ಗಾಂಧೀ ಜಯಂತಿ, ಅಪರೂಪದ ಚಿತ್ರ

ಅಕ್ಟೋಬರ್ ೨, ಗಾಂಧೀ ಜಯಂತಿ. ಈ ದಿನ ಗಾಂಧಿಜೀಯವರ ತತ್ವಗಳನ್ನು, ತ್ಯಾಗಗಳನ್ನು ಮತ್ತು ಆದರ್ಶಗಳನ್ನು ಕೊನೆಗೆ, ಅವರ ಬಲಿದಾನದ ಬಗ್ಗೆ ಸ್ಮರಿಸುವ ದಿನ. ಗಾಂಧೀಜೀ ಯವರ ಬಗ್ಗೆ ಪ್ರತಿಯೊಬ್ಬರಿಗೂ ಒಂದೊಂದು ಅಭಿಪ್ರಾಯ. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅವರ ಗಣನೀಯ ಪಾತ್ರದ ಬಗ್ಗೆ ಹೆಮ್ಮೆ, ಕೃತಜ್ಞತಾ ಭಾವ ಕೆಲವರಲ್ಲಿದ್ದರೆ, ಮತ್ತೆ ಕೆಲವರು ಅವರ ವೈಯಕ್ತಿಕ ಜೀವನದ ಕಡೆ ನೋಟ ಹರಿಸಿ ಗಾಂಧೀ ಯನ್ನು ಹಳಿದು ತೃಪ್ತಿ ಪಡುತ್ತಾರೆ.

ಗಾಂಧೀ ಬಗ್ಗೆ ದೇಶೀಯರ ನಿಲುವು ಏನೇ ಇರಲಿ ವಿದೇಶೀಯರಿಗಂತೂ ಅವರ ವಿಚಾರಗಳು ಅನುಕರಣೀಯ ಎನ್ನುವ ಭಾವನೆ ತರಿಸಿವೆ. ಮಾರ್ಟಿನ್ ಲೂಥರ್ ಕಿಂಗ್, ಜಾನ್ ಕೆನಡಿ, ಆಲ್ಬರ್ಟ್ ಐನ್ಸ್ಟೀನ್ ಚಿತ್ರಗಳು ಹೇಗೆ ಜನರ ಮನಃ ಪಟಲದಲ್ಲಿ ಅಚ್ಚಳಿಯದೆ ನಿಂತಿವೆಯೋ ಹಾಗೆಯೂ ಗಾಂಧೀ ಸ್ಮೃತಿ ಸಹ ಎಂದು ವಿದೇಶೀಯರ ಅಭಿಪ್ರಾಯ. ವಿದೇಶೀ ಛಾಯಾಗ್ರಾಹಕಿ Margaret Bourke-White ಗಾಂಧೀಜಿಯವರನ್ನು ಹತ್ತಿರದಿಂದ ಬಲ್ಲ, ಅವರ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದ ಮಹಿಳೆ. ಇವರ ಚಿತ್ರಗಳು ಅಮೆರಿಕೆಯ time ಪತ್ರಿಕೆಯಲ್ಲಿ ಕಾಣಿಸಿ ಕೊಳ್ಳು ತ್ತಿದ್ದವು. ಗಾಂಧೀ ತಮ್ಮ ಚರಕ ದ ಹಿಂದೆ ಕೂತ ಮತ್ತು ಮಾರ್ಗರೆಟ್ ತಾನು ಚರಕ ದ ಹಿಂದೆ ಕೂತ ಎರಡು ಅಪರೂಪದ ಚಿತ್ರಗಳು ಕೆಳಗಿವೆ.

Image

Image

ಹಾಕಿರಣ್ಣ, ಈಕೆಗೊಂದು ಸೆಲ್ಯೂಟ್

ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.

