ಇವಳೇ, ಪಕ್ಕದ ಚಿತ್ರದಲ್ಲಿರುವ ಪೋರಿಯೇ ಚಂಡಿ. ನನ್ನ ಮುದ್ದಿನ ಒಂದು ವರುಷ ೫ ತಿಂಗಳ ಚಂಡೀ. ಗಡಿಯಾರದ “ಸೆಕೆಂಡ್” ಮುಳ್ಳಿನಂತೆ ನಿಲ್ಲದ ಚಟುವಟಿಕೆ, ತುಂಟಾಟಿಕೆ. ಕೆಲವೊಮ್ಮೆ ಅಪಾಯಕಾರಿ ಆಟದಿಂದ ನಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸಿ ನಗುತ್ತಾಳೆ.
ಮನೆಗೆ ಜ್ಯೋತಿಯಾಗಿ ಬಂದ ಮಗ. ನಂತರ ಬೆಳದಿಂಗಳಾಗಿ ಬಂದಳು ನನ್ನ ಮಗಳು. ಗಂಡು ಮಕ್ಕಳು ತುಂಟರು, ಹೆಣ್ಣು ಮಕ್ಕಳು ಸ್ವೀಟ್ ಎನ್ನುತ್ತಾರೆ ಹಲವರು. ಆದರೆ ನನ್ನ ಮನೆಯಲ್ಲಿ ಇದು ವಿರುಧ್ಧ. ಸಹನೆಯ, ತಾಳ್ಮೆಯ ಸಾಕಾರ ನನ್ನ ಮಗ, ಎಲ್ಲಾ ಅವಾಂತರಗಳ ಕರ್ತೃ ನನ್ನ ಪುತ್ರಿ.
ಇವಳು ಬೆಳಿಗ್ಗೆ ಏಳುವುದೇ ಸೈರನ್ ಮೂಲಕ. ಎದ್ದು ಸೀದಾ ಅಡುಗೆ ಮನೆಗೆ ನಡೆದು ಒಂದಿಷ್ಟು ಪಾತ್ರೆಗಳನ್ನು ನೆಲಕ್ಕೆ ಕೆಡವಿ ತನ್ನ ದಿನ ಈ ರೀತಿ ಎಂದು ಪ್ರಚುರಪಡಿಸುತ್ತಾಳೆ. ತನ್ನ ೬ ವರ್ಷದ ಅಣ್ಣನನ್ನು ಸಾಕಷ್ಟು ಸತಾಯಿಸಿ ಶಾಲೆಗೆ ಕಳಿಸಿಕೊಟ್ಟು ತನ್ನ ಅಮ್ಮನನ್ನು ವಿಚಾರಿಸಿಕೊಳ್ಳುತ್ತಾಳೆ. ಶಾಲೆಯಿಂದ ಮನೆಗೆ ಮರಳಿದ ಹಿಶಾಮನ ಹಿಂದೆಯೇ ಸುತ್ತುತ್ತಾ ಅವನ ರೇಶಿಮೆಯಂಥ ಕೂದಲನ್ನು ಮನಸೋ ಇಚ್ಚೆ ಎಳೆದು ಆನಂದ ಪಡುತ್ತಾಳೆ. ಅವನ ಹೋಂ ವರ್ಕ್ ನ ಹಾಳೆಗಳನ್ನು ಕಸಿದು ಕೊಂಡು ಓಡುವ ಇವಳು ಪರಿಪರಿಯಾಗಿ ಬೇಡಿದ ನಂತರವೇ ಅವನಿಗೆ ಹಿಂದಿರುಗಿಸುವುದು.
