ನೀವು ಪುಸ್ತಕದ ನರಿಗಳೋ?

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.

ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?

ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.

ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.

ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.

ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.

ಅಪ್ಪನೊಂದಿಗೆ ಒಂದು ಸಂಜೆ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ಡ್ರೈವರ್ ಒಂದಿಗೆ ಅವರನ್ನು ಕಳಿಸುವ ನಾನು ಇಂದು ಆಫೀಸಿನಿಂದ ಸ್ವಲ್ಪ ಬೇಗ ಬಿಡುವು ಮಾಡಿಕೊಂಡು ಅಪ್ಪನನ್ನೂ ಮತ್ತು ಮಡದಿ ಮಕ್ಕಳ ಸಮೇತ ಮಕ್ಕಾದ ಕಡೆ ಹೊರಟೆ. ಸಂಜೆ ಐದಾದರೂ ಮರುಭೂಮಿಯ ಸೂರ್ಯ ಸುಲಭವಾಗಿ ಇರುಳಿಗೆ ಕೊರಳೊಡ್ಡುವುದಿಲ್ಲ. ಪ್ರಖರತೆ ಸ್ವಲ್ಪ ಜೋರೇ. ತನ್ನ ದಿನಚರಿಯ ಕೊನೆಯಲ್ಲೂ ಪೊಗರು ತೋರಿಸಿಯೇ ವಿರಮಿಸುವುದು. ಡ್ರೈವ್ ಮಾಡುತ್ತಾ ಪಪ್ಪ ರನ್ನು ಮಾತಿಗೆ ಎಳೆದೆ. ಮನೆಯಲ್ಲಿ ಹಿರಿಯರ ಇದೆಂಥಾ ಆಂಗ್ಲ ಸಂಸ್ಕಾರ ಎನ್ನುವ ಪ್ರತಿಭಟನೆಯ ನಡುವೆಯೂ ನಾವು ಅಪ್ಪ ಅಮ್ಮನನ್ನು ಪಪ್ಪ- ಮಮ್ಮಿ ಎಂದು ಕರೆಯುತ್ತೇವೆ. ಇದು ನಮ್ಮ ಚಿಕ್ಕಮ್ಮಂದಿರು ಹಾಕಿದ ಚಾಳಿ. ಹರಟುತ್ತಾ ನಾನು ಡ್ರೈವ್ ಮಾಡುತ್ತಿದ್ದ GMC Yukon ಗಾಡಿಯ ಡ್ಯಾಶ್ ಬೋರ್ಡ್ ೧೪೦ ಕೀ ಮೀ ಮುಳ್ಳನ್ನು ಮುಟ್ಟಿದ್ದನ್ನು ನೋಡಿ ಪಪ್ಪ ತಮ್ಮ ಸಂದು ಹೋದ ಕಾಲದ ಮುಳ್ಳನ್ನು ಹಿಂದಕ್ಕೆ ಓಡಿಸಿ ಸುಂದರ ನೆನಪಿನ ಸುರುಳಿ ಬಿಚ್ಚಿದರು.

ನನ್ನ ತಂದೆ ಕೇರಳದ ಕಾಸರಗೋಡಿನಿಂದ ಸುಮಾರು ೮ ಕೀ.ಮೀ ದೂರದಲ್ಲಿರುವ ಚೇರೂರ್ ಗ್ರಾಮದವರು. ಬದುಕಿನ ಸಂಗಾತಿಯಾಗಿ ಬಂತು ಕಡು ಬಡತನ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಪಪ್ಪ ಮ್ಯಾಟ್ರಿಕ್ ಮುಗಿಸಿದ್ದರು. ನಂತರ ಓದಲು ಹಣದ ಕೊರತೆಯಿಂದ ಶಾಲೆ ಬಿಟ್ಟು ವಿವಿಧ ಧಂಧೆ ಗೆ ಇಳಿದರು. ಚೇರೂರ್ ನ ಗುಡ್ಡದ ತಳದಲ್ಲಿ ಅವರ ಮನೆಯಂತೆ. ತನ್ನ ಅಣ್ಣನ ಸೈಕಲ್ ಅನ್ನು ಗುಡ್ಡದ ಮೇಲೆ ತಲುಪಿಸಬೇಕು ಪಪ್ಪ. ಕಿರಿಯರ ಮೇಲೆ ಹಿರಿಯರ ಸವಾರಿ. ದೂರವೆಲ್ಲಾದರೂ ಹೋಗಬೇಕೆಂದರೆ ಕಾಸರಗೋಡಿನವರೆಗೆ ಸೈಕಲ್ ಅಥವಾ ನಡೆದುಕೊಂಡು ಬಂದು ನಂತರ “ಚಾರ್ಕೋಲ್ ಬಸ್” ಹತ್ತಬೇಕು ಎಂದರು ಪಪ್ಪ. ಚಾರ್ಕೋಲ್ ಬಸ್ಸಾ, ಎಂದು ನಾನು ಅಚ್ಚರಿಯಿಂದ ಕೇಳಿದೆ. ಹೌದು ಕಲ್ಲಿದ್ದಲ ಬಸ್ಸು ಕಣೋ ಆಗಿನ ಕಾಲದಲ್ಲಿ ಎಂದರು ಪಪ್ಪ. ನನಗೆ ನಂಬಲಾಗಲಿಲ್ಲ. ಉಗಿ ಬಂಡಿಯನ್ನು ನೋಡಿ, ಹತ್ತಿ ಪರಿಚಯವಿದ್ದ ನನಗೆ ಕಲ್ಲಿದ್ದಲ ಬಸ್ಸು ವಿಚಿತ್ರವಾಗಿ ತೋರಿತು. ಬಸ್ಸಿನ ಬಾನೆಟ್ ಮೇಲೆ ಒಂದು ತೂತಿರುತ್ತದೆ. ಅದಕ್ಕೆ ಲಿವರ್ ಹಾಕಿ ಕಂಡಕ್ಟರ್ ಜೋರಾಗಿ ತಿರುಗಿಸುತ್ತಾನೆ ಗಿರ್ರ್, ಗಿರ್ರ್ ಅಂತ. ಈ ಗಿರ್ರ್, ಗಿರ್ರೂ, ಕಂಡಕ್ಟರನ ಏದುಸಿರೂ ಸೇರಿ ಬಸ್ಸು ಡುರ್ರ್, ಡುರ್ರ್, ಎಂದು ಸದ್ದು ಮಾಡುತ್ತಾ ಜೀವ ತುಂಬಿಕೊಳ್ಳುತ್ತದೆ. ವಾಹ್ ಎಂಥ ಸುಂದರ ಪ್ರಯಾಣವಾಗಿರಬಹುದು ಕಲ್ಲಿದ್ದಲಿನ ಬಸ್ಸಿನದು. ನನ್ನ ದೊಡ್ಡಪ್ಪ ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಇನ್ನೂ ಚಿಕ್ಕ ಪ್ರಾಯದ ನನ್ನ ಅಪ್ಪ ಬಂದರು ಅಣ್ಣನ ಸಹಾಯಕ್ಕೆಂದು. ಭದ್ರಾವತಿಯಿಂದ ಕಾಸರಗೋಡಿಗೆ ಪ್ರಯಾಣ ಬೆಳೆಸುವುದು ಚಂದ್ರಯಾನದಂತೆ ಇರಬೇಕು ಎಂದು ತೋರಿತು ನನಗೆ ನನ್ನ ಅಪ್ಪನ ಅನುಭವ ಕೇಳಿ.  ಕೇರಳದಲ್ಲಿ ಅಕ್ಕಿ, ಸಕ್ಕರೆ ಹೀಗೆ ಅವಶ್ಯಕ ವಸ್ತುಗಳ ಅಭಾವವಂತೆ. ಅದರ ಮೇಲೆ ಕಾಳ ಧಂಧೆ ಬೇರೆ. ಮೂರು ಹೊತ್ತಿನ ಊಟ ಬಹಳಷ್ಟು ಜನರಿಗೆ ಅಪರೂಪ. ಬೆಳಿಗ್ಗೆ ತಿಂದರೆ ಮಧ್ಯಾಹ್ನ ಇಲ್ಲ ಕೂಳು. ಮಧ್ಯಾಹ್ನ ತಿಂದರೆ ರಾತ್ರಿ ಉಪವಾಸ. ನನ್ನ ಅಪ್ಪನ ಬಳಿ ನನ್ನ ದೊಡ್ಡಪ್ಪ ೧೦ ಕೆಜಿ ಸಕ್ಕರೆ ಕಳಿಸಿದರು ಊರಿಗೆಂದು. ಶಿವಮೊಗ್ಗದಿಂದ ಆಗುಂಬೆಗೆ ಒಂದು ವ್ಯಾನು ಹಿಡಿಯಬೇಕು. ಆಗುಂಬೆಯಿಂದ ಸೋಮೆಶ್ವರಕ್ಕೆ ಮತ್ತೊಂದು ವ್ಯಾನು. ಸೋಮೇಶ್ವರದಿಂದ ಮಂಗಳೂರಿಗೆ ಮತ್ತೊಂದು ವ್ಯಾನು. ಈ ವ್ಯವಸ್ಥೆ ಏಕೆ ಎಂದರೆ ಘಾಟಿ ಏರಿ ಇಳಿಯಲು ಬಯಲು ಸೀಮೆಯಲ್ಲಿ ಪಳಗಿದ ವಾಹನಗಳಿಗೆ ಸಾಧ್ಯವಿಲ್ಲವಂತೆ. ಒಂದು ರೀತಿಯ ghat specialist ಈ ಆಗುಂಬೆಯಿಂದ ಸೋಮೇಶ್ವರಕ್ಕೆ ಜನರನ್ನು ಕೊಂಡೊಯ್ಯುವ ವಾಹನಗಳು. ಆಗುಂಬೆ ತಲುಪಿದ ನಂತರ ಸೋಮೇಶ್ವರಕ್ಕೆ ಅಂದು ವ್ಯಾನಿಲ್ಲ. ಬೇರೆ ದಾರಿ ಕಾಣದೆ ಸಕ್ಕರೆ ಚೀಲವನ್ನು ಹೊತ್ತು ನಡೆದುಕೊಂಡು ಆಗುಂಬೆ ಇಳಿದು ಬಂದರಂತೆ. ಭದ್ರಾವತಿಯಲ್ಲಿ ದಿನಸಿ ಅಂಗಡಿ ಇಟ್ಟು ಕೊಂಡಿದ್ದ ದೊಡ್ಡಪ್ಪ ಎರಡನೇ ವಿಶ್ವ ಯುದ್ಧದ ಸಮಯ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಯುದ್ಧ ಮುಗಿದ ನಂತರ ಬೇಕಾದರೆ ನಿವೃತ್ತಿ ತೆಗೆದು ಕೊಳ್ಳಬಹುದು ಎಂದು ಸರಕಾರ ಹೇಳಿದಾಗ ನಿವೃತ್ತಿ ತೆಗೆದುಕೊಂಡರಂತೆ. ಇದನ್ನು ಕೇಳಿ ನನಗೆ ರೋಮಾಂಚನ. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ. ಇನ್ನಷ್ಟು ತಿಳಿಯುವಾ ಎಂದರೆ ಆಗ ಅಪ್ಪ ತೀರಾ ಚಿಕ್ಕವರಾಗಿದ್ದರಿಂದ ಹೆಚ್ಚಿನ ವಿವರ ಸಿಗಲಿಲ್ಲ. ದೊಡ್ದಪ್ಪನನ್ನೇ ಕೇಳೋಣ ಎಂದರೆ ಅವರು ನಿಧನರಾಗಿ ೧೮ ವರ್ಷಗಳು.  

ಆಗಿನ ಕಾಲದಲ್ಲಿ ಕೆಲವರು ಹೆಚ್ಚಿನ ಸಂಪಾದನೆಗಾಗಿ ಮಲೇಷ್ಯಾ, ಶ್ರೀಲಂಕೆಗೆ ಹೋಗುತ್ತಿದ್ದರಂತೆ. ಮತ್ತೊಬ್ಬ ದೊಡ್ಡಪ್ಪ ಶ್ರೀಲಂಕೆಯಲ್ಲಿ ಇದ್ದರು. ಅವರ ಸಂಬಳ ತಿಂಗಳಿಗೆ ೫೦ ರೂಪಾಯಿ. ಸುಮಾರು ಅರವತ್ತು ವರ್ಷಗಳ ಹಿಂದೆ ಅದು ದೊಡ್ಡ ಮೊತ್ತ. ದೊಡ್ಡಪ್ಪ ಹಣ ಹೇಗೆ ಕಳಿಸುತ್ತಿದ್ದರು ಎಂದು ನಾನು ಕೇಳಿದಾಗ ಪೋಸ್ಟ್ ಮ್ಯಾನ್ ತರುತ್ತಿದ್ದ ಎಂದು ಉತ್ತರಿಸಿದ ಅಪ್ಪ ಮತ್ತೊಂದು ಸ್ವಾರಸ್ಯವನ್ನು ಹೇಳಿದರು. ಪೋಸ್ಟ್ ಮ್ಯಾನ್ ಬಂದ ಎಂದು ಜನರಿಗೆ ತಿಳಿಯುವುದು ಘಂಟೆಯ ಸದ್ದು ಕೇಳಿದಾಗಲಂತೆ. ಹೆಗಲ ಮೇಲೆ ಒಂದು ದೊಣ್ಣೆ, ಅದಕ್ಕೆ ಒಂದು ಘಂಟೆ ಸಿಕ್ಕಿಸಿ ಘಂಟೆ ಬಾರಿಸುತ್ತಾ ಬರುತ್ತಾನಂತೆ ಅಂಚೆಯವ ಕಾಸು ಕಾಗದ ವಿತರಿಸಲು. oh, how much I miss that rustic life. ಈಗಿನ ಕಾಲದ ಈ ಮೇಲು, ಸ್ಪ್ಯಾಮು, ಕ್ರೆಡಿಟ್ ಕಾರ್ಡ್ ಸ್ಕ್ಯಾಮು ಮತ್ತು ಆಗಿನ ಕಾಲದ ಘಂಟೆಯ ನಿನಾದ.

ಪಪ್ಪ ಇಷ್ಟು ಹೇಳಿ ಮುಗಿಸುತ್ತಿದ್ದಂತೆ ಮೇಲೆಲ್ಲಾ ಥಳಕು, ಒಳಗೆಲ್ಲಾ ಟೊಳಕನ್ನು ಇಟ್ಟುಕೊಂಡು ನಮ್ಮನ್ನು ಮರುಳು ಮಾಡುತಿರುವ ಆಧುನಿಕತೆ ಬಿಂಬಿಸುವ  ಗಗನ ಚುಂಬಿ ಕಟ್ಟಡಗಳು ಭವ್ಯವಾದ ಮಕ್ಕಾ ಮಸ್ಜಿದ್ ನ ನೀಳ ಗೋಪುರಗಳನ್ನು ಕುಬ್ಜವಾಗಿಸುವ ದೃಶ್ಯ ಗೋಚರಿಸಿ ಕಾರನ್ನು ಪಾರ್ಕಿಂಗ್ ಲಾಟ್ ನತ್ತ ತಿರುಗಿಸಿದೆ ಹಳೆ ಕಾಲದ ಗುಂಗಿನಲ್ಲಿ.            

ವಯಸ್ಸಾದವರೊಂದಿಗೆ ಮಾತನಾಡುತ್ತಿದ್ದರೆ ಕೆಲವರು ಹಳೆ ತಲೆಯವನ ಜೊತೆ ಏನ್ ಕೆಲಸ ನಡಿ ಎಂದು ಗದರಿಸಿ ಎಬ್ಬಿಸುವುದಿದೆ. ನನ್ನ ಪಾಲಿಗೆ ಹಿರಿಯರು ಮನೆಗೆ ಕಿರೀಟವಿದ್ದಂತೆ. ವಯಸ್ಸಾದವರೊಂದಿಗೆ ಸಮಯ ಕಳೆಯಲು ನನಗೆ ಬೇಸರ ಎನ್ನಿಸುವುದಿಲ್ಲ. ಮುಪ್ಪು ಏನು, ಹಾಗೂ ಆ ಮುಪ್ಪಿನ ಹಿಂದೆ ಇರುವ ಅನುಭವವನ್ನು ಸವಿಯಬೇಕೆಂದರೆ ವಯಸ್ಸಾದವರೊಂದಿಗೆ ಕಾಲ ಕಳೆಯವೇಕು. ಬದುಕಿನ ಸುವರ್ಣ ಕಾಲವನ್ನು, ಪ್ರೀತಿ, ನಿಸ್ವಾರ್ಥತೆ, ಸಹನೆ, ಸರಳತೆಯಿಂದ ಕೂಡಿದ ಬದುಕನ್ನು ಕಂಡ “ಮುದಿ ತಲೆಗಳು” ತಮ್ಮ ತಲೆಯ ಮೇಲಿನ ಕೂದಲು ಬೆಳ್ಳಿ ವರ್ಣಕ್ಕೆ ತಿರುಗಿದ ಕೂಡಲೇ ಸಮಾಜಕ್ಕೆ ಹೊರೆಯಾಗಿ ಬಿಡುವುದು ಖೇದಕರ. ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಹಿರಿಯರಿದ್ದಾರೆ ಅವರನ್ನು ಕಂಡು ಮಾತನಾಡಿಸಿ, ಏಕತ ಕಪೂರಳ ಸುಳ್ಳಿನ ಸರಮಾಲೆಯ ಸೀರಿಯಲ್ಲುಗಳಿಗಿಂತ ಸ್ವಾರಸ್ಯಕರ ಇವರು ಬದುಕಿದ ಬದುಕು. ನೌಕಾ ಸೇನೆಯಲ್ಲಿ ನನ್ನ ದೊಡ್ಡಪ್ಪ ಸೇವೆ ಸಲ್ಲಿಸಿದ್ದರು ಎಂದು ನನಗೆ ತಿಳಿದದ್ದು ಅವರು ಸತ್ತು ಹದಿನೆಂಟು ವರುಷಗಳ ನಂತರ, ಅದೇ ರೀತಿ ಸುಮಾರು ಅರವತ್ತು ವರುಷಗಳ ಮೊದಲು ಮೆಟ್ರಿಕ್ ಕಲಿತಿದ್ದ ನನ್ನ ಅಜ್ಜಿ ಸಹಾ ಕಳೆದ ವರುಷ ತೀರಿಕೊಂಡರು. ಇವರಿಬ್ಬರಿಂದ ನನಗೆ ತಿಳಿಯುವುದು ಬಹಳಷ್ಟಿತ್ತು, ಆದರೆ ಆಧುನಿಕ ಬದುಕಿನ ಬ್ಯಾನೆ ಆ ಅವಕಾಶವನ್ನು ನಿರಾಕರಿಸಿತು.   

ಕಲ್ಲಿದ್ದಲ ಬಸ್ಸಿನ ಬಗ್ಗೆ ಮತ್ತಷ್ಟು: ಕಲ್ಲಿದ್ದಲ ಬಸ್ಸುಗಳು ೧೯೫೦ ರವರೆಗೂ ಚೈನಾದಲ್ಲಿ ಉಪಯೋಗದಲ್ಲಿದ್ದವು ಮತ್ತು ಈಗಲೂ ಉತ್ತರ ಕೊರಿಯಾದಲ್ಲಿ ಕಲ್ಲಿದ್ದಲ ಬಸ್ಸುಗಳು ಓಡಾಡುತ್ತಿವೆ. ಎರಡನೇ ವಿಶ್ವ ಯುದ್ಧದ ನಂತರವೂ ಜಪಾನಿನಲ್ಲಿ ಇಂಥ ಬಸ್ಸುಗಳು ಓಡಾಡುತ್ತಿದ್ದವು. ೧೯೩೧ ರಲ್ಲಿ Tang Zhongming  ಕಲ್ಲಿದ್ದಲಿನಿಂದ ಓಡಾಡುವ ವಾಹನವನ್ನು ಚಲಾವಣೆಗೆ ತಂದನು.