ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ ಘಟನೆಗಳ, ಅಪರಾಧಗಳ ಕ್ರೌರ್ಯದ ಗಂಭೀರತೆಯನ್ನು ಗಮನದಲ್ಲಿಟ್ಟು ಕೊಂಡು ಈ ರೀತಿಯ retributory justice ವಿಧಾನ ಸರಿ ಎಂದು ವಾದಿಸುವರು.   

ಕಣ್ಣಿಗೆ ಕಣ್ಣು ಬೇಕು ಎನ್ನುವವರು ಒಂದು ಕಡೆಯಾದರೆ ಮಾನವೀಯ ದೃಷ್ಟಿಯಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಬೇಕು ಎನ್ನುವವರು ಮತ್ತೊಂದು ಕಡೆ. ಪ್ರತೀಕಾರ ಮಾನವ ಸಹಜ ಗುಣ. ಪುಟ್ಟ ಮಕ್ಕಳ ಪ್ರತಿಕ್ರಿಯೆಗಳೂ ಈ  ಮಾನವ ಸಹಜ ಗುಣಕ್ಕೆ ಅನುಗುಣವಾಗಿಯೇ ಇರುವುದನ್ನು ಗಮನಿಸಿದ್ದೇವೆ. ಕ್ಷಮಿಸುವವನು ಉದಾರಿ, ಆ ಗುಣ ಎಲ್ಲರಿಗೂ ಬರಬೇಕೆಂದಿಲ್ಲ. ಸಮಾಜ ಶಿಕ್ಷೆಯನ್ನು ಪ್ರತೀಕಾರ ಎನ್ನುವ ದೃಷ್ಟಿಯಿಂದ ನೋಡಬಾರದು, ಹಾಗೆ ನೋಡಿದಾಗ ಒಸಮಾ ಬಿನ್ ಲಾದೆನ್ ನ ವಧೆಯೂ ಸಮ್ಮತವೆನ್ನಿಸದು. ಒಸಾಮಾ ನ ವಧೆ ಸರಿ ಎಂದು ನಾಗರೀಕ ಸಮಾಜ ಖಂಡಿತವಾಗಿ ಒಪ್ಪುತ್ತದೆ. ಕೆಲವರು ಅವನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕಿತ್ತು ಎನ್ನುವವರೂ ಇದ್ದಾರೆ. ಆದರೆ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಮಾಡಿ ಕೊಳ್ಳ ಬೇಕಾದ ಸಿದ್ಧತೆಗಳನ್ನು ನೋಡಿದಾಗ, ಅದರ ಎಡರು ತೊಡರು ಗಳನ್ನು, ಗಮನಕ್ಕೆ ತೆಗೆದು ಕೊಂಡಾಗ targeted elemination ಹೆಚ್ಚು ಪ್ರಾಯೋಗಿಕ ಎಂದು ತೋರುತ್ತದೆ.  

