ್ತವೆ. ಧೂಮ ಪಾನ ಪ್ರೊಮೋಟ್ ಮಾಡಲು ಮತ್ತಷ್ಟು ಬೆಡಗಿಯರನ್ನು hire ಮಾಡುತ್ತಾರೆ. ಒಂದು ಕಡೆ ಇವರುಗಳು ಉತ್ಪಾದಿಸುವ ಸಿಗರೆಟ್ ಸೇದೀ ಸೇದೀ ಯುವಜನರು ರೋಗಗಳನ್ನು ಅಂಟಿಸಿ ಕೊಂಡು ಸಾಯುತ್ತಿದ್ದರೆ, ಮತ್ತೊಂದು ಕಡೆ ಸಾವಿನ ಅಂಗಡಿ ತೆರೆದು ಕೂತಿರುವ ಸಿಗರೆಟ್ ಕಂಪೆನಿಗಳ CEO ಗಳು, ಉನ್ನತ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ಬೋನಸ್ ಆಗಿ ಪಡೆದು “SMOKE FREE” ವಲಯಗಳಲ್ಲಿ, ರೆಸಾರ್ಟ್ ಗಳಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಶ್ ಶ್ ಶ್, the world is still a fair place.

ಎಲ್ಲ ದಿನಗಳ ರೀತಿ ಸೂರ್ಯ ಮುಳುಗುವುದರೊಂದಿಗೆ ತಂಬಾಕು ರಹಿತ ದಿನವೂ ಮಾಯಾವಾಗುತ್ತದೆ. ಅದರೊಂದಿಗೆ ಸಾವಿರಾರು ಬಡ ಜೀವಗಳೂ ಸಹ.

 

ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂಡು ಹೋಗಬಹುದು ಎನ್ನುವ ನವಿರೇಳುವ ನಡುಕವಾದರೆ, ಜೋಡಿಗಳನ್ನು ಆಮಂತ್ರಿಸಿದ್ದಕ್ಕೆ, ಹುರಿದುಂಬಿಸಿದ್ದಕ್ಕೆ  ತನ್ನ ಅಂಗಡಿ ಅಥವಾ ರೆಸ್ಟುರಾಂಟ್ ನ ಗಾಜುಗಳು ಎಲ್ಲಿ ವಿರೋಧಿಸುವವರ ಕಲ್ಲಿಗೆ ಚಲ್ಲಾಪಿಲ್ಲಿ ಆಗಬಹುದೋ ಎನ್ನುವ ಭೀತಿಯ ನಡುಕ ಇನ್ನು ಕೆಲವರಿಗೆ.   

ಮಕ್ಕಳ ದಿನಾಚರಣೆಯಿಂದ ಹಿಡಿದು ಊರುಗೋಲು ಹಿಡಿದು ನಡೆಯುವವರ ದಿನದವರೆಗೂ ವೈವಿಧ್ಯಗಳಿವೆ ದಿನಾಚರಣೆಗಳಿಗೆ. ಪ್ರೇಮಿಗಳಿಗೂ ಒಂದು ದಿನ. ಅದೇ valentine’s day. ಆದರೆ ಪ್ರೀತಿ ಎನ್ನುವುದು  ಬರೀ ಗಂಡು ಹೆಣ್ಣಿನ ನಡುವಿನ ಸಾಂಗತ್ಯ ಅಥವಾ ಸರಸವೇ ಆಗಬೇಕಿಲ್ಲ. ಪ್ರೀತಿಯನ್ನು platonic love ಆಗಿ ಪರಿವರ್ತಿಸಿದಾಗ ನಮ್ಮ ಸಹೋದ್ಯೋಗಿ, ನೆರೆಯವರು, ಸ್ನೇಹಿತರು, ಉದ್ರಿ ಕೊಡುವ ದಿನಸಿ ಅಂಗಡಿಯವ, ದಿನಪತ್ರಿಕೆ ಹಾಕುವ ವ್ಯಕ್ತಿ ಹೀಗೆ ಎಲ್ಲರೂ ಅರ್ಹರಾಗಬಹುದು ನಮ್ಮ ಪ್ರೀತಿಗೆ. ಈ ಕೆಳಗೆ ಕಾಣಿಸಿದ ಸಲಹೆಗಳು valentines ದಿನಕ್ಕೆ ಒಂದು ಹೊಸ ರೀತಿಯ ಹುರುಪು, ಭರವಸೆ ಮೂಡಿಸಬಹುದು.