ಮಹಿಳೆಯ ಹುಟ್ಟು ಈಗಲೂ ಕೆಲವು ಸಮಾಜಗಳಲ್ಲಿ ಅಸಮಾಧಾನ, ಅತೃಪ್ತಿ ತರುತ್ತದೆ. ಗಂಡು ಮಗುವನ್ನ ಹೆರುವುದು ಹೆಣ್ಣಿಗೆ ಪ್ರತಿಷ್ಠೆ ತಂದು ಕೊಡುತ್ತದೆ. ಗಂಡು ಮಗುವಿನ ಜನ್ಮ ಕುಟುಂಬದಲ್ಲಿ, ನೆಂಟರಿಷ್ಟರಲ್ಲಿ ಸಂತಸವನ್ನು ಹರಡುತ್ತದೆ. ಒಂದೆರಡು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ತಾಯಿಗೆ ನಿನ್ನ ಹೊಟ್ಟೆಯಲ್ಲಿ ದೇವರು ಗಂಡು ಮಗುವನ್ನ ಹಾಕಿಲ್ಲವೆ ಎಂದು ಮೂದಲಿಕೆ ಕೇಳಿ ಬರುತ್ತದೆ. ಗಂಡು ಸಂತಾನಕ್ಕೆ ಇರುವ ಬೇಡಿಕೆ ಕಂಡ ವೈದ್ಯಕೀಯ ಸಮೂಹ ಕೂಡಾ ಅಲ್ಟ್ರಾ ಸೌಂಡ್, ಅಬಾರ್ಶನ್ ಮೂಲಕ ಹೆಣ್ಣಿನ ಹುಟ್ಟನ್ನು ಕೊನೆಗೊಳಿಸುವ ನೀಚ ಪ್ರವೃತ್ತಿಗೆ ಸಾಕ್ಷಿ ಯಾಗುತ್ತಿದೆ.  ಗುಜರಾತಿನಲ್ಲಿ ಗಂಡು ಮಕ್ಕಳನ್ನು ಸೃಷ್ಟಿಸುವ ಕ್ಲಿನಿಕ್ ಕಾರ್ಯಾಚರಣೆಯ ಆಘಾತಕಾರಿ ಸುದ್ದಿಯ ಬಗ್ಗೆ ಇತ್ತೀಚೆಗೆ ತಾನೇ ಓದಿದ್ದೇವೆ. ಹೆಣ್ಣು ಮಗುವಿನ ಸಂತಾನ ಇಲ್ಲದಂತೆ ಮಾಡುವ ಇನ್ನೂ ಯಾವ ಯಾವ ತೆರನಾದ ಟ್ರಿಕ್ಕು ಗಳು ಅವಿತು ಕೊಂಡಿವೆಯೋ ಕುಬುದ್ಧಿ ತಲೆಗಳಲ್ಲಿ. ಅರೇಬಿಯದಲ್ಲಿ ಹುಟ್ಟುವ ಮೊದಲ ಮಗು ಹೆಣ್ಣಾದರೆ ಜೀವಂತ ಹೂಳುತ್ತಿದ್ದರಂತೆ. ಹುಟ್ಟಿದ ಹೆಣ್ಣುಮಗುವಿನ ಬಾಯೊಳಗೆ ಬೂಸಾ ಹಾಕಿ ಕೊಲ್ಲುತ್ತಿದ್ದರು ತಮಿಳು ನಾಡಿನಲ್ಲಿ. ಅರೇಬಿಯಾದ ಅನಿಷ್ಟ ಅಮಾನವೀಯ ಪದ್ಧತಿಗೆ ಪ್ರವಾದಿ ಮುಹಮ್ಮದರು ಅಂತ್ಯ ಹಾಡಿದರು. ಯಾವ ತಪ್ಪೂ ಮಾಡದ ಹೆಣ್ಣು ಹಸುಳೆ ಯನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಎಂದು ಸಮಜಾಯಿಷಿ ಕೇಳಲಾಗುವುದು ಎಂದು ದೇವರು ಪವಿತ್ರ ಕುರಾನ್ ನಲ್ಲಿ ಕಟ್ಟೆಚ್ಚರ ನೀಡುತ್ತಾನೆ. ಯಾರು ತಮಗೆ ಹೆಣ್ಣು ಮಕ್ಕಳನ್ನು ತಾರತಮ್ಯ ತೋರಿಸದೆ ಅವರ ಲಾಲನೆ ಪೋಷಣೆ ಮಾಡಿ ಸಂರಕ್ಷಿಸುವರೋ ಅವರು ಮತ್ತು ನಾನು ಸ್ವರ್ಗ ಲೋಕದಲ್ಲಿ ಇಷ್ಟು ಸಮೀಪ ಇರುತ್ತೇವೆ ಎಂದು ಪ್ರವಾದಿಗಳು ತಮ್ಮ ತೋರುಬೆರಳನ್ನು ಮತ್ತು ಮಧ್ಯದ ಬೆರಳನ್ನು ತೋರಿಸಿ ಹೇಳುತ್ತಾರೆ. ಆಸ್ತಿಯಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ವಿವಾಹದ ಹಕ್ಕು, ವೇದ ಪಾರಾಯಣದಲ್ಲಿ ಹಕ್ಕು ಹೀಗೆ ಎಲ್ಲ ರೀತಿಯ ಹಕ್ಕುಗಳಿಗೆ ಮಹಿಳೆಯನ್ನು ಅರ್ಹಳನ್ನಾಗಿಸಿದ ಪ್ರವಾದಿಗಳು ಮಹಿಳೆಯನ್ನು ಯಾವ ರೀತಿ ನಡೆಸಿ ಕೊಳ್ಳಬೇಕು ಎಂದು ಜಗತ್ತಿಗೆ ತೋರಿಸಿ  ಒಂದು ಮಹಾ ಪರಂಪರೆಯನ್ನೇ ಹುಟ್ಟು ಹಾಕಿದರು. ದುರದೃಷ್ಟವಶಾತ್ ಈ ಹಕ್ಕುಗಳನ್ನ ಕೊಡ ಮಾಡಲು ಮುಸ್ಲಿಂ ಸಮಾಜ ಚೌಕಾಸಿ ಮಾಡುತ್ತಿರುವುದು ಖಂಡನೀಯ.