ಪ್ರತಿಭಾವಂತಳಾದ ಇಂಜಿನಿಯರಿಂಗ್ ಪದವೀಧರೆಯಾದ ಇರಾನಿನ ಯುವತಿ ಅಮೀನ ಬೆಹ್ರಾಮಿಯ ಜೀವನ ಸಂಪೂರ್ಣವಾಗಿ ನಾಶವಾಗಿ ಹೋಯಿತು, ತನ್ನನ್ನು ಬಯಸಿದ ಮಾಜಿದ್ ಮೋವಾಹೆದಿ ಎನ್ನುವ ನರ ರಾಕ್ಷಸನಿಂದ. ಆಮಿನಾಳನ್ನು ವಿವಾಹವಾಗಲು ಬಯಸಿದ್ದ ಮಾಜಿದ್ ಈಕೆಯ ಅಸಮ್ಮತಿಯಿಂದ ಕ್ರುದ್ಧನಾದ. ನನ್ನನ್ನು ಮದುವೆಯಾಗದಿದ್ದರೆ ಕೊಲ್ಲುತ್ತೇನೆ ಎಂದು ಮೊದಲಿಗೆ ಬೆದರಿಸಿದ್ದ ಇವನು ಮನಸ್ಸು ಬದಲಿಸಿ ನನಗೆ ಸಿಗದ ಇವಳು ಬೇರಾರಿಗೂ ಸಿಗಕೂಡದು ಎಂದು ತೀರ್ಮಾನಿಸಿದ . ಒಂದು ಬಕೆಟ್ ತುಂಬಾ ಆಸಿಡ್ ಅನ್ನು ಅಮೀನಾಳ ಮುಖದ ಮೇಲೆ ಎರಚಿದ. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ ಈಕೆ ಭಯ ಹುಟ್ಟಿಸುವಂಥ ಕುರೂಪಿಯಾದಳು.  ಇರಾನಿನ ನ್ಯಾಯಾಲಯ ದಂಡವನ್ನೂ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತು ಮಾಜಿದ್ ನಿಗೆ. ಈ ತೀರ್ಪಿಗೆ ಅಮೀನ ಸಮ್ಮತಿಸಲಿಲ್ಲ. ನನ್ನ ನೋವನ್ನು  ಸ್ವತಃ ತನ್ನ ಕಣ್ಣು ಗಳನ್ನು ಕಳೆದು ಕೊಳ್ಳುವ ಮೂಲಕ ಮಾತ್ರ ಮಾಜಿದ್ ಅರಿಯಬಲ್ಲ ಎಂದು ವಾದಿಸಿದಳು. ಇದೇ ೧೪ ಮೇ, ೨೦೧೧ ರಂದು ಆಕೆಗೆ ಸಿಕ್ಕಿತು ಬಯಸಿದ ನ್ಯಾಯ. ಹತ್ತಿರದ ಆಸ್ಪತ್ರೆಗೆ ಮಾಜಿದ್ ನನ್ನು ದಾಖಲಿಸಿ ಅವನಿಗೆ ಅರಿವಳಿಕೆ ಕೊಟ್ಟು ಅವನ ಕಣ್ಣುಗಳಲ್ಲಿ ಆಸಿಡ್ ಪ್ರೋಕ್ಷಣೆ ಮಾಡಲು ತೀರ್ಮಾನ ವಾಯಿತು. ಈಗ ಆಗಮನವಾಯಿತು “ಕರುಣಾನಿಧಿ” ಜನರ ದಂಡು. amnesty international ನೇತೃತ್ವದ ಈ ದಂಡು ಹೇಳಿದ್ದು ಈ ರೀತಿ ನ್ಯಾಯ “ ಕಿರುಕುಳಕ್ಕೆ ಸಮಾನ” ಎಂದು. ಕ್ರೂರ ಮಾಜಿದ್ ಎಸಗಿದ ಕೃತ್ಯಕ್ಕೆ ಯಾವ ರೀತಿಯ ವಿಶ್ಲೇಷಣೆ ಕೊಡುತ್ತದೋ ಅಮ್ನೆಸ್ಟಿ. ಪಾಶ್ಚಾತ್ಯರ ಯಾವುದೇ ಮಾತಿಗೂ ಒಲ್ಲೆ ಎಂದು ಹೇಳಿ ಸುಖ ಅನುಭವಿಸುವ ಇರಾನ್ amnesty ಯ ಮಾತಿಗೆ ತಲೆ ಬಾಗಿತು. ಆದರೆ ಅಮೀನಾ ಮಾತ್ರ ತನ್ನ ಹೊರಾಟವನ್ನು ಖಂಡಿತಾ ಮುಂದುವರೆಸುವಳು. ಕಣ್ಣಿಗೆ ಕಣ್ಣು, ಈ ನ್ಯಾಯದಿಂದ ಮಾತ್ರ ಈಕೆ ತೃಪ್ತಳಾಗುವಳು. ಈ ತೆರನಾದ ನ್ಯಾಯದಿಂದ ಭಾವೀ ರಾಕ್ಷಸರು ಪಾಠ ಕಲಿಯಬೇಕು.          