ಬೆಳ್ಳಂಬೆಳಗ್ಗೆ ನಮ್ಮ ಗೇಟಿಗೆ ನ್ಯೂಸ್ ಪೇಪರ್ ಸಿಕ್ಕಿಸುವ ಹುಡುಗನನ್ನು ಹುಬ್ಬು ಗಂಟಿಕ್ಕಿ ಸ್ವಾಗತಿಸುವುದಕ್ಕಿಂತ ಅವನು ನಮ್ಮ ಹಾಗೆಯೇ ಒಬ್ಬ ಮನುಷ್ಯ ಎಂದು ಬಗೆದು ಮುಗುಳ್ನಕ್ಕು, ಒಂದು ಲಕೋಟೆಯಲ್ಲಿ ೧೦ ರೂಪಾಯಿ ಇಟ್ಟು ಕೊಟ್ಟರೆ ಹೇಗಿರಬಹುದು? ಅವನು ಆಸೆ ಪಡುತ್ತಿದ್ದ ಯಾವುದಾದರೂ ವಸ್ತು ಕೊಳ್ಳಲು ನಿಮ್ಮ ಆ ಕಾಣಿಕೆ ಅವನಿಗೆ ನೆರವಾಗಬಹುದು.

ಮನೆಯ ಮುಂದೆ ನಿಂತು ಈರುಳ್ಳಿ, ಟೊಮೇಟೋ ಎಂದು ಕೂಗುತ್ತಾ ತರಕಾರಿ ಮಾರುವವನಿಗೆ ಒಂದು ದಿನವಾದರೂ ಚೌಕಾಶಿಯಿಂದ ಮುಕ್ತಿ ಕೊಡಿಸಿ. ಈ ಒಂದು ದಿನವಾದರೂ ಅವನು ಹೇಳಿದ ಬೆಲೆ ಕೊಟ್ಟು ಬೆಳ್ಳುಳ್ಳಿ ಕೊಂಡು ಕೊಳ್ಳಿ. ಅಯ್ಯೋ ಇನ್ನೊಂದು ಬೆಳ್ಳುಳ್ಳಿ ಹಾಕು, ನಿನ್ ಗಂಟು ಹೋಗಲ್ಲ ಎಂದು ಗದರಿಸಿ greedy ಆಗಬೇಡಿ.

ನಿಮ್ಮ ತಾಯಿಯನ್ನು ಪ್ರೀತಿಸಿ. ಹಾಂ, ನಾವು ಯಾವಾಗಲೂ ಪ್ರೀತಿಸುತ್ತೇವೆ, ಅಷ್ಟು ಮಾತ್ರವಲ್ಲ mother’s day ಇದ್ದೇ ಇದೆಯಲ್ಲ ಎಂದು ಹೇಳಬೇಡಿ. ತಾಯಿ ಅಂದರೆ ನಮ್ಮ ಹೆತ್ತಬ್ಬೆ ಅಲ್ಲ, ಕೋಟ್ಯಂತರ ಹೆತ್ತಬ್ಬೆಯರನ್ನೂ, ನಮ್ಮನ್ನೂ ಹೊತ್ತೂ ಹೊತ್ತೂ ಬಳಲಿದ “ಭೂತಾಯಿ” ಯನ್ನು ಪ್ರೀತಿಸಿ. ಈ ಒಂದು ದಿನವಾದರೂ disposable ಗಳ ಸಹವಾಸ ಬಿಡಿ. ಅವು ಕಳಿಸುವ CFC (chloro fluoro carbon)  ನಮ್ಮ ತಾಯಿಯನ್ನು ಇನ್ನಷ್ಟು ಕ್ಷೀಣಗೊಳಿಸುತ್ತಿದೆ. ಸಾಧ್ಯವಾದರೆ ಕಳೆದ ಆರು ತಿಂಗಳಿನಿಂದ ಸೋರುತ್ತಿರುವ ನಲ್ಲಿಗೆ ಏನಾದರೂ ರಿಪೇರಿ ಮಾಡಿ, ಅಮೂಲ್ಯವಾದ ನೀರಿನ ಹನಿಗಳನ್ನು ಉಳಿಸಿ.

