ಗೋ ಹತ್ಯೆ ನಿಷೇಧಿಸಿ

ದೇಶದ ಸಮಯ, ಸಂಪನ್ಮೂಲಗಳನ್ನು ನುಂಗುತ್ತಿರುವ ಹಲವು ತಗಾದೆಗಳಲ್ಲಿ ಗೋ ಹತ್ಯೆ ಒಂದು. ಹಿಂದೂಗಳು ಪವಿತ್ರ, ಮಾತೆ ಎಂದು ಆದರಿಸಲ್ಪಡುವ, ಗೌರವಿಸಲ್ಪಡುವ ಗೋವಿನ ಮತ್ತು ಅದನ್ನು ಸಂರಕ್ಷಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆಗೆ ಶತಮಾನಗಳ ಇತಿಹಾಸ ಇದೆ. ಸಾಕಷ್ಟು ನೆತ್ತರೂ ಹರಿದಿದೆ. ದೇಶವನ್ನು ಕಿತ್ತು ತಿನ್ನುವ ಸಮಸ್ಯೆಗಳಿಗೆ ರಾಜಕಾರಣದ ಲೇಪನ ಇಲ್ಲದಿದ್ದರೆ ಅದಕ್ಕೆ ಮಹತ್ವವಾಗಲೀ, ಮೋಜಾಗಲೀ ಇರುವುದಿಲ್ಲ. ಗೋ ವಿನ ವಿಷಯದಲ್ಲೂ ಆಗಿದ್ದೂ ಇದೇ.  ಗೋ ಮಾಂಸ ಭಕ್ಷಕರೆಂದು ಪರಿಗಣಿಸಲ್ಪಡುವ, ಮುಖ್ಯವಾಗಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ, ಗೋ ಮಾಂಸವನ್ನು ಅವರ ಮೆನ್ಯು (menu) ಪಟ್ಟಿಯಿಂದ ತೆಗೆದುಬಿಟ್ಟರೆ ಆಕಾಶ ಕಳಚಿ ಬೀಳೋಲ್ಲ. ಹೃದಯದ  clogged arteries ಗಳಿಗೆ ಮಾತ್ರ ದೊಡ್ಡ ಪ್ರಯೋಜನವಾಗುತ್ತದೆ ಈ ಮಾಂಸ ಮೆನ್ಯು ವಿನಿಂದ ಹೊರಗುಳಿದರೆ.

ಈಗ ಪ್ರವೇಶ ರಾಜಕಾರಣ. ಎಂಟರ್ ದಿ ಡ್ರಾಗನ್ ಥರ. ಅಪಾಯಕಾರಿ ಆದರೂ ಒಂದಿಷ್ಟು ಸೀಟುಗಳನ್ನು ಅಥವಾ ಅಧಿಕಾರದ ಗದ್ದುಗೆಯನ್ನು ತರಲು ಸಹಕಾರಿಯಾದರೆ ಗೋವನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ಧ. ಗೋಮಾಂಸ ನಿಷೇಧಿಸಿದರೆ ಅಲ್ಪಸಂಖ್ಯಾತರ ಆಹಾರ ಪದ್ಧತಿ ಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ರಗಳೆ ಇವರದು. ಗೋ ಮಾಂಸ ತಿಂದೇ ಸಿದ್ಧ ಎಂದು ಪಟ್ಟು ಹಿಡಿಯುವ ಅಲ್ಪತನ ಅಲ್ಪ ಸಂಖ್ಯಾತರು ತೋರಿಸರು ಎನ್ನುವ ಪ್ರಜ್ಞೆ ಇವರಿಗಿಲ್ಲ, ಆಳುವ ಮಂದಿಗೆ. ಗೋ ಮಾಂಸ ನಿಷೇಧಿಸಿ ಬಿಟ್ಟರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದೀತು ಎನ್ನುವ ಅತಂತ್ರ, ಅಭದ್ರ ಮನಸ್ಥಿತಿಯವರೂ ಅಲ್ಲ ಮುಸ್ಲಿಮರು ಅಥವಾ ಕ್ರೈಸ್ತರು. ಮತ್ತೇಕೆ ಈ ಸಮಸ್ಯೆ ಆಗಾಗ ತಲೆ ಎತ್ತುತ್ತಾ ಇರುತ್ತದೆ ಎನ್ನುವುದು ಯಕ್ಷ ಪ್ರಶ್ನೆ.

ಗೋ ಹತ್ಯೆ ಬಹುಸಂಖ್ಯಾತ ವರ್ಗದವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಾದರೆ ಖಂಡಿತಾ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದೇ ತೀರಬೇಕು. ಗೋ ಹತ್ಯಾ ನಿಷೇಧ ಕೂಡದು ಎನ್ನುವ ಕಾಂಗ್ರೆಸ್ಸಿಗರು ಮುಸ್ಲಿಮರ ಓಟಿಗಾಗಿ ದೊಂಬರಾಟ ನಡೆಸೋದು ನಿಲ್ಲಿಸಬೇಕು. ಮುಸ್ಲಿಮರಿಗೆ ಗೋ ಮಾಂಸ ತಿನ್ನಲೇ ಬೇಕೆನ್ನುವ ನಿಯಮವೇನಿಲ್ಲ. ದಿನ ಪೂರ್ತಿ ಇದರ ಜಪ ಮಾಡುತ್ತಾ ಕೂರುವ ವ್ಯವಧಾನವೂ ಇಲ್ಲ ಅವರಲ್ಲಿ. ಅವರಿಗೆ (ಮುಸ್ಲಿಮರಿಗೆ) ತಲೆಕೆಡಿಸಿ ಕೊಳ್ಳಬೇಕಾದ ನೂರೊಂದು ವಿಷಯಗಳಿವೆ. ಮುಸ್ಲಿಂ ಧರ್ಮೀಯ ಸಸ್ಯಾಹಾರಿಯಾಗಲು ಧರ್ಮದ ಅಡ್ಡಿಯಿಲ್ಲ. ನಿಷೇಧ ಬೇಡ ಎನ್ನುವ ಕಾಂಗ್ರೆಸ್ಸಿಗರಿಗೆ ಏಕೆ ಗೋವು ಪವಿತ್ರ ಅಲ್ಲ ಅನ್ನೋದು ಒಂದು ಒಗಟು. ಹಾಗೆಯೇ ಗೋವು ಪಾವಿತ್ರ್ಯತೆಯನ್ನು ಪಡೆದು ಕೊಂಡಿದ್ದು ಯಾವಾಗಿನಿಂದ ಎಂದು ಯಾರಾದರೂ ಬೆಳಕು ಚೆಲ್ಲಿದರೆ ಉಪಕಾರ. ಈ ಸಂಬಂಧ ಪ್ರೊಫೆಸರ್ D.N. Jha ರವರು ಬರೆದ the myth of holy cow ಪುಸ್ತಕದಲ್ಲಿ ಗೋಮೇಧ, ಅಶ್ವಮೇಧ ಯಾಗಗಳು, ಗೋಮಾಂಸ ಭಕ್ಷಿಸಿದ ಉದಾಹರಣೆಗಳೊಂದಿಗೆ ವಿಸ್ತೃತವಾದ ಮಾಹಿತಿಗಳಿವೆ.

ಗೋ ಹತ್ಯೆಯ ಬಗ್ಗೆ ಮುಸ್ಲಿಮರಿಗೆ ಇರುವ ತಕರಾರಿಗಿಂತ ಬಹುಸಂಖ್ಯಾತರಿಗೆ ಹೆಚ್ಚು ಆಸಕ್ತಿಕರ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಇತರೆ ಪಕ್ಷಗಳವರ ಪ್ರತಿಭಟನೆಗಳಿಂದ ವ್ಯಕ್ತವಾಗುತ್ತದೆ. ಈ ತಗಾದೆಯಿಂದ ಶಾಂತಿ ಪ್ರಿಯ ಭಾರತೀಯರು ಹೊರಗುಳಿದರೆ ದೇಶಕ್ಕೆ ಒಳ್ಳೆಯದು. ಏಕೆಂದರೆ ಇಲ್ಲಿ ನಡೆಯುತ್ತಿರುವುದು ಚರ್ಚೆಗಿಂತ ಸಮುದಾಯಗಳ ನಡುವಿನ ಕಂದಕದ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತದೆ.     

  

 

ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.