ಮದುವೆ ವಿಷಯದ ತಕರಾರಿಗೆ ಮಹಿಳೆಯೊಬ್ಬಳನ್ನು ನಗ್ನವಾಗಿ ಪರೇಡ್ ಮಾಡಲಾಯಿತು ಲಾಹೋರ್ ನಗರದಲ್ಲಿ. ಈ ತೆರನಾದ ಮಹಿಳೆ ವಿರುದ್ಧದ ಹಿಂಸೆ ನಮಗೆ ಎಲ್ಲೆಲ್ಲೂ ಕಾಣಲು ಸಿಗುತ್ತದೆ. ಈ ವಿಷಯದಲ್ಲಿ ಅತಿ ಮುಂದುವರಿದ, ಅತಿ ಹಿಂದುಳಿದ ದೇಶಗಳು ಸಮಾನತೆಯನ್ನು ಸಾಧಿಸಿವೆ. ಇಂಗ್ಲೆಂಡ್ ನಲ್ಲಿ ಪ್ರತೀ ಮೂವರು ಹೆಣ್ಣುಮಕ್ಕಳಿಗೆ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಂತೆ. ಸೂರ್ಯ ಮುಳುಗದ ಸಾಮ್ರಾಜ್ಯದ ಕಥೆ ಇದು. ಕುಡಿತ, ಜೂಜು ಮುಂತಾದ ಅನಿಷ್ಟಗಳಿಗೆ ಗುಲಾಮನಾದ ಗಂಡು ಮಹಿಳೆಯ ಮೇಲೆ ದೌರ್ಜನ್ವ ಎಸಗುತ್ತಾನೆ. ವರವ ನೀಡು ತಾಯೆ ಕುಡುಕನಲ್ಲದ ಗಂಡನ. ಈ ಮಾತಿನ ಹಿಂದೆ ಹೆಣ್ಣು ನೆಮ್ಮದಿಯ ಬದುಕು ಬಯಸುವುದು ವ್ಯಕ್ತ ವಾಗುತ್ತದೆ. ಕಾರು ಬಂಗಲೆ ಕೇಳುತ್ತಿಲ್ಲ ಆಕೆ. ಕೇವಲ ನೆಮ್ಮದಿಯ ಬದುಕು ಆಕೆಯ ಆಸೆ. 

