ಕೋಪ ಬಂದಾಗ ಒಂದು ಮೊಳೆ

ಒಬ್ಬ ಹುಡುಗ ಮಹಾ ಕೋಪಿಷ್ಟ. ಸುಲಭವಾಗಿ ಕೆರಳುತ್ತಿದ್ದ. ಇದನ್ನು ಕಂಡು ರೋಸಿದ ತಂದೆ ತನ್ನ ಮಗನಿಗೆ ಒಂದು ಚೀಲ ತುಂಬಾ ಮೊಳೆಗಳನ್ನು ಕೊಟ್ಟು ಪ್ರತೀ ಸಲ ಕೋಪ ಬಂದಾಗ ಮನೆಯ ಹಿಂದಿನ ಗೋಡೆಗೆ ಒಂದು ಮೊಳೆ ಹೊಡೆಯಲು ಹೇಳುತ್ತಾನೆ. ಉತ್ಸಾಹದಿಂದ ಹೋಗುವ ಹುಡುಗ ಮೊದಲ ದಿನವೇ ೩೭ ಮೊಳೆಗಳನ್ನು ಹೊಡೆದು ಹಾಕುತ್ತಾನೆ ಗೋಡೆಗೆ.  ಒಂದೆರಡು ವಾರಗಳಲ್ಲಿ ತನ್ನ ಕೋಪ ತಾಪ ಎಲ್ಲಾ ತಹಬಂದಿಗೆ ಬಂದು ಗೋಡೆಗೆ ಹೊಡೆಯಬೇಕಾದ ಮೊಳೆಗಳು ಸಂಖ್ಯೆಯಲ್ಲಿ ಕಡಿಮೆಯಾಗುತ್ತವೆ. ತನ್ನ ಅಪ್ಪ ಹೇಳಿದ ಹಾಗೆ ಮೊಳೆ ಹೊಡೆಯುವುದಕ್ಕಿಂತ ಸುಲಭ ತನ್ನ ಕೋಪವನ್ನು ನಿಯಂತ್ರಿಸುವುದು ಎಂದು ಈ ಹೊತ್ತಿಗಾಗಲೇ ಹುಡುಗ ಅರಿತು ಕೊಳ್ಳುತ್ತಾನೆ. ಕೊನೆಗೊಂದು ದಿನ ಹುಡುಗ ಮೊದಲಿನ ಥರ ಕೋಪಿಷ್ಠನಾಗದೇ ಮಂದಸ್ಮಿತನಾಗುತ್ತಾನೆ, ಸಂಯಮಿಯಾಗುತ್ತಾನೆ, ಮೊಳೆಯ ಚೀಲ ಬರಿದಾಗುತ್ತದೆ. ಈ ವಿಷಯವನ್ನು ತನ್ನ ತಂದೆಗೆ ಬಂದು ಹೇಳಿದಾಗ ತಂದೆ ಹೇಳುತ್ತಾನೆ, ಮಗನೇ, ಈಗ ಹೋಗಿ ನೀನು ಹೊಡೆದ ಮೊಳೆಗಳನ್ನೆಲ್ಲಾ ದಿನಕ್ಕೊಂದರಂತೆ ಕೀಳು ಎಂದು. ಮತ್ತೊಮ್ಮೆ ಗೋಡೆ ಕಡೆ ಮರಳಿದ ಹುಡುಗ ಸಾವಧಾನದಿಂದ ದಿನಕ್ಕೊಂದರಂತೆ  ಒಂದೊಂದೇ ಮೊಳೆ ಗಳನ್ನು ಕೀಳುತ್ತಾನೆ. ಒಂದೆರಡು ವಾರಗಳ ತರುವಾಯ ಹುಡುಗ ಬಂದು ತಾನು ಎಲ್ಲಾ ಮೊಳೆಗಳನ್ನು ಕಿತ್ತ ವಿಷಯ ಹಿಗ್ಗುತ್ತಾ ತಂದೆಗೆ ತಿಳಿಸುತ್ತಾನೆ. ಮಗನನ್ನು ನೋಡಿ ಮುಗುಳ್ನಗುತ್ತಾ ಅವನ ಕೈ ಹಿಡಿದು ಕೊಂಡು ಹಿತ್ತಲಿನ ಗೋಡೆಗೆ ಬಂದ ತಂದೆ ಮಗನ ತಲೆ ತಡವುತ್ತಾ ಹೇಳುತ್ತಾನೆ, ಮಗೂ, ಎಷ್ಟು ಸುಂದರ ಕೆಲಸ ನೀನು ಮಾಡಿದೆ, ಆದರೆ ನೋಡು ಒಮ್ಮೆ ಗೋಡೆಯನ್ನು. ಮೊದಲಿನ ಹಾಗಿದೆಯೇ ಗೋಡೆ? ಎಷ್ಟೊಂದು ತೂತುಗಳು ಬಿದ್ದಿವೆ ನೋಡು ಗೋಡೆಯ ಮೇಲೆ. ಈ ಗೋಡೆ ಮೊದಲಿನ ಹಾಗೆ ಆಗಲು ಸಾಧ್ಯವೆ?  ಎಂದಿಗೂ ಇಲ್ಲ. ನೀನು ಕೋಪದಲ್ಲಿ ಆಡಿದ ಮಾತುಗಳೂ ಸಹ ಹಾಗೆಯೇ. ನಿನ್ನ ಕೋಪದ ಮಾತುಗಳು, ಜನರಿಗೆ ಮಾಡಿದ ನೋವು ನೀನು ಮೊಳೆಗಳಿಂದ ಗೋಡೆಗೆ ಮಾಡಿದ ತೂತುಗಳಂತೆ.  ಅವೆಂದೂ ಮಾಸಲಾರವು. ಒಬ್ಬನಿಗೆ ಚೂರಿ ಇರಿದು ಆ ಚೂರಿಯನ್ನು ಹಿಂದಕ್ಕೆ ಎಳೆಯಬಹುದು, ಆದರೆ ಆ ಚೂರಿ ಮಾಡಿದ ಗಾಯ? ಆ ಗಾಯ ಮಾಸುವುದೇ? ನೀನೆಷ್ಟೇ ಕ್ಷಮೆ ಕೋರಿದರೂ ಆ ಗಾಯ ಅಲ್ಲೇ ಇರುತ್ತದೆ.

ಅನರ್ಘ್ಯ ರತ್ನಗಳಂಥ ಮಾತುಗಳನ್ನು ತನ್ನ ಪ್ರೀತಿಯ ತಂದೆಯ ಬಾಯಿಂದ ಆಲಿಸಿದ ಹುಡುಗ ದಂಗುಬಡಿದವನಂತೆ, ತಟಸ್ಥನಾಗಿ ನಿಂತು ತನ್ನ ತಂದೆಯನ್ನೇ ನೋಡುತ್ತಾ ನಿಂತ ಕಣ್ಣೀರು ಹರಿಸುತ್ತಾ.

ಆದರ್ಶ ತಂದೆ

ಕುಖ್ಯಾತ ಕಾಡುಗಳ್ಳ ಮತ್ತು ಆನೆ ಹಂತಕ ವೀರಪ್ಪನ ಹತ್ಯೆಯೊಂದಿಗೆ ಕಾನನದೊಳಗಿನ ಮಾನವನ ಆಕ್ರಂದನಕ್ಕೆ ತೆರೆ ಬಿತ್ತು. ಆನೆಗಳಿಗೂ, ವೃಕ್ಷಗಳಿಗೂ, ಪೊಲೀಸರಿಗೂ, ಜನಸಾಮಾನ್ಯರಿಗೂ ಸಿಂಹ ಸ್ವಪ್ನವಾಗಿದ್ದು ವ್ಯವಸ್ಥೆ ನಪುಂಸಕವೇನೋ  ಎಂದು ಅನುಮಾನ ಹುಟ್ಟುವಷ್ಟು ಎತ್ತರ ಬೆಳೆದಿದ್ದ ಆಗಾಧ ಮೀಸೆಯ ಸಣ್ಣ ಮನುಷ್ಯ ಕೊನೆಗೂ ಬಲಿಯಾದ ಪೋಲೀಸರ ಗುಂಡಿಗೆ.  ಅವನ ಪುತ್ರಿಗೆ IAS ಮಾಡುವ ಬಯಕೆಯಂತೆ. IAS, IPS ಅದ್ಧಿಕಾರಿಗಳ ನಿದ್ದೆಗೆಡಿಸಿದ್ದ ಈ ಅಪ್ಪನ ಮಗಳಿಗೆ ಅಧಿಕಾರಿಯಾಗುವ ಆಸೆ. ಅಷ್ಟು ಮಾತ್ರ ಅಲ್ಲ ತನ್ನ ತಂದೆ ಇವಳಿಗೆ ಆದರ್ಶ ವ್ಯಕ್ತಿಯಂತೆ. ಈ ಆದರ್ಶ ವ್ಯಕ್ತಿಯನ್ನು ಈಕೆ ತನ್ನ ಬದುಕಿನಲ್ಲಿ ಕಂಡಿದ್ದು ಎರಡೇ ಎರಡು ಸಲ. ಅದೆಂಥ ಪ್ರಭಾವ ಬೀರಿರಬೇಕು ಅವಳ ತಂದೆ?

ಇವಳ ಆದರ್ಶದ ವ್ಯಕ್ತಿಯ ಮಾತ ಕೇಳಿ ಅಳಿದುಳಿದ ಆನೆಗಳು ಈಗ ಕಾಡು ಬಿಟ್ಟು ಓಡಿದರೆ ಅಚ್ಚರಿಯಂತೂ ಇಲ್ಲ ಅನ್ನಿ.