ಅಧ್ಯಕ್ಷರ ವಿಧವೆಯ ಪತ್ರ

ನಮ್ಮ ದೇಶದಲ್ಲಿ ಈಗ ಇರುವುದು ಅಧ್ಯಕ್ಷರಲ್ಲ, ಅಧ್ಯಕ್ಷೆ. ಹಾಗಾಗಿ ಇದು ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ. ಇಂದಿನ ಇ- ಟಪ್ಪಾಲಿನಲ್ಲಿ ನನಗೊಂದು ಪತ್ರ ಬಂತು. ಶ್ರೀಮತಿ ಸುಹಾ ಅರಫಾತ್ ರಿಂದ. ಇವರು ಪಲೆಸ್ತಿನ್ ದೇಶದ ಮಾಜಿ ಅಧ್ಯಕ್ಷ ದಿವಂಗತ ಯಾಸಿರ್ ಅರಫಾತ್ ರ ಪತ್ನಿ. ಅರಫಾತ್ ನನಗೆ ಅಚ್ಚು ಮೆಚ್ಚು. ಇಸ್ರೇಲಿಗಳು ಆಕ್ರಮಿಸಿ ಕೊಂಡ ತನ್ನ ದೇಶದ ಬಿಡುಗಡೆಗೆ ಹೋರಾಡಿದ ಜೀವ. ಭಾರತದ ಆಪ್ತ ಮಿತ್ರನೂ ಹೌದು. ಇಂದಿರಾ ಗಾಂಧಿಯವರ ನಿಧನದ ಸುದ್ದಿ ಕೇಳುತ್ತಲೇ ಮೊದಲಿಗೆ ಭಾರತಕ್ಕೆ ಧಾವಿಸಿ ಬಂದ ಮೊದಲ ನಾಯಕರಲ್ಲಿ ಅರಫಾತ್ ಒಬ್ಬರು. ತನ್ನ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಭಾರತ ಮತ್ತು ಇಂದಿರಾ ನೀಡಿದ ಬೆಂಬಲವನ್ನೂ ಮೆಲುಕು ಹಾಕಿ ನಾನು ನನ್ನ ಸೋದರಿಯನ್ನು ಕಳೆದು ಕೊಂಡೆ ಎಂದು ಕಣ್ಣೀರು ಹಾಕಿದ್ದರು. ಯಾವಾಗಲೂ ಮಿಲಿಟರಿ ಉಡುಗೆ ಮತ್ತು ತಲೆಗೆ ಅರಬ್ಬರು ಕಟ್ಟುವ “ಕಿಫಾಯೇ’ ಎಂದು ಕರೆಯಲ್ಪಡುವ ಬಟ್ಟೆ ಧರಿಸುತ್ತಿದ್ದ ಅರಫಾತ್ ವಿಶ್ವದ ಅತಿ ಪರಿಚಿತ ನಾಯಕರು. ಅಂಥ ನಾಯಕರ ವಿಧವೆ ಪತ್ರ ನನಗ್ಗೆ ಬಂದಿದ್ದು ನೋಡಿ ಸಂತಸ. ನಡುಗುತ್ತಲೇ ಕ್ಲಿಕ್ಕಿಸಿದೆ. ತೆರೆದು ಕೊಂಡಿತು ಪತ್ರ…

ನಾನು ಸುಹಾ. ಸುಹಾ ಅರಫಾತ್. ಪಲೆಸ್ತಿನ್ ದೇಶದ ದಿವಂಗತ ಅಧ್ಯಕ್ಷರ ಪತ್ನಿ. ಪತಿಯ ಮರಣಾ ನಂತರ ನಾನೀಗ ಲಂಡನ್ನಿನಲ್ಲಿ ನೆಲೆಸಿದ್ದೇನೆ. ನನ್ನ ಹತ್ತಿರ ಐದು ಮಿಲ್ಲಿಯನ್ ಡಾಲರ್ ಇದೆ. ನಿಮ್ಮ ದೇಶದಲ್ಲಿ ವಿನಿಯೋಗಿಸುವ ಆಸೆ ಇದೆ. ಈ ಸಹಾಯಕ್ಕಾಗಿ ನಿಮಗೆ ಶೇಕಡಾ ೨೦ ಭಾಗವನ್ನು ಕೊಡಲು ನಾನು ತಯಾರು. ಹಾಗೆಯೇ ತಮ್ಮ ಮೊಬೈಲ್ ನಂಬರ್, ತಮ್ಮ ಉದ್ಯೋಗದ ಕುರಿತೂ ನನಗೆ ಬರೆಯಿರಿ…. ಹೀಗೆ ಶುರುವಾಯಿತು ವೃತ್ತಾಂತ. ಇದನ್ನು ಓದುತ್ತಿದ್ದಂತೆ ನನಗೆ ವಿಷಯ ತಿಳಿಯಾಗಲು ತೊಡಗಿತು. ಈ ಪತ್ರ ಸಾಮಾನ್ಯವಾಗಿ ಆಫ್ರಿಕಾದ ಅದರಲ್ಲೂ ನೈಜೀರಿಯಾದಿಂದ ಬರುವಂಥವು. ನನ್ನ ಅಪ್ಪ ಕೂಡಿಸಿಟ್ಟ ಐವತ್ತೋ ನೂರೋ ಮಿಲಿಯನ್ ಡಾಲರ್ ಇದೆ, ಅಪ್ಪ ಅಪಘಾತದಲ್ಲಿ ತೀರಿಕೊಂಡ. ಆ ಹಣವನ್ನು ನಿಮ್ಮ ಖಾತೆಗೆ ರವಾನಿಸುತ್ತೇನೆ ಎಂದು ಹೇಳಿ ನಯವಾಗಿ ಬಲೆಯನ್ನು ಹೆಣೆಯುತ್ತಾರೆ ಕಪಟವರಿಯದ ಜನರ ಸುತ್ತ. ನೀವು ತಿಳಿಯಬಹುದು ಇಂಥ ಮೋಸದ ವ್ಯಾಪಾರಕ್ಕೆ ಯಾರಾದರೂ ಬೀಳುತ್ತಾರೆಯೇ ಎಂದು. ಖಂಡಿತ ಬೀಳುತ್ತಾರೆ. ಖೊಟ್ಟಿ ಜನರ ಸಹವಾಸ ಎಂದರೆ ನಮ್ಮ ಜನರಿಗೆ ಬಹಳ ಇಷ್ಟ. ಮಕ್ಕಳಾಗದವರಿಗೆ ಭಸ್ಮ ನೀಡುವ ಸನ್ಯಾಸಿಯಿಂದ ಹಿಡಿದು, ನಪುಂಸಕತೆ ಹೋಗಲಾಡಿಸಿ ಹೊಸ ಪುರುಷತ್ವ ತಂದು ಕೊಡುವ ಖೊಟ್ಟಿ ವೈದ್ಯ ನವರೆಗೆ, ಹಲವು ರೀತಿಯಲ್ಲಿ ಜನರು ಮಾಡುವ ಮೋಸದ ಅರಿವಿದ್ದೂ ಪದೇ ಪದೇ ಅವರುಗಳು ತೋಡಿಟ್ಟ ಹೊಂಡಕ್ಕೆ ಬೀಳಲೇ ಬೇಕು ಅಮಾಯಕರು.

ಬೆಂಗಳೂರಿನ, ಇಂಟರ್ನೆಟ್ ಕೇಂದ್ರ ನಡೆಸುವ ಕೇರಳ ಮೂಲದ ದಂಪತಿಗಳಿಗೆ ಇದೇ ರೀತಿಯ ಟೋಪಿಯೊಂದು ಇಂಗ್ಲೆಂಡಿ ನಿಂದ ಹಾರಿ ಬಂದಿತ್ತು. ಸಾಲ ಸೋಲ ಮಾಡಿ, ಒಡವೆ, ಪಾತ್ರೆ ಪಗಡಿ ಎಲ್ಲಾ ಅಡವಿಟ್ಟು ಹಣ ಕಳಿಸಿದರು ಡಾಲರ್ ಸಿಗುವ ನಿರೀಕ್ಷೆಯಲ್ಲಿ. ಆದರೆ ತಮ್ಮ ಹೆಗಲು ಏರಿದ್ದು ಡಾಲರ್ ತುಂಬಿದ ಚೀಲವಲ್ಲ, ಶುದ್ಧ ಮೋಸ ಎಂದು ಅವರಿಗೆ ತಡವಾಗಿ ವೇದ್ಯವಾಯಿತು. ಬದುಕಿಡೀ ದುಡಿದರೂ ತೀರಿಸಲಾಗದ ಸಾಲದ ಹೊರೆ ಆ ನತದೃಷ್ಟ ದಂಪತಿಗಳ ಸಂಗಾತಿಯಾಯಿತು. ಮೇಲ್ ಮೂಲಕ ಹಣ ಹೇಗಾದರೂ, ಏಕಾದರೂ ಬರಬೇಕು, ಹೇಳಿ? ಯಾರಿಗಾದರೂ ಪುಕ್ಕಟೆಯಾಗಿ, ಯಾವುದೇ ಶ್ರಮವಿಲ್ಲದೆ ಹಣ ಬಂದಿದ್ದಿದೆಯೇ? ಲಾಟರಿ ಒಂದನ್ನು ಹೊರತು ಪಡಿಸಿ ಹಣ ಪುಕ್ಕಟೆಯಾಗಿ ಬರಲಿಕ್ಕಿಲ್ಲ. ಹೀಗಿರುವಾಗ ಮೇಲ್ ಮೂಲಕ ಮಿಲಿಯನ್ ಗಟ್ಟಲೆ ಡಾಲರ್ ಹೇಗೆ ಬರಬಹುದು?

ನೆನಪಿಡಿ, ಮೇಲ್ ಮೂಲಕ ಬರುವುದು bugs ಗಳು. bucks ಅಲ್ಲ.

“ರೊಮಾನ್ಸ್” ಇರಲಿ… ಹೀಗೆ

ಅವನು ೧೧.೫೯ ಕ್ಕೆ ಇರಿಸಿದ ಅಲಾರ್ಮ್ ಮೊಳಗುತ್ತಲೇ ಅವಳಿಗೆ ಡಯಲ್ ಮಾಡಿದ.

“ಹಲೋ?” ಮಂಪರು ತುಂಬಿದ ಸ್ವರ ಕೇಳಿತು

ಹ್ಯಾಪಿ ಬರ್ತ್ ಡೇ, ಅವನು ಉಸುರಿದ. ಇದನ್ನು ಕೇಳಿ ಅವಳು ಮುಗುಳ್ನಗುವುದು ಅವನಿಗೆ ಕೇಳಿಸಿತು.

“ವಂದನೆಗಳು, ಒಹ್, ಸಮಯವೇನೂ? ಸರಿಯಾಗಿ ಅರ್ಧ ರಾತ್ರಿ”.

“ಹೌದು. ಈ ದಿನ ನಿನ್ನೊಂದಿಗೆ ಇರಲು ಸಾಧ್ಯವಿಲ್ಲದ್ದರಿಂದ ನಿನ್ನನ್ನು ಕರೆಯುವ ಮನಸ್ಸಾಯಿತು”.

ಅವಳು ಹೇಳುತ್ತಾಳೆ, “ಆದರೆ ನನಗೆ ಆಶ್ಚರ್ಯ ಆಗ್ತಾ ಇದೆ. ನನಗಾಗಿ ನೀನು ಇಂದು ಯಾವುದೇ ಅಚ್ಚರಿಯ ಕಾರ್ಯಕ್ರಮ ಹಾಕಿಕೊಂಡಿಲ್ಲ ಎಂದು, ನೀನು ಬಹಳ ರೋಮಾಂಟಿಕ್ ತಾನೇ?”

ಅವನು ನಗುತ್ತಾ ಹೇಳುತ್ತಾನೆ..

 “ನಾನು ನಿನಗೆ ಓದಲು ಕೊಟ್ಟ ಪುಸ್ತಕದ ೧೫೭ ನೆ ಪುಟ ತೆರೆದು ನೋಡು, ಐ ಲವ್ ಯೂ, ಗುಡ ನೈಟ್ ಎನ್ನುತ್ತಾನೆ. ಆಕೆಯೂ ಐ ಲವ್ ಯೂ, ಶುಭ ರಾತ್ರಿ ಎಂದು ಹೇಳಿ ಅವನು ಹೇಳಿದ ಪುಟ ತೆರೆದಾಗ…   

ಅಮ್ಮಾ, ನಾನ್ಹೇಗೆ ಹುಟ್ಟಿದೆ?

ಮಕ್ಕಳ ಹತ್ತು ಹಲವು ಕುತೂಹಲಗಳಲ್ಲಿ ಒಂದು ಮಕ್ಕಳು ಹೇಗೆ ಹುಟ್ಟುತ್ತವೆ ಎಂದು.  ನಾನ್ಹೇಗೆ ಬಂಡೆ ಎನ್ನುವ ಈ ಮಕ್ಕಳ ಪ್ರಶ್ನೆ ನಮ್ಮನ್ನು ತಬ್ಬಿಬ್ಬು ಮಾಡುವುದು ಸಹಜವೇ. ಐದನೇ ಕ್ಲಾಸಿನಲ್ಲಿದ್ದಾಗ ನನ್ನ ಪೋಲಿ ಗೆಳೆಯನೊಬ್ಬ ವಿವರವಾಗಿ ತಿಳಿಸಿ ಹೇಳಿದರೂ ತಂದೆ ತಾಯಿ ಬಗೆಗಿನ ಅಪಾರವಾದ ಗೌರವ ಅವನ ಕಥೆಯನ್ನೂ ನಂಬದಂತೆ ತಡೆದಿತ್ತು. ನಾನು ಅಂದು ಕೊಂಡಿದ್ದು ಮಕ್ಕಳು ಬೇಕೆಂದಾಗ ತಂದೆ ತಾಯಿಗಳು ದೇವರಲ್ಲಿ ಕೇಳಿ ಕೊಳ್ಳುತ್ತಾರೆ ಮತ್ತು ಆ ಕರುಣಾಮಯನಾದ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂದು, ಆದರೆ ಮೇಲೆ ಹೇಳಿದಂಥ ಪೋಲಿ ಪೋಕರಿಗಳು ವಕ್ಕರಿಸಿ ಹಾಗಲ್ಲ ಕಣೋ ಬೆಪ್ಪೆ ಹೀಗೆ ಎಂದು ಸವಿವರವಾಗಿ ಹೇಳಿದಾಗ ಅಪ್ಪ ಅಮ್ಮನ ನನ್ನು ಸಂಶಯ ದಿಂದ ನೋಡುವಂತಾಗುತ್ತಿತ್ತು.

ಈ ಚಿತ್ರ ನೋಡಿ. ಜರ್ಮನಿ ದೇಶದಲ್ಲಿ ಮಕ್ಕಳು ಹೇಗೆ ಬರುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಲು ಪುಸ್ತಿಕೆಗಳು. ಅದರಲ್ಲಿನ ಒಂದು ದೃಶ್ಯ ನೀವೀಗ ನೋಡುತ್ತಿರುವುದು.