ಗರ್ಭ ನಿರೋಧಕ ಸೌಲಭ್ಯ ಕೇಳಿದ ವಿಶ್ವ ವಿದ್ಯಾಲಯದ ಹೆಣ್ಣು ಮಗಳೊಬ್ಬಳನ್ನು ಅಮೆರಿಕೆಯ ರೇಡಿಯೋ ಬಾತ್ಮೀದಾರ “ರಷ್ ಲಿಂಬಾ” (rush limbaugh) ವೇಶ್ಯೆ ಎಂದು ಜರೆದ. ಕಾಮ ತೀಟೆ ತೀರಿಸಿ ಕೊಳ್ಳಲು ಸರಕಾರ ಭರಿಸಬೇಕಂತೆ ವೆಚ್ಚ ಎಂದು ಕೀಳು ಮಟ್ಟದ ವಾಗ್ದಾಳಿ ಮಾಡಿದ ಈ ಬಲಪಂಥೀಯ ವರದಿಗಾರ. ಇದು ಅತ್ಯಂತ ಮುಂದುವರೆದ ದೇಶವೊಂದರ ಕಥೆ. ಇಂಥ ಮಾತುಗಳನ್ನು ತಲೆ ಕೆಟ್ಟ ತಾಲಿಬಾನಿಯೂ ಆಡಿರಲಿಕ್ಕಿಲ್ಲ. ಗುಹೆಗೆಳಲ್ಲಿ ಅಡಗಿ ಕೂತು ಮಹಿಳೆಗೆ ಸ್ವಾತಂತ್ರ್ಯ ಕೊಡಲು ಒಪ್ಪದ ತಾಲಿಬಾನಿ ಬಾಯಿಂದ ಇಂಥ ಮಾತುಗಳು ಹೊರಡಲಿಲ್ಲ. ಗಗನಚುಂಬಿ ಕಟ್ಟಡಗಳ ನಾಡಿನಿಂದ ಬಂದವು ಈ ಮಾತುಗಳು. ಅದ್ಯಾವ ನಿಗೂಢ ಕಾರಣಕ್ಕೆ ಮಹಿಳೆಯನ್ನು ಗಂಡು ಶತ್ರು ಎಂದು ಪರಿಗಣಿಸುತ್ತಾನೋ ಅರ್ಥವಾಗುತ್ತಿಲ್ಲ. ಈಡನ್ ಉದ್ಯಾನವನದಲ್ಲಿ ದೇವರು  ನಿಷಿದ್ಧ ಗೊಳಿಸಿದ ಸೇಬನ್ನು ತಿನ್ನಲು ಆಡಂ ನಿಗೆ ಈವ್ ಉತ್ತೇಜಿಸಿದ ಕಾರಣ ದೇವರು ಮಹಿಳೆಗೆ ಪ್ರಸವ ವೇದನೆ ನೀಡಿದ ಎನ್ನುವ ಮತಿಹೀನರೂ ಇದ್ದಾರೆ. ಅಂದರೆ ಈ ಮಹಿಳೆ ವಿರುದ್ಧದ ಭಾವನೆಗೆ, ನಡವಳಿಕೆಗೆ ಕಾರಣ ಸಿಗುತ್ತದೆ.

