ಪ್ರೆಸೆನ್ಸ್ ಆಫ್ ಮೈಂಡ್ ಎಂದರೇನು?

ಪ್ರೆಸೆನ್ಸ್ ಆಫ್ ಮೈಂಡ್ ಹಲವು ರೀತಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. ಚಾಲಕನೊಬ್ಬ ಡಿಕ್ಕಿ ಹೊಡೆದು hit and run ಆಗಿ ತಪ್ಪಿಸಿ ಕೊಂಡಾಗ ಯಾರಾದರೂ ಆ ವಾಹನದ ನಂಬರ್ ನೋಟ್ ಮಾಡಿಕೊಂಡರೆ ಅದು ಪ್ರೆಸೆನ್ಸ್ ಆಫ್ ಮೈಂಡ್, ಅಲ್ಲವೇ? ಕೆಳಗಿದೆ ನೋಡಿ ಮತ್ತೊಂದು ರೀತಿ.

ನನ್ನ ತಂಗಿಯ ನಾದಿನಿ ಮನೆಗೆ ಬಂದು ಮಗ academics ನಲ್ಲಿ ಹಿಂದೆ ಬಿದ್ದಿದ್ದಾನೆ, ಯಾರಾದರೂ ಟ್ಯೂಶನ್ ಕೊಡುವವರು ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಹೇಳಿ ಮಾತು, ಕತೆ ಮುಗಿದ ನಂತರ ತಮ್ಮ ಮನೆ ಕಡೆ ಹೊರಟರು. ದಾರಿಯಲ್ಲಿ ಹೋಗುವಾಗ ಒಂದು ಕಟ್ಟಡದ  ಮುಂದೆ ಹುಡುಗನೊಬ್ಬ ಆಡುತ್ತಿದ್ದ. ಆ ಹುಡುಗ indian embassy school ನ ಸಮವಸ್ತ್ರ ಧರಿಸಿದ್ದ. ಅದನ್ನು ಕಂಡ ಕೂಡಲೇ ಆಕೆ ತನ್ನ ಗಂಡನಿಗೆ ಕಾರನ್ನು ನಿಲ್ಲಿಸಲು ಹೇಳಿ, ನೋಡಿ, ಈ ಹುಡುಗ ಹೋಗೋದು embassy ಶಾಲೆಗೆ ಅಂತ ಕಾಣುತ್ತೆ, ಅವನ ತಾಯಿಗೆ ಖಂಡಿತ ಟ್ಯೂಶನ್ ಕೊಡುವವರ ಬಗ್ಗೆ ತಿಳಿದೇ ಇರಬಹುದು, ಟ್ರೈ ಮಾಡೋಣ  ಎಂದು ಹೇಳಿ ತನ್ನ ಗಂಡನ business card ಆ ಹುಡುಗನಿಗೆ ಕೊಟ್ಟು ಈ ನಂಬರ್ ಗೆ ಅಮ್ಮನಿಗೆ ಫೋನ್ ಮಾಡಲು ಹೇಳಪ್ಪಾ ಎಂದು ಕಾರ್ಡ್ ಕೊಟ್ಟು ಹೋದರು. ಸಂಜೆಯ ಹೊತ್ತಿಗೆ ಆ ಹುಡಗನ ತಾಯಿ ಫೋನ್ ಮಾಡಿ ವಿಷಯ ಏನೆಂದು ವಿಚಾರಿಸಿದರು. ಆ ಹುಡುಗನ ತಾಯಿ ಶಾಲೆಯ ಶಿಕ್ಷಕಿ ಯಾಗಿದ್ದು ಟ್ಯೂಶನ್ ಸಹ ಕೊಡುತ್ತಾರಂತೆ. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಎನ್ನುವಂತೆ ಟ್ಯೂಶನ್ ಸಮಸ್ಯೆಗೆ ಪರಿಹಾರ ಸುಲಭವಾಗಿ ಸಿಕ್ಕಿತು.   ಮಾತುಕತೆಯ ನಂತರ  ವ್ಯವಹಾರ ಕುದುರಿತು.