ಒಂದು ದಿನ ಶಾಲೆಯಿಂದ ಮರಳಿದ ನನ್ನ ಮಗ ಬಟ್ಟೆ ಬದಲಿಸಿ ಕಪಾಟಿನ ಮುಂದೆ ನಗ್ನನಾಗಿ ನಿಂತು ಬಟ್ಟೆ ಆರಿಸುತ್ತಿದ್ದ. ಯಾವುದೋ ಕಿತಾಪತಿ ಮುಗಿಸಿ ಹಾದು ಹೋಗುತ್ತಿದ್ದ ಚಂಡಿಯ ಕಣ್ಣಿಗೆ ಬಿತ್ತು ತನ್ನ ಅಣ್ಣನ ಪ್ರುಷ್ಟಗಳು. ಹಸಿದ ಹುಲಿಯಂತೆ ಎರಗಿದ ಅವಳು ಚೆನ್ನಾಗಿ ಕಚ್ಚಿದಳು ಅವನ ಪಿರ್ರೆಗಳನ್ನು. ಅರಚಾಟ ಕೇಳಿ ಬಂದು ನೋಡಿದರೆ ಮೂರು ಹಲ್ಲುಗಳು, ಅವನ ಕುಂಡಿಗಳ ಮೇಲೆ.
ಊಟಕ್ಕೆ ಕೂತಾಗ ನನ್ನ ಮಡಿಲೇರುವ ಇವಳು ಡೈನಿಂಗ್ ಟೇಬಲ್ ಉಲ್ಟಾ ಮಾಡಿಯೇ ಏಳುವುದು. ಊಟ ಮುಗಿಸಿ ಸೋಫಾ ದ ಮೇಲೆ ಆಸೀನನಾದ ಕೂಡಲೇ ನನ್ನ ಓದುವ ಚಟ ಅರಿತ ಅವಳು ಒಂದು ಪುಸ್ತಕವನ್ನು ತಂದು ನನ್ನ ಕೈಗಿಟ್ಟು ಪುಸ್ತಕ ತೆರೆಯುವ ಮೊದಲೇ ನನ್ನ ಕೈಯಿಂದ ಕಸಿದು ಬಿಸುಡುತ್ತಾಳೆ. ಇದು ತನ್ನ ಕಡೆ ಗಮನ ನೀಡುವಂತೆ ಹೇಳುವ ಭಾಷೆ ಅವಳದು.
ಇವಳಿಗೆ ನನ್ನ ಮೊಬೈಲ್ ಮತ್ತು ಲ್ಯಾಪ್ ಟಾಪ್ ತುಂಬಾ ಇಷ್ಟ. ತೆರೆದ ಲ್ಯಾಪ್ಟಾಪ್ ಅನ್ನು ಮುಚ್ಚುವುದು, ಇಲ್ಲ ತೆರೆದು ಕಯ್ಗಳಿಂದ ಪಟಪಟ ಬಡಿದು ಏನ್ ಮಾಡ್ಕೊಳ್ತೀಯ ಎಂದು ನನ್ನತ್ತ ನೋಡುವುದು ಅವಳ ಫೇವರೆಟ್ ಪಾಸ್ ಟೈಮ್. ನಮ್ಮನ್ನು ಸಾಕಷ್ಟು ಗೋಳು ಹೊಯ್ದುಕೊಂಡ ಮೇಲೆ ಹಿಡಿದಿಟ್ಟ ನಗುವಿನ ಮಂದಹಾಸ ನಮ್ಮನ್ನು ಸಂಪೂರ್ಣ ಶರಣಾಗುವಂತೆ ಮಾಡುತ್ತದೆ. 