ಗಾಂಧೀಜಿ ಪ್ರಕಾರ ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಶಿಕ್ಷೆಯಿಂದ ಪ್ರಪಂಚವೇ ಕುರುಡಾಗಬಹುದು. ಇಡೀ ಪ್ರಪಂಚವೇ ಅನೈತಿಕತೆ, ಅನ್ಯಾಯ, ಹಿಂಸೆ ಎಸಗುವ ಕಣ್ಣಾಗುವುದಾದರೆ ಅದು ಕುರುಡಾಗಿರುವುದೇ ಹೆಚ್ಚು ಲೇಸು. ಇಲ್ಲದಿದ್ದರೆ ಪ್ರಪಂಚವೇ ಕುರೂಪಗೊಳ್ಳುವ ಸಾಧ್ಯತೆ ಹೆಚ್ಚು. ಗಾಂಧೀಜಿಯ ಈ ಮಾತಿಗೆ ನಾವು ಸಮ್ಮತಿಸಿದರೆ ಅವರನ್ನು ವಧಿಸಿದ ದ್ರೋಹಿಯನ್ನು ದೇಶ ಸುಮ್ಮನೆ ಬಿಡಬೇಕಿತ್ತು. ಯೋಚಿಸಿ ನೋಡಿ, ಮೈ ಝುಮ್ಮೆನ್ನುವುದಿಲ್ಲವೇ?  ಕೆಲವೊಂದು ಮಾತುಗಳು ಎಲ್ಲಾ ಕಾಲಕ್ಕೂ ಉದ್ಧರಿಸಲು ಉಪಯೋಗಕ್ಕೆ ಬರಬಹುದು, ದಯೆಯ ಆ ಮಾತುಗಳನ್ನು ಭಾಷಣಗಳಲ್ಲೂ, ಬರಹಗಳಲ್ಲೂ ಉಪಯೋಗಿಸಲು ಸುಂದರವಾಗಬಹುದು. quote ರೂಪದಲ್ಲಿ ಆಕರ್ಷಕ ಈ ಹೇಳಿಕೆಗಳು. ಆದರೆ ಸಮಾಜದ ಸ್ವಾಸ್ಥ್ಯವನ್ನೂ, ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಾಗ ಮಾಜಿದ್ ನಂಥ ದುರುಳರ ಕಣ್ಣುಗಳನ್ನು ಕೀಳಲೇಬೇಕು. ಮುಗ್ಧ, ಅಮಾಯಕ ಹೆಣ್ಣಿನ ಕಣ್ಣುಗಳನ್ನು ಕಿತ್ತ ಅವನ ಕಣ್ಣುಗಳು ತನ್ನ ಕ್ರೌರ್ಯವನ್ನು ಕಂಡು ಹಿಗ್ಗಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಇರಾನ್ ತಲೆಬಾಗದೆ ಆಕೆ ಬಯಸಿದ ನ್ಯಾಯವವನ್ನು ಅವಳಿಗೆ ದಯಪಾಲಿಸಲೇಬೇಕು.  

ಹಿಂಸೆಗೆ ಪ್ರತಿ ಹಿಂಸೆಯಾಗಿ ಅಸ್ತ್ರ ದ ಪ್ರಯೋಗ ನಡೆಯದಿದ್ದರೆ ಪ್ರಪಂಚ ಸುರಕ್ಷಿತ ಸ್ಥಳವಲ್ಲ. ಸ್ಪೇನ್ ದೇಶದ ದ್ವೀಪವೊಂದರ ಪ್ರವಾಸದಲ್ಲಿದ್ದ ಇಂಗ್ಲೆಂಡಿನ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಯಾವುದೇ ಕಾರಣವಿಲ್ಲದೆ ಓರ್ವ ಯುವಕ ೧೫ ಬಾರಿ ಚಾಕುವಿನಿಂದ ಇರಿದದ್ದು ಸಾಲದು ಎಂದು ಆಕೆಯ ರುಂಡಚ್ಛೇದ ಮಾಡಿ ರಸ್ತೆ ಬದಿಗೆ ಎಸೆದ. ಈ ಮಹಿಳೆ ಪ್ರವಾಸದ ವೇಳೆ ಅಲ್ಲಿನ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಳಂತೆ. ಇಂಥ ಹಿಂಸ್ರ ಪಶುಗಳನ್ನು ಸಮಾಜ ಸಹಿಸಿದಾಗ, ಅವರಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ವಿಫಲವಾದಾಗ ಇಂಥ ಕರುಳು ಹಿಂಡುವ ಘಟನೆಗಳು ಎಲ್ಲೆಲ್ಲೂ ಕಾಣಲು ಸಿಗುತ್ತವೆ. ಕೊಲೆಗಾರ ಒಂದೆರಡು ವರ್ಷ ಜೇಲಿನಲ್ಲಿ ಕಳೆದು ಸಮಾಜಕ್ಕೆ ಮರಳಿ ಬರುತ್ತಾನೆ ತನ್ನ ಮಿಕವನ್ನು ಅರಸುತ್ತಾ.

ನಮಗೆ “ಹುಬ್ಬು” ಗಳೇಕಪ್ಪಾ ?

ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.

ನಮಗೆ “ಹುಬ್ಬು” ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ “ಛಾವಣಿ” ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.  

ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.

ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ.  ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.         

ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ “ನಿಕಾಬ್” ಎನ್ನುವ  ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.     

ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.  

ಕಣ್ಣು ಹೋಗಿ, ಬಂತು ಕಾರಂಜಿ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ “ಅಲ್-ಬಾಹ” ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು.

ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.

ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ  engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ.

ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ  “ಥೀ ಐನ್” ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು “ಧೀ ಐನ್”. ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, “ಹರಪ್ಪಾ”, “ಮೊಹೆಂಜೋದಾರೋ” ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.

ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ “ಥೀ ಐನ್”. ಇದರ ಅರ್ಥ “ಝರಿ ಇರುವ ಹಳ್ಳಿ” ಎಂದು. ಮತ್ತೊಂದು ಅರ್ಥ “ಒಕ್ಕಣ್ಣಿನ ಮನುಷ್ಯ” ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು  ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.

ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ “ಕಲೆ”ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.