ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಹಂದಿಯೊಂದಿಗೆ ಸೆಣಸಬಾರದು

“ಹಂದಿಯೊಂದಿಗೆ ಸೆಣಸಬಾರದು, ನೀವು ಕೊಳಕಾಗುವುದು ಮಾತ್ರವಲ್ಲ, ಹಂದಿಗೆ ಇದು ಖುಷಿಯನ್ನೂ ಕೊಡುತ್ತದೆ”.

ವಾದ ವಿವಾದ, ಕಲಹ, ವೈಮನಸ್ಸು ಅತಿಯಾಗಿ ವಾದಿಸುವವರು ಎಷ್ಟೇ ತಪ್ಪಿದ್ದರೂ ತಮ್ಮ ಪಟ್ಟನ್ನು ಬಿಡದೆ ವಿತಂಡವಾದಕ್ಕೂ, ತಾವೇ ಸರಿ ಎಂದು ತೋರಿಸುವ ಉತ್ಸುಕತೆಯಲ್ಲಿ ಮೊಂಡುತನ ತೋರಿಸಿ ಕತ್ತೆಯನ್ನು ಕುದುರೆಯಾಗಿಸುವ ಪರಿಶ್ರಮ ಪಟ್ಟಾಗ ಮೇಲಿನ ಗಾದೆ ಅನ್ವಯವಾಗುತ್ತದೋ ಏನೋ? ಮೊಂಡು ತನದಿಂದ  ಚರ್ಚೆಯ ಧಾಟಿ ತಪ್ಪುತ್ತದೆ, ಮತ್ತೊಬ್ಬನ ವಿಚಾರಗಳನ್ನ ಒಪ್ಪಿ ಬಿಟ್ಟರೆ ತಮ್ಮ ಅಹಂ ಗೆ ಆಗುವ ಪೆಟ್ಟನ್ನು ನೆನೆದು ತಾವೇ ಸರಿ ಎಂದು ಕೊನೆಯವರೆಗೂ ಸಾಧಿಸಲು ವ್ಯರ್ಥ ಪ್ರಯತ್ನ ಮಾಡುವ ಜನರನ್ನು ನಾವು ಕಂಡೇ ಇರುತ್ತೇವೆ. ಆಂಗ್ಲ ಭಾಷೆಯಲ್ಲಿ live with the difference ಎನ್ನುತ್ತಾರೆ ಮತ್ತು agreeing to disagree ಎಂದೂ ಹೇಳುತ್ತಾ ವಾದ ವಿವಾದಗಳು ಮಾತುಕತೆಯ ರೂಪ ತಾಳಿದಾಗ ಈರ್ವರೂ ಯಾವ ರೀತಿ ನಡೆದು ಕೊಳ್ಳಬೇಕು ಎನ್ನುವತ್ತ ಮೇಲಿನ ಎರಡು ಮಾತುಗಳು ಮಾರ್ಗದರ್ಶನವೀಯುತ್ತವೆ. ಆದರೆ ಸುಶಿಕ್ಷಿತರಲ್ಲೇ ಅಸಹನೆ ಮನೆ ಮಾಡಿದರೆ ಚರ್ಚೆ ಬೀದಿ ಜಗಳದ ರೀತಿ acrimonious ಆಗುತ್ತದೆಯೇ ಹೊರತು ಏನನ್ನೂ ಕಲಿಯಲು ಸಾಧ್ಯವಾಗುವುದಿಲ್ಲ.