ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು. ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು? ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು. ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?
ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu- ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..
“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.
ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ. ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….