ಅತ್ಯಾಚಾರದ ಗರ್ಭಧಾರಣೆಗೆ “ದೈವೇಚ್ಚೆ” ಕಾರಣ

ಶೀಲಭಂಗದಿಂದ ಅಥವಾ ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಅಮೆರಿಕೆಯ ರಿಪಬ್ಲಿಕನ್ ಪಕ್ಷದ ನಾಯಕನೊಬ್ಬ. ಈಗ ಈ ಮಾತು ಅಮೆರಿಕೆಯ ರಾಜಕೀಯ ವಲಯದಲ್ಲಿ ಕಂಪನ ತರುತ್ತಿದೆ. ಡೆಮೊಕ್ರಾಟ್ ಪಕ್ಷದವರು ಈ ಮಾತನ್ನು ಹಿಡಿದು ಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾತುರರಾಗಿದ್ದಾರೆ. ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಬಲಪಂಥೀಯ ಎಂದು ರಿಪಬ್ಲಿಕನ್ ಪಕ್ಷ ಪರಿಗಣಿಸಲ್ಪಟ್ಟಿದೆ ಅಮೆರಿಕೆಯಲ್ಲಿ. ತಲೆಕೆಟ್ಟ ಕೆಲವು ಕ್ರೈಸ್ತ ಪಾದ್ರಿಗಳೂ ಈ ಪಕ್ಷವನ್ನ ಬೆಂಬಲಿಸುತ್ತಾರೆ. ಬಲಪಂಥವೋ, ಎಡ ಪಂಥವೋ, ನಡು ಪಂಥವೋ, ಪಂಥ ಯಾವುದೇ ಇರಲಿ ಮಾನವೀಯ ಮೌಲ್ಯಗಳ ವಿಷಯ ಬಂದಾಗ ಸರಿಯಾದ ವಿವೇಚನೆ, ತೋರದ ಪಂಥ ತಿಪ್ಪೆ ಸೇರುವುದಕ್ಕೆ ಮಾತ್ರ ಲಾಯಕ್ಕು.

Let us get back to rape-induced pregnancy. ಮತ್ತೊಮ್ಮೆ ಗರ್ಭ ಧಾರಣೆಗೆ ಬರೋಣ. ಅತ್ಯಾಚಾರದಿಂದ ಉಂಟಾದ ಗರ್ಭಧಾರಣೆ ದೈವೇಚ್ಚೆ ಎಂದ ಈತನ ಹೆಸರು ರಿಚರ್ಡ್ ಮುರ್ಡೋಕ್. ಇಂಡಿಯಾನ ರಾಜ್ಯದಿಂದ ಸೆನೆಟ್ ಗಾಗಿ ಸ್ಪರ್ದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ. ತಾನಾಡಿದ  ಮಾತಿನಿಂದ ಎದ್ದ ವಿವಾದ ಈತನನ್ನು ವಿಚಲಿತನನ್ನಾಗಿಸಿದೆ.  ಈಗ ಈತ ಹೇಳುವುದು, “ನಾನು ಹೇಳಿದ ಅರ್ಥವೇ ಬೇರೆ. ನನ್ನ ಪಾಯಿಂಟ್ ಏನೆಂದರೆ ದೇವರು ಜೀವದ ಸೃಷ್ಟಿಗೆ ಕಾರಣ, ದೇವರಿಗ ಅತ್ಯಾಚಾರ ಇಷ್ಟವಿಲ್ಲ, ಅತ್ಯಾಚಾರ ಒಂದು horrible thing” ಈ ಸಮಜಾಯಿಷಿ ಈತನದು.

ಗರ್ಭಧಾರಣೆ ದೈವೇಚ್ಚೆ ಎಂದಾಗ ಒಂದು ಮಾತು ನೆನಪಿಗೆ ಬರುತ್ತದೆ. ಅದೆಂದರೆ “ತೇನ ವಿನಾ ತೃಣಮಪಿ ನ ಚಲತಿ”. ಈ ಮಾತಿನ ಅರ್ಥ ಒಂದು ಹುಲುಕಡ್ಡಿ ಅಲುಗಾಡಲೂ ಪರಮಾತ್ಮನ ಅಪ್ಪಣೆ ಬೇಕು. ಪವಿತ್ರ ಕುರ್’ಆನ್ ನ ಆರನೇ ಅಧ್ಯಾಯ, ೫೯ ನೇ ಸೂಕ್ತದಲ್ಲೂ ಇದೇ ಅರ್ಥ ಬರುವ ಮಾತಿದೆ. “Not a leaf fall but with His Knowledge”. ಈಗ ಈ ಮೇಲಿನ ಸೂಕ್ತಗಳನ್ನು ಉದ್ಧರಿಸಿ ಜಗತ್ತಿನಲ್ಲಿ ನಡೆಯುವ ಪ್ರತೀ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ, ಮೋಸ ದಗಾ, ವಂಚನೆ… ಎಲ್ಲವಕ್ಕೂ ತಂದು ನಿಲ್ಲಿಸಲಿ ಪರಮಾತ್ಮನನ್ನು ಸಾಕ್ಷಿಯಾಗಿ.

 

ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.