ಇಲ್ಲೊಂದು ಪ್ರಶ್ನೆ. ಆ ಹುಡುಗನ ತಾಯಿ ಒಳ್ಳೆಯ (professional) ಶಿಕ್ಷಕಿಯೋ? ಸಾಮಾನ್ಯವಾಗಿ ಶಾಲೆಯಿಂದ ಮನೆಗೆ ಮಕ್ಕಳು ಬಂದ ಕೂಡಲೇ “change, refresh, hit outdoors for play” ನಿಯಮ ಪಾಲನೆ ಆಗಬೇಕು ಅಲ್ಲವೇ? ತನ್ನ ಮಗನ ಸಮವಸ್ತ್ರ change ಮಾಡಿಸದೆ ಆಡಲು ಬಿಟ್ಟಿದ್ದು ತಪ್ಪಲ್ಲವೇ? ಬಹುಶಃ ಆಕೆಯನ್ನು ಈ ಬಗ್ಗೆ ಕೇಳಿದರೆ ಆಕೆಯ ಉತ್ತರ ಹೀಗಿರಬಹುದು,  “ನನ್ನ ಮಗ ಸಮವಸ್ತ್ರ ಧರಿಸದೆ ಹೊರಗೆ ಆಟ ಆಡಿದ್ದರೆ ನನಗೆ ಗಿರಾಕಿ ಸಿಗುತ್ತಿತ್ತೇ?”    

ಇನ್ನೊಂಚೂರು: ಬಹಳ ವರ್ಷಗಳ, ದಶಕಗಳ, ಹಿಂದಿನ ಮಾತು. ಸದಾನಂದ್ ವಿಶ್ವನಾಥ್ ವಿಕೆಟ್ ಕೀಪರ್ ಆಗಿದ್ದ ಸಮಯ. ಪಂದ್ಯವೊಂದರಲ್ಲಿ ದಾಂಡಿಗ ರನ್ನಿಗಾಗಿ ಓಡಿದಾಗ ಆತನನ್ನು ರನ್ನೌಟ್ ಮಾಡಲು ಫೀಲ್ಡರ್ ಚೆಂಡನ್ನು ವಿಕೆಟ್ಟಿಗೆ ಎಸೆದಾಗ ವಿಕೆಟ್ ಚದುರಿ ಹೋಗುತ್ತದೆ, ಆದರೆ ಅಷ್ಟರಲ್ಲಿ ದಾಂಡಿಗ ‘ಮನೆ’ ತಲುಪಿರುತ್ತಾನೆ. ಈ ಸನ್ನಿವೇಶದಲ್ಲಿ ಆತ ರನ್ ಕದಿಯಲು ಮತ್ತೊಮ್ಮೆ ಓಡಿದಾಗ ಮಿಂಚಿನಂತೆ ಚೆಂಡನ್ನು ಸಂಗ್ರಹಿಸಿದ ಸದಾನಂದ್ ಚದುರಿದ್ದ ವಿಕೆಟ್ಟನ್ನು ಕೈಯ್ಯಿಂದ ಕಿತ್ತು ಮೇಲೆಕ್ಕೆತ್ತಿ ಅಪ್ಪೀಲ್ ಮಾಡಿದಾಗ ಅಂಪೈರ್ ಔಟ್ ಕೊಡುತ್ತಾನೆ. ಟೆಕ್ನಿಕಲ್ ಆಗಿ ಸದಾನಂದ್ ಹೀಗೆ ಮಾಡದೆ ಸಾಧಾರಣವಾಗಿ ವಿಕೆಟ್ ಕೀಪರ್ ಗಳು ಮಾಡುವ ರೀತಿ ಚೆಂಡನ್ನು ಈಗಾಗಲೇ ಚದುರಿದ್ದ ವಿಕೆಟ್ಟಿಗೆ  ತಗುಲಿಸಿದ್ದಿದ್ದರೆ ದಾಂಡಿಗ ನಾಟ್ ಔಟ್ ಆಗುತಿದ್ದ. ಇದೂ ಸಹ ಪ್ರೆಸೆನ್ಸ್ ಆಫ್ ಮೈಂಡ್.

ಹೀಗೊಂದು ಸಂಭಾಷಣೆ

ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಸೌಜನ್ಯಗಳ ಬಗ್ಗೆ ಜನರಿಗೆ ಅರಿವನ್ನು ಹೇಗೆ ಮೂಡಿಸ ಬಹುದೋ ಗೊತ್ತಿಲ್ಲ. ಮೊನ್ನೆ ಒಂದು ಚೆಕ್ಕಿನ ಬಗ್ಗೆ ವಿಚಾರಿಸಲು ಸೌದಿ ಅಮೇರಿಕನ್ ಬ್ಯಾಂಕ್ ಗೆ ಹೋದೆ. ಚೆಕ್ vip ವಿಭಾಗಕ್ಕೆ ಸೇರಿದ್ದರಿಂದ ವಿಶಾಲವಾದ, ಸುಸಜ್ಜಿತ vip lounge ನಲ್ಲಿ ಆಸೀನನಾದೆ. ನನ್ನ ಪಕ್ಕದಲ್ಲಿ ಸುಮಾರು ನಲವತ್ತು ನಲವತ್ತೈದರ ಸೌದಿ ಯೊಬ್ಬ ಬರ್ಮುಡಾ ಚಡ್ಡಿ, ಬೇಸ್ ಬಾಲ್ ಟೋಪಿ ಧರಿಸಿ ಫೋನಿನಲ್ಲಿ ಹರಟುತ್ತಿದ್ದ. ಆತನ ಮಾತಿನಿಂದ ತಿಳಿಯಿತು ಅವನೊಬ್ಬ ಅತ್ಯಾಧುನಿಕ, ಸ್ಪೋರ್ಟ್ಸ್ ಮಾಡೆಲ್ ಕಾರುಗಳ ಡೀಲರ್, ಮತ್ತು ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ಅಮೆರಿಕೆಯವನು ಎಂದು. ಸೌದಿ ಅವನಿಗೆ ಹೇಳಿದ ಹೌದು ನೀನು ಕೇಳುತ್ತಿರುವ ಕಾರು ನನ್ನ ಹತ್ತಿರ ಇದೆ, ನಾನು ನಾಳೆ ರಿಯಾಧ್ ಗೆ ಬರುತ್ತಿದ್ದೇನೆ, ಬರುವುದು ವಿಮಾನದಲ್ಲಲ್ಲ ನನ್ನ porsche ಕಾರಿನಲ್ಲಿ, ನನಗೆ ಸುಮಾರು ೧೦ ಘಂಟೆಗಳ ಸಮಯ ಹಿಡಿಯಬಹುದು ಎಂದು ಹೇಳುತ್ತಿದ್ದ. ಜೆಡ್ಡಾ ದಿಂದ ರಿಯಾಧ್ ಸುಮಾರು ೧೪೦೦ ಕಿ.ಮಿ. porsche (ಪೋರ್ಷೆ) ಅತಿ ವೇಗವಾಗಿ ಸರಾಗವಾಗಿ ಚಲಿಸಬಲ್ಲ ಕಾರು. ಈ ಸೌದಿ ೧೦ ಘಂಟೆಗಳು ಸಾಕು ರಿಯಾದ್ ತಲುಪಲು ಸಾಕು ಎಂದಾಗ ಅಮೆರಿಕೆಯವ ಹೇಳಿದ ನಿಧಾನವಾಗಿ ಓಡಿಸು ಕಾರನ್ನು, express way ರಸ್ತೆಯಲ್ಲಿ ಅಪಘಾತ ಹೆಚ್ಚು ಎಂದು ಎಚ್ಚರಿಸಿದ. ಅದಕ್ಕೆ ಸೌದಿ ಹೇಳಿದ, ಹೇಯ್ ನೀನೇನು ಭಯ ಪಡಬೇಡ. ನಾನು ಸಣಕಲು ವ್ಯಕ್ತಿ, ಅಪಘಾತವಾದರೂ ಎಲ್ಲಾದರೂ ಮರುಭೂಮಿಯಲ್ಲಿ ಹಾರಿ ಬಿದ್ದಿರುತ್ತೇನೆ, ಆದರೆ ದೊಡ್ಡ ಹೊಟ್ಟೆಯ ಸ್ಥೂಲಕಾಯದವರಾದರೆ ಚಿಂದಿ ಚಿಂದಿ ಆಗುತ್ತಾರೆ (they will go smithereens) ಅಪಘಾತವಾದಾಗ ಎಂದು ಹೇಳುತ್ತಿದ್ದ. ನಮ್ಮ ಮುಂದಿನ ಸೋಫಾದಲ್ಲಿ ಸೂಟು ಬೂಟು ತೊಟ್ಟ ಲೆಬನಾನ್ ದೇಶದವನ ಥರ ಕಾಣುತ್ತಿದ್ದ ಸ್ಥೂಲ ಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಈಗಾಗಲೇ ಈ ಜೋರಾದ ಸಂಭಾಷಣೆಯಿಂದ ಬೇಸತ್ತಿದ್ದ ಆ ವ್ಯಕ್ತಿ ಈ ಸ್ಥೂಲ ಕಾಯದವರ ಬಗ್ಗೆ ಸೌದಿ ಆಡಿದ ಮಾತಿನಿಂದ ಕುಳಿತಲ್ಲಿಂದಲೇ ಮಿಸುಕಾಡುತ್ತಿದ್ದ. ಹೀಗೆ ಹೇಳಿದ ವ್ಯಕ್ತಿ ಸೌದಿ ಅಲ್ಲದಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದನೇನೋ ಪಾಪ ಆ ಡುಮ್ಮ, ಆದರೆ ಈ ಮಾತುಗಳನ್ನ ಕೇಳಿ ಅವನಿಗೆ ಅಲ್ಲಿ ಕೂತಿರಲು ಆಗದೆ ನಿಧಾನವಾಗಿ ತನ್ನ ಶರೀರವನ್ನು ಸೋಫಾದಿಂದ ಆರೋಹಣ ಮಾಡಿ ಕಾಲ್ತೆಗೆದ. ಈ ಸನ್ನಿವೇಶ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಲ್ಲಿಗೆ ನಿಲ್ಲಲಿಲ್ಲ ಪುಕ್ಕಟೆ ಮನರಂಜನೆ, ಸೌದಿಯ ಮಾತು ಇನ್ನೂ ಮುಂದುವರೆದಿತ್ತು. ಅಮೆರಿಕೆಯವ ಹೇಳಿದ ನಾನು feeling lonely in riyadh ಎಂದು, ಅದಕ್ಕೆ ಥಟ್ಟನೆ ಈ ಸೌದಿ ಅವನಿಗೆ ಹೇಳಿದ your lonliness and my kindness might prompt you to do something (ನಿನ್ನ ಒಂಟಿತನ ಮತ್ತು ನನ್ನ ಒಳ್ಳೆಯತನ “ಬೇಡದ್ದನ್ನು” ಮಾಡಲು ನಿನ್ನನ್ನು ಪ್ರೇರೇಪಿಸಬಹುದು) ಹ ಹ ಹಾ ಎಂದು ನಕ್ಕ.

ತಲೆ ಕಡಿಯುವ ಶಿಕ್ಷೆ

ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ. ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸಿಗ್ನಲ್ ನ ಹಾವಳಿಯಿಲ್ಲ. ಸುಮಾರು ೨೫ ಕಿಲೋಮೀಟರು ವರೆಗೆ ಏಕ ರಸ್ತೆ. ರಸ್ತೆಯ ಮಧ್ಯ ಭಾಗದಲ್ಲಿ ಖರ್ಜೂರದ ಮರಗಳು, ಭರ್ರೋ ಎಂದು ಘಂಟೆಗೆ ೧೨೦ ಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಕ್ಷಿಪಣಿಗಳಂತೆ ತೂರಿಕೊಂಡು ಹೋಗುವ ಕಾರುಗಳು. ಬ್ಯಾಂಕ್ ಸಮೀಪಿಸುತ್ತಿದ್ದಂತೆ ಹತ್ತಿರದ ಜುಫ್ಫಾಲಿ ಮಸೀದಿಯ ವಿಶಾಲವಾದ ಆವರಣದ ಬಳಿ ಒಂದಿಷ್ಟು ಚಟುವಟಿಕೆಗಳು ಕಂಡುಬಂದವು. ಕೃತಕ ಸರೋವರದ ದಡದಲ್ಲಿ ಕಟ್ಟಿದ ಜುಫ್ಫಾಲಿ ಮಸೀದಿ ತುಂಬಾ ಸುಂದರ. ಪುಟ್ಟ, ಪುಟ್ಟ ಹತ್ತಾರು ಗುಮ್ಮಟಗಳ ನಡುವೆ ಆಗಸಕ್ಕೆ ಏಕದೇವೋಪಾಸನೆಯನ್ನು ಮುಗಿಲಿಗೆ ಮುಟ್ಟಿಸುವ ಕಾತುರದಲ್ಲಿ ತುದಿಗಾಲಿನಲ್ಲಿ ನಿಂತ ಮಿನಾರ್ (ಮಸೀದಿಯ ಸ್ತಂಭ ಗೋಪುರ). ಮಸೀದಿಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದರು, ಒಂದು ಕಂಬಕ್ಕೆ ಧ್ವನಿ ವರ್ಧಕಗಳನ್ನು ಕಟ್ಟಿದ್ದರು, ಶಸ್ತ್ರಧಾರಿ ಪೋಲೀಸರ ಗಸ್ತು, ನೀರಿನ ಟ್ಯಾಂಕರ್ ಹೀಗೆ ಒಂದು “eerie” ಚಟುವಟಿಕೆ, ಏರ್ಪಾಡು ಕಾಣಲು ಸಿಕ್ಕಿತು. ಕೌತುಕದಿಂದ ಕಾರನ್ನು ನಿಲ್ಲಿಸಿ ಏನೆಂದು ವಿಚಾರಿಸಿದಾಗ ತಲೆ ಕಡಿಯುವ ಪ್ರೋಗ್ರಾಮ್ ಇದೆ ಎಂದು ಒಬ್ಬ ಹೇಳಿದ. ಇದನ್ನು ಕೇಳಿ ನನ್ನ ಮೈ ನಡುಗಿತು. ಹೆಂಡತಿಗೆ ಫೋನ್ ಮಾಡಿ ಇದನ್ನು ಹೇಳಿದಾಗ ಅವಳು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ, ಮೊದಲೇ ಪುಕ್ಕರು ನೀವು, ಅದನ್ನು ನೋಡಿ ಹೆದರಿ ಬಂದರೆ ರಾತ್ರಿ ಪೂರ್ತಿ ನಿಮ್ಮನ್ನು ಕಾಯುತ್ತಾ ಕೂರಲು ನನ್ನಿಂದ ಸಾಧ್ಯ ಇಲ್ಲ ಎಂದು ಹೆದರಿಸಿದಾಗ ಈಕೆ ಹೇಳೋದೂ ಸರಿ ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಇಂಥ ಒಳ್ಳೆ ಮಾತನಾಡುತ್ತಾಳೆ ಎಂದು ಮನದಲ್ಲೇ ವಂದಿಸಿ ಇನ್ನು ಇಲ್ಲಿ ನಿಲ್ಲುವುದು ಬೇಡ ಎಂದು ಕೂಡಲೇ ಅಲ್ಲಿಂದ ಕಾಲನ್ನು ಕಿತ್ತೆ. ಇಷ್ಟು ವರ್ಷ ಸೌದಿ ಅರೇಬಿಯದಲ್ಲಿ ಇದ್ದರೂ ನಾನು ಎಂದೂ ಇಂಥ ಸನ್ನಿವೇಶವನ್ನು ಎದುರಿಸಿರಲಿಲ್ಲ. ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ, ಮಾದಕ ವಸ್ತು ಮಾರುವವರಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೊತ್ತಿತ್ತು. ಮತ್ತು ತಲೆಕಡಿಯುವುದನ್ನು ನೋಡಲು ಹೋಗಿ ಒಂದಿಷ್ಟು ದಿನ ನಿದ್ದೆ ಮಾಡಲಾಗದೆ ಒದ್ದಾಡಿದ ಜನರ ಕತೆ ಸಹ ಕೇಳಿದ್ದೆ. ಆದರೆ ಧುತ್ತನೆ ಇಂಥ ಸನ್ನಿವೇಶ ನನಗೆದುರಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಮರಳಿ ಮಸೀದಿ ದಾಟಿ ನೇರವಾಗಿ ನೋಡಲಾಗದೆ ಕದ್ದು ನೋಡಿದಾಗ ಇನ್ನೂ ಅಪರಾಧಿಯನ್ನು ತಂದಿರಲಿಲ್ಲ. ಒಂದಿಷ್ಟು ದೂರ ಸಾಗುತ್ತಿದ್ದಂತೆ ನಾಲ್ಕಾರು ಪೋಲಿಸ್ ಕಾರುಗಳು ಮತ್ತು ಅಪರಾಧಿಯನ್ನು ಹೊತ್ತ ಜೈಲಿನ ವ್ಯಾನ್ ಯಾತನಾಮಯವಾಗಿ ಸೈರನ್ ಬಾರಿಸುತ್ತಾ ವೇಗವಾಗಿ ಮಸೀದಿಯ ಕಡೆ ಹೋಗುತ್ತಿದ್ದವು.

ಆಫೀಸ್ ತಲುಪಿ ಮಿತ್ರರಿಗೆ ಈ ವಿಷಯ ಹೇಳಿ ಅಲ್ಲಾ ನೀರಿನ ಟ್ಯಾಂಕರ್ಗೆ ಅಲ್ಲೇನು ಕೆಲಸ ಎಂದು ಕೇಳಿದಾಗ ಸಿಕ್ಕಿದ ಉತ್ತರ, ತಲೆಕಡಿದ ನಂತರ ಹರಿಯುವ ರಕ್ತ ತೊಳೆಯಳಂತೆ. ಅಯ್ಯೋ, ಇದನ್ನು ಕೇಳಿ ತಲೆ ಗಿರ್ರನೆ ಸುತ್ತಿ ಕೆಳಕ್ಕುರುಳುವುದೊಂದು ಬಾಕಿ. ಮಾನವ ಹಕ್ಕುಗಳ, ಇನ್ನಿತರ ಮುಂದುವರಿದ ರಾಷ್ಟ್ರಗಳ ಮನವಿಯನ್ನು ಕಿವಿಗೆ ಹಾಕಿ ಕೊಳ್ಳದೆ ಮೇಲೆ ಹೇಳಿದ ಅಪರಾಧ ಮಾಡಿದವರಿಗೆ ತಲೆ ಕಡಿದು ಶಿಕ್ಷೆ ನೀಡುವ ಸೌದಿ ಅರೇಬಿಯಾದ ವ್ಯವಸ್ಥೆ ಅಮಾನವೀಯವಾಗಿ ಕಂಡರೂ ತಮ್ಮ ನಿರ್ದಯೀ, ಅಮಾನುಷ ಕೆಲಸಗಳಿಂದ, ಕರುಣೆ ತೋರೆಂದು ಬೇಡುವ ಜನರ ರೋದನ ಲೆಕ್ಕಿಸದೆ ಕೊಲ್ಲುವ, ಅತ್ಯಾಚಾರ ಎಸಗುವ, ಯುವಕರನ್ನ ಮಧ್ಯ ವ್ಯಸನಿಗಳನ್ನಾಗಿ ಮಾಡುವ, ಸಮಾಜವನ್ನು ಕಂಗೆಡಿಸುವ ಕಿಡಿಗೇಡಿಗಳಿಗೆ ಈ ಶಿಕ್ಷೆ ಕೊಡಬೇಕಾದ್ದೆ. ಹಾಗೂ ಇತರರಿಗೂ ಪಾಠವಾಗಲಿ ಎಂದು ಇಂಥ ಶಿಕ್ಷೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟು ಭಾವಿ ಪುಂಡರಿಗೆ ಎಚ್ಚರಿಕೆಯನ್ನೂ ಸಹ ಕೊಟ್ಟು ಸಮಾಜದಲ್ಲಿ ಒಂದಿಷ್ಟು ನೆಮ್ಮದಿ ಇರುವಂತೆ ಮಾಡುತ್ತದೆ ಈ ಸಾರ್ವಜನಿಕ ಶಿಕ್ಷೆ. ಕಳೆದ ವರ್ಷ ಓರ್ವ ಅಪ್ರಾಪ್ತ ಬಾಲಕಿಯನ್ನು ನಾಲ್ವರು ಬಾಂಗ್ಲಾದೇಶದ ತರುಣರು ಅತ್ಯಾಚಾರ ಎಸಗಿ ಓಡಿದ್ದರು. ಅಷ್ಟು ಮಾತ್ರವಲ್ಲ ತಾವು ಮಾಡಿದ ಮಹತ್ಕಾರ್ಯವನ್ನು ಮೊಬೈಲ್ ಕಮೆರದಲ್ಲಿ ಸೆರೆ ಹಿಡಿದು ಸ್ನೇಹಿತರೊಂದಿಗೆ ಹಂಚಿಕೊಂಡು ಹಿಗ್ಗಿದರು. ಈ ಪಾತಕಿಗಳನ್ನು ಸೆರೆಹಿಡಿಯಲು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿ ಆದರು. ನ್ಯಾಯಾಲಯ ಅವರು ಮಾಡಿದ ಕೃತ್ಯವನ್ನು ಖಾತ್ರಿ ಪಡಿಸಿಕೊಂಡು ಅವರ ತಲೆ ಕಡಿಯದೇ ಅತ್ಯಧಿಕ ಜನಸಂದಣಿ ಇರುವ ರಾಜಧಾನಿ ರಿಯಾದ್ ನಗರದಲ್ಲಿ ಅವರನ್ನು ನೇಣು ಹಾಕಲು ನ್ಯಾಯಾಲಯ ತೀರ್ಪು ನೀಡಿತು. ನೇಣು ಹಾಕಿದ ನಂತರ ದಿನ ಪೂರ್ತಿ ಅವರ ಶರೀರಗಳನ್ನು ನೇತಾಡಲು ಪೊಲೀಸರು ಬಿಟ್ಟಿದ್ದರು. ಕೆಲ ವರ್ಷಗಳ ಹಿಂದೆ ಪೋಲೀಸರ ತಂಡವೊಂದು ಬ್ಯಾಂಕ್ ಲೂಟಿ ಮಾಡಿ ಸಿಕ್ಕಿಹಾಕಿ ಕೊಂಡಿತು. ದರೋಡೆ ಆದ್ದರಿಂದ ಕೈ ಕಡಿಯುವ ಶಿಕ್ಷೆ. ಅಪರಾಧಿಗಳು ಸರಕಾರೀ ಸೇವಕರೂ, ಪೊಲೀಸರೂ ಆಗಿದ್ದರಿಂದ ನ್ಯಾಯಾಲಯ ಸೌದಿ ದೊರೆಗೆ ತೀರ್ಮಾನ ಮಾಡಲು ಬಿಟ್ಟಿತು. ಸಮಾಜವನ್ನು, ಸಮಾಜದ ಆಸ್ತಿಪಾಸ್ತಿಗಳನ್ನು ಕಾಯಲು ನಿಯುಕ್ತ ಗೊಂಡವರೇ ಇಂಥ ಕೆಲಸಕ್ಕೆ ಇಳಿದರೆ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಹೋಗಿಬಿಡುತ್ತದೆ ಎಂದು ಹೇಳಿದ ದೊರೆ ಸೆರೆಬಿದ್ದವರ ತಲೆಗಳನ್ನು ಕಡಿಯಲು ತೀರ್ಪು ಕೊಟ್ಟರು. ಈ ರೀತಿಯ ಶಿಕ್ಷೆ ಇರುವುದರಿಂದ ಇಲ್ಲಿ ಅಪರಾಧಗಳು ಕಡಿಮೆ ಎಂದು ಹೇಳಬಹುದು.