ಬಿಹಾರದ “ನೀತಿ” ಪಾಠ

ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು. ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು. ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.

ಯೋಗಾಸನ ಪೈಶಾಚಿಕವಂತೆ

ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.

ಸಮಸ್ಯೆಯ ಜಾಡನ್ನು ಹಿಡಿದು…..

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್ ಕ್ರಾಂತಿ ವಾಸ್ತವ ಕ್ರಾಂತಿಗಿಂತ ಬಹು ಮೊದಲೇ ಶುರುವಾಗಿತ್ತು ಎಂದು ವಾದವನ್ನು ಮಂಡಿಸಿದ. ೧೮ ನೇ ಶತಮಾನದ ಕೊನೆಯಭಾಗದಲ್ಲಿ ನಡೆದ ಫ್ರೆಂಚ್ ಕ್ರಾಂತಿಗೆ ದಶಕಗಳ ಮೊದಲೇ ಭೂಗತ ಕಂಪನಗಳು ಶುರುವಾಗಿತ್ತು ಹಾಗೂ ಅಸಮಾನತೆ ಮತ್ತು ಅನ್ಯಾಯದ ಕಾರಣ ನಡೆದ ಈ ಕ್ರಾಂತಿಯ ಸುಳಿವನ್ನು ಜನ ಮೊದಲೇ ಅರಿತು ಜಾಣತನದಿಂದ ಪ್ರತಿಕ್ರಯಿಸಿದ್ದರೆ “ಭೀತಿಯ ಆಳ್ವಿಕೆ” (Reign of Terror) ಯನ್ನು ತಡೆಗಟ್ಟಬಹುದಿತ್ತು ಎಂದೂ ಹೇಳಿದ.