ಬೆಳಿಗ್ಗೆ ಸ್ನಾನ ಮಾಡಿ ಬಟ್ಟೆ ತೊಡುವಾಗ ಡಿಸ್ಕೌಂಟ್ ಆಸೆಗೆ ಬಿದ್ದು ಖರೀಸಿದ ಆದರೆ ಎಂದೂ ತೊಡದ ಆ ಟೀ ಶರ್ಟ್ ಅಥವಾ “ಮ್ಯಾಕ್ಸಿ” ಯನ್ನು ಯಾರಿಗಾದರೂ ದಾನ ಮಾಡಿ. ಹಾಗೆಯೆ ಯಾವುದಾದರೂ ಉಪಯೋಗಿಸದ ವಸ್ತು ಅಟ್ಟದ ಮೇಲಿದ್ದರೆ ಅದಕ್ಕೂ ಮೋಕ್ಷ ಕಾಣಿಸಿ. ದಾನ ನೀಡುವವನು “ದಾನವ” ನಾಗೋಲ್ಲ ಬದಲಿಗೆ ನಿಜವಾದ ಮನುಷ್ಯನಾಗುತ್ತಾನೆ, ದೇವರ ಮುಖದ ಮೇಲೆ ಮಂದಹಾಸ ತರುತ್ತಾನೆ. ಹಿಂಸೆ ಕಂಡೂ ಕಂಡೂ ರೋಸಿದ ಪರಮಾತ್ಮನಿಗೂ ಒಂದು smile ದಾನ ಮಾಡಿದಂತೆ ಈ ಸುದಿನದಂದು.

ದೊಡ್ಡ ಮನಸ್ಸು ಮಾಡಿ ಒಂದು ಪುಸ್ತಕ ಖರೀದಿಸಿ. ರಕ್ತದೊತ್ತಡ ಹೆಚ್ಚು ಮಾಡುವ ಪುಸ್ತಕವೋ, ಪತ್ರಿಕೆಯೋ ಅಲ್ಲ. ಏಗ್ದಾಗೆಲ್ಲಾ ಐತೆ ತೆರನಾದ, ಅಥವಾ ಅಕ್ಕ ಮಹಾದೇವಿ, ಶಿಶುನಾಳ ಶರೀಫರ ಬದುಕಿನ ನಿಜವಾದ ಅರ್ಥ ಹೇಳುವ ಪುಸ್ತಕವನ್ನು ಕೊಳ್ಳಿ.

ರಸ್ತೆಯಲ್ಲಿ ಹಾದುಹೋಗುವಾಗ ಯಾವುದಾದರೂ ಆಸ್ಪತ್ರೆ ಕಂಡರೆ ಜಗುಲಿಯ ಮೇಲೆ ಅಸಹಾಯಕನಾಗಿ ಕೂತ ವನಿಗೆ ಹಣ್ಣು ಹಂಪಲು ಕೊಡಿಸಿ ಅಥವಾ ಏನಾದರೂ ಧನ ಸಹಾಯ ಮಾಡಿ. ಅವನ ಮುಖದ ಮೇಲೆ ನೀವು ಕಾಣುವ ಹರ್ಷ ನಿಮ್ಮ valentine ದಿನಕ್ಕೆ ಒಂದು ಹೊಸ, ಅವರ್ಣನೀಯ ಅರ್ಥವನ್ನು ತಂದು ಕೊಡುತ್ತದೆ.

ಮೊಬೈಲ್ ಉಪಕರಣದ ರಿಂಗ್ ಟೋನ್ ವಾಲ್ಯೂಮ್ ಇನ್ನಷ್ಟು ಕಡಿಮೆ ಮಾಡಿ. ನೀವು ಹಾಕಿರುವ ಆ ಕರ್ಕಶ ಹಾಡನ್ನು ಇಡೀ ವಿಶ್ವ ಈಗಾಗಲೇ ಕೇಳಿಯಾಗಿದೆ. ಮೊಬೈಲ್ ರಿಂಗ್ ಆದ ಕೂಡಲೇ ಅಲ್ಲೇ ಪಕ್ಕದಲ್ಲೇ ಇರುವ “silence” ಗುಂಡಿಯನ್ನು ಒತ್ತಿ ಶಬ್ದ ಮಾಲಿನ್ಯ ಕಡಿಮೆ ಮಾಡಿ.           

ಸೂಟು ಬೂಟು ತೊಟ್ಟು ಅಥವಾ ಆಕರ್ಷಕವಾಗಿ ಬಟ್ಟೆ ಧರಿಸಿಯೂ ಕನ್ನಡ ಮಾತನಾಡಬಹುದು ಎಂದು ಸುತ್ತಲಿನವರಿಗೆ ತೋರಿಸಿ. ಆಂಗ್ಲ ಭಾಷೆಯೂ ಇರಲಿ, ಆದರೆ ಕನ್ನಡ ಹೆಚ್ಚು ಆಕರ್ಷಕ ಎಂದು ಮನವರಿಕೆ ಮಾಡಿಸಿ.    

