ಈ ಸರೀ ರಾತ್ರೀಲಿ ಅವಳಿಗೆ ಹೊರಗೇನು ಕೆಲಸ?

ಈ ಸರೀ ರಾತ್ರೀಲಿ ಅವಳಿಗೇನು ಕೆಲಸ ಹೊರಗೆ?…. ಈ ಥರ ಡ್ರೆಸ್ ಮಾಡಿಕೊಂಡರೆ ಇನ್ನೇನು?…ಆ ಜಾಗದಲ್ಲಿ ಅವಳೇನು ಮಾಡುತ್ತಿದ್ದಳು?
ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು. ತುಂಟ ನಗೆ ತುಂಬಿದ ಪ್ರಶ್ನೆಗಳು, ಗಂಡು ಮತ್ತು ಹೆಣ್ಣು, ಇಬ್ಬರಿಂದಲೂ.

ಓರ್ವ ಹೆಣ್ಣು ಬಲಾತ್ಕಾರಕ್ಕೆ ತುತ್ತಾದಾಗ ಮೇಲಿನ ಪ್ರಶ್ನೆಗಳ ಧಾಳಿ. ಡಿಫೆನ್ಸ್ ಲಾಯರ್ ಕಡೆಯಿಂದಲ್ಲ, ಜನಸಾಮಾನ್ಯ ನ ಕಡೆಯಿಂದ . ಈ ಪ್ರಶ್ನೆ ಬರೀ ನಮ್ಮಂಥ ಹಿಂದುಳಿದ ದೇಶಗಳ ಜನರಿಂದ ಮಾತ್ರವಲ್ಲ, ಮಂಗಳ ಗ್ರಹಕ್ಕೆ ಜನರನ್ನು ಕಲಿಸಲು ಸಿದ್ಧತೆ ನಡೆಸುವ ಅಮೇರಿಕಾ ದಂಥ ದೇಶದವರದೂ ಇದೇ ನಿಲುವು. (ಭೂಮಿಯ ಪಾಡನ್ನು ನಾಯಿ ಪಾಡು ಮಾಡಿಯಾಯಿತು, ಈಗ ಮಂಗಳದ ಕಡೆ ಪಯಣ, ಅದನ್ನೂ ಹಾಳುಗೆಡವಲು).

ಅಮೆರಿಕೆಯ ‘ಮೇರಿ ವಿಲ್’ ಪಟ್ಟಣದಲ್ಲಿ ೧೪ ರ ವರ್ಷದ ಬಾಲಕಿಯೊಬ್ಬಳ ಮೇಲೆ ಫುಟ್ ಬಾಲ್ ಆಟಗಾರನೊಬ್ಬ ಅತ್ಯಾಚಾರ ಎಸಗಿ ಆಕೆಯ ಮನೆಯ ಹತ್ತಿರವೇ ಆಕೆಯನ್ನು ಬಿಸಾಡಿ ಹೋದ. ಅವನ ಮಿತ್ರ ಈ ನಡತೆಗೆಟ್ಟ ಕೃತ್ಯದ ಮೊಬೈಲ್ ಶೂಟಿಂಗ್ ಸಹ ನಡೆಸಿದ. ಕೊರೆಯುವ ಚಳಿಯಲ್ಲಿ ಆ ಬಾಲೆ ರಾತ್ರಿ ಕಳೆದಳು. ಸರಿಯಾದ ತನಿಖೆಯ ಕೊರತೆ ಮತ್ತು ಹುಡಗಿಯ ಅಸಹಕಾರದ ಕಾರಣ ತಪ್ಪಿತಸ್ಥ ರನ್ನು ಕೋರ್ಟ್ ಬಿಡುಗಡೆ ಮಾಡಿತು. ಹುಡುಗನ ಪರ ವಾದ ಮಾಡಿದ ಡಿಫೆನ್ಸ್ ಲಾಯರ್ ಫಾಕ್ಸ್ ನ್ಯೂಸ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ” ಆಕೆಗೆ ಸಂಭವಿಸಿದ್ದು ಸರಿ ಎಂದು ನಾನು ಹೇಳ್ತಾ ಇಲ್ಲ, ಆದರೆ ಆ ಸರೀ ರಾತ್ರೀಲಿ ಆಕೆ ಹೊರಕ್ಕೆ ಹೋಗಿದ್ದಾದರೂ ಏಕೆ?” ಎಂದು ಪ್ರಶ್ನೆ ಮಾಡಿದ. ಮಾಡದೆ ಏನು ಮಾಡಿಯಾನು? ಅತ್ಯಾಚಾರಕ್ಕೆ ಒಳಗಾಗಿದ್ದು ಯಾರದೋ ಹೆಣ್ಣು ಮಗಳು. ತನ್ನ ಮಗಳೋ, ತಂಗಿಯೋ ಆ ಸ್ಥಾನದಲ್ಲಿದ್ದರೆ ಗಲ್ಲು ಶಿಕ್ಷೆ ಕೊಡ ಮಾಡಲು ತನ್ನೆಲ್ಲಾ ಶ್ರಮ ವ್ಯಯಿಸುತ್ತಿದ್ದ. ಕೋರ್ಟಿನ ಛಾವಣಿ ಹರಿಯುವಂತೆ ಅಬ್ಬರಿಸುತ್ತಿದ್ದ.

