ಎಲ್ಲಿ ಓದಬೇಕು, ಎಲ್ಲಿ ಓದಬಾರದು

ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ ಪುಂಜಗಳು ಕಣ್ಣಿಗೆ ಬಿದ್ದರೆ ಸಾಕು ಅದನ್ನು ಓದಲೇ ಬೇಕು. ಪ್ರಯಾಣದಲ್ಲಿ ಯಾರಾದರೂ ಓದುತ್ತಿದ್ದರೆ ಅವರೊಂದಿಗೆ ತಾವೂ ಕತ್ತು, ಉದ್ದ ಗಿಡ್ಡ ಮಾಡಿ ಹೆಣಗಿ ಓದುವುದನ್ನೂ ನೋಡಿದ್ದೇವೆ. ಎಲ್ಲಾದರೂ ಒಂದು ಸಮಾರಂಭದಲ್ಲಿ ಜನರೊಂದಿಗೆ ಬೇರೆಯದೇ ತಮ್ಮ ಪಾಡಿಗೆ ಪುಸ್ತಕ ಲೋಕದಲ್ಲಿ ಕಳೆದು ಹೋಗುವ ಜನರೂ ಇದ್ದಾರೆ. ಮೊನ್ನೆ ನನ್ನ ಮಗನ ಜನ್ಮ ದಿನಕ್ಕೆ ಮನೆಗೆ ಬಂದ ನನ್ನ ತಂಗಿಯ ೧೦ ವರ್ಷದ ಮತ್ತು ೧೩ ವರ್ಷದ ಪೋರರು ಪುಸ್ತಕ ಹಿಡಿದು ಕೊಂಡು ಕೂತಿದ್ದು ನೋಡಿ ill manners ಎಂದು ಗದರಿಸಿದ್ದೆ. ನನ್ನ ಅಳಿಯಂದಿರು voracious readers . ಹಾಗಂತ ಓದುವುದಕ್ಕೆ ಸಂಪೂರ್ಣ ಸ್ವೇಚ್ಛೆ ಇರಬಾರದು ಎಂದು ನಂಬುವವನು ನಾನು. ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೋದಾಗ ಸರತಿಯಲ್ಲಿ ಕಾಯುವ ಸಮಯ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡ ಲೇಖನಗಳನ್ನು ಓದಿ ಕೊಳ್ಳುತ್ತೇನೆ. ಕಳೆದ ವಾರ ಇಲ್ಲಿನ ಜರೀರ್ ಪುಸ್ತಕ ಮಳಿಗೆಗೆ ಹೋದಾಗ ನನ್ನ ನಾಲ್ಕು ವರ್ಷದ ಮಗಳನ್ನೂ ಕರೆದು ಕೊಂಡು ಹೋಗಿದ್ದೆ. ಅಲ್ಲಿ ತನ್ನ ಕಣ್ಣಿಗೆ ಕಂಡ ಪುಸ್ತಕ ವೊಂದನ್ನು ಶೆಲ್ಫ್ ನಿಂದ ತೆಗೆದು ಅಲ್ಲೇ ನೆಲದ ಮೇಲೆ ಕೂತು ಪುಸ್ತಕ ನೋಡುವುದರಲ್ಲಿ ಮಗ್ನಳಾದಳು ನನ್ನ ಮಗಳು. ಓದಲಿಕ್ಕೆ ಬರುವುದಿಲ್ಲ ಆದರೂ ಪುಸ್ತಕದ ಮೇಲೆ ಅತೀವಾಸಕ್ತಿ ಅವಳಿಗೆ. ಅಂತರ್ಜಾಲದಲ್ಲಿ ಒಂದು ಚಿತ್ರ ಕಣ್ಣಿಗೆ ಬಿತ್ತು. ಸೈಕಲ್ ಸವಾರಿ ವ್ಯಕ್ತಿಯೊಬ್ಬ ಸವಾರಿ ನಿರತನಾಗಿರುವಾಗಲೇ ಪುಸ್ತಕವನ್ನು ಓದುತ್ತಿದ್ದಾನೆ. ಇವನ ಓದುವ ಚಟ ಎಲ್ಲರಿಗಿಂತ one step ahead , ಏನಂತೀರಾ?

ಪುಸ್ತಕದ ಮಳಿಗೆಯಲ್ಲಿ ಪುಸ್ತಕದಲ್ಲಿ ಮಗ್ನಳಾದ ಮಗಳ ಚಿತ್ರವನ್ನೂ, ಸೈಕಲ್ ಸವಾರನ ಚಿತ್ರವನ್ನೂ ಹಾಕಿದ್ದೇನೆ, ಓದಲು ಸ್ಫೂರ್ತಿ ಸಿಗಬಹುದೇ ಎಂದು ನೋಡಿ.

ಪಾಳು ಬಿದ್ದ ‘ಸುದ್ದಿ’ ಮನೆ

ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದ್ನಂತೆ. ಆದರೆ ಇತ್ತೀಚೆಗೆ ದಿಲ್ಲಿಯ ೩೩ ವರ್ಷ ಪ್ರಾಯದ ನಿರುದ್ಯೋಗಿ ಯುವಕ ತನ್ನ ತಂದೆಯನ್ನೇ ಕೊಂದು ಬಿಟ್ಟ. ತಡೆಯಲು ಬಂದ ತಾಯಿಯನ್ನು ತದುಕಿದ. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾದ ಸುದ್ದಿ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ರೀತಿಯ “ಕ್ರೈಮ್ಸ್” ಆಫ್ ಇಂಡಿಯಾ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ವಿಷಾದಕರ. ತನ್ನ ತಂದೆಯ ಕೊಲೆ ಮಾಡಿದ ಈ ವ್ಯಕ್ತಿ ಕೆಲ ತಿಂಗಳ ಹಿಂದೆಯೂ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದ, ಆದರೆ ಹೆತ್ತ ಕರುಳು ಈ ದುರುಳನನ್ನು ಕ್ಷಮಿಸಿ ಪೊಲೀಸರಿಂದ ಬಿಡಿಸಿ ಕೊಂಡು ಬಂದಿತ್ತು. ಬಂಧ ಮುಕ್ತನಾಗಿ ಹೊರಬಂದ ಈ ಯುವಕ ತನ್ನ ತಂದೆ ಪಾಲಿಗೆ ಯಮನಾಗಿ ಎರಗಿದ.

ಗುಜರಾತಿನಲ್ಲಿ ೮೫ ರ ಪ್ರಾಯದ ವೃದ್ಧ ಅರ್ಚಕರನ್ನು ಬಡಿದು ಕೊಂಡರು ಆಗಂತುಕರು. ಪ್ರಾಯಕ್ಕೆ ಬಂದ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಓಡಿದ್ದಕ್ಕೆ ಹುಡಗಿಯ ತಂದೆ ಮತ್ತು ನೆಂಟರಿಷ್ಟರು ಕ್ರುದ್ಧರಾಗಿ ಹುಡುಗನ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿದರು. ಎಸಗಿದ ಕ್ರೌರ್ಯ ಸಾಲದೆಂಬಂತೆ ಈ ಅತ್ಯಾಚಾರಕ್ಕೆ ಹುಡುಗಿಯ ಕಡೆಯ ಮಹಿಳೆಯರ ಬೆಂಬಲವೂ ಇತ್ತು. ಕೆಲ ತಿಂಗಳುಗಳ ಹಿಂದೆ ಪರಾಟಾ ಗಾಗಿ ಹೊಡೆದಾಡಿ ಒಬ್ಬ ಸತ್ತ.

ತಮಿಳು ನಾಡಿನ ವಿದ್ಯಾಮಂತ್ರಿಯೊಬ್ಬ ೧೦ ನೆ ತರಗತಿ ಪರೀಕ್ಷೆಗೆ ಕೂತು  ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಹೈರ್ ಮಾಡಿದ. ಶೌಚಾಲಯದಲ್ಲಿ ಶೌಚಕ್ಕೆ ಕೂತ ಒಬ್ಬ ಹೊರಬರಲು ಹೆಚ್ಚು ಸಮಯ ತೆಗೆದು ಕೊಂಡ ಎಂದು ತನ್ನ ಸರತಿಗಾಗಿ ಕಾಯುತ್ತಿದ್ದ ಮತೊಬ್ಬ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಬಿಟ್ಟ.

ಚೆನ್ನೈ ನಗರದಲ್ಲಿ ಶಾಲಾ ಬಾಲಕನೊಬ್ಬ ತನ್ನ ಅದ್ಯಾಪಿಕೆಯ ಮೇಲೆ ಚೂರಿಯಿಂದ ಆಕ್ರಮಿಸಿ ಕೊಲೆ ಮಾಡಿದ. ಅದ್ಯಾಪಿಕೆ ತನ್ನನ್ನು ಟೀಕಿಸಿದಳು ಎನ್ನುವ ಕಾರಣಕ್ಕೆ ನಾನಾಕೆಯನ್ನು ಕೊಂದೆ ಎಂದ ಬಾಲಕ. ಪ್ರೇಮಿಗಳ ದಿನಾಚರಣೆಯಂದು ಇಬ್ಬರು ಬಾಲಕರು ಸೇರಿ ತಮ್ಮ ಗೆಳೆಯನ ಹತ್ಯೆ ಮಾಡಿದರು. ಹುಡುಗಿಯ ವಿಷಯದಲ್ಲಿ ಈ ಕೊಲೆ. ಹದಿಹರೆಯದ ಪ್ರೇಮ ಹುಚ್ಚು ಹೊಳೆ ಎನ್ನುವುದಕ್ಕೆ ಜ್ವಲಂತ ನಿದರ್ಶನ ಈ ಘಟನೆ.

ನೈತಿಕ ಮೌಲ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವ ನಮ್ಮ ದೇಶದಲ್ಲಿ ಈ ತೆರನಾದ ಘಟನೆಗಳು ಜರುಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನೈತಿಕ ಮೌಲ್ಯಗಳ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳದ, ಮಾರ್ಗದರ್ಶನಕ್ಕಾಗಿ ನಮ್ಮ ಕಡೆ ನೋಡುತ್ತಿದ್ದ ಪಾಶ್ಚಾತ್ಯ ವಿಶ್ವಕ್ಕಿಂತ ನಾವು ಕಡೆಯಾಗುತ್ತಿದ್ದೆವೆಯೇ? ಹಿಂಸೆ, ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ತಡಮಾಡದೆ ತಕ್ಕ ಶಿಕ್ಷೆ ಪ್ರದಾನ ಮಾಡುತ್ತಿದ್ದೇವೆಯೇ? ದಿನ ನಿತ್ಯ ಈ ರೀತಿಯ ಸುದ್ದಿಗಳನ್ನು ಓದುವ, ತಪ್ಪಿತಸ್ಥರು ರಾಜಾರೋಷವಾಗಿ ಜಾಮೀನಿನ ಮೇಲೆ ಓಡಾಡುವುದನ್ನು ನೋಡುವ ನಮ್ಮ ಎಳೆಯರು ಹಿಂಸೆಯ, ದಾರಿ ತುಳಿದರೆ ಭವಿಷ್ಯದಲ್ಲಿ ಭಾರತದ ಕತೆ ಏನಾದೀತು?

  ಒಟ್ಟಿನಲ್ಲಿ ಸಮಾಜ ತುಳಿಯುತ್ತಿರುವ ಹಾದಿ ನಮ್ಮ ಪೂರ್ವಜರ ದಾರಿಗಿಂತ ವಿಭಿನ್ನವಾಗಿದೆ ಎಂದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮನುಷ್ಯ ಸಂಯಮ, ತಾಳ್ಮೆಯ ಕಲೆಯನ್ನು ರೂಢಿಸಿ ಕೊಳ್ಳಬೇಕಿದೆ. ತಾಳ್ಮೆ, ಸಂಯಮ, ಬದುಕಿನ ಎಂಥಾ ಪರೀಕ್ಷೆಗಳನ್ನೂ ನಿಭಾಯಿಸಬಲ್ಲುದು ಎನ್ನುವುದಕ್ಕೆ ಧರ್ಮ ಗ್ರಂಥದ ಸೂಕ್ತ ಇಲ್ಲಿದೆ…

“ಕಾಲದಾಣೆ. ನಿಸ್ಸಂಶಯವಾಗಿಯೂ ಮನುಷ್ಯ ಹಾದಿ ತಪ್ಪಿದ್ದಾನೆ. ಸತ್ಕರ್ಮಗಳನ್ನು ಮಾಡುವವರೂ, ಸತ್ಯಕ್ಕಾಗಿ ಶ್ರಮಿಸುವವರೂ, ಸಂಯಮವನ್ನು ಪಾಲಿಸುವವರನ್ನು ಹೊರತುಪಡಿಸಿ”.