ಮಹಿಳೆಯನ್ನು ಹಾಯ್, ಸೆಕ್ಸಿ ಎಂದು ಕರೆದರೆ ಸಿಕ್ಸಿಸ್ಟ್ ಆಗಬಹುದೋ ಅಥವಾ ಅದು ಒಂದು complimentary ಯೋ ಎಂದು ಒಂದು ಪತ್ರಿಕೆ ಕೇಳುತ್ತದೆ. ಮಾಧ್ಯಮಗಳು ಹೆಣ್ಣಿನ ಸೌಂದರ್ಯಕ್ಕೆ ಕೊಡುತ್ತಿರುವ ಅತೀವ ಮಹತ್ವ ಆಕೆ ತನಗರಿವಿಲ್ಲದೆಯೇ ಕೀಳರಿಮೆ ಬೆಳೆಸಿಕೊಂಡು ತೊಳಲಾಡುವಂತೆ ಮಾಡುತ್ತಿದೆ. ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಬರುವವರೆಗೆ ಈ ಕೀಳರಿಮೆಯ ಬವಣೆ ಹೆಣ್ಣಿಗೆ ತಪ್ಪದು. ಮಾಧ್ಯಮಗಳ, ಸೌಂದರ್ಯ ಪ್ರಸಾಧನ ಉತ್ಪಾದಿಸುವ ಕಂಪೆನಿಗಳ ಈ ನಡವಳಿಕೆಗೆ ದಾರಿ ಬೇರೆ ಕಾಣದೇ ತನಗರಿವಿಲ್ಲದಂತೆಯೇ ಭಾಗವಹಿಸುತ್ತಿರುವುದು ಖೇದಕರ. ಮಹಿಳೆಗೆ ಹೆಚ್ಚು ಮೈ ಪ್ರದರ್ಶನ ಮಾಡಲು ಕೊಟ್ಟ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ ಎಂದು ಬಗೆದ ಆಧುನಿಕ ವಿಶ್ವ ಮಹಿಳೆಯನ್ನು ಎಲ್ಲ ರೀತಿಯ ಅಪಮಾನಗಳಿಗೆ ಎಗ್ಗಿಲ್ಲದೆ ಉಪಯೋಗಿಸಿ ಕೊಂಡಿತು. ಕನಿಷ್ಠ ಉಡುಗೆ ತೊಟ್ಟು cat walk ಮಹಿಳೆಯ ಸೌಂದರ್ಯಕ್ಕೆ ಆಶ್ಚರ್ಯದಿಂದ ಹುಬ್ಬೇರಿಸಿ ಕರತಾಡನ ಮಾಡುವ ಜನ ಆಕೆ ವೇತನದಲ್ಲಿ ಸಮಾನತೆ ಬೇಡಿದಾಗ ಹುಬ್ಬು ಗಂಟಿಕ್ಕುತ್ತಾರೆ. ಹೆರಿಗೆ ವೇಳೆ ಅವಳಿಗೆ ಬೇಕಾದ ಸೌಲಭ್ಯ ಕೊಡಲು ತಕರಾರು ಮಾಡುತ್ತಾರೆ. ಗಂಡಿನಂತೆಯೇ ದುಡಿದರೂ ಅವಳ ಶ್ರಮಕ್ಕೆ ಬೆಲೆಯಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸಮಾಡುವ, ಮನೆಗೆಲಸ ಮಾಡುವ, ತಮ್ಮದೇ ವ್ಯಾಪಾರ ಧಂಧೆ ನಡೆಸುವ, ಚಿಕ್ಕ ಪುಟ್ಟ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೂ ಇಲ್ಲ, ಭದ್ರತೆಯೂ ಇಲ್ಲ. 

ಇಷ್ಟೆಲ್ಲಾ ಅಡೆ ತಡೆಗಳ ನಡುವೆಯೂ, ದೌರ್ಜನ್ಯ ಅಪಮಾನಗಳ ಮಧ್ಯೆಯೂ ಹೆಣ್ಣು ಸಾಧನೆಯ ಕಡೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಪರಿಚಯದ ವ್ಯಕ್ತಿಯೊಬ್ಬರ ಅವಳಿ ಹೆಣ್ಣುಮಕ್ಕಳು ಗಣಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಪದವೀಧರೆಯರಾದರು. ಡಿಗ್ರೀ ಪಡೆದು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಒಳ್ಳೆಯ ಸಂಸ್ಥೆಯಲ್ಲಿ ಕೆಲಸವೂ ಸಿಕ್ಕಿತು. ಗ್ರಾಮ ಪ್ರದೇಶದಿಂದ, ಮುಸ್ಲಿಂ ಕುಟುಂಬದಿಂದ ಬಂದ ಈ ಹೆಣ್ಣು ಮಕ್ಕಳು ಸುತ್ತ ಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೆ, ತನ್ನ ಪಾಲಕರ ಪ್ರೋತ್ಸಾಹದಿಂದ ತಮ್ಮ ಶಿಕ್ಷಣದ ಉದ್ದಕ್ಕೂ ಅತೀ ಹೆಚ್ಚು ಅಂಕಗಳನ್ನು ಗಳಿಸುತ್ತಾ ತಮ್ಮ ಕನಸನ್ನು ನನಸಾಗಿಸಿಕೊಂಡರು.

ಹೀಗೆ ಸಮಾಜದ ಕೆಂಗಣ್ಣಿಗೆ, ಕುಹಕಕ್ಕೆ ತಲೆ ಬಾಗದೆ ಮುನ್ನಡೆಯ ದೃಢವಾದ ಹೆಜ್ಜೆ ಇಡುತ್ತಿರುವ ಹೆಣ್ಣು ಮಕ್ಕಳಿಗೆ ಮಹಿಳಾ ದಿನದ ಶುಭಾಶಯಗಳು.

ಚಿತ್ರ ಕೃಪೆ: http://www.nationalgeographic.com

ಅಪ್ಪನಿಗೂ ಒಂದು “ದಿನ”

 
ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ.

ಇಸ್ಲಾಮಿನ ಪವಿತ್ರ ಪ್ರವಾದಿಗಳ ಹತ್ತಿರ ಒಬ್ಬರು ಬಂದು ಕೇಳುತ್ತಾರೆ, ನಾವು ಅತಿ ಹೆಚ್ಚ್ಚು ಗೌರವಿಸಬೇಕಾದ, ಪ್ರೀತಿಸಬೇಕಾದ ವ್ಯಕ್ತಿ ಯಾರು ಎಂದು. ಸುಡು ಮರಳಾರಣ್ಯದಿಂದ ವಿಶ್ವಕ್ಕೆ ಶಾಂತಿ, ಸಮನ್ವತೆಯ ಸಂದೇಶ ತಂದ ಮಹರ್ಷಿ ಹೇಳಿದ್ದು, ನಿನ್ನ ತಾಯಿ ಎಂದು. ನಂತರ ಯಾರು ಎನ್ನುವ ಅವರ ಪ್ರಶ್ನೆಗೆ ಪ್ರವಾದಿ ಹೇಳಿದ್ದು ತಾಯಿ. ಮೂರನೆಯ ಸಲವೂ ಕೇಳಿದಾಗ ತಾಯಿಯೇ ಉತ್ತರ. ಪ್ರವಾದಿಗಳೇ ನಂತರದ ಸರತಿ ಯಾರದು ಎಂದು ಆತ ಹತಾಶೆಯಿಂದ ಕೇಳಿದಾಗ ನಿನ್ನ “ತಂದೆ” ಎಂದರು ಪ್ರವಾದಿ.

ಮತ್ತೊಂದು ಕಡೆ ತಾಯಿಯ ಮಹತ್ವವನ್ನು ವಿವರಿಸುತ್ತಾ ಪ್ರವಾದಿಗಳು ” ಮಾತೆಯ ಕಾಲಿನಡಿಯಲ್ಲಿದೆ  ಮಕ್ಕಳ ಸ್ವರ್ಗ” ಎಂದು ತಾಯ್ತನವನ್ನು ಕೊಂಡಾಡಿದರು.

ಅಮ್ಮ ನೀನು ನಕ್ಕರೇ ನಮ್ಮ ಬಾಳು ಸಕ್ಕರೆ,……
ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವಾ…

ಓಹ್, enough enough, where is dad, where is the father? ಅಪ್ಪನ ದಿನದಲ್ಲೂ ಎಂಥದ್ದು ತಾಯಿಯ ಗುಣಗಾನ ಎನ್ನುತ್ತೀರಾ? ನಿಲ್ಲಿ, ಅಗೋ ನೋಡಿ ಬರುತ್ತಿದ್ದಾನೆ ಅಪ್ಪ. ದಿನವಿಡೀ ಸೌದೆ ಕಡಿದು ಹೆಗಲ ಮೇಲೆ ಕೊಡಲಿಯನ್ನು ಹೊತ್ತು, ಕೈಯಲ್ಲಿ ತನ್ನ ಮಕ್ಕಳಿಗೆ ತಿಂಡಿ ಮತ್ತು ಹೆಂಡತಿಗೆ ಹೂವು ತರುತ್ತಿದ್ದಾನೆ. ರಕ್ತವನ್ನು ಬೆವರಾಗಿಸಿ dog eat dog world ನಲ್ಲಿ ಸೆಣಸಿ ತನ್ನ ಪರಿವಾರವನ್ನು ಸುಖಿಯಾಗಿಡಲು ಅವನು ಪಡುತ್ತಿರುವ ಪಾಡಿಗೆ ಚಿಕ್ಕಾಸಿನ ಬೆಲೆಯಿಲ್ಲ. ತಂದೆ ಎಂದರೆ ದುಡಿಯುವ ಒಂದು ಮೆಶಿನ್ ಅಷ್ಟೇ. ಪೂರ್ಣವಿರಾಮ. 

ಅಪ್ಪ ಎಷ್ಟು ಚಿಕ್ಕ ಚೊಕ್ಕ ಪದ? ಆದರೆ ಅದರ ಹಿಂದಿರುವ ತ್ಯಾಗ, ಕಷ್ಟ ಕಾರ್ಪಣ್ಯ? ಮಕ್ಕಳಾದರೆ ತಾಯಿಗೆ ಕ್ರೆಡಿಟ್. ಹೊತ್ತು ಹೆತ್ತು ಹೊತ್ತು ಸಾಕುತ್ತಾಳಂತೆ. ಅದರ ನಂತರದ ಎಲ್ಲ ಜಂಜಾಟಗಳಿಗೂ ತಂದೆಯೇ ಅಲ್ಲವೇ ಮುಂಚೂಣಿಯಲ್ಲಿ ನಿಂತು ನಿಭಾಯಿಸಬೇಕಾದ್ದು?

ಅಪ್ಪನ ಪಾತ್ರ ಬಹಳಷ್ಟು ಚೈತನ್ಯ, ( takes oodles of energy ), ಬಹಳಷ್ಟು ಬಾಧ್ಯತೆ (takes lots of commitment) ಗಳನ್ನೂ ಬೇಡುತ್ತದೆ. ದಿನವಿಡೀ ದುಡಿದು, ಮೇಲಿನವರಿಂದ, ಯಜಮಾನರಿಂದ ತೆಗಳಿಸಿಕೊಂಡು ಸಪ್ಪೆ ಮುಖದಿಂದ ಕೆಲಸದ ಸ್ಥಳ ಬಿಟ್ಟು ಮನೆಗೆ ಬಂದಾಗ ಆತ ಚೈತನ್ಯದ ಚಿಲುಮೆ ಆಗಬೇಕು ಮಡದಿಗೆ, ಮಕ್ಕಳಿಗೆ.
ನನ್ನ ತಂದೆ world’s best dad. ಮಕ್ಕಳು ಏನನ್ನುತ್ತಾರೋ ಅದು ಸರಿ, ಅವರಿಗೆ ಬೇಕಿದ್ದನ್ನಲ್ಲವನ್ನೂ ಕೊಡಿಸುವ ಯತ್ನ. ದಾರಿ ತಪ್ಪಂದಂತೆ ಅತ್ಯಂತ ಕಟ್ಟುನಿಟ್ಟಾಗಿ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಹೊರಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳೆದುರು ತೋರಿಸುತ್ತಿರಲಿಲ್ಲ. ಒಮ್ಮೆ ಸನಾದಿ ಅಪ್ಪಣ್ಣ ಚಿತ್ರ ನೋಡಿ ಬಂದ ತಂದೆ ಅಮ್ಮನಲ್ಲಿ ಇಷ್ಟೊಂದು ಪ್ರೀತಿಯಿಂದ ಸಾಕಿದ ನಮ್ಮ ಮಗನೂ ಹೀಗೆ ಆಗಿ ಬಿಟ್ಟರೆ ಹೇಗೆ ಎಂದು ಅನುಮಾನಿಸಿದ್ದರು.

ಆದರೆ ಅಪ್ಪನಿಗೆ ದೊಡ್ಡ ನಿರಾಶೆಯನ್ನೇ ಬಡಿಸಿದೆ ನಾನು.

ಈಗ ಎರಡು ಪುಟ್ಟ ಮಕ್ಕಳ ತಂದೆಯಾಗಿರುವ ನಾನು ನನ್ನ ಶ್ರಮ ಮೀರಿ ಪ್ರಯತ್ನಿಸುತ್ತೇನೆ ಒಳ್ಳೆ, ಪ್ರೀತಿಯ, ಮಮತೆಯ ತಂದೆಯಾಗಲು. ನಾನು ಪಡುವ ಪಾಡಿಗೆ ನನಗೆ ನನ್ನ ಮಕ್ಕಳ ಟೈ ಕೊಡುಗೆಯಾಗಲಿ, ಕೈ ಗಡಿಯಾರದ ಉಡುಗೊರೆಯಾಗಲಿ ಬೇಕಿಲ್ಲ. ನನಗೆ ಬೇಕಿರುವುದು ಇಷ್ಟೇ; ಸ್ವಾಭಿಮಾನಿಗಳಾಗಿ ದೇಶಕ್ಕೂ ತಾವು ನಂಬಿದ ಸಂಸ್ಕೃತಿಗೂ ಅಂಟಿಕೊಂಡು ಇವೆರಡಕ್ಕೂ ಕೀರ್ತಿ ತರುವ, ಬೆಳಗುವ ರತ್ನಗಳಾಗಿ ಬಾಳಲಿ ನನ್ನ ಮಕ್ಕಳು ಎಂದು.