ವಿಶ್ವರೂಪಂ, ನಿಜ ರೂಪಂ

ವಿಶ್ವ ರೂಪವೋ, ನಿಜ ರೂಪವೋ? ವಿಶ್ವರೂಪಂ ಚಿತ್ರ ಈಗ ವಿವಾದದಲ್ಲಿ. ಕಮಲ್ ಹಾಸನ್ ನಿರ್ಮಿತ ಈ ಚಿತ್ರ ಮುಸ್ಲಿಂ ಸಮುದಾಯವನ್ನು ಕೀಳಾಗಿ ಬಿಂಬಿಸಿದೆ ಎಂದು ಅದರ ವಿರುದ್ಧ ಮುಸ್ಲಿಂ ಸಾಂಸ್ಕೃತಿಕ ಸಂಘಟನೆಗಳು ತಮಿಳು ನಾಡಿನಲ್ಲಿ ಪ್ರದರ್ಶನ ನಡೆಸುತ್ತಿವೆ.
ಕಮಲ ಹಾಸನ್ ಓರ್ವ ಪ್ರತಿಭಾವಂತ ನಟ, ಆತನ ಪ್ರತಿಭೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡರೆ ಆತ ಬಾಲಿವುಡ್ ನಲ್ಲಿ ಮಹಾ ತಾರೆಯಾಗ ಬಹುದಿತ್ತು ಎಂದು ಸಿನಿ ಪ್ರಿಯರ ಅಭಿಪ್ರಾಯ. ದಕ್ಷಿಣ ಭಾರತೀಯನಾದ ಒಂದೇ ಕಾರಣಕ್ಕೆ ಆತ ಬಾಲಿ ವುಡ್ ನಲಿ ಮಿಂಚಲು ಆಗಲಿಲ್ಲ ಎಂದು ಆತನ ಅಭಿಮಾನಿಗಳ ಅಂಬೋಣ. ಆದರೆ ಬಾಲಿವುಡ್ ಗೆ ದಕ್ಷಿಣದ ಷೋಡಶಿಯರ ಬಗ್ಗೆ ತಕರಾರಿಲ್ಲ, ಪ್ರಾಬ್ಲಂ ಇರೋದು ‘ನಟ’ರ ಬಗ್ಗೆ ಮಾತ್ರ ಇರಬೇಕು.
ಕಮಲ ಹಾಸನ್ ಓರ್ವ ಟ್ಯಾಲೆಂಟೆಡ್ ನಟ ಎಂದು ನಾನೂ ಒಪ್ಪುತ್ತೇನೆ. ನಾನು ಅವನ ಚಿತ್ರ ನೋಡಿದ್ದು ಒಂದೇ ಒಂದು; ‘ಮರೋ ಚರಿತ್ರ’. ಈ ತೆಲುಗು ಚಿತ್ರ ದೊಡ್ಡ ದಾಖಲೆಯನ್ನೇ ಸೃಷ್ಟಿಸಿತ್ತು ೧೯೭೯ ರ ಸುಮಾರಿನಲ್ಲಿ. ಭಾವುಕತೆಗೆ, ಭಾವನೆಗೆ, ಭಾಷೆಯ ತೊಡಕು ಇಲ್ಲ ಎಂದು ಈ ಚಿತ್ರ ಅಮೋಘವಾಗಿ ಸಾರಿತ್ತು. ಚಿತ್ರದ ಕೊನೆಯಲ್ಲಿ ಹೀರೋ ಮತ್ತು ಹೀರೋಯಿನ್ ಸಾವನ್ನಪ್ಪುವ ದೃಶ್ಯ ಮನ ಕಲಕುವಂತಿತ್ತು.
‘ಮರೋ ಚರಿತ್ರ’ ಚಿತ್ರದ ನಂತರ ಕಮಲ ಹಾಸನ್ ದಕ್ಷಿಣದಲ್ಲಿ ದೊಡ್ಡ ಹೆಸರನ್ನೇ ಮಾಡಿದ. ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾನೆ, ವಿಶ್ವರೂಪಂ ಚಿತ್ರದ ಮೂಲಕ. ಸುಲಭ ಹಣ ಗಳಿಸಲು ಈತ ಒಂದು ಸಮುದಾಯದವರ ಭಾವನೆಗಳನ್ನು ಘಾಸಿ ಗೊಳಿಸಲು ಏ ಚಿತ್ರ ಮಾಡಿರ ಬಹುದೇ ಎನ್ನುವ ಸಂಶಯ ಜನರಲ್ಲಿ. ಪತ್ರಿಕೋದ್ಯಮದಲ್ಲೂ, ಸಾಹಿತ್ಯ ಕ್ಷೇತ್ರದಲ್ಲೂ ಹಗೆ, ಸಂಶಯ, ಧ್ವೇಷ, ಹರಡಲು ಟೊಂಕ ಕಟ್ಟಿ ನಿಂತ ಸಮೂಹದ ಜೊತೆ ಸಿನಿಮಾ ಮಂದಿಯೂ ಸೇರಿಕೊಂಡಾಗ ಆಗುವ ಪರಿಣಾಮ ನೆನೆದರೆ ಮೈ ನಡುಗುತ್ತದೆ.