ಎಲ್ಲಾದರೂ ಒಂದು ಕ್ಷಣ ಅವಳ ಸುಳಿವಿಲ್ಲದೆ ಮನೆಯಲ್ಲಿ ಶಾಂತಿ ನೆಲೆಸಿದ್ದರೆ ಅದರರ್ಥ ಏನೋ ನಡೆಯುತ್ತಿದೆ ಎಂದು. calm before storm ಅನ್ನುತ್ತಾರಲ್ಲ ಹಾಗೆ. ಒಂದು ದಿನ ನಡೆದಿದ್ದು ಹೀಗೆ. ಎಲ್ಲಿದ್ದಾಳೆ ಎಂದು ನೋಡುವಾಗ ನನ್ನ ಲ್ಯಾಪ್ ಟಾಪ್ ಅನ್ನು ಸದ್ದಿಲ್ಲದೆ ಸೋಫಾದ ಮೇಲಿನಿಂದ ಎಳೆಯುತ್ತಿದ್ದಳು. ಹೇ ಎಂದು ಹತ್ತಿರ ಹೋಗುವುದಕ್ಕೂ ಧಪ್ ಎಂದು ಲ್ಯಾಪ್ ಟಾಪ್ ಬೀಳುವುದಕ್ಕೂ ಸರಿಹೋಯಿತು. ನನ್ನ ಕಯ್ಯಿಂದ ತಪ್ಪಿಸಿಕೊಂಡು ಓಡಿ ಬುಕ್ ಶೆಲ್ಫ್ ನಿಂದ ಪುಸ್ತಕಗಳನ್ನು ಕೆಡವಿ ಅಲ್ಲಿಂದಲೂ ಪರಾರಿ. ಒಂದು ರೀತಿಯ ಪಾದರಸ. ಹೊಸ ಲ್ಯಾಪ್ ಟಾಪ್. ಕೊಂಡು ೨ ತಿಂಗಳಾಗಿತ್ತಷ್ಟೆ. ಎರಡೂ ಕೊನೆಯಲ್ಲಿ ಕ್ರಾಕ್ ಆಯಿತು. ಇದನ್ನು ನೋಡಿದ ನನ್ನ ಮಗ ಬಹಳ ಆಸೆಯಿಂದ ಕಾತುರತೆಯಿಂದ ಕಾದ ತಂಗೆಮ್ಮನಿಗೆ ಒಂದೆರಡು ಬೀಳಬಹುದು ಎಂದು. ನಿರಾಶೆ ಕಾದಿತ್ತು ಅವನಿಗೆ ಪಾಪ.
ಮಕ್ಕಳಿಗೆ ಈ ರೀತಿಯ ಎನರ್ಜಿ ಎಲ್ಲಿಂದ ಬರುತ್ತದೋ ಏನೋ.
ಮನೆಯ ಬಾಗಿಲ ಹತ್ತಿರ ಶೂ ಸ್ಟ್ಯಾಂಡ್ ಬೇಡ ಎಂದು ಬದಲಿಗೆ ಒಂದೆರಡು ಖಾಲಿ ಪಿಂಗಾಣಿ ಹೂದಾನಿಗಳನ್ನು ಇಟ್ಟಿದ್ದೆ. ಸ್ವಲ್ಪ ದಿನ ಅದರ ಕಡೆ ಗಮನ ಬೀಳಲಿಲ್ಲ ಚೂಟಿಯದು. ಒಂದು ದಿನ ಎಲ್ಲಿ ನನ್ನ ಶೂ ಕಾಣ್ತಾ ಇಲ್ವಲ್ಲ ಎಂದು ಹುಡುಕುತ್ತಾ ನೋಡಿದರೆ pot ಒಳಗೆ ಹಾಕಿದ್ದಾಳೆ. ಸರಿ ಈ ಪ್ರಯೋಗದ ನಂತರ ಚಟ ಹತ್ತಿತು ಕೈಗೆ ಸಿಕ್ಕಿದ್ದನೆಲ್ಲಾ ಅದರಲ್ಲಿ ತುರುಕುವುದು. ಈಗ ಏನಾದರೂ ಕಾಣೆಯಾದರೆ ಮೊದಲು ನಾವು ನೋಡುವುದು ಈ “ಕುಂಡ” ದೊಳಕ್ಕೆ. ಅಪ್ಪ ಅಮ್ಮ ಹೂವು ಹಾಕಿದ್ದೆ ಇದ್ದರೇನಂತೆ ನಾನು ಹಾಕುವೆ ನನ್ನ ಲೂಟಿ ಮಾಡಿದ ವಸ್ತುಗಳನ್ನು ಎಂದು ಮಗಳ ತೀರ್ಮಾನ.
ಹಿಂದೆಲ್ಲೋ ಓದಿದ ಸಾಲುಗಳ ನೆನಪು.
ತೃಣಮಪಿ ನ ಚಲತಿ
ನಿನ್ನ ವಿನಾ, ನಿನ್ನ ವಿನಾ…
ಹೌದು ನನ್ನ ಮಗಳ ಮಟ್ಟಿಗೆ ಇದು ನಿಜ.