ಈಗ ಅತ್ಯಾಚಾರ ‘ಕಾಮನ್ ಫೆನಾಮೆನಾ’ ನಮ್ಮ ದೇಶದಲ್ಲಿ

ಈಗ ಅತ್ಯಾಚಾರ ಕಾಮನ್ ಫೆನಾಮೆನಾ ನಮ್ಮ ದೇಶದಲ್ಲಿ. ಟೈಮ್ಸ್ ಆಫ್ ಇಂಡಿಯಾ ದ ಆನ್ ಲೈನ್ ಆವೃತ್ತಿಯ ಮಧ್ಯ ಭಾಗದ ಸುದ್ದಿ ಯಲ್ಲಿ ದಿನವೂ ರಾರಾಜಿಸುವ ಚಟುವಟಿಕೆ ಈ ರೇಪು ಎನ್ನುವ ಅಸಹ್ಯ ಹುಟ್ಟಿಸುವ perversion. ಇದಕ್ಕೆ ಮುಖ್ಯ ಕಾರಣ ಎಂದರೆ ರೇಪಿಗೆ ತಕ್ಕ ಶಿಕ್ಷೆಯ ಕೊರತೆ ಅದರೊಂದಿಗೇ ಈ ನೀಚ ಕೃತ್ಯಕ್ಕೆ ಮಹಿಳೆಯನ್ನು ಹೊಣೆಯಾಗಿಸುವ  ನಾಚಿಕೆಗೆಟ್ಟ ವರ್ತನೆ. ಮಹಿಳೆ ಸರಿಯಾಗಿ ಬಟ್ಟೆ ಉಡಲು ಅಸಮರ್ಥಳಾದರೆ ರೇಪ್ ಬಂದು ಎರಗುತ್ತದೆ ಎನ್ನುವುದು ಬಹಳಷ್ಟು ಜನರ ವಕ್ರ ನ್ಯಾಯ. ವಯಸ್ಕ, ಹದಿಹರೆಯದ ಹೆಣ್ಣಿನ ಉಡುಗೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವುದಾದರೆ ಒಂದೂವರೆ, ಎರಡು, ಮೂರು ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಏನು ಸಮಜಾಯಿಷಿ?

ಇಂದು ೧೧ ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಈ ಅಮಾನುಷ ಕೃತ್ಯಗಳು ನಾಗರೀಕ ಸಮಾಜದ ಕಣ್ಣು ತೆರೆಸಲು ವಿಫಲ ವಾಗುತ್ತಿರುವುದು ದಿಗಿಲನ್ನು ಹುಟ್ಟಿಸುತ್ತಿದೆ. ನನ್ನ ಪ್ರಕಾರ ಅತ್ಯಾಚಾರ ಭ್ರಷ್ಟಾಚಾರಕ್ಕಿಂತ ಕೀಳು, ಅಸಹ್ಯ. ಅತ್ಯಾಚಾರದ ವಿರುದ್ಧ ಅಣ್ಣಾ ಹಜಾರೆ, ಕೇಜರಿವಾಲ (ನಾನು ಈತನ ಫ್ಯಾನ್ ಅಲ್ಲ) ನಂಥವರು ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಬರೀ ಜನ ಸಾಮಾನ್ಯನ ಅಭಿಪ್ರಾಯ ಮಾತ್ರವಲ್ಲ ಮಂತ್ರಿ ಮಹೋದಯರೂ, ಪೊಲೀಸ್ ಅಧಿಕಾರಿಗಳೂ ಈ ಮಾತಿಗೆ ಧ್ವನಿಗೂಡಿಸುತ್ತಾರೆ.  ಈಗ ಹರಿಯಾಣ ರಾಜ್ಯದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಕೊಡುವ ಸಲಹೆ ಏನೆಂದರೆ ಹೆಣ್ಣು ಗಂಡುಗಳ ವಿವಾಹಾರ್ಹ ವಯಸ್ಸನ್ನು ಇಳಿಸಬೇಕು ಎನ್ನುವುದು. ಒಂದು ಕಡೆ ಸರಿಯಾಗಿ ಬಟ್ಟೆ ತೊಡು ಇಲ್ಲಾ ಮಾನ ಕಳೆದು ಕೊಳ್ಳಲು ತಯಾರಾಗು ಎನ್ನುವ ಎಚ್ಚರಿಕೆಗೆ ಮದುವೆ ವಯಸ್ಸನು ಇಳಿತ ಮಾಡಿದರೆ ರೇಪ್ ದರದಲ್ಲಿ ಕಡಿತ ಬರಬಹುದು ಎನ್ನುವ ವಾದಕ್ಕೆ ಜೋಡಿ ಎನ್ನುವಂತೆ ಬರುತ್ತಿದೆ ಮಂತ್ರಿಯ ಸಲಹೆ. ಈ ಮಾತಿನೊಂದಿಗೆ ಈ ಮು. ಮಂತ್ರಿ ಮುಘಲರನ್ನೂ ಎಳೆದು ತರುತ್ತಾನೆ. ಕುಣಿಯಲು ಬಾರದವಳು ನೆಲ ಡೊಂಕು ಎಂದಳಂತೆ, ಆಳನು ಬಾರದವನು ಮುಘಲರನ್ನು, ಪೋರ್ಚುಗೀಸರನ್ನು ಹೊನೆಯಾಗಿಸುತ್ತಾನೆ ತನ್ನ ಹೊಣೆಗೇಡಿತನಕ್ಕೆ.

ಒಟ್ಟಿನಲ್ಲಿ ಸಮಾಜದ ನಿಲುವು ಇಷ್ಟೇ. ಏನೇ ಆಗಲಿ, ಏನೇ ಬರಲಿ, ನಾವು ಮಾತ್ರ ನಮ್ಮ ಗಂಡು ಮಕ್ಕಳಿಗೆ ನೈತಿಕತೆಯ ಪಾಠ ಹೇಳೋಲ್ಲ, ಪರ ಹೆಣ್ಣನ್ನು ಗೌರವದಿಂದ ಕಾಣಲು ಉತ್ತೇ ಜಿಸೋಲ್ಲ ಎನ್ನುವ ಹೊಟ್ಟೆ ತೊಳೆಸುವಂಥ ಮೊಂಡುತನ. ನಮ್ಮ ಸಂಸ್ಕಾರ ಅಂಥದ್ದು, ಇಂಥದ್ದು ಎಂದು vainglorious ಆಗಿ ಕಣ್ಣು ಮುಚ್ಚಿ, ಎದೆಯುಬ್ಬಿಸಿ ನಡೆದರೆ ಸಾಲದು. ಅತ್ಯಾಚಾರದಂಥ ಅವಮಾನಕಾರೀ ಸಾಮಾಜಿಕ ಪಿಡುಗಿಗೆ ಇತಿಶ್ರೀ ಹಾಡಲೇ ಬೇಕು.              

ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.