ಹಿಶಾಮ್

DSCF0001UKG ಕಲಿಯುತ್ತಿರುವ ನನ್ನ ಮಗ ಹಿಶಾಮ್ ನನ್ನು ಮಧ್ಯಾಹ್ನ ಶಾಲೆಯಿಂದ ಮನೆಗೆ ಕರೆತಂದೆ. ಮನೆ ತಲುಪಿದ ಸ್ವಲ್ಪ ನಂತರ ಹೆಂಡತಿ ಮಗನ ಸ್ಕೂಲ್ ಬ್ಯಾಗ್ ಎಲ್ಲಿ ಎಂದು ಕೇಳಿದಳು. ಮಗ ತಂದಿದ್ದೇನೆ ಎಂದರೂ ಕಾಣಲಿಲ್ಲ. ನಾನು ಕಾರಿನಲ್ಲಿರಬಹುದೆಂದು ಹೋಗಿ ನೋಡಿದರೆ ಅಲ್ಲೂ ಇಲ್ಲ. ಮರಳಿ ಮತ್ತೊಮ್ಮೆ ವಿಚಾರಿಸಿದಾಗ ಪೆದ್ದನ ಹಾಗೆ ನಟಿಸಿದ ಹಿಶಾಮ್. ಎಂಥಾ ಮರೆಗುಳಿ ನೀನು ಎಂದು ಕೋಪದಿಂದ ಅವನ ಕಿವಿಯನ್ನು ಹಿಂಡಿ ಮತ್ತೊಮ್ಮೆ ಸುಡುಬಿಸಿಲಿನಲ್ಲಿ ಶಾಲೆಯ ಕಡೆ ಹೊರಟೆ. ಮನೆಯಿಂದ ಶಾಲೆ ೨೦ ನಿಮಿಷದ ಡ್ರೈವ್.  ಶಾಲೆಯಲ್ಲಿ ವಿಚಾರಿಸಿದಾಗ ಅಲ್ಲೂ ಇಲ್ಲ. ಸಿಕ್ಕರೆ ತೆಗೆದಿಡುತ್ತೇವೆ ಎಂದು ವಾಚ್ ಮ್ಯಾನ್ ಹೇಳಿದ. ಸರಿ ಆಫೀಸ್ ಗೆ ಮರಳಿ ಬಂದು ಮನೆಗೆ ಫೋನ್ ಮಾಡಿ ಹೇಳಿದೆ ಶಾಲೆಯಲ್ಲೂ ಇಲ್ಲ ಬ್ಯಾಗ್ ಎಂದು. ಹೆಂಡತಿ ಮತ್ತೊಂದು ಸಲ ನೋಡುತ್ತೇನೆ ಎಂದಾಗ ನಾನಂದೆ ಅದೇನು ಕಡ್ಲೆ ನಾ ಕಾಣದೇ ಇರೋಕ್ಕೆ, ಶಾಲೆಯಲ್ಲೇ ಇರಬೇಕು ಬಿಡು ಎಂದು. ೨ ನಿಮಿಷದ ನಂತರ ಮನೆಯಿಂದ ಫೋನ್. ಬ್ಯಾಗ್ ಸಿಕ್ತು ಅಂತ. ಸರಿ ನನ್ನ ಲಂಚ್  ಟೈಮ್ ಗೆ ಮನೆಗೆ ಬಂದು ಮಗನಿಗೆ ಸಾರಿ ಎಂದಾಗ ಕಿವಿ ಹಿಂಡಿಸಿ ಕೊಂಡಿದ್ದನ್ನು ಆಗಲೇ ಮರೆತಿದ್ದ ಮಗ ಕೇಳಿದ ಯಾಕಪ್ಪಾ ಸಾರಿ ಎಂದು.  ನಡೆದದ್ದೇನೆಂದರೆ ಭಾರತದಿಂದ ನನ್ನ ಸೋದರಿ ಮಕ್ಕ ಸಂದರ್ಶನಕ್ಕೆ ಸೌದಿ ಬಂದಿದ್ದಳು. ಮನೆಗೆ ಬಂದ ನನ್ನ ಮಗನ ಕೈಯಿಂದ ಬ್ಯಾಗ್ ತೆಗೆದು ಅವನ ರೂಮಿನಲ್ಲಿ ಇಟ್ಟ ನಂತರ ಸಂಪೂರ್ಣವಾಗಿ ಮರೆತಿದ್ದಳು. ಎಂಥಾ ಮರೆಗುಳಿ ಇರಬೇಕು. ಅವಳ ಕಡೆಯಿಂದ ಪಾಪ ನನ್ನ ಮಗ ತನ್ನ ಕಿವಿಯನ್ನು ನನ್ನಿಂದ ವೈಂಡ್ ಮಾಡಿಸಿಕೊಂಡ.