ಟ್ರಾಫಿಕ್ ಸಿಗ್ನಲ್ ಬಳಿಯೋ, ಪಾರ್ಕಿಂಗ್ ಲಾಟ್ ಹತ್ತಿರವೋ ಸಿಗುವ ಸಪ್ಪೆ ಮುಖದ ಅಪರಿಚಿತನ ಕಡೆ ಮುಗುಳ್ನಗೆ ಬೀರಿ. ಪ್ರಪಂಚ ನಾವೆಣಿಸಿದಷ್ಟು ಕೆಟ್ಟಿಲ್ಲ ಎನ್ನುವ ಭಾವನೆ ಅವನಲ್ಲಿ ಮೂಡಿಸಿ.   

ಬೆಳಗ್ಗಿನಿಂದ ರಾತ್ರಿವರೆಗೂ ಕರಿದಿದ್ದು, ಹುರಿದಿದ್ದು ತಿಂದೂ ತಿಂದೂ ಏರಿಸಿಕೊಂಡ BP ಎನ್ನುವ “ಮೌನ ಹಂತಕ” (SILENT KILLER) ನ ಕಡೆ ಕಣ್ಣು ಹಾಯಿಸಿ. ಉದಾಸೀನ ಮಾಡದೆ bp ಪರೀಕ್ಷಿಸಿ. ಉಪ್ಪಿಗಿಂತ ರುಚಿಯಿಲ್ಲ ಎನ್ನೋ ಮಾತು ಗಾದೆಗೆ ಸೀಮಿತವಾಗಲಿ, ಟೇಬಲ್ ಸಾಲ್ಟ್ ಅನ್ನು ಸಂಪೂರ್ಣ ಉಪೇಕ್ಷಿಸಿ. ಒಂದರ್ಧ ಘಂಟೆ ನಡೆಯಿರಿ. ಇಂದೂ, ದಿನವೂ.  ನಿಮ್ಮ ದೀರ್ಘಾಯಸ್ಸು ನಿಮಗಲ್ಲದಿದ್ದರೂ ನಿಮ್ಮನ್ನು ಪ್ರೀತಿಸುವವರಿಗಾಗಿರಲಿ.     

ಕೊನೆಯದಾಗಿ, ತನಗಿರುವ ಎರಡು ಕೈ, ಎರಡು ಕಾಲುಗಳನ್ನು ದ್ವಿಗುಣ, ತ್ರಿಗುಣಗೊಳಿಸಿ ಹೆಣಗುತ್ತಾ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಫೀಸಿಗೆ ಮತ್ತು ಶಾಲೆಗೆ ಹೊರಡಿಸುವ ತಂಗಾಳಿ ರೀತಿಯ thankless ಜೀವಕ್ಕೊಂದು ಕೆಂಪು ಗುಲಾಬಿ ಕೊಟ್ಟು ನೀನಿಲ್ಲದ ದಿನ ದಿನವೇ ಅಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿ.  

ನಲ್ಮೆಯ ಸಂಪದದ ಬಂಧು ಭಗಿನಿಯರಿಗೆ ಪ್ರೀತಿಯ ದಿನದ ಅತ್ಯಂತ ಪ್ರೀತಿಯ ಹಾರೈಕೆಗಳು. 

ಮೇಲಿನ ಲೇಖನಕ್ಕೆ ಸ್ಫೂರ್ತಿ ಈ ವೆಬ್ ತಾಣ: http://philanthropywriting.com/2011/02/09/16-charitable-ways-to-celebrate-valentines-day/

ಮದುವೆಯ ಈ ಬಂಧಾ…..

ವಿವಾಹದ ದಿನ ಎಂದರೆ ಪ್ರತಿ ಹೆಣ್ಣು ಗಂಡಿನ ಬದುಕಿನ ಅತ್ಯಂತ ಮಹತ್ತರವಾದ, ಎಂದೆಂದೂ ನೆನಪಿನಲ್ಲುಳಿಯುವ ದಿನ. ರೋಮಾಂಚನ, ದುಗುಡ, ಕಾತುರ, ಸಂತಸ, ಹೆಮ್ಮೆ ಹೀಗೆ ನೂರೊಂದು ಭಾವನೆಗಳು ವಿವಾಹದಂದು. ಆ ವಿಶೇಷ ದಿನಕ್ಕಾಗಿಯೇ ವಧೂ ವರರು ತಿಂಗಳುಗಟ್ಟಲೆ ತಯಾರಿ ನಡೆಸಿರುತ್ತಾರೆ. ವರ ಅಷ್ಟೊಂದು ತಲೆ ಕೆಡಿಸಿಕೊಳ್ಳದಿದ್ದರೂ ವಧುವಿಗಂತೂ ತನ್ನ ವಿವಾಹದ ದಿನ ಹೀಗೆಯೇ ಇರಬೇಕೆನ್ನುವ ಸ್ಪಷ್ಟ ಕಲ್ಪನೆ ಇರುತ್ತದೆ.

