ಇಂಥ ಮಾತುಗಳನ್ನು ಎಂದಾದರೂ ಕೇಳಿದ್ದೀರಾ?

ಆರು ವರ್ಷ ಪ್ರಾಯದ ಮುಬೀನ ನನ್ನ ಸೋದರಿಯ ಮಗಳು. ಅವಳು ಮಾತನಾಡಲು ಶುರು ಮಾಡಿದಂದಿನಿಂದ ನಮ್ಮನ್ನು ದಂಗು ಬಡಿಸುವ ಮಾತುಗಳನ್ನೇ ಆಡುತ್ತಿದ್ದುದು. ಅರಳು ಹುರಿದಂತೆ ಮಾತನ್ನಾಡುತ್ತಿದ್ದ ಮುಬೀನಾ ಳನ್ನು ನನ್ನ ತಂದೆ ತಾಯಿ ತುಂಬಾ ಪ್ರೀತಿಸುತ್ತಿದ್ದರು. ಒಂದೆರಡು ದಿನಗಳ ರಜೆ ಸಿಕ್ಕರೂ ಅಪ್ಪ ಅವಳಿರುವಲ್ಲಿಗೆ ತಾವೇ ಹೋಗಿ ಕರೆದು ಕೊಂಡು ಬರುತ್ತಿದ್ದರು. ಒಂದೆರಡು ದಿನ ಇದ್ದು ಅವಳ ಮನೆಗೆ ಅವಳು ಮರಳಿದರೆ ಮಣೆ ಬಿಕೋ ಎನ್ನುತ್ತಿರುತ್ತದೆ. ಕೆಲವೊಮ್ಮೆ ತನ್ನ ಅಮ್ಮನನ್ನು ಬಿಟ್ಟು ಅವಳ ಅಜ್ಜಿಯ ಮನೆಯಲ್ಲಿ ಇರುತ್ತಿದ್ದ ಸಮಯದಲ್ಲಿ ನಿನ್ನ ಅಜ್ಜಿ ಚೆನ್ನಾಗಿ ನೋಡಿ ಕೊಳ್ಳುತ್ತಾರಾ ಎಂದು ಮನೆಯಲ್ಲಿ ಕೇಳುತ್ತಿದ್ದರು. ಯಾವಾಗಲೂ ಏನಾದರೊಂದು ಕಂಪ್ಲೇಂಟ್ ಇದ್ದೇ ಇರುತ್ತಿತ್ತು ಅವಳ ಹತ್ತಿರ. ಅಜ್ಜಿ ಹಾರ್ಲಿಕ್ಸ್ ಕೊಡೋಲ್ಲ, ಐಸ್ ಕ್ರೀಂ ಕೊಡೋಲ್ಲ ಎನ್ನುವಂಥವು .

ಮೊನ್ನೆ ನಮ್ಮ ಮನೆಯಲ್ಲಿ ಅವಳನ್ನು ಕೇಳಿದರು ನಿನ್ನ ಅಜ್ಜಿ (ಅವಳ ತಂದೆಯ ತಾಯಿ) ನಿನ್ನನ್ನು ಹೇಗೆ ನೋಡಿಕೊಳ್ಳುತ್ತಾರೆ ಅಂತ. ಆಗ ಅವಳು ಹೇಳಿದ್ದು, ನಾವು ಹೋಂ ವರ್ಕ್ ಮಾಡುವಾಗ ಮೊದಮೊದಲು ಚೆನ್ನಾಗಿ ತಪ್ಪಿಲ್ಲದೆ ಗುಂಡು ಗುಂಡಾಗಿ ಬರೆಯುತ್ತೇವೆ, ಸ್ವಲ್ಪ ಬರೆದಾದ ಮೇಲೆ ಬೇಕಾಬಿಟ್ಟಿ ಬರೆಯುತ್ತೆವಲ್ಲಾ ಹಾಗೆ ಅಜ್ಜಿಯೂ ಕೂಡಾ. ಮೊದ ಮೊದಲು ಚೆನ್ನಾಗಿ ನೋಡಿ ಕೊಳ್ಳುತ್ತಾರೆ, ಆಮೇಲೆ ಏನೂ ಕೊಡೋಲ್ಲಾ, ಎಂದು ಹೇಳಿ ಎಲ್ಲರನ್ನೂ ಬೇಸ್ತು ಬೀಳಿಸಿದಳು. ಅವಳ camparison ನೋಡಿ.

ಮುಬೀನಾ ಶಾಲೆಗೆ ಹೋಗುತ್ತಿದ್ದ ಆರಂಭದ ದಿನಗಳು. ವ್ಯಾನ್ ಡ್ರೈವರ್ ಮಕ್ಕಳನ್ನು ಉಸಿರುಗಟ್ಟುವ ರೀತಿಯಲ್ಲಿ ತುಂಬುತ್ತಿದ್ದ. ಇದನ್ನು ಕಂಡು ರೋಸಿದ ಅವಳು ಡ್ರೈವರ್ನನ್ನು ಕೇಳಿದಳು, ಏಯ್, ನಾವೇನು ಕೋಳಿ ಮರಿಗಳಾ ಈ ಥರಾ ತುಂಬಲು ಎಂದು. ಮಕ್ಕಳಿಗೆ ಮಾತುಗಳ ಟ್ರೈನಿಂಗ್ ಸಾಮಾನ್ಯವಾಗಿ ದೊಡ್ಡವರಿಂದ ಬಂದರೂ ಕೆಲವೊಮ್ಮೆ ನಾವು ಹೇಳಿರದಂಥ ಮಾತುಗಳನ್ನು ಹೇಳಿ ಬೆಚ್ಚಿ ಬೀಳಿಸುತ್ತಾರೆ ನಮ್ಮನ್ನು.