ನವದೆಹಲಿಯ ನಿರ್ಭಯ ಅತ್ಯಾಚಾರದ ಗಲಾಟೆ ಗೊತ್ತೇ ಇದೆಯಲ್ಲ. ಸಂಸ್ಕಾರ ವಿಹೀನ, ನಿರ್ದಯೀ ಕಾಮ ಪಿಪಾಸುಗಳ ಪರ ವಕಾಲತ್ತು ವಹಿಸಿದ ವಕೀಲನೂ ಅತ್ಯಾಚಾರಿಗಳ ರೀತಿಯ ನಿರ್ದಯಿಯೇ. ಕಾಮ ಪಿಪಾಸುಗಳು ತಮ್ಮ ಮದನ ದಂಡದ ಪ್ರಯೋಗ ಮಾಡಿದರೆ ಇವನು ತಾನು ಕಲಿತ ವಕ್ರ ಬುದ್ಧಿಯ ವಕೀಲಿತನವನ್ನು ಬಳಸಿ ವಿವೇಚನೆಯ ಮೇಲೆ ತನ್ನದೇ ರೀತಿಯ ಅತ್ಯಾಚಾರವನ್ನು ಮಾಡುತ್ತಾನೆ. ಈ ವಕೀಲ, “ಲಿವಿಂಗ್ ಟುಗೆದರ್” ಅರೆಬರೆ ಬಟ್ಟೆ, ಬಾಯ್ ಫ್ರೆಂಡ್ ಜೊತೆ ಹೊರಗೆ ತಿರುಗೋದು ಮಾಡಿದಾಗ ಅತ್ಯಾಚರವನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಬೇಡಿ” ಎಂದು ಕಿವಿ ಮಾತನ್ನು ಹೇಳುತ್ತಾನೆ.

ಮನೆಯಲ್ಲಿ ಸದಾಚಾರ ಹೇಳಿ ಕೊಡಬೇಕಾದ ತಂದೆ ತಾಯಿ ಧನದಾಸೆಗೆ ಬಿದ್ದು ಮಕ್ಕಳನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟು ದುಡಿಯಲು ಹೊರಟರೆ ಆಗುವ ಅನಾಹುತ ಇದು. ಹೆಣ್ಣನ್ನು ಗೌರವಿಸಲು, ಆದರಿಸಲು ಕಲಿಸದ ಸಮಾಜ ತನ್ನ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿಗೆ ತಾನೇ ಜವಾಬ್ದಾರೀ ಹೊರಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡು ಮಾಡಿದ್ದೆಲ್ಲಾ ಸರಿ, ಅವನು ಎಷ್ಟಿದ್ದರೂ ಗಂಡು ತಾನೇ ಎನ್ನುವ ಮಾತುಗಳ ಮುಕ್ತ ಲೈಸನ್ಸ್ ಚಾರಿತ್ರ್ಯವಿಹೀನ ಗಂಡುಗಳಿಗೆ ಹಿರಿಯರು ಕೊಡಮಾಡಿದಾಗ ಅವನು ತನ್ನ ಪಶು ಸಂಸ್ಕಾರ ವನ್ನಲ್ಲದೆ ಮತ್ತೇನನ್ನು ಮೆರೆಯಲು ಸಾಧ್ಯ?

ಚಾರಿತ್ರ್ಯ, ಶೀಲ, ಒಳ್ಳೆಯ ನಡತೆ, ಹೆಣ್ಣಿಗೆ ಮಾತ್ರ ಸೀಮಿತವಾಗಬಾರದು, ಅವು ಗಂಡಿಗೂ ಅನ್ವಯಿಸಬೇಕು. ಆಗ ಮಾತ್ರ ಬೀದಿನಾಯಿ ಬುದ್ಧಿಯ ಗಂಡುಗಳಿಂದಲೂ, ಕಂತ್ರಿ ಬುದ್ಧಿಯ ವಕೀಲರಿಂದಲೂ ನಾವು ನಮ್ಮ ಹೆಣ್ಣು ಮಕ್ಕಳು ಬಚಾವಾಗಬಹುದು.

 

ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ನಿನ್ನ ಸ್ತನಗಳು ಎಷ್ಟು ದಪ್ಪ?