ನಮ್ಮ ದೇಶದಲ್ಲಿ ಯಾವ ಧರ್ಮೀಯರೇ ಆಗಲಿ ವಿವಾಹದ ದಿನ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆ ಇಷ್ಟಪಟ್ಟರೆ ಪಾಶ್ಚಾತ್ಯರದು ಬೇರೆಯೇ ಆದ ದೃಷ್ಟಿಕೋನ. ಉಡುಗೆ ಮಾತ್ರವಲ್ಲ ಮದುವೆ ಆಗುವ ಸ್ಥಳಗಳೂ ಸಹ ವಿಚಿತ್ರವೇ. ಕೆಲವರು ನೀರಿನೊಳಕ್ಕೆ ಇಳಿದು ವಿವಾಹಿತರಾದರೆ ಇನ್ನೂ ಕೆಲವರು ಪ್ಯಾರಾಶೂಟ್ ನಲ್ಲಿ ಕೂತು ಮದುವೆ ಆಗುತ್ತಾರೆ.

ಹೀಗೆ ವಿವಿಧ ರೀತಿಯಲ್ಲಿ ಜನರ ಗಮನವನ್ನ ಸೆಳೆಯುವ ಉದ್ದೇಶದೊಂದಿಗೆ ವಿಶಿಷ್ಟ ವಾದ ರೀತಿಯಲ್ಲಿ ಮದುವೆಯಾಗುತ್ತಾರೆ.  ಕೆಲವು ಉಡುಗೆಗಳ ದೃಶ್ಯಗಳಿವೆ ಪಾಶ್ಚಾತ್ಯರದು. ನೋಡಿ ಆನಂದಿಸಿ.

 

ಮೇಲಿನ ಬಲ ಬದಿಯ ಎರಡು ಚಿತ್ರಗಳನ್ನೂ ನೋಡಿ ಮೂರ್ಛೆ ಹೋಗಿಲ್ಲ ತಾನೇ? ಹೋದರೂ ಅಚ್ಚರಿಯಿಲ್ಲ. ಸತ್ತ ಹೆಣವೂ ಶವ ಪೆಟ್ಟಿಗೆಯೊಳಕ್ಕೆ ಮಲಗಲು ಹೆದರುತ್ತದೆ, ಆದರೆ ಈ ಲಲನಾಮಣಿ ವಧು ಆರಿಸಿಕೊಂಡ ಜಾಗ ಶವಪೆಟ್ಟಿಗೆ. ಅವಳ ಗುಂಡಿಗೆಗೆ ಕೊಡಬೇಕು ನೋಡಿ ಬಹುಮಾನ. ತಾನು ಪ್ರೀತಿಸಿದ ವನನ್ನು ವಿವಾಹವಾಗಲು ೨೭ ವರ್ಷ ತಗುಲಿತಂತೆ. ಅಷ್ಟರಲ್ಲಿ ಇಬ್ಬರಿಗೂ ಬೇರೆಯವರೊಂದಿಗೆ ಮದುವೆಯಾಗಿ ಮಕ್ಕಲ್ಲೂ ಇದ್ದವು. ಕೊನೆಗೆ ಈ ಪ್ರೇಮಿಗಳು ಮದುವೆಯಾಗುವ ಕಾಲ ಕೂಡಿ ಬಂತು ತಮ್ಮ ತಮ್ಮ ಬಾಳ ಸಂಗಾತಿಗಳು ಬೇರೆಯಾದಾಗ. ಇನ್ನೆಂದೂ ತನ್ನ ಇನಿಯ ತನ್ನಿಂದ ಬೇರೆಯಾಗ ಕೂಡದೆಂದು ಅವನ ಕೊರಳಿಗೆ ನಾಯಿಗೆ ಕಟ್ಟುವ ಪಟ್ಟಿ ಕಟ್ಟಿದ್ದಾಳೆ ಸಹ. ನಮ್ಮಲ್ಲಿ ಹೆಣ್ಣಿಗೆ ತಾಳಿ ಕಟ್ಟುವುದಿಲ್ಲವೆ ಹಾಗೆ.