ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”,  “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.  

ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ  ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;

“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?

ನಿಮ್ಮ ವಯಸ್ಸೇನು?

How old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್ ಫ್ಯಾಶನ್ ಮತ್ತು ಆಕರ್ಷಕ ಮೈ ಮಾಟ ತಮಗೆ ಬೇಕಾದ ಉಡುಗೆಯನ್ನು ತೊದಲು ಜನರನ್ನು ಪ್ರೇರೇರಿಪಿಸುತ್ತದೆ. ಇದೇನು ಬುರ್ಖಾದಿಂದ ಮಿನಿ ಸ್ಕರ್ಟ್ ಗೆ “ಕುಸಿಯಿತೆ”  ನಿನ್ನ ಅಭಿರುಚಿ ಎಂದು ಹುಬ್ಬೇರಿಸಬೇಡಿ. ಈ ಲೇಖನ ಯಾವುದೇ political statement ಮಾಡ್ತಾ ಇಲ್ಲ, ಬದಲಿಗೆ ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಮನುಷ್ಯ ಯಾವ ಯಾವ ರೀತಿ ಬಟ್ಟೆ ತೊಡುತ್ತಾನೆ/ಳೆ ಎನ್ನುವ ಮೇಲೊಂದು ಪಕ್ಷಿ ನೋಟ. ಬಟ್ಟೆ ಧರಿಸುವಾಗ ವಯಸ್ಸನ್ನೂ ಗಮನಕ್ಕೆ ಇಟ್ಟು ಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಅಭಿಪ್ರಾಯ. ಒಂದು ಲೆಕ್ಕದಲ್ಲಿ ಇದು ಸರಿಯೂ ಕೂಡಾ. ಮೇಲೆ ಹೇಳಿದಂತೆ ೭೦ ರ ಮಹಿಳೆ ಮಿನಿ ಸ್ಕರ್ಟ್ ತೊಟ್ಟರೆ ಒಂದು ರೀತಿಯ ಅಭಾಸವಾಗುತ್ತದೆ. ನಿಲ್ಲಿ, ನಿಲ್ಲಿ, ಅಭಾಸ ಏಕಾಗಬೇಕು? ನಿಕೃಷ್ಟ ಉಡುಗೆ ತೊಡುವುದನ್ನು ವಿರೋಧಿಸುವವರಿಗೆ ನಾವು ಹೇಳುವ ಕಿವಿ ಮಾತು ಉಟ್ಟ ಬಟ್ಟೆ ಮಾತ್ರ ನೋಡಿದರೆ ಸಾಕು, ಅದರೊಂದಿಗೇ ಬರುವ ಉಬ್ಬು ತಗ್ಗುಗಳನ್ನಲ್ಲ ಎಂದು. ಒಪ್ಪಿಕೊಂಡೆ. ಉಡುಗೆ ಬರೀ ಫ್ಯಾಶನ್ ಸೆನ್ಸ್ ನ ಮಾತ್ರ ಬಿಂಬಿಸಿದರೆ ೧೬ ರ ಪೋರಿಯ ಥರ ೭೦ ರ ಚೆಲುವೆ ಸಹ ಏಕೆ ಮಿನಿ ಸ್ಕರ್ಟ್ ಹಾಕಬಾರದು? ಒಹ್, ಎಪ್ಪತ್ತರ ಮಹಿಳೆಗೆ ೧೬ ರ ಅಂಗ ಸೌಷ್ಠವ ಇಲ್ಲ ಎಂದಿರಬೇಕು, ಹಾಗಾದರೆ ಎಲ್ಲಿ ಹೋಯಿತು ಫ್ಯಾಶನ್ ಸೆನ್ಸ್. ಇಲ್ಲಿರೋದು ಅಪ್ಪಟ ಲೈಂಗಿಕತೆ ಅಲ್ಲವೇ ನಮ್ಮ ನೋಟದಲ್ಲಿ? ವಾದ ವಿವಾದ ಬಂದಾಗ ಅಭಿರುಚಿ, ಫಾಶನ್ ಸೆನ್ಸ್, ಇಲ್ಲದಿದ್ದರೆ  ವಾರೆನೋಟ ಕನಿಷ್ಠ ಉಡುಗೆ ತೊಟ್ಟವರ ಕಡೆ. political statement ಬೇಡ ಎಂದು ಕೊಂಡರೂ ನುಸುಳಿಕೊಂಡಿತು ದರಿದ್ರ ರಾಜಕೀಯ. ವಿಷಯಕ್ಕೆ ಬರೋಣ…

ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ (೯೦ ರ ದಶಕದಲ್ಲಿ) ಅವರಿಗೆ ಪ್ರಾಯ ಹೆಚ್ಚಿರಲಿಲ್ಲ. ೪೫-೫೦ ರ ಸಮೀಪ. ಆಗಾಗ ಜೀನ್ಸ್, ಟೀ ಶರ್ಟ್ ಗಳಲ್ಲಿ ಕಾಣಿಸಿ ಕೊಳ್ಳುತ್ತಿದ್ದರು. ಕ್ಲಿಂಟನ್ ಅವರದು ಆಕರ್ಷಕ ವ್ಯಕ್ತಿತ್ವ. ಬರೀ ಉಡುಗೆ ಯಲ್ಲಿ ಮಾತ್ರವಲ್ಲ, ಸಂಗೀತದಲ್ಲೂ ಆಸಕ್ತಿ. “ಸಾಕ್ಸೋ ಫೋನ್” ನುಡಿಸುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ನುಡಿಸುತ್ತಿದ್ದರು. ಅಧ್ಯಕ್ಷರ ಘನತೆಗೆ ಈ ವರ್ತನೆ ಕುಂದು ಎಂದು ಸಲಹೆಗಾರರು ಕಿವಿ ಮಾತನ್ನು ಹೇಳಿದಾಗ ನಿಲ್ಲಿಸಿದ್ದರು ಸಾಕ್ಸೋ ಫೋನ್ ಸಹವಾಸವನ್ನು. ಹೀಗೆ ಕ್ಲಿಂಟನ್ ಜೀನ್ಸ್ ತೊಟ್ಟಾಗ ಜನ ಹೇಳುತ್ತಿದ್ದದ್ದು ೪೦ ವಯಸ್ಸಿನ ನಂತರ ಜೀನ್ಸ್ ತೊಡುವುದಕ್ಕೆ you need to be brave ಎಂದು. ಅಂದರೆ ಜೀನ್ಸ್ ಅನ್ನು ಹದಿಹರೆಯದವರು, ಕಾಲೇಜಿಗೆ ಹೋಗುವವರು, ಹೀಗೇ ಯುವಜನರು ಮಾತ್ರ ತೊಡಬೇಕು ಎನ್ನುವ ಅಲಿಖಿತ ನಿಯಮ. ಆದರೆ ಈಗ ನೋಡಿ, ೯೦ ರ ತರುಣನೂ (ತರುಣ ಎಂದಾಗ ವ್ಯಂಗ್ಯ ಇಲ್ಲ, ಏಕೆಂದರೆ ವಯಸ್ಸು ೯೦ ಆದರೂ young at heart ಎಂದು ಕೊಳ್ಳುವ ಜನರಿದ್ದಾರೆ) ತೊಡುತ್ತಾನೆ ಜೀನ್ಸ್. ಸುಮಾರು ಐವತ್ತರ ಆಸುಪಾಸಿನ ನನಗೆ ಪರಿಚಯದ ವ್ಯಕ್ತಿಯೊಬ್ಬರು ಜೀನ್ಸ್ ಮಾತ್ರವಲ್ಲ ಕಾಲಿನ ತುಂಬಾ ಜೇಬುಗಳೇ ಇರುವ ಕಾರ್ಗೋ ಪ್ಯಾಂಟುಗಳನ್ನು ಧರಿಸುತ್ತಿದ್ದರು, ಆತ್ಮ ವಿಶ್ವಾಸದಿಂದ. ನೋಡಿ ಇಲ್ಲಿದೆ ಮಂತ್ರ. ಯಾವುದೇ ಉಡುಗೆ ತೊಡಬೇಕಾದರೂ ಆತ್ಮವಿಶ್ವಾಸ ಬೇಕು. ಅದು ನಮ್ಮ ಮುಖದ ಮೇಲೆ, ನಮ್ಮ ಮಾತು, ನಡಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇನ್ಸ್ಟಂಟ್ ಆಗಿ ಯಂಗ್ ಆಗಿ ಬಿಡುತ್ತೇವೆ, ಆತ್ಮ ವಿಶ್ವಾಸ ಇದ್ದರೆ. ನೀವು ಏನು ತೊಡಬೇಕು ಎಂದು ನಿಮಗೇ ಅರಿವಿಲ್ಲದೆ ಬರೀ ಫ್ಯಾಶನ್ ಟ್ರೆಂಡ್ ಅನ್ನು ಹಿಂಬಾಲಿಸಿದರೆ ಕರೀ ಕಾಗೆ ಚೆಂದ ಕಾಣಲು ಸುಣ್ಣದ ಮೊರೆ ಹೊಕ್ಕ ಹಾಗಾಗಬಹುದು.

ನನ್ನ ಮರೆವು ನನಗೆ ಕೆಲವೊಮ್ಮೆ ಭಾರಿಯಾಗಿ ಕಾಣುತ್ತದೆ. ಮೊನ್ನೆ ಶಾಪ್ಪಿಂಗ್ ಮಾಡಲು ಹೋಗಿ ಎಲ್ಲೋ ನನ್ನ ಸನ್ ಗ್ಲಾಸನ್ನು ಬಿಟ್ಟು ಬಂದೆ. ಮರಳುಗಾಡಿನ ಬೇಗೆಯಲ್ಲಿ ಸನ್ ಗ್ಲಾಸಿಲ್ಲದೆ ಡ್ರೈವ್ ಮಾಡೋದು ಕಷ್ಟ. ಹತ್ತಿರದ ಆಪ್ಟಿಕಲ್ ಶಾಪಿಗೆ ಹೋಗಿ ಕೆಲವೊಂದು ಕನ್ನಡಕಗಳನ್ನು ನೋಡಿದೆ. ಸನ್ ಗ್ಲಾಸ್ ಬರೀ ಸೂರ್ಯ ಕಿರಣಗಳಿಗೆ ಮಾತ್ರವಲ್ಲ, ಅದೊಂದು fashion statement ಸಹ ಅಲ್ವರ? ಅಂಗಡಿಯವ ಸೊಗಸಾದ, ನವನವೀನ ಮಾಡೆಲ್ಲು ಗಳನ್ನು ತೋರಿಸಿದ. ನನಗೆ ಅನುಮಾನ, ಇಷ್ಟೊಂದು fashionable glasses ತೊಡುವ ವಯಸ್ಸಾ ನನ್ನದು ಎಂದು. ನೀವೆಷ್ಟೇ modern outlook ನವರಾದರೂ ದರಿದ್ರ ಸಮಾಜ ಯಾವ ರೀತಿ ನಮ್ಮ ಮತಿಯೊಳಕ್ಕೆ ಬೇಡದ್ದನ್ನು ತುರುಕಿರುತ್ತೋ ಅದು ತನ್ನ ತಲೆಯನ್ನ ಆಗಾಗ ಎತ್ತುತ್ತಿರುತ್ತಲೇ ಇರುತ್ತದೆ. ನನ್ನ ಈ ವಯಸ್ಸಿನ apprehension ಅನ್ನು ನನಗೆ ಗೊತ್ತಿಲ್ಲದೇ ಸೇಲ್ಸ್ ಮ್ಯಾನ್ ಗೆ ಆಡಿಯೂ ತೋರಿಸಿಬಿಟ್ಟೆ, i am not that young to wear those glasses ಎಂದು. lack of confidence? ಕೆಲವೊಮ್ಮೆ ಈ ಲ್ಯಾಕ್ ಆಫ್ ಕಾನ್ಫಿಡೆನ್ಸ್ ಸಹ ಕೆಲಸಕ್ಕೆ ಬರುತ್ತೆ ಅನ್ನಿ.  ಸಾಕಷ್ಟು ಕನ್ನಡಕಗಳನ್ನು ನೋಡಿದ ನಂತರ  ಅಲ್ಲಿ, ಇಲ್ಲಿ ಎಂದು ಚದುರಿ ಹೋಗಿದ್ದ ಕಾನ್ಫಿಡೆನ್ಸ್ ಅನ್ನು gather ಮಾಡಿ ನನಗಿಷ್ಟವಾದ, ಸ್ವಲ್ಪ ಮಾಡರ್ನೇ ಆದ “ತಂಪು ಕನ್ನಡಕ” ಕೊಂಡು ಅಂಗಡಿಯಿಂದ ಹೊರನಡೆದೆ ಹೋಡೀ, ವಯಸ್ಸಿಗೊಂದು ಗೋಲಿ ಎನ್ನುತ್ತಾ.

ಚುಂಬನ ಸ್ಪರ್ದೆ

ಚುಂಬನ ಸ್ಪರ್ದೆ ಚೀನಾದಲ್ಲಿ. ಹಾಂ? ಚುಂಬನ?ಚೀನಾದಲ್ಲಿ? ಅದೂ ಸಾರ್ವಜನಿಕವಾಗಿ? ನಾವೆಲ್ಲಾ ತಿಳಿದಂತೆ ಚೀನೀಯರ ಕೆಲಸ ನಮ್ಮ ಅರುಣಾಚಲ ಪ್ರದೇಶವನ್ನು, ಮತ್ತು ಇತರೆ ಈಶಾನ್ಯ ರಾಜ್ಯಗಳತ್ತ ಆಸೆ ಗಣ್ಣು ಬೀರುವುದು ಎಂದು. ಊಹೂಂ, ಈ ಚಪ್ಪಟೆ ಮೂಗಿನವರಿಗೆ ಒಂದಿಷ್ಟು ಚುಂಬನದ ಕಲೆಯೂ ಗೊತ್ತು, ಯಾರಿಗೆ ಗೊತ್ತು ನಮ್ಮ ವಾತ್ಸ್ಯಾಯನ ಅಡ್ಡಾಡುತ್ತಾ ಚೀನದ ಕಡೆಗೂ ತಲೆ ಹಾಕಿರಬಹುದು. valentine ದಿನದಂದು ಚೀನಾ ದ ಸೂಪರ್ ಮಾರ್ಕೆಟ್ ಒಂದು ವಿವಿಧ ಭಂಗಿಯಲ್ಲಿ ದೀರ್ಘವಾಗಿ ಚುಂಬಿಸುವುದಕ್ಕೆ ಯುವ ಹೃದಯಿಗಳಿಗೆ ಮುಕ್ತ ಆಹ್ವಾನ ನೀಡಿದಾಗ ಸಿಕ್ಕ ಚಿತ್ರಗಳಿವು. ನೋಡಿ ಆನಂದಿಸಿ, ಪೂರ್ಣ ವಿರಾಮ. ಪ್ರಿಯ/ತಮೆ ಯರ ಮೇಲೆ ಪ್ರಯೋಗಿಸದಿರಿ.

believe me, ನಾನು ಗಂಡಸೇ ಅಲ್ಲಾ…

“I am not a man, godman Nityananda told CID sleuths”. ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ಈ  flirting master ನಮ್ಮ ಕ್ರಿಕೆಟ್ನ ಮಾಸ್ಟರ್ ಬ್ಲಾಸ್ಟರ್ ರೀತಿ ಬಿಡು ಬೀಸಾಗಿ ಧಾಳಿ ಮಾಡುತ್ತಾನೆಂದು? ನಾನು ಗಂಡೇ ಅಲ್ಲ ! ಎಂಥ ಗಂಡೂ ನಿಜವಾಗಿಯೂ ಗಂಡೇ ಅಲ್ಲದಿದ್ದರೂ ಈ ಮಾತನ್ನು ಆಡಲು ಹಿಂಜರಿಯುತ್ತಾನೆ. ಯಾರೋ ಒಬ್ಬರು ಹೇಳಿದರು I am not a man, but Godman ಎಂದು ಆತ ಹೇಳಬೇಕಿತ್ತು ಎಂದು. ನನ್ನ ಪ್ರಕಾರ ಅವನು ಹೀಗೆ ಹೇಳಬೇಕಿತು, ನಾನು ಮನುಷ್ಯನಲ್ಲ, ಮನುಷ್ಯ ರೂಪದಲ್ಲಿರುವ ಮತ್ತೇನೋ, ನಾನು ನಿಮ್ಮ ಊಹೆಗೆ ನಿಲುಕದ ವ್ಯಕ್ತಿಯಲ್ಲ ವಗೈರೆ, ವಗೈರೆ. ನಾವು ಮೂಲತಃ ಇಂಥ ಕಪಟಿ ಗಳನ್ನು ನಂಬುವವರು, ನಮಗೆ ಮಂತ್ರವಾದಿಗಳು, ಮೋಸ ಮಾಡುವ ದೇವ ಮಾನವರು ಎಂದರೆ ಪಂಚ ಪ್ರಾಣ, ಈ ಜನ ನಮ್ಮ ಮೇಲೆ ಪಂಚ ಭೂತಗಳನ್ನು ಪ್ರಯೋಗ ಮಾಡಿದರೂ ನಮಗೆ ಅವರ ಮೇಲೆ ಅತೀವ ಭಕ್ತಿ, ವಿಶ್ವಾಸ. ಈ ನಮ್ಮ ದೌರ್ಬಲ್ಯವನ್ನು ಉಪಯೋಗಿಸಿ ಪೊಲೀಸರನ್ನೂ, ತನ್ನನ್ನು ತೆಗಳುವವರನ್ನೂ ಈ ನಿತ್ಯಾನಂದ ಕನ್ಫ್ಯೂಸ್ ಮಾಡಿದ್ದರೆ ಕಾನೂನಿನ ಕೋಳ ತಪ್ಪಿಸಿಕೊಂಡು ಮತ್ತೊಮ್ಮೆ ಬಳೆಗಳ ಹಿಂದೆ ಓಡಬಹುದಿತ್ತು.       

ಪುರುಷ ತನ್ನ erectile ಸಾಮರ್ಥ್ಯದ ಬಗ್ಗೆ ಅನುಮಾನ ಇದ್ದರೂ ದೊಡ್ಡ macho ರೀತಿಯ ಫೋಸ್ ಕೊಡುತ್ತಾನೆ. ಗಂಡ್ಸಾ ದರೆ ಬಾರೋ ಎಂದು ಚಾಲೆಂಜ್ ಮಾಡುವುದಿದೆ. ಆದರೆ ನಾನು ಗಂಡೇ ಅಲ್ಲ ಕಣೋ ಅಂದು ಬಿಟ್ಟರೆ? ಮರ್ಯಾದೆ ಬಿಟ್ಟು ಮಾನ ಸಂಪಾದಿಸುವ ಚಾಣಾಕ್ಷತನ. ನಾನು ಮಂತ್ರಮುಗ್ಧನಾದೆ ಈ ವ್ಯಕ್ತಿಯ ಚಾಣಾಕ್ಷತನಕ್ಕೆ. ನನ್ನ ಶುಕ್ರವಾರದ ಬೆಳಗಿನ ಮಂಪರು ಎಗರಿ ಹೋಯಿತು ನಿತ್ಯಾನಂದನ ಈ ಯಾರ್ಕರ್ ಗೆ. ಈಗ ನಮ್ಮ ಪೊಲೀಸರು ಏನು ಮಾಡಬಹುದು? doppler test ಅಂತೂ ಇದ್ದೇ ಇದೆ ಅನ್ನಿ. ಈ ಟೆಸ್ಟ್ ನಲ್ಲಿ ರಕ್ತ ಸಂಚಲನದ ತೀವ್ರತೆಯನ್ನು ಕಂಡು  ಹಿಡಿಯುತ್ತಾರೆ. ಬಹುಶಃ ಈ ಪರೀಕ್ಷೆಯಲ್ಲಿ ಗೊತ್ತಾಗಬಹುದು. ನಿತ್ಯಾನಂದನ ಈ ಸಮಸ್ಯೆಗೆ ಪೊಲೀಸರು ಕಚ್ಚೆ ಇಳಿಸಬಹುದು, ಆದರೂ ನಾನು ಗಂಡಲ್ಲ ಎಂದು ಅವನು ಹಠ ಹಿಡಿದು ಕೂತರೆ? ಅವನೊಂದಿಗೆ ಮರ, ಅಲ್ಲಲ್ಲ ಮಂಚ ಸುತ್ತಿದ ಲಲನಾ ಮಣಿಗಳನ್ನು ಪೊಲೀಸರು ಬುಲಾವ್ ಮಾಡಬಹುದೇ ನಿತ್ಯಾನಂದನನ performance evaluation ಮಾಡಲು?

ಭಾರತ ಒಂದು ದೊಡ್ಡ drama stage. ಯಾವ ಯಾವ ರೀತಿಯ, ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ಬೆರಗಾಗಿ ನೋಡುವ ಒಂದು ಡ್ರಾಮ ನಮ್ಮ ಭಾರತ.

ನೀವೇನಂತೀರಾ? ಏನಾದರೂ ಅನ್ನಿ, ತಮಾಷೆಗೆ ಕೂಡ ನಾನು ಗಂಡಲ್ಲ ಎನ್ನಬೇಡಿ ಮಾರಾಯ್ರೆ.