ಮೇಲಿನ ಹೇಳಿಕೆಯಲ್ಲಿ ನಮಗೆ ನಮ್ಮ ಮಧ್ಯೆಯೇ ಸಂಭವಿಸುತ್ತಿರುವ ಘಟನೆಗಳೊಂದಿಗೆ  ಸಾಮ್ಯತೆ ಕಾಣುತ್ತಿದೆಯೇ? ನಿನ್ನೆ ನಡೆದ ಬರ್ಬರ ಸಾಮೂಹಿಕ ಹತ್ಯೆಗೆ ಕಾರಣರಾದ ಮಾವೋ ಗಳು ನಮಗೆ ಈ ಸಾಮ್ಯತೆಯನ್ನು ಒದಗಿಸುತ್ತಿಲ್ಲವೇ? ಕಾಡಿನಿಂದ ಆರಂಭವಾದ ಸಾವಿನ ಛಾಯೆ ಈಗ ನಗರಗಳನ್ನೂ ಆವರಿಸತೊಡಗಿದೆ. ಎಲ್ಲರಿಗೂ ತಿಳಿದಂತೆ ಈ ನಕ್ಸಲ್, ಮಾವೋ ಮುಂತಾದ ಚಳುವಳಿಗಳು ಬಹು ಹಿಂದೆಯೇ ಶುರುವಾಗಿದ್ದವು. ಆದರೆ ಪ್ರಪಂಚದ ಎಲ್ಲಾ ಸರಕಾರಗಳಂತೆ ನಮ್ಮ ಸರಕಾರವೂ ಕಣ್ಣು ಬಿಟ್ಟಿದ್ದು ಹಿಂಸೆ ಕೈ ಮೀರಿದಾಗ, ರಕ್ತ ದ ಹೊಳೆ ಹರಿಯಲು ತೊಡಗಿದಾಗ. ಝರಿಯ ರೀತಿ ಆರಂಭವಾದ ಈ ಚಳುವಳಿ ರಕ್ತದ ಕಾಲುವೆಯನ್ನು ಹರಿಬಿಟ್ಟಾಗ ನಾವು ಕಂಗಾಲು. ನಿಜವಾಗಿ ಹೇಳಬೇಕೆಂದರೆ ಈ ಚಳುವಳಿಯನ್ನು ಹತ್ತಿಕ್ಕಲು ಬೇಕಾದ ಯಾವ ಪರಿಹಾರವೂ ನಮ್ಮಲ್ಲಿಲ್ಲ. ಇದ್ದಿದ್ದರೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ದಂತೆವಾಡ ದಲ್ಲಿ ಜೀವ ತೆತ್ತಾಗಲೇ ಹೊರಬರುತ್ತಿತ್ತು ಪರಿಹಾರದ ಅಸ್ತ್ರ. ಈ ಸಾಮಾಜಿಕ ಸಮಸ್ಯೆಗೆ  ಸೈನಿಕ ಪರಿಹಾರವಾಗಲಿ, ಸಾಮಾಜಿಕ ಪರಿಹಾರವಾಗಲಿ ನಮಗೆ ಕಾಣುತ್ತಿಲ್ಲ. ನಕ್ಸಲ್ ಪೀಡೆಯನ್ನು ಬಲಿ ಹಾಕಲು ಸೈನ್ಯವನ್ನು ಕಾನನಕ್ಕೆ ಬಿಡಲು ಸಾಧ್ಯವಿಲ್ಲ ಎಂದು ನಾವು ಅರಿತಿದ್ದಾಯಿತು ಶ್ರೀಲಂಕೆಯಲ್ಲಿ. ತಮಿಳು ಭಯೋತ್ಪಾದಕರನ್ನು ಸದೆ ಬಡಿಯಲು ರಾಜೀವ್ ಗಾಂಧೀ ಆತುರ ತೋರಿಸಿ ಬೆರಳು ಕಚ್ಚಿ ಕೊಂಡಿದ್ದು ಮಾತ್ರವಲ್ಲ, ಶ್ರೀಲಂಕೆಯ ಅಂದಿನ ಅಧಕ್ಷ J.R. ಜಯವರ್ಧನೆ ಯವರ ರಾಜಕೀಯ ದಾಳಕ್ಕೆ ಬಲಿಯಾಗಿ, ಅಲ್ಲಿನ ಸೇನೆಯ ದ್ರೋಹದಿಂದಲೂ, ಕಾಡಿನಲ್ಲಿ ಹೋರಾಡಿದ ಅನುಭವದ ಕೊರತೆಯೂ ನಾವು ಮುಖ ಭಂಗ ಅನುಭವಿಸುವಂತೆ ಮಾಡಿತು. ಕಾಡಿನಲ್ಲಿ ಅವಿತು ಹೋರಾಡುವ ನಕ್ಸಲರು vietnam ನ “ವಿಎಟ್ ಕಾಂಗ್” ಥರದ ಹೋರಾಟಗಾರರು. ಸಾಮಾನ್ಯ ಜನ ಯಾರು, ನಕ್ಸಲರು ಯಾರು ಎಂದು ಹೇಳಲು ಸಾಧ್ಯವಿಲ್ಲ. vietnam ನಲ್ಲಿ ಅಮೇರಿಕಾ ಸೋತು ಸುಣ್ಣವಾಗಿದ್ದು ಈ ವ್ಯತ್ಯಾಸದ ಅರಿವಿಲ್ಲದೆ ಇದ್ದುದರಿಂದ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ನಮ್ಮ ಸೈನ್ಯವನ್ನು ಕಾಡಿಗೆ ಕಳಿಸಬಾರದು. ದುಡುಕಿನ, ಮೂರ್ಖ ಸಾಹಸಕ್ಕೆ ನಮ್ಮ ಸೈನಿಕರು ಬಲಿಯಾಗುವುದು ಬೇಡ.  

ಶ್ರೀಮಂತ ಅತಿ ಶ್ರೀಮಂತನಾಗುತ್ತಿರುವುದು ಮತ್ತು ಬಡವ ದಿನೇ ದಿನೇ ಬಡತನದ ಪಾತಾಳಕ್ಕೆ ಇಳಿಯುತ್ತಿರುವುದು ನಮಗೆ ತಿಳಿದ ಸತ್ಯ. ಆದರೆ ಬಂಡವಾಳಶಾಹಿ ವ್ಯವಸ್ಥೆಯ ಮೊರೆ ಹೋದ ನಮಗೆ ಝಗ ಝಗಿಸುವ ನಿಯಾನ್ ಬೆಳಕುಗಳು, ಗಗನ ಚುಂಬಿ ಗೋಪುರಗಳು, ಕೆಲವು fly over ಗಳು ನಮ್ಮ ದೃಷ್ಟಿ ತಪ್ಪಿಸಿದವು. ನಮಗೆ ಟಾಟಾ, ಗೋದ್ರೆಜ್, ಅಂಬಾನಿಗಳಂಥವರ ಶ್ರೀಮಂತಿಕೆ,  ಬಾಲಿವುಡ್ ತಾರೆಯರ ಬದುಕುವ ರೀತಿ ಮೋಡಿ ಮಾಡಿದವು. ಇದೇ ನಿಜವಾದ ಭಾರತ ಎನ್ನುವ ಭ್ರಮೆ ಆವರಿಸಿತು. ಈ ಭ್ರಮೆಗೆ ಆಂಗ್ಲ ಮಾಧ್ಯಮಗಳು, ಕೃತಕ ಬದುಕನ್ನು ವೈಭವೀಕರಿಸುವ ಟಿವಿ ಧಾರಾವಾಹಿಗಳು ನೀರೆರೆದು ನಾವು ಪ್ರಗತಿಯಲ್ಲಿ  ಅಮೆರಿಕೆಯನ್ನು ಹಿಂದಕ್ಕೆ ಹಾಕಲು ಮೂರು ಗಜ ದೂರ ಮಾತ್ರ ಉಳಿದಿರುವುದು ಎಂದು ನಂಬುವಂತೆ ಮಾಡಿದವು. ಆದರೆ ವಾಸ್ತವವೋ? ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ಒಪ್ಪೊತ್ತಿನ ಕೂಳಿಗಾಗಿ ಹರ ಸಾಹಸ ಮಾಡಬೇಕು. ದಿನೇ ದಿನೇ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದವು. ಇಂಟರ್ನೆಟ್ ಯುಗ ಮತ್ತೊಂದು ರೀತಿಯ ಸಮಾಜವನ್ನೇ ಸೃಷ್ಟಿಸಿತು. ಎಂದೂ ಕಾಣದ ಕೇಳದ ದಶಸಾವಿರದಲ್ಲಿ ಎಷ್ಟು ಸೊನ್ನೆಗಳಿವೆ ಎಂದು ಗೊತ್ತಿಲ್ಲದ ಸಮುದಾಯ ಧಿಡೀರನೆ ದೊಡ್ಡ ಮೊತ್ತದ ಸಂಬಳ ಪಡೆದು ಮೆರೆಯಲು ತೊಡಗಿತು. ಚೌಕಾಶಿ ಎಂದರೆ ಒಂದು ಕೀಳು ಪರಿಪಾಠ ಎನ್ನುವ ಮಟ್ಟಿಗೆ ಹೇಳಿದ ಬೆಲೆಗೆ ಸಾಮಾನುಗಳನ್ನು ಕೊಂಡು ಬಡ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತು. ಈ ರೀತಿಯ ಅಸಹಾಯಕ ಪರಿಸ್ಥಿತಿ ನಕ್ಸಲರಿಗೆ ವರದಾನವಾಗಿ ಪರಿಣಮಿಸಿತು.  ಥಳಕಿನ ಬದುಕು ಶೋಷಣೆ ಎಂದು ಜನರಿಗೆ ಮನವರಿಕೆ ಮಾಡಿಸಿ ಮುಗ್ಧ ಜನ ಶಸ್ತ್ರದ ಮೊರೆ ಹೋಗುವಂತೆ ಮಾಡಿತು.

ಹಿಂಸೆಯಿಂದ ಯಾರಿಗೂ ಲಾಭವಿಲ್ಲ ಎಂದು ಹೊಟ್ಟೆ ತುಂಬಿದವನಿಗೆ, ದೊಡ್ಡ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ ಟ್ಯಾಂಕ್ ತುಂಬುವವನಿಗೆ  ಗೊತ್ತು. ಆದರೆ ಹೊಟ್ಟೆಗಿಲ್ಲದೆ ಚೀರಾಡುವ, ತನ್ನ ಪುಟಾಣಿಗಳನ್ನು ವ್ಯರ್ಥವಾಗಿ ಸಮಾಧಾನ ಪಡಿಸಲು ಹೆಣಗಾಡುವವನಿಗೆ ಗೊತ್ತೇ ಈ ಸಾಮಾನ್ಯ ಲಾಜಿಕ್? ದಾರಿ ಕಾಣದೆ ಅಸಹಾಯಕರಾಗಿ ತನ್ನ ಹೊಟ್ಟೆಗಿಲ್ಲದಿದ್ದರೂ ಚಿಂತೆಯಿಲ್ಲ ನಮ್ಮನ್ನು ವಂಚಿಸಿದ ವ್ಯವಸ್ಥೆ ವಿರುದ್ಧ ಹೋರಾಡಿ ರಕ್ತ ಹರಿಸಬೇಕು ಎನ್ನುವುದು ಇವರ ಗುರಿಯಾಯಿತು. ಸಂಪತ್ತನ್ನು ದೋಚಿ ದುರಹಂಕಾರದಿಂದ ಮೆರೆಯುವವರಿಗೆ ತಿಳಿದಿರಲಿಲ್ಲವೇ ಇದೇ ಸಂಪತ್ತು ಅಸೂಯೆಯ ಹಾವಾಗಿ ಬಂದು ಕಚ್ಚೀತು ಎಂದು? ಪಾಪ ಅವರಿಗೆ ತಿಳಿಯುವ ಸಾಧ್ಯತೆ ತುಂಬಾ ಕಡಿಮೆ. surround sound ಮ್ಯೂಸಿಕ್ ಸಿಸ್ಟಂ, ಮತ್ತು ಹೋಂ ಥಿಯೇಟರ್ ನಲ್ಲಿ ಹಾಡು ಕೇಳುತ್ತಾ ಮೈಮರೆಯುವ ಮಂದಿಗೆ ಬಡವನ ಆಕ್ರಂದನ ಮುಟ್ಟದು, ಕೇಳದು. ಅಂದರೆ ಈ ರೀತಿಯ ತಾರತಮ್ಯದ ಬದುಕು ಗೂಳಿಯಾಗಿ ನಮ್ಮ ಮೇಲೆಯೇ ಎರಗದು ಎಂದು ನಮಗೆ ತಿಳಿದಿಲ್ಲ ಎಂದಲ್ಲ. ನಾವೆಷ್ಟೇ ಕೃತಕ ಮುಗ್ಧತೆ ಯನ್ನು ಪ್ರದರ್ಶಿಸಿದರೂ ನಮ್ಮೊಳಗೊಬ್ಬ ಇದ್ದೇ ಇರುತ್ತಾನಲ್ಲವೇ? ಮನಸ್ಸಾಕ್ಷಿ ಎಂಬ “ಗುರು” (inner teacher) ನಮಗೆ ತಿಳಿ ಹೇಳುತ್ತಲೇ ಇರುತ್ತಾನೆ. ಆದರೆ ಹಿತೋಪದೇಶ ಮಾಡುವ ತಂದೆಯನ್ನು, ಹಿರಿಯರನ್ನು ಅವಗಣನೆ ಮಾಡಿ ಬಾಯಿ ಮುಚ್ಚಿಸುವ ರೀತಿ ಈ ಗುರುವಿಗೂ ಇದೇ ಉಪಚಾರವನ್ನು ನಾವು ಕೊಟ್ಟೆವು. ಪರಿಣಾಮ ಈ ರಕ್ತದೋಕುಳಿ. ಏಕಾಏಕಿ ಮಕ್ಕಳು ತಬ್ಬಲಿಯಾಗುತ್ತಾರೆ, ಸುಮಂಗಲಿಯರು ವಿಧವೆಯರಾಗುತ್ತಾರೆ. ವೃದ್ಧ ಪಾಲಕರು ಪೋಷಿಸುವ ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಾರೆ. ಭಯ, ಅಸಹಾಯಕತೆ ಎಲ್ಲೆಲ್ಲೂ ಆವರಿಸುತದೆ.

ನಿಸರ್ಗ calm before storm ರೀತಿ ನಮ್ಮ ನ್ನು ಅಚ್ಚರಿಗೊಳಿಸುತ್ತದೆ. ಆದರೆ ನಾವು ಕಾಣುತ್ತಿರುವ ನಕ್ಸಲ್ ಪ್ರತಿರೋಧಗಳು ಏಕಾಕಿ ಬಂದು ಬಿದ್ದಿದ್ದಲ್ಲ. ಚಿಕ್ಕ ಚಿಕ್ಕ ಕಂಪನಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಬಹುಶಃ ನಮಗದು ಸಂಗೀತದ drum ನ ಸದ್ದಿನಂತೆ ಕೇಳಿಸಿತು. ಮೇಲೆ ಹೇಳಿದಂತೆ ದೊಡ್ಡ ಮಟ್ಟದ ಹಿಂಸೆ ಆದಾಗಲೇ ಸರಕಾರ ತೂಕಡಿಕೆಯಿಂದ ತಲೆ ಎತ್ತುವಂತೆ ಮಾಡುವುದು. ತಲೆ ಎತ್ತಿದ ಮೇಲೋ? ತಲೆ, ಬಾಲ ಇಲ್ಲದ, ನಿಲ್ಲದ ಹರಟೆ. ಒಣ ಜಂಭ, ಒಣ ಬೆದರಿಕೆ. ಒಂದಿಷ್ಟು ಟಾಕ್ ಷೋ ಗಳು. ನಿವೃತ್ತ ಅಧಿಕಾರಿಗಳನ್ನು ಕರೆಸಿ ಒಂದಿಷ್ಟು ಚರ್ಚೆ, ನಂತರ ಮಹೋಗನಿ ಹಲಗೆಗಳಿಂದ ಆವೃತ್ತವಾದ, ಹವಾನಿ ಯಂತ್ರಿತ ಕಚೇರಿಗೆ ಹಿಂದಿರುಗಿ ಮತ್ತೊಂದು ತೂಕಡಿಕೆಗೆ ಸಿದ್ಧತೆ. ಇವರು ತೂಕಡಿಸುತ್ತಿರುವಾಗ ಅಮಾಯಕರು ರೈಲು ಹಳಿಗಳ ಮೇಲೆ ತಮ್ಮ ರಕ್ತ ಹರಿಬಿಟ್ಟು ಕೊಂಡು ಪ್ರಾಣ ಕಳೆದುಕೊಳ್ಳುವುದು. ಒಂದು ರೀತಿಯ vicious cycle.     

ಯಾವುದೇ ವಿವಾದ, ಸಮಸ್ಯೆ ಪರಿಹರಿಸಲು ಮಾತುಕತೆ ಬೇಕು. ಮಾತುಕತೆ ಎಂಥ ಸನ್ನಿವೇಶಗಳಿಗೂ ಒಂದು ದಿವ್ಯ ಮಂತ್ರ. ಜನ ಪರಸ್ಪರ ಮಾತನಾಡಬೇಕು. ಕಿವುಡತನ ಪ್ರದರ್ಶಿಸದೆ ಸವಾಧಾನವಾಗಿ ಒಬ್ಬರನ್ನೊಬ್ಬರು  ಅರಿಯಲು ಆರಂಭಿಸಬೇಕು. ಈ ಪ್ರಕ್ರಿಯೆ ಸಮಯ ತೆಗೆದು ಕೊಂಡರೂ ಆ ಸಮಯ ವ್ಯರ್ಥವಾಗಿ ಹೋಗುವುದಿಲ್ಲ.    

ಕ್ಷಿಪಣಿ ಉಡಾವಣೆಗಳು, ಚಂದ್ರಯಾನ, ಕಾಮನ್ ವೆಲ್ತ್ ಕ್ರೀಡೆಗಳು ಹಸಿದ ಜನರಿಗೆ ಒಪ್ಪೊತ್ತಿನ ಅನ್ನವನ್ನೋ, ಜೀವರಕ್ಷಕ ಔಷಧಿಗಳನ್ನೋ ಪೂರೈಸಲಾರವು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಮ್ ಸದಸ್ಯತ್ವ ದಿಂದ ದೊಡ್ಡ ಲಾಭವೇನೂ ಇಲ್ಲ. ನಮ್ಮ ego ವನ್ನು ಇನ್ನಷ್ಟು ಉಬ್ಬಿಸುತ್ತದೆ ಅಷ್ಟೇ. ಆಳುವವರು ಬಡವರ, ಅವಕಾಶ ವಂಚಿತರ ಹಿತದೃಷ್ಟಿಯ ಕಡೆ ತಮ್ಮ ದೃಷ್ಟಿ ನೆಡಬೇಕು. ಕೈಗಾರಿಕೋದ್ಯಮಿಗಳ, ಅಗರ್ಭ ಶ್ರೀಮಂತರ ಕೈಗಳಿಂದ “ಮದ್ಯ ತುಂಬಿದ ಪೆಗ್ಗು” ಗಳನ್ನು ಕಸಿದು ಒಂದು ಪರಿಹಾರಕ್ಕೆ ಅವರನ್ನೂ ಎಳೆದು ತರಬೇಕು. ತೆರಿಗೆ ವಂಚಿಸಿ ಮತ್ತು ತಮಗೆ ತೋಚಿದ ದಾರಿ ಹಿಡಿದು ಸಂಪತ್ತು ದೋಚುವವರಿಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು. ಕ್ಷಿಪಣಿಗಳು ತಮ್ಮ ಘಳಿಗೆಗಾಗಿ ಇನ್ನಷ್ಟು ಸಮಯ ಕಾಯಲಿ. ಹಸಿದ ಉದರಕ್ಕೆ ಸಮಯ ಎನ್ನುವುದ ಜೀವನಾಡಿ. ಇನ್ನಷ್ಟು ಸಮಯ ವ್ಯರ್ಥಗೊಳಿಸದೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ಕಾರ್ಯ ಸೂಚಿಗೆ ಅಂತಿಟ್ಟುಕೊಂಡು ಬಡವರ, ನಿರ್ಗತಿಕರ ಆಕಾಂಕ್ಷೆ ಗಳನ್ನು ನೆರವೇರಿಸುವತ್ತ ಸರಕಾರ ಗಮನ ನೀಡಬೇಕು. ಅಲ್ಲಿಯವರೆಗೆ ನಕ್ಸಲರನ್ನು ಗಾಂಧೀವಾದಿಗಳು ಎಂದೆಲ್ಲಾ ಬಣ್ಣಿಸಿ ಯಾರಿಗೂ ಪ್ರಯೋಜನ ತಾರದ ಲೇಖನಗಳನ್ನ ಪ್ರಕಟಿಸಿ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲುಗೊಳಿಸುವ ಬುದ್ಧಿವಂತರು ತಮ್ಮ ಲೇಖನಿಗೆ ಕಡಿವಾಣ ಹಾಕಲಿ.