ಮನೆಗೆಲಸಕ್ಕೆಂದು ಕೆಲಸಕ್ಕಿಟ್ಟರೆ ಆ ಮನೆಯ ರಹಸ್ಯವನ್ನು ಟಾಮ್ ಟಾಮ್ ಹೊಡೆದು ಹೇಳಬಾರದು. ಆದರೆ ಮನಸ್ಸು ಕೆಟ್ಟಾಗ, ಯಜಮಾನರು ತನ್ನನ್ನು ಮನುಷ್ಯರಂತೆ ಕಾಣಲು ವಿಫಲರಾದಾಗ ಅಂಥ ಜನರ ಮೇಲೆ ಹೇಸಿಗೆ ಹುಟ್ಟಿ ತಮ್ಮ ಅನುಭವವನ್ನು ಹೇಳಿ ಎದೆ ಹಗುರ ಮಾಡಿಕೊಳ್ಳುತ್ತಾರೆ ಕೆಲವರು. ಜರ್ಮನಿಯಲ್ಲಿ ಪೋಲಂಡ್ ದೇಶದ ಆಯಾಗಳು ಹೆಚ್ಚು. ಬರ್ಲಿನ್ ಗೋಡೆ ಬಿದ್ದ ನಂತರ ಪೋಲಂಡಿ ನಿಂದ ೫ ಲಕ್ಷಕ್ಕೂ ಹೆಚ್ಚು ಆಯಾಗಳು ಕೆಲಸಕ್ಕಾಗಿ ಜರ್ಮನಿಗೆ ಬಂದರು. ಜರ್ಮನಿ ಯೂರೋಪಿನ ಮಾತ್ರವಲ್ಲ ಜಗತ್ತಿನ ಶ್ರೀಮಂತ ದೇಶಗಳಲ್ಲೊಂದು. ಜರ್ಮನಿ ಸುಶಿಕ್ಷಿತ ದೇಶವಾದ್ದರಿಂದ ಎಲ್ಲರೂ ತಿಳಿದದ್ದು ಬಹಳ ಸಂಭಾವಿತರು, ಅತ್ಯಂತ ಶುಚಿತ್ವವಿರುವುವರು, ಶಿಸ್ತಿನ ಜನ ಎಂದು. ಆದರೆ ಈ ಆಯಾ ಅದೆಲ್ಲಾ ಸುಳ್ಳಿನ ಸರಮಾಲೆ, ಸತ್ಯ ನೋಡಿ ಇಲ್ಲಿದೆ ಎಂದು ಸುರುಳಿ ಬಿಚ್ಚಿಟ್ಟಳು ತಾನು ಬರೆದ ಪುಸ್ತಕ Under German Beds ರಲ್ಲಿ.

ಕೆಲಸಕ್ಕೆ ಸೇರುವ ಮುಂಚಿನ ಫೋನ್ ಸಂದರ್ಶನದಲ್ಲಿ ಮನೆ ಯಜಮಾನ ಕೇಳುವ ಪ್ರಶ್ನೆ “ ನಿನ್ನ ಮೊಲೆಗಳು ದಪ್ಪ ಇವೆಯೇ?” ಕೆಮ್ಪ್ಪು ಬಣ್ಣದ ಚಡ್ಡಿ ಧರಿಸುತ್ತೀಯಾ…. ಹೇಗಿದೆ ಪ್ರಶ್ನಾವಳಿ. ನೀನು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀಯಾ, ಎದ್ದ ಕೂಡಲೇ ಏನು ಮಾಡುತ್ತೀಯ ಎಂದು ಕೇಳೋ ಬದಲು ಸ್ತನಗಳ ಗಾತ್ರದ ಬಗ್ಗೆ ಚಿಂತೆ.

ಒಬ್ಬ ಯಜಮಾನನಂತೂ ಅವಳ ಮುಂದೆ ಸಂಪೂರ್ಣ ವಿವಸ್ತ್ರನಾಗಿ ನಿಂತು ಬಿಡುತ್ತಿದ್ದನಂತೆ. ಇದ್ಯಾವ ಪರೀಕ್ಷೆಯೋ?

ಜರ್ಮನ್ನರು ಕೊಳಕು ಅಂತ ಈಕೆಯ ಅಭಿಪ್ರಾಯ. ಅವರ ಬೆಡ್ ಕೆಳಗೆ ಆಗ ತಾನೇ ಕೀಳಿಸಿಕೊಂಡ ಹಲ್ಲು, ಕೋಳಿ ಮಾಂಸದ ತುಂಡು ಹೀಗೇ ಬೇಡದ ವಸ್ತುಗಳು ಬಿದ್ದಿರುತ್ತವಂತೆ. ಕೆಲವೊಮ್ಮೆ ಹಣವನ್ನೂ ಸಹ ಬೇಕಾ ಬಿಟ್ಟಿ ಎಸೆದಿರುತ್ತಾರಂತೆ ಈಕೆಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲೆಂದು. ಇದನ್ನು ಓದಿದ ನಂತರ ತಲೆ ಹರಟೆ ಪ್ರಶ್ನೆ ಕೇಳದೆ ಕೆಲಸಕ್ಕೆ ಬೇಕಾದ ಪ್ರಶ್ನೆ ಮಾತ್ರ ಕೇಳಿ, ಇಲ್ಲದಿದ್ದರೆ ನಿಮ್ಮನ್ನು ಉದಾಹರಣೆಯಾಗಿಸಿ ಪುಸ್ತಕವೊಂದು ಬಂದೀತು ಮಾರುಕಟ್ಟೆಗೆ.