ನಾವೀಗಲೂ ವಿಶ್ವ ವಿಜಯೀ

we are still world champs. ಭಾರತ ತಂಡದ ನಾಯಕ ಆಸ್ಟ್ರೇಲಿಯಾದವರಿಂದ ಮತ್ತೊಮ್ಮೆ ಇಕ್ಕಿಸಿಕೊಂಡ ನಂತರ ಹೇಳಿದ ಮಾತು. ಅದರ ಅರ್ಥ ಇನ್ನೂ ಮೂರು ನಾಲ್ಕು ವರ್ಷಗಳ ಕಾಲ ಸೋಲಿನ ಮೇಲೆ ಸೋಲನ್ನು ನಾವು ಅನುಭವಿಸಿದರೂ ಪರವಾಗಿಲ್ಲ, ಈಗಲೂ ನಾವು ವಿಶ್ವ ಚಾಂಪಿಯನ್ನರು.

ಗತ ಕಾಲದ ವೈಭವವನ್ನು ಮೆಲುಕು ಹಾಕುತ್ತಾ ವಾಸ್ತವದ ಬಗ್ಗೆ ಅಸಡ್ಡೆ ತೋರಿಸುತ್ತಾ ಸಾಗುವ ಸಮಾಜ ನಮ್ಮನ್ನು ಬಿಟ್ಟರೆ ಬೇರೆಯೂ ಇರಬಹುದೇ, ಅಥವಾ are we unique in this?

ಈಗ ತಾನೇ ಮುಕ್ತಾಯ ಗೊಂಡ ಆಸೀ-ಭಾರತ ನಾಲ್ಕು ಟೆಸ್ಟ್ ಗಳ ಟೆಸ್ಟ್ ಪಂದ್ಯಾವಳಿ ಕ್ರಿಕೆಟ್ ಇತಿಹಾಸದ ಕಡಿಮೆ ಸಮಯದಲ್ಲಿ ಮುಕ್ತಾಯವಾದ ಸರಣಿ ಆಗಿರಬಹುದೇ? ಏಕೆಂದರೆ ಎರಡು ಟೆಸ್ಟ್ ಗಳು ಮೂರೇ ಮೂರು ದಿನಗಳಲ್ಲಿ ಮುಕ್ತಾಯವಾದವು. ಮತ್ತೆರಡು ಟೆಸ್ಟ್ ಗಳು ನಿಗದಿತ ಸಮಯಕ್ಕಿಂತ ಬೇಗ ಮುಕ್ತಾಯವಾಯಿತು.

ಆಘಾತಕಾರೀ ಸುದ್ದಿ: ಪಾಕಿಸ್ತಾನಕ್ಕೆ ಆಘಾತಕಾರೀ ಗೆಲುವು. ಎರಡನೇ ಟೆಸ್ಟ್ ನಲ್ಲಿ ಗೆಲ್ಲಲು ಕೇವಲ ೧೪೫ ರನ್ನುಗಳ ಗುರಿ ಇಟ್ಟುಕೊಂಡಿದ್ದ ಬಲಿಷ್ಠ ಇಂಗ್ಲೆಂಡ್ ತಂಡ ಕೇವಲ ೭೨ ರನ್ನುಗಳನ್ನು ಮಾಡಿ ತನ್ನೆಲ್ಲಾ ವಿಕೆಟು ಗಳನ್ನು ತರಗೆಲೆ ಗಳಂತೆ ಉದುರಿಸಿ ಕೊಂಡಿತು. ಪಾಕಿಸ್ತಾನದ ಹಲವು ಆಟಗಾರರು ಜೈಲಿನಲ್ಲಿದ್ದರೂ, ತಂಡ ಒಗ್ಗಟ್ಟಿನಿಂದ ಆಡುವ ಅನುಮಾನವಿದ್ದರೂ, ಪಾಕ್ ಅಮೋಘ ಯಶಸ್ಸನ್ನು ಸಾಧಿಸಿತು ತನ್ನ ಮಾಜಿ ಒಡೆಯನ ವಿರುದ್ಧ. ಭಯೋತ್ಪಾದಕರ ಬೆದರಿಕೆಗೆ ತನ್ನ ನೆಲದಲ್ಲೇ ಆಡಲು ಯೋಗ್ಯತೆ ಇಲ್ಲದ ತಂಡ ಮೂರನೇ ದೇಶವೊಂದರಲ್ಲಿ, ( ನ್ಯೂಟ್ರಲ್ ಅವೆನ್ಯೂ ) ಆಡಿ ಸಾಧಿಸಿದ್ದನ್ನು ನೋಡಿದರೆ ನಾವೂ ಸಹ ಅದೇ ದಾರಿ ಏಕೆ ತುಳಿಯಬಾರದು. ನಮ್ಮ ನೆಲದಲ್ಲಿ ಆಡಿದರೂ ನಮಗೆ ಸೋಲು, ಅತಿಥೇಯ ದೇಶದಲ್ಲಿ ಆಡಿದರೂ ಸೋಲು. ನಾವೂ ಹುಡುಕೋಣ ನ್ಯೂಟ್ರಲ್ ಅವೆನ್ಯೂ ಒಂದನ್ನು, ಬಾರಿಸೋಣ ಜಯಭೇರಿಯನ್ನು.

* ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ

ನಾಗಪುರದ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರದರ್ಶನ ವೀಕ್ಷಿಸಿದವರಿಗೆ ಬಾಕಿ ಎರಡು ಪಂದ್ಯಗಳ ಹಾದಿ ಯಾವುದು ಎಂದು ತಿಳಿಯಲು ಯಾವ ಜ್ಯೋತಿಷಿಯ ಭವಿಷ್ಯದ ಅವಶ್ಯಕತೆ ಬರದು. ಆಟದ ಎಲ್ಲಾ ರಂಗಗಳಲ್ಲೂ – ಫೀಲ್ಡಿಂಗ್, ಬೌಲಿಂಗ್, ಬ್ಯಾಟ್ಟಿಂಗ್ ಮತ್ತು ನಾಯಕತ್ವ – ದಕ್ಷಿಣ ಆಫ್ರಿಕಾ ತಾನು ಉಚ್ಚ ಮಟ್ಟದ ತಂದ ಎಂದು ಜಗಜ್ಜಾಹೀರು ಮಾಡಿತು. ಸೋತ ಕಾರಣ ಸಾಮಾನ್ಯವಾಗಿ ನಮ್ಮ ಮಾಧ್ಯಮದವರು ಅನುಸರಿಸುವ ದಾರಿ ನಾನು ಹಿಡಿಯುವುದಿಲ್ಲ.   ಸೋತ ಕೂಡಲೇ ಭಾರತ ಮಣ್ಣು ಮುಕ್ಕಿತು, ಹೀನಾಯ ಸೋಲು…. ಹಾಗೆ ಹೀಗೆ ಎಂದು ಪುಂಖಾನು ಪುಂಖವಾಗಿ ಬರೆದು ತಂಡದ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಮಾಡುವುದಿಲ್ಲ. ಸೋಲು ಗೆಲುವು ಪಂದ್ಯದಲ್ಲಿ ಇದ್ದದ್ದೇ. ಕ್ರಿಕೆಟ್ನ ವಿಶೇಷತೆ ಏನಂದರೆ ಅದು ಮೂರನೆಯ ಸಂಭವನೀಯತೆಯನ್ನು ನೀಡುತ್ತದೆ; ಅದೇ ಡ್ರಾ. ಎಷ್ಟಿದ್ದರೂ cricket is a gentlemen’s game ಅಲ್ಲವೇ? ಡ್ರಾ ಬಿಡಿ ಹತ್ತು ನಿಮಿಷ ಹೆಚ್ಚಾಗಿ ಬ್ಯಾಟ್ ಮಾಡಿದ್ದರೆ ಪ್ರೋಟೀಯಾಗಳು ಮತ್ತೊಂದು ಇನ್ನಿಂಗ್ಸ್ ಆಡಿ ಇನ್ನಿಂಗ್ಸ್ ಸೋಲಿನ ಪ್ರತಿಷ್ಠೆಯಿಂದ ನಾವು ಪಾರಾಗಬಹುದಿತ್ತು. 
 
ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದ ಕೂಡಲೇ ಸಂತಸದಿಂದ ಬೀಗಿದ ನಾನು ಏನಾದರೂ ಸಾಹಸ ಮಾಡಿ ಏನಿಲ್ಲವೆಂದರೂ ಟೆಸ್ಟ್ ಅನ್ನು ಉಳಿಸಬಹುದೇನೋ ಎನ್ನುವ ಆಸೆ ಈಡೇರಲಿಲ್ಲ. ಸಹೋದ್ಯೋಗಿಯೊಬ್ಬ ಹೇಳಿದ ಮಾತು ಇಷ್ಟವಾಗದಿದ್ದರೂ ಸರಿ ಎನ್ನಿಸಿತು. ಆತ ಹೇಳಿದ್ದು ಸಚಿನ್ ನ ಸೆಂಚುರಿ “ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ” ಎಂದು. ಮಾತು ಖಾರವಾದರೂ ಆ ಸೆಂಚುರಿ ಯಾವ ಫಲವನ್ನೂ ನೀಡಲಿಲ್ಲ. ಗಾವಸ್ಕರನ ಸೆಂಚುರಿಗಳೂ ಹಾಗೇ ಅಲ್ಲವೇ? ಏನಾದರೂ ಪ್ರಯೋಜನ ಕಂಡಿದ್ದೀವಾ? 
 
ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ. ನಮ್ಮ ತಂಡದವರು ಅಲ್ಲಿ ನಮಗೆ ನರಕದ ರುಚಿ ತೋರಿಸದಿದ್ದರೆ